ಮುಂಡಾಜೆ: ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಲಾಂಛನಗಳ ಬಗ್ಗೆ ಸರಿಯಾದ ತಿಳುವಳಿಕೆ ಅಗತ್ಯ, ರಾಷ್ಟ್ರದ ಜವಾಬ್ದಾರಿಯುತ ಪೌರರಾಗಿ ರಾಷ್ಟ್ರೀಯ ಸಂಕೇತಗಳನ್ನು ಸರಿಯಾಗಿ ನಿರ್ವಹಿಸುವುದು ನಮಗೆ ಗೊತ್ತಿರಬೇಕು. ರಾಷ್ಟ್ರ ಧ್ವಜಕ್ಕೆ ಮಾಡುವ ಅವಮಾನ ಇಡೀ ದೇಶಕ್ಕೇ ಮಾಡುವ ಅವಮಾನ. ಅವರವರ ಧರ್ಮಗ್ರಂಥಗಳು ಅವರವರಿಗೆ ಮಾತ್ರ ಶ್ರೇಷ್ಠವಾದರೆ ರಾಷ್ಟ್ರಧ್ವಜ ಭಾರತೀಯರಾದ ಸರ್ವರಿಗೂ ಶ್ರೇಷ್ಠ ಎಂದು ಭಾರತ ಸೇವಾದಳದ ತರಬೇತುದಾರ ಅಲ್ಫೋನ್ಸ್ ಫ್ರಾಂಕೋ ಹೇಳಿದರು.
ಸೆ. 15 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಇದರ ಬೆಳ್ಳಿ ಹಬ್ಬದ ಸರಣಿ ಉಪನ್ಯಾಸ ಮಾಲೆಯಲ್ಲಿ ಅವರು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಪ್ರ. ಸಂಪನ್ಮೂಲ ವ್ಯಕ್ತಿಯಾಗಿದ್ದರು. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಮತ್ತು ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಸಂಯೋಜನೆಗೊಂಡಿತ್ತು. ಬಳಿಕ ಅವರು ವಿದ್ಯಾರ್ಥಿಗಳಿಗೆ ದ್ವಜ ಕಟ್ಟುವುದು, ನಿಯಮದಂತೆ ರಾಷ್ಟ್ರಗೀತೆ ಹಾಡುವುದನ್ನು ಕಲಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಲ| ಅಶ್ರಫ್ ಆಲಿಕುಂಞಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಸರಕಾರದ ಮುಖ್ಯಮಂತ್ರಿ ಸುಜಿತ್ ಎಂ.ಬಿ. ವಹಿಸಿದ್ದರು. ಪ್ರಾಂಶುಪಾಲ ಮುರಳೀಧರ್ ಮತ್ತು ಶಿಕ್ಷಕ ವೃಂದದವರು ಸಹಕಾರ ನೀಡಿದರು.