ಮುಂದಿನ ಚುನಾವಣೆ ಕಾಂಗ್ರೆಸ್ ಪಾಲಿಗೆ ಜಾತ್ಯಾತೀತ ಮೌಲ್ಯ, ಪ್ರಜಾಪ್ರಭುತ್ವದ ತತ್ವ ರಕ್ಷಣೆಯ ಚುನಾವಣೆ

Advt_NewsUnder_1
Advt_NewsUnder_1
Advt_NewsUnder_1

congressಬೆಳ್ತಂಗಡಿ ಕ್ಷೇತ್ರದಿಂದ ಹರೀಶ್ ಕುಮಾರ್‌ಗೆ ಅವಕಾಶ ಮಾಡಿಕೊಡಿ, ನಾನು ಗೆಲುವಿಗೆ ಶ್ರಮಿಸುತ್ತೇನೆ : ಬಂಗೇರ – ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರ ಮಾತನಾಡಿ, ಕೇಂದ್ರ ನಾಯಕರಾಗಿರುವ ಬಿ ಜನಾರ್ದನ ಪೂಜಾರಿ ಅವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ನಾನು ಅವರು ಸೂಚಿಸಿದಂತೆ ಒಂದು ಬಾರಿ ಸ್ಪರ್ಧಿಸಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇನೆ, ಒಪ್ಪಿಕೊಂಡಿದ್ದಂತೆ 2013 ರ ಚುನಾವಣೆಯಲ್ಲಿ ಹರೀಶ್ ಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಆದರೆ ಮತ್ತೊಮ್ಮೆ ಒತ್ತಾಯಪೂರ್ವಕವಾಗಿ ನನ್ನನ್ನೇ ಅಭ್ಯರ್ಥಿಯನ್ನಾಗಿ ಮಾಡಿದರು. ಆ ಚುನಾವಣೆಯಲ್ಲೂ ಗೆಲುವು ಸಾಧಿಸಿರುವ ನಾನು ತಾಲೂಕಿನಲ್ಲಿ ಸಾಕಷ್ಟು ಆಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಪಕ್ಷಕ್ಕೆ ಭದ್ರ ತಳಪಾಯ ಹಾಕಿಕೊಟ್ಟಿದ್ದೇನೆ, ನನ್ನ ಆರೋಗ್ಯ ಮತ್ತು ಹಣಕಾಸು ತೊಂದರೆ ಇರುವುದರಿಂದ ಅದನ್ನು ಮನಗಂಡು 2018 ರ ಚುನಾವಣೆಯಲ್ಲಿ ಹರೀಶ್ ಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು. ಅವರ ಬೆನ್ನಹಿಂದೆ ನಿಂತು ಅವರನ್ನು ಗೆಲ್ಲಿಸಿಕೊಡುತ್ತೇನೆ ಎಂದು ಶಾಸಕ ವಸಂತ ಬಂಗೇರ ಬಹಿರಂಗವಾಗಿ ಘೋಷಿಸಿದರು.
ಪಕ್ಷದ ರಾಜ್ಯ ನಾಯಕರು ಇಲ್ಲಿದ್ದೀರಿ ಅದಕ್ಕಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ತಿಳಿಸಿದ ಬಂಗೇರರು, 1983, 85 ರಲ್ಲಿ ಬಿಜೆಪಿಯಿಂದ ಶಾಸಕನಾದೆ, 1994 ರಲ್ಲಿ ಜನತಾ ದಳದಿಂದ ಶಾಸಕನಾದೆ, ಇದೀಗ 2 ಬಾರಿ ಕಾಂಗ್ರೆಸ್‌ನಿಂದ ಶಾಸಕನಾಗಿ ಒಂದರ್ಥದಲ್ಲಿ ಸರ್ವಂತರ್ಯಾಮಿಯಾಗಿದ್ದೇನೆ, ತಾಲೂಕಿನ 81 ಗ್ರಾಮಗಳ ಎಲ್ಲ ಮನೆ, ಎಸ್‌ಸಿ ಕಾಲನಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇನೆ, ಸಾವಿರಾರು ಕುಟುಂಬಕ್ಕೆ ಬಿಪಿಎಲ್ ಕಾರ್ಡ್, 94 ಸಿ ಮತ್ತು ಸಿ.ಸಿ ಯಲ್ಲಿ ಮನೆಯಡಿ ಭೂಮಿಯ ಹಕ್ಕುಪತ್ರ ಸಿಗುವಂತೆ ಮಾಡಿದ್ದೇನೆ ಎಂದು ತಿಳಿಸಿದರು.

ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಸುಳ್ಯದಲ್ಲಿ ಕನಿಷ್ಠ ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದು ಬಿಟ್ಟರೆ ಉಳಿದ 7ರಲ್ಲಿ ನಾವು ಜಯಭೇರಿ ಬಾರಿಸಿದ್ದೆವು. ಈ ಬಾರಿ ಎಲ್ಲಾ 8 ರಲ್ಲೂ ಗೆಲುವು ಕಾಣಲಿದ್ದೇವೆ. – ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್.

ರಾಜ್ಯ ಸರಕಾರದ ಎಲ್ಲಾ ಯೋಜನೆಗಳು 4 ವರ್ಷ 3 ತಿಂಗಳಲ್ಲಿ ಜಾರಿಯಾದದ್ದಿದ್ದರೆ ಅದು ವಸಂತ ಬಂಗೇರರ ಬೆಳ್ತಂಗಡಿ ಕ್ಷೇತ್ರ, ಅವರು ವಿಧಾನ ಸೌಧಕ್ಕೆ ಸಿ.ಎಂ. ಭೇಟಿಗೆ ಬಂದರೆಂದರೆ ಸಿದ್ದರಾಮಯ್ಯ ಅವರು ಪೆನ್ನು ಕಿಸೆಯಿಂದ ತೆಗೀತಾರೆ ಎಂದೇ ಅರ್ಥ, ಅವರು ಪತ್ರಗಳಿಗೆ ಸಹಿ ಹಾಕದೆ ಮುಂದೆ ಹೋಗಲು ಬಿಡುವುದಿಲ್ಲ, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ ೧೫೦ ಮಿಕ್ಕಿದ ಸ್ಥಾನಗಳು ಬರಲಿದೆ. -ಐವನ್ ಡಿಸೋಜಾ, ವಿಧಾನ ಪರಿಷತ್ ಮುಖ್ಯ ಸಚೇತಕರು.

ರಾಜ್ಯ ಸರಕಾರದಿಂದ ದಲಿತರ ಅಭಿವೃದ್ಧಿಗೆ 70 ಸಾವಿರ ಕೋಟಿ ಖರ್ಚು : ಕೆಪಿಸಿಸಿ ಕಾರ್ಯಾಧ್ಯಕ್ಷ ಗುಂಡೂರಾವ್
ಚುನಾವಣೆಯ ಸಂದರ್ಭ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155ನ್ನು ಈಡೇರಿಸಿದೆ, ಉಳಿದವುಗಳನ್ನು ಚುನಾವಣೆಗೆ ಮೊದಲು ಈಡೇರಿಸಲಿದೆ, ದಲಿತರ ಉದ್ಧಾರಕ್ಕಾಗಿ ಶೇ. 25 ಮೀಸಲಿಟ್ಟು ರಸ್ತೆ, ಅಂಬೇಡ್ಕರ್ ಭವನ ನಿರ್ಮಾಣ, ವಸತಿನಿಲಯಗಳು, ಇತ್ಯಾದಿ ನಿರ್ಮಿಸಿ 70 ಸಾವಿರ ಕೋಟಿ ರೂ ಖರ್ಚು ಮಾಡಿದ ಕೀರ್ತಿ ನಮಗಿದೆ, 13 ಲಕ್ಷ ಮನೆಗಳನ್ನು ಮಂಜೂರುಗೊಳಿಸಿದ್ದು, ಒಟ್ಟು ೧೬ ಲಕ್ಷ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ, 40 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿ ಲೋಕೋಪಯೋಗಿ ಇಲಾಖೆ ಮೂಲಕ ಮಾಡಲಾಗಿದೆ, 2ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿದೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ತುಲನೆ ಮಾಡಿ ನೋಡಿದರೆ ಸರ್ವವ್ಯಾಪಿಯಾಗಿರುವ ಸರಕಾರ ಸಿದ್ದರಾಮಯ್ಯರದ್ದೇ ಹೊರತು ಮೋದಿಯದ್ದಲ್ಲ, ಮುಂದಿನ 2018 ರ ಚುನಾವಣೆ ದೇಶದ ಐತಿಹಾಸಿಕ ಚುನಾವಣೆಯಾಗಲಿದೆ. ನಮಗೆ ಈ ರಾಜ್ಯದಲ್ಲಿ ಮತ ಕೇಳಲು ಸಂಕೋಚಪಡುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಗುಂಡೂರಾವ್ ಹೇಳಿದರು.
ಶಿಸ್ತುಬದ್ಧವಾದ ಸಭೆ, ಇಷ್ಟೊಂದು ಸಂಖ್ಯೆಯಲ್ಲಿ ನೀವು ಇಲ್ಲಿ ಸೇರಿರುವುದರ ಹಿಂದೆ ಶಾಸಕ ವಸಂತ ಬಂಗೇರರ ಕಾರ್ಯವೈಖರಿ, ಅಭಿವೃದ್ಧಿ ಕೆಲಸಗಳೇ ಸಾಕ್ಷಿ, ಯಾವತ್ತೂ ಬಡವರ ಪರ ಧ್ವನಿ ಎತ್ತುವ, ನಿರಂತರ ಶ್ರಮಿಸುವ ಅವರು ರಾಜ್ಯದ ಎಲ್ಲಾ 224 ಶಾಸಕರಿಗಿಂತ ಮುಂಚೂಣಿಯಲ್ಲಿದ್ದಾರೆ ಎಂದು ಗುಂಡೂರಾವ್ ಘೋಷಿಸಿದರು.
ದಾಖಲೆ ಇದ್ದರೆ ಯಡಿಯೂರಪ್ಪ ತಕ್ಷಣ ಬಿಡುಗಡೆ ಮಾಡಲಿ:
ವಿರೋಧ ಪಕ್ಷದ ನಾಯಕರಾಗಿರುವ ಯಡಿಯೂರಪ್ಪ ಅವರು ತಮ್ಮ ಬಳಿ ರಾಜ್ಯ ಸರಕಾರದ ಭ್ರಷ್ಟಾಚಾರದ ಪಟ್ಟಿ ಇದೆ ಎಂದು ಹೇಳುತ್ತಾ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಹೋಗುತ್ತಿದ್ದಾರೆ. ದಾಖಲೆ ಇದ್ದರೆ ಶೀಘ್ರ ಬಿಡುಗಡೆ ಮಾಡಲಿ, ಅದು ಬಿಟ್ಟು ಬೇಜವಾಬ್ಧಾರಿ ಹೇಳಿಕೆ ನೀಡುತ್ತಾ ಹೋದರೆ ಅವರ ಮಾತಿಗೆ ಕಿಮ್ಮತ್ತಿಲ್ಲದಂತಾಗುತ್ತದೆ, ಕೇಂದ್ರದಲ್ಲಿ ಮೋದಿಯವರು ಜನತೆಗೆ ಮೋಸ ಮಾಡುತ್ತಿದ್ದಾರೆ, ಅವರ ನೀತಿಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ, ನೋಟು ಅಮಾನ್ಯೀಕರಣದ ಗಾಯದ ಮೇಲೆ ಬರೆ ಎಳೆದಂತೆ ಜಿಎಸ್‌ಟಿಯನ್ನೂ ಜಾರಿಗೆ ತಂದಿದೆ, ಜನ ಈಗ ಮೋದಿ ಮಾತಿಗೆ ಮರಳಾಗುತ್ತಿಲ್ಲ, ರಾಜ್ಯದಲ್ಲೂ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದ್ದು ಕೋಮುಗಲಭೆ, ಹಿಂಸೆಗಳಿಗೆ ಪ್ರಚೋದನೆ ನೀಡುತ್ತಿದೆ, ನಮ್ಮ ರಾಜ್ಯದಲ್ಲಿ ಗುಜಾರಾತ್ ಮತ್ತು ಮಹಾರಾಷ್ಟ್ರಕ್ಕಿಂತ ಅತೀ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ. ಇದು ಕಾಂಗ್ರೆಸ್ ಸಾಧನೆ, ಮೋದಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರೂ ಕಾಂಗ್ರೆಸ್ ಸವಾಲನ್ನು ಅವರು ಸ್ವೀಕರಿಸಿಲ್ಲ ಎಂದರು.

ಬೆಳ್ತಂಗಡಿ : ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣವಾಗಿಲ್ಲ, ಕಪ್ಪು ಹಣ ಮರಳಿ ಬಂದಿಲ್ಲ, ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ, ರೈತರ ಆತ್ಮಹತ್ಯೆ ಕಡಿಮೆಯಾಗಿಲ್ಲ, ಉದ್ಯೋಗ ಸೃಷ್ಟಿಯೂ ಆಗಿಲ್ಲ, ಕೇವಲ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ, ಅಲ್ಲದೆ ಅಸಹಿಷ್ಣುತೆ ಉಂಟುಮಾಡುವ ಬಿಜೆಪಿ ಮುಂದಕ್ಕೆ ಅಧಿಕಾರಕ್ಕೆ ಬಾರದಂತೆ ತಡೆಯಬೇಕಾಗಿದೆ, ಆದ್ದರಿಂದ 2018ರಲ್ಲಿ ನಡೆಯುವ ರಾಜ್ಯ ಚುನಾವಣೆ ದೇಶದ ಚುನಾವಣೆಗೆ ಮೈಲುಗಲ್ಲಾಗಲಿದೆ, ದೇಶದ ಜಾತ್ಯಾತೀತ ಮೌಲ್ಯ ಮತ್ತು ಪ್ರಜಾಪ್ರಭುತ್ವ ತತ್ವ ರಕ್ಷಣೆಯ ಚುನಾವಣೆಯಾಗಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥನ್ ಹೇಳಿದರು.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಇದರ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಬ್ಲಾಕ್ ವತಿಯಿಂದ ನಗರದ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಸೆ. 25 ರಂದು ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ರಾಜ್ಯ ಪ್ರಣಾಳಿಕೆಯಲ್ಲಿ ಹೇಳಿದ್ದ ಬಹುತೇಕ ಅಂಶಗಳನ್ನು
ಜಾರಿಗೆ ತಂದಿದ್ದೂ ಮಾತ್ರವಲ್ಲದೆ ರಾಹುಲ್ ಗಾಂಧಿಯವರ ನಿರ್ದೇಶನದಂತೆ ಇಂದಿರಾ ಕ್ಯಾಂಟೀನ್ ಅನ್ನೂ ತೆರೆದು ಬಡವರಿಗೆ 5 ರೂ. ಗೆ ಫಲಾಹಾರ, 10 ರೂ. ಗೆ ಊಟ ನೀಡುತ್ತಿದೆ, ನರೇಂದ್ರ ಮೋದಿಯವರು ಹೇಳಿದ್ದ 2 ಕೋಟಿ ಉದ್ಯೋಗವೂ ಸೃಷ್ಟಿಯಾಗಿಲ್ಲ, ಇಂಧನ ಬೆಲೆಯನ್ನು 40 ರೂ. ಮಾಡುತ್ತೇನೆಂದು ಹೇಳಿದ್ದು ಈಗ ಬರೀ ಅರ್ಧ ಲೀಟರ್ ಪೆಟ್ರೋಲ್‌ಗೆ 40 ರೂ. ಬೆಲೆಯಾಗಿದೆ, ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ತುಂಬುತ್ತೇನೆ ಎಂದು ಹೇಳಿದ್ದು 15ರೂ. ಕೂಡ ಖಾತೆಗೆ ಹಾಕಿಲ್ಲ, ಮನ್‌ಮೋಹನ್ ಸಿಂಗ್ ಅವರು 50 ಪತ್ರಿಕಾ ಗೋಷ್ಠಿ ನಡೆಸಿದ್ದರೆ ಮೋದಿಯವರು ಮಾಧ್ಯಮ ಎದುರಿಸಲು ತಯಾರಿಲ್ಲ, ಕೇವಲ ಮನ್‌ಕೀಬಾತ್ ಮೂಲಕ ರೇಡಿಯೋದಲ್ಲಿ ಮಾತನಾಡುತ್ತಿದ್ದು, ಹಿಂದೆ ಹಿಟ್ಲರ್ ಕೂಡ ಇದೇ ಮಾಧ್ಯಮ ಅನುಸರಿಸುತ್ತಿದ್ದ ಎಂದು ಟೀಕಿಸಿದರು.
ಆರ್.ಎಸ್.ಎಸ್. ನಿಷೇಧಿಸಬಾರದೇಕೆ?
ಬಿಜೆಪಿಗೆ ಇಂದು ಅಜೇಂಡಾ ಇಲ್ಲ, ಅದಕ್ಕಾಗಿ ಕೋಮುವಾದಿ ರಾಜಕಾರಣ ಮಾಡುತ್ತಿದೆ, ಮಂಗಳೂರು ಚಲೋ ನಡೆಸುತ್ತಾರೆ. ಎಸ್‌ಡಿಪಿಐನವರು ಕೊಲೆಗೈಯ್ಯುತ್ತಿದ್ದಾರೆ ಎಂದು ಅದನ್ನು ನಿಷೇಧಿಸಲು ರ್‍ಯಾಲಿ ಮಾಡುತ್ತಿದೆಯಾದರೆ ಆರ್.ಎಸ್.ಎಸ್.ನಲ್ಲೂ ಕೊಲೆಗಡುಕರಿದ್ದಾರೆ. ಹಾಗಾದರೆ ಅದನ್ನೂ ನಿಷೇಧಿಸಬಾರದೇಕೆ ಎಂದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲೆ ಯಾವುದೇ ಆರೋಪಗಳಿಲ್ಲ, ಭ್ರಷ್ಠಾಚಾರ ಇಲ್ಲ, ಬಿಜೆಪಿ ಅಧಿಕಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಗಳಾಗಿದ್ದರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ, ಬಿಜೆಪಿಯ 11 ಮಂತ್ರಿಗಳು, ಮುಖ್ಯಮಂತ್ರಿ ಕೂಡ ಜೈಲಿಗೆ ಹೋಗಿದ್ದರು. ಆದರೆ ಕಾಂಗ್ರೆಸ್‌ನ ಸಿದ್ದರಾಮಯ್ಯರದ್ದು ಶುದ್ಧಹಸ್ತದ ರಾಜಕಾರಣ ಎಂದರು.
ಮೋದಿ ಅಧಮ ಎನ್ನಲಾರೆ:
ಆಡದೆ ಮಾಡುವವನು ರೂಢಿಯೊಳಗೆ ಉತ್ತಮ, ಆಡಿ ಮಾಡುವವನು ಮಧ್ಯಮ, ಆಡಿಯೂ ಮಾಡದವನು ಅಧಮ. ಸಿದ್ದರಾಮಯ್ಯ ಹೇಳಿದ ಮತ್ತು ಹೇಳದೇ ಇದ್ದ ಜನಪರ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ ಅವರು ಉತ್ತಮ, ಮೋದಿ ಅಧಮ ಎಂದು ಹೇಳಲಾರೆ. ಆದರೆ ಅವರು ಹೇಳಿದ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಕಟಕಿಯಾಡಿದ ವಿಷ್ಣುನಾಥನ್, ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂದಿದ್ದ ಬಸವಣ್ಣ, ಹಿಂದುಳಿದವರ ಕಲ್ಯಾಣ, ಜಾತ್ಯಾತೀತ ಮೌಲ್ಯಗಳನ್ನು ಪ್ರತಿಪಾದಿಸಿದ್ದ ಶ್ರೀ ನಾರಾಯಣ ಗುರುಗಳ ಮಣ್ಣಾಗಿದೆ ಈ ಪಾವನ ರಾಜ್ಯದ ಮಣ್ಣು ಎಂದು ಉದ್ಘೋಷಿಸಿದರು.
ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಐವನ್ ನೀಗ್ಲಿ ಮತ್ತು ನವೀನ್ ಡಿಸೋಜಾ, ಪ್ರ. ಕಾರ್ಯದರ್ಶಿ ಸುಹೇಲ್ ಖಂದಕ್, ಡಿಸಿಸಿ ಸದಸ್ಯರಾದ ಬಿ.ಎಮ್. ಅಬ್ದುಲ್ ಹಮೀದ್, ಇ. ಸುಂದರ ಗೌಡ, ಲೋಕೇಶ್ವರೀ ವಿನಯಚಂದ್ರ, ಪ್ರಭಾಕರ ಮದ್ದಡ್ಕ, ಆಶಾ ಬೆನಡಿಕ್ಟ್ ಸಲ್ದಾನಾ, ಜಗದೀಶ್ ಡಿ, ಧರ್ಣಪ್ಪ ಪೂಜಾರಿ, ಕೆ.ಕೆ. ಶಾಹುಲ್ ಹಮೀದ್, ರೀನಾ ಶಿಬಿ, ರಾಮಚಂದ್ರ, ಮತ್ತು ಜೆಸ್ಸಿ ಟೀಚರ್ ಮೂಡುಕೋಡಿ, ಕಿಸಾನ್ ಘಟಕದ ಅಧ್ಯಕ್ಷರುಗಳಾದ ಪ್ರಮೋದ್ ಕುಮಾರ್ ರೈ ರೆಖ್ಯ ಮತ್ತು ಮಂಜುನಾಥ ಕಾಮತ್ , ಎಪಿಎಂಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಜಿ.ಪಂ. ಸದಸ್ಯರಾದ ನಮಿತಾ, ಶೇಖರ್ ಕುಕ್ಕೇಡಿ, ಕೆಪಿಸಿಸಿ ಸದಸ್ಯರಾದ ರಾಮಚಂದ್ರ ಗೌಡ ಮತ್ತು ಪೀತಾಂಬರ ಹೇರಾಜೆ, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಉಭಯ ಬ್ಲಾಕ್‌ಗಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಹಾಜಿರಾ ಮತ್ತು ಉಷಾ ಶರತ್, ತಾ| ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷ ಬಿ.ಕೆ. ವಸಂತ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸುಬು ಇಳಂತಿಲ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಹಾಜಿ ಉಮರ್‌ಕುಂಞಿ ಮುಸ್ಲಿಯಾರ್, ಮೊದಲಾದವರು ಉಪಸ್ಥಿತರಿದ್ದರು.
ಮುಂದಿನ ಶಿಕ್ಷಣ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿಗಳಾಗಿರುವ ದಿನೇಶ್ ಕುಮಾರ್ ಮತ್ತು ಮಂಜುನಾಥ್ ಅವರು ಮತಯಾಚನೆ ಮಾಡಿದರು.
ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ಗೆ ಸನ್ಮಾನ : 14 ವರ್ಷಗಳ ಕಾಲ ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದ ಕೆ. ಹರೀಶ್ ಕುಮಾರ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರಿಗೆ ಉಭಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ ನಡೆಯಿತು. ನಗರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ರಾಜಶೇಖರ್ ಅಜ್ರಿ ಸನ್ಮಾನದ ಬಗ್ಗೆ ಪ್ರಸ್ತಾಪಿಸಿ ಹರೀಶ್ ಕುಮಾರ್ ಅವರ ಪಕ್ಷ ಸೇವೆಯನ್ನು ನೆನೆದುಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಶ್ರೀನಿವಾಸ ವಿ. ಕಿಣಿ ಅವರು, ಕೇಂದ್ರ ಸರಕಾರ ಬಡವರಿಗೆ ಹಣ ನೀಡುವುದಾಗಿ ಜನಧನ್ ಖಾತೆ ತೆರೆಯಿಸಿ ಜನತೆಗೆ ಮೋಸ ಮಾಡಿದೆ, ಕಪ್ಪು ಹಣ ತರಿಸಿಕೊಡುವುದಾಗಿ ನಂಬಿಸಿ ಇಂದು ಬಾಯಿಮುಚ್ಚಿ ಕುಳಿತುಕೊಂಡಿದೆ, ಜಿಡಿಪಿ ಕುಸಿಯುವಂತೆ ಮಾಡಿದ್ದು ಆರ್ಥಿಕ ನೀತಿ ರೂಪಿಸುವಲ್ಲಿ ವಿಫಲವಾಗಿದೆ, ಕೇವಲ ಮನ್‌ಕಿಬಾತ್ ಹೆಸರಿನಲ್ಲಿ ಮಾತ್ರ ಏಕ ಮುಖ ಭಾಷಣಗಳನ್ನಷ್ಟೇ ಮಾಡುತ್ತಾ ಪ್ರಧಾನಿ ಮೋದಿಯವರು ಕಾಲ ಕಳೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನಪರವಾದ ಯೋಜನೆಗಳನ್ನು ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ಅಂಶಗಳನ್ನು ಯಥಾವತ್ತಾಗಿ ಜಾರಿಗೆ ತಂದಿದ್ದಾರೆ, ಬೆಳ್ತಂಗಡಿಯಲ್ಲಿ ಶಾಸಕ ವಸಂತ ಬಂಗೇರರ ನೇತೃತ್ವದಲ್ಲಿ ದಾಖಲೆ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಮುಂದೆ ಕೂಡ ಅವರೇ ನಮ್ಮ ಶಾಸಕರಾಗಿ ಆಯ್ಕೆಯಾಗುವಲ್ಲಿ ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದರು. ಎಪಿಎಂಸಿ ಸದಸ್ಯ ಕೇಶವ ಪಿ. ಬೆಳಾಲು ಕಾರ್ಯಕ್ರಮ ನಿರೂಪಿಸಿದರು. ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.