ಪಿಲಿಚಂಡಿಕಲ್ಲು ಗದ್ದೆಮನೆ ವಠಾರದಲ್ಲಿ ಬಿಜೆಪಿ ಯುವಮೋರ್ಚಾದಿಂದ ಕೆಸರುಡೊಂಜಿ ಕಮಲ ಕೂಟ

kesardonji kamala kuta new

 • ಜನಪದ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದ ೧೦೦ ಸಾಧಕರಿಗೆ ಸಮ್ಮಾನ.
 • ಕ್ರೀಡಾಕೂಟದ ಗದ್ದೆಯ ಪಕ್ಕದಲ್ಲೇ ನಿರ್ಮಿಸಲಾಗಿದ್ದ ಎರಡನೇ ವೇದಿಕೆಯಲ್ಲಿ ತ್ರಿಶೂಲ್ ಸಾಂಸ್ಕೃತಿಕ ಕೇಂದ್ರ ಮಂಗಳೂರು ಇವರಿಂದ ಆತಿಥೇಯ
 • ಬೆಳ್ತಂಗಡಿ ತಾಲೂಕಿನ ಕಲಾವಿದರೂ ಒಳಗೊಂಡಂತೆ ನಿರಂತರ ತುಳು ಜಾನಪದ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮ.
 • ದಕ್ಷ ಸಂಘಟಕ ಸಂಪತ್ ಬಿ. ಸುವರ್ಣ ಹೊಸತನಗಳಿಗೆ ಮತ್ತೊಂದು ಸೇರ್ಪಡೆ ಕೆಸರ್‌ಡೊಂಜಿ ಕಮಲದ ಕೂಟ
 • ಕೆಸರಿನ ಕ್ರೀಡಾಕೂಟವಾಗಿದ್ದುದರಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ನಾನಗೃಹದ ವ್ಯವಸ್ಥೆ.
 • ಸಾವಿರಾರು ಮಂದಿ ಭಾಗಿಯಾಗಿದ್ದರೂ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಶಿಸ್ತುಬದ್ಧವಾಗಿ ಕ್ರೀಡಾಕೂಟ.
 • ಎರಡು ಗದ್ದೆಗಳಲ್ಲಿ ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಸ್ಪರ್ಧೆ ಆಯೋಜನೆ.
 • ಕ್ರೀಡೆಯ ಬಿಡುವಿನ ವೇಳೆಯಲ್ಲಿ ಕೆಸರಿನಲ್ಲಿ ಕಬಡ್ಡಿ ಆಡಿ ಮನೋರಂಜನೆ ನೀಡಿದ ಆಟಗಾರರು. ಗದ್ದೆಯ ಕೆಸರಿನಲ್ಲಿ ಮಿಂದೆದ್ದ ಕ್ರೀಡಾಪಟುಗಳು, ಬಿಜೆಪಿ ಕಾರ್ಯಕರ್ತರು.
 • ಎಳೆಯ ಮಕ್ಕಳಿಂದಲೂ ಮನೋರಂಜನಾ ಕೆಸರುಗದ್ದೆ ಆಟಗಳು
 • ಆಗಮಿಸಿದ ಎಲ್ಲ ಗಣ್ಯರಿಗೂ ತುಳುನಾಡ ಶೈಲಿಯ ಬೆಲ್ಲ ನೀರಿನ ಮೂಲಕ ಸ್ವಾಗತ.
 • ವಿಜಯ ಗೌಡ ವೇಣೂರು, ಭರತ್ ಇಂದಬೆಟ್ಟು ಇವರಿಂದ ನಿರಂತರ ಪಂದ್ಯಾಟದ ವೀಕ್ಷಕ ವಿವರಣೆ.

ಕುವೆಟ್ಟು: ಹಿಂದೆ ಹಿರಿಯರು ಗ್ರಾಮೀಣ ಪ್ರದೇಶದ ಸಂಸ್ಕೃತಿ ಆಚಾರ ವಿಚಾರವನ್ನು ಯಥಾವತ್ತಾಗಿ ಪಾಲಿಸುತ್ತಾ ಬಂದಿದ್ದು ತದನಂತರ ಆಧುನಿಕ ಪದ್ದತಿಯಿಂದ ಗ್ರಾಮೀಣ ಸಂಸ್ಕೃತಿ ನಶಿಸುವ ಹಂತಕ್ಕೆ ತಲುಪಿತ್ತು. ಇದೀಗ ಯುವ ಜನತೆ ಮತ್ತೆ ಇದನ್ನು ಉಳಿಸಿ ಬೆಳೆಸಲು ಮುಂದಾಗಿದ್ದು ಅಭಿನಂದನೀಯ, ಮುಂದಿನ ದಿನಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಜಗತ್ತಿಗೆ ತಿಳಿಸುವ ಕಾರ್ಯ ಮಾಡಬೇಕು. ಭಾರತದ ಆಧ್ಯಾತ್ಮಿಕ ಬದುಕಿಗೆ ಗ್ರಾಮೀಣ ಸಂಸ್ಕೃತಿಯೇ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮಶತಾಬ್ದಿ ವರ್ಷದ ಅಂಗವಾಗಿ ಗುರುವಾಯನಕೆರೆ ಸಮೀಪದ ಪಿಲಿಚಂಡಿಕಲ್ಲು ಗದ್ದೆಮನೆ ವಠಾರದ ಗದ್ದೆಯಲ್ಲಿ ಅ. 1 ರಂದು ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಸರ್‌ಡೊಂಜಿ ಕಮಲ ಕೂಟ ವಿಶಿಷ್ಠಿ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಪರಿವರ್ತನೆಯೆಡೆಗೆ ಚಲಿಸುತ್ತಿದೆ. ಆಧುನಿಕ ತಂತ್ರಜ್ಞಾನಗಳು ಅತಿಯಾಗಿ ವಿಜೃಂಬಿಸುತ್ತಿದ್ದು ಮನುಷ್ಯರ ಚಿಂತನಾಶಕ್ತಿಯನ್ನು ಕುಬ್ಜಗೊಳಿಸುತ್ತಿದೆ. ಸುಸ್ಥಿರ ಕೌಟುಂಬಿಕ ವ್ಯವಸ್ಥೆಯಿದ್ದರೆ ಮಾತ್ರ ಲೋಕಕಲ್ಯಾಣ ಸಾಧ್ಯ, ಅಂತಹ ಆದರ್ಶಗಳನ್ನು ನೀಡಿದವರು ಪಂಡಿತ ದೀನ್ ದಯಾಳ್ ಉಪಾಧ್ಯಾಯರು, ಭಾರತೀಯ ಜನತಾ ಪಾರ್ಟಿ ಚುನಾವಣೆಗೆ ಮಾತ್ರ ಮೀಸಲಾಗದೆ ಸಾಮಾಜಿಕ ಕಾರ್ಯ ಮತ್ತು ಸಮಾಜದ ಕಟ್ಟಕಡೆಯ ಕುಟುಂಬಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿದೆ. ಇತ್ತೀಚೆಗೆ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಹಿಂದೂ ಸಮಾಜಕ್ಕೆ ಅನ್ಯಾಯವಾಗುವ ಕಾರ್ಯಗಳು ನಡೆಯುತ್ತಿದ್ದು ಇದನ್ನು ಹೋಗಲಾಡಿಸಲು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆದರ್ಶಗಳನ್ನು ಮತ್ತು ದೇಶಪ್ರೇಮವನ್ನು ನಾವೆಲ್ಲಾ ಅಳವಡಿಸಬೇಕಾಗಿದೆ ಎಂದರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ, ಉಪಾಧ್ಯಾಯರು ಸಂಸ್ಕೃತಿಯ ಕ್ರಾಂತಿಕಾರ ರಾಗಿದ್ದರು. ಅಂತವರ ಅರ್ಥಪೂರ್ಣ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ಬೆಳ್ತಂಗಡಿ ಯುವ ಮೋರ್ಚಾ ಈ ಅಪ್ಪಟ ಮಣ್ಣಿನ ಸೊಗಡಿನ ಕ್ರೀಡಾಕೂಟ ಆಯೋಜಿಸುವ ಮೂಲಕ ವಿಭಿನ್ನ ಶೈಲಿಯಲ್ಲಿ ಮತ್ತು ಪ್ರತಿಯೊಬ್ಬರಲ್ಲೂ ಆಸಕ್ತಿ ಚಿಗುರೊಡೆಯುವ ರೀತಿಯಲ್ಲಿ ಆಯೋಜಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ,
ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ , ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯರಾದ ಕೆ. ಕೊರಗಪ್ಪ ನಾಯ್ಕ, ಮಮತಾ ಎಂ. ಶೆಟ್ಟಿ, ಸೌಮ್ಯಲತಾ ಜಯಂತ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಶಾರದಾ ಆರ್. ರೈ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಬಿ.ಎಸ್. ಸೀತಾರಾಮ್, ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಬಿಜೆಪಿ ಕುವೆಟ್ಟು ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ, ಯುವಮೋರ್ಚಾ ಪ್ರಭಾರಿ ವಿಜಯ ಗೌಡ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಶಶಿಧರ ಎಂ. ಕಲ್ಮಂಜ, ಲಕ್ಷ್ಮೀ ನಾರಾಯಣ ಕೊಕ್ಕಡ, ಧನಲಕ್ಷ್ಮೀ ಜನಾರ್ದನ್, ಅಮಿತಾ, ವಸಂತಿ, ನ.ಪಂ. ಸದಸ್ಯೆ ಲಲಿತಾ, ಜಿಲ್ಲಾ ಯುವಮೋರ್ಚಾದ ಯಶವಂತ, ಜಾಗದ ಮಾಲಕ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.
ಭಾರತೀ ಆಠವಳೆ ವಂದೇ ಮಾತರಂ ಹಾಡಿದರು. ಕಾರ್ಯಕ್ರಮದ ರೂವಾರಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ವಂದಿಸಿದರು. ಕ್ರೀಡಾ ಸಂಚಾಲಕ ಸುಧಾಕರ ಗೌಡ ಧರ್ಮಸ್ಥಳ, ವಿಶ್ವೇಶ್ ಕಿಣಿ ಹಾಗೂ ಯುವ ಮೋರ್ಚಾದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
ತಾಲೂಕಿನ 48 ಗ್ರಾ.ಪಂ. ಹಾಗೂ ಬೆಳ್ತಂಗಡಿ ನಗರ ಪಂ. ವ್ಯಾಪ್ತಿಯಿಂದ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ತಂಡಗಳಾಗಿ ಭಾಗಿಯಾಗಿದ್ದರು. ಸಾಮೂಹಿಕವಾಗಿ ಎಲ್ಲರಿಗೂ ನಿಧಿಶೋಧನೆ, ಪುರುಷರಿಗೆ ಕೆಸರಿನಲ್ಲಿ ವಾಲಿಬಾಲ್, ಹಗ್ಗ ಜಗ್ಗಾಟ, ಕಂಬಳದ ಮಾದರಿ ಓಟ, ಕೋರಿದ ಗೂಟ ಹಾಗೂ ಓಟ ಸ್ಪರ್ಧೆ ನಡೆಯಿತು. ಮಹಿಳೆಯರಿಗೆ ಓಟ ಹಾಗೂ ಹಗ್ಗ ಜಗ್ಗಾಟ ನಡೆಯಿತು. ತುಳುನಾಡಿನ ಜನಪದ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಸ್ಪರ್ಧೆಗಳು ಕೂಡಾ ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.