HomePage_Banner_
HomePage_Banner_

ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ಸುರೇಶ ಕುದ್ರೆಂತಾಯರಿಗೆ ಶೇಣಿ ಪ್ರಶಸ್ತಿ

suresha kundrethaya 1ಬೆಳ್ತಂಗಡಿ : ಉನ್ನತ ಸರ್ಕಾರಿ ಹುದ್ದೆಯಲ್ಲಿದ್ದು ಕೊಂಡು ಸಾಹಿತ್ಯ, ಸಂಗೀತ, ಯಕ್ಷಗಾನ, ಪುರಾಣ ಪ್ರವಚನ, ತಾಳಮದ್ದಲೆಯಲ್ಲಿ ಅರ್ಥಧಾರಿಗಳಾಗಿ ಪ್ರವೃತ್ತಿಯಲ್ಲಿ ಸಿದ್ಧಿ ಸಾಧನೆಗೈದ ಅಪರೂಪದ ಪ್ರತಿಭೆ ಸುರೇಶ ಕುದ್ರೆಂತಾಯರು. ತಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅರ್ಚಕ ವೃತ್ತಿಯ ದಿ| ಸುಬ್ರಾಯ ಕುದ್ರೆಂತಾಯ, ತಾಯಿ ದಿ| ಗಿರಿಜಾ ದಂಪತಿಯ ಸುಪುತ್ರರಾಗಿ 1950 ಜೂನ್ 3 ರಂದು ಜನಿಸಿದ ಸುರೇಶ ಕುದ್ರೆಂತಾಯರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದಲ್ಲಿ ಮುಗಿಸಿ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು.
ಪ್ರಥಮ ದರ್ಜೆ ಸಹಾಯಕರಾಗಿ ಸರ್ಕಾರಿ ನೌಕರಿ ಪ್ರಾರಂಭಿಸಿ, ಉಪ ತಹಶೀಲ್ದಾರರಾಗಿ ಬಳಿಕ ತಹಶೀಲ್ದಾರರಾಗಿ ಭಡ್ತಿ ಪಡೆದು 35 ವರ್ಷ ಸೇವೆ ಸಲ್ಲಿಸಿ 2008 ರಲ್ಲಿ ನಿವೃತ್ತರಾದರು. ಬಾಲ್ಯದಿಂದಲೇ ಯಕ್ಷಗಾನ ಮತ್ತು ನಾಟಕಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಪಾತ್ರ ನಿರ್ವಹಿಸಿದ್ದಾರೆ. ಮುಂಡ್ರುಪ್ಪಾಡಿ ಸಹೋದರರು ಮತ್ತು ದಿ| ಬಿ. ಲಕ್ಷ್ಮಣ ಶೆಟ್ಟರು ಸಂಯೋಜಿಸುತ್ತಿದ್ದ ಯಕ್ಷಗಾನ ತಾಳಮದ್ದಲೆ ಹಾಗೂ ದಿ| ರಾಮ ಬೈಪಾಡಿತ್ತಾಯರ ಮಾರ್ಗದರ್ಶನ ಹಾಗೂ ಹಿರಿಯ ಕಲಾವಿದರೊಂದಿಗೆ ಭಾಗವಹಿಸುವ ಅವಕಾಶ ದೊರೆಯಿತು.
ಹಿಮ್ಮೇಳವನ್ನೂ ಕಲಿತು ಅಭ್ಯಸಿಸಿದ್ದರು. ಮುಂಡ್ರುಪ್ಪಾಡಿ ಶ್ರೀಧರ ರಾಯರಿಂದ ಮದ್ದಳೆವಾದನ ಅಭ್ಯಸಿಸಿ, ಚೆಂಡೆವಾದನ, ಹಾಡುಗಾರಿಕೆ ಹಾಗೂ ಅರ್ಥಗಾರಿಕೆಯನ್ನು ಹಿರಿಯ ಕಲಾವಿದರ ಅನುಸರಣೆಯಿಂದ ರೂಢಿಸಿಕೊಂಡಿದ್ದರು. ಬಹುತೇಕ ಎಲ್ಲಾ ಪೌರಾಣಿಕ ಆಖ್ಯಾನಗಳ ಪದ್ಯಗಳನ್ನು ಕಂಠಸ್ಥ ಮಾಡಿಕೊಂಡ ಅವರು ಯಾವುದೇ ಪೌರಾಣಿಕ ಪಾತ್ರದ ಅರ್ಥಗಾರಿಕೆಗೆ ಪೂರ್ವ ತಯಾರಿ ಇಲ್ಲದೆಯೇ ನಿರ್ವಹಿಸಲು ಶಕ್ತರು. ಗೀತ ರೂಪಕ ಹಾಗೂ ಸುಮಾರು 10 ಪೌರಾಣಿಕ ಪ್ರಸಂಗದ ಯಕ್ಷಗಾನ ಪದ್ಯಗಳಿಗೆ ಸಾಹಿತ್ಯ, ಅರ್ಥ ಬರೆದಿದ್ದಲ್ಲದೆ ಉಜಿರೆಯಲ್ಲಿ ಮಹಿಳಾ ಯಕ್ಷಗಾನ ತಂಡ
ರಚಿಸಿ ಅವರಿಂದ ಅನೇಕ ಕಡೆಗಳಲ್ಲಿ ತಾಳಮದ್ದಲೆ ಪ್ರದರ್ಶನ ನಡೆಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಪುರಾಣ ವಾಚನ-ಪ್ರವಚನ ಕಾರ್ಯಕ್ರಮದಲ್ಲಿ ಅನೇಕ ವರ್ಷಗಳಿಂದ ಪ್ರವಚನ ನೀಡುತ್ತಾ ಬಂದಿದ್ದಾರೆ. ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಉಜಿರೆಯಲ್ಲಿ ಗಮಕ ಸಪ್ತಾಹ ಹಾಗೂ ಉದಯಾಸ್ತಮಾನ ಭಜನಾ ಸೇವೆಯನ್ನು ಸಂಯೋಜಿಸಿದ್ದರು.
ಅವರ ಯಕ್ಷಗಾನ ಕಲಾ ಸೇವೆಯನ್ನು ಗುರುತಿಸಿ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನ, ಯಕ್ಷದೇವ ಮಿತ್ರಮಂಡಳಿ (ಉತ್ತಮ ಅರ್ಥಧಾರಿ ಪ್ರಶಸ್ತಿ), ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಉಜಿರೆ ಶ್ರೀ ಜನಾರ್ದನ ಸ್ವಾಮಿ ಯಕ್ಷಕಲಾ ವೇದಿಕೆ ಅವರನ್ನು ಸನ್ಮಾನಿಸಿ ಗೌರವಿಸಿದೆ. ಪತ್ನಿ ಶೋಭ ಕುದ್ರೆಂತಾಯ ಮತ್ತು ಈರ್ವರು ಸುಪುತ್ರರೊಂದಿಗೆ ಉಜಿರೆಯ ಲಲಿತ ನಗರದ ಅನ್ಯೋನ್ಯದಲ್ಲಿ ನಿವೃತ್ತ ಜೀವನದೊಂದಿಗೆ ಯಕ್ಷ ಸೇವೆಯ ಪ್ರವೃತ್ತಿಯನ್ನು ಶ್ರದ್ಧೆಯಿಂದ ಮುಂದುವರಿಸುತ್ತಿದ್ದಾರೆ.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಜನ್ಮ ಶತಮಾನೋತ್ಸವದ ಅಂಗವಾಗಿ ಅ.8 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶೇಣಿ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ಉಜಿರೆಯ ಸುರೇಶ ಕುದ್ರೆಂತಾಯರಿಗೆ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಶೇಣಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.