ವೇಣೂರು: ಬೃಹತ್ ಶಾಂತಿ ಚಕ್ರರಾಧನೆ ಸಕಲ ಜೀವರಾಶಿಗಳಿಗೂ ನೆಮ್ಮದಿ ಸಿಗಬೇಕೆನ್ನುವುದೇ ಶಾಂತಿ ಚಕ್ರರಾಧನೆಯ ಮಹತ್ವ: ಮುನಿಶ್ರೀ

venur brahath shanthi chakraradhaneವೇಣೂರು: ಜನ್ಮ ತಾಳಿದ ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಮೃತ್ಯು ಉತ್ತಮವಾಗಿ ಇರಬೇಕಾದರೆ ಜೀವನದಲ್ಲಿ ಸಾರ್ಥಕತೆ ಬೇಕು. ಅದಕ್ಕಾಗಿ ಪರಮಾತ್ಮನ ಭಕ್ತಿ, ಆಧ್ಯಾತ್ಮಿಕ ಚಿಂತನೆ, ಧ್ಯಾನ ಅವಶ್ಯಕ. ನಮ್ಮ ಕರ್ಮಗಳನ್ನು ನಾಶ ಮಾಡುವಂತೆ ಮತ್ತು ವಿಶ್ವಕ್ಕೆ ಶಾಂತಿ ಲಭಿಸಬೇಕು. ಸಕಲ ಜೀವರಾಶಿಗಳಿಗೂ ಶಾಂತಿ, ನೆಮ್ಮದಿ ಸಿಗಬೇಕೆನ್ನುವುದೇ ಶಾಂತಿ ಚಕ್ರರಾಧನೆಯ ಮಹತ್ವ ಎಂದು ಕ್ರಾಂತಿಕಾರಿ ಸಂತ ಮುನಿಶ್ರೀ ಪ್ರಸಂಗಸಾಗರ ಮಹಾರಾಜ ನುಡಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಜರಗುತ್ತಿರುವ ಚಾತುರ್ಮಾಸ್ಯ ವರ್ಷಾಯೋಗದ ಹಿನ್ನೆಲೆಯಲ್ಲಿ ರವಿವಾರ ಜರಗಿದ ಬೃಹತ್ ಶಾಂತಿ ಚಕ್ರರಾಧನೆ ಕಾರ್ಯಕ್ರಮದಲ್ಲಿ ಮುನಿಶ್ರೀಗಳು ಮಂಗಲ ಪ್ರವಚನ ನೀಡಿದರು.
ಕೃಷಿಗೆ ಪ್ರಾಧಾನ್ಯತೆ ನೀಡಿ
ನಮ್ಮದು ಕೃಷಿ ಸಮಾಜ ರಾಷ್ಟ್ರ. ನಾವು ಎಷ್ಟೇ ಶ್ರೀಮಂತರಾಗಿದ್ದರೂ ಬದುಕಲು ಆಹಾರ ಬೇಕು. ಕೃಷಿಯಿಂದ ಪರಿಸರವೂ ಉಳಿಯುತ್ತದೆ. ಅದಕ್ಕಾಗಿ ಕೃಷಿಗೆ ಪ್ರಾಧಾನ್ಯತೆ ನೀಡುವಂತಾಗಬೇಕು ಎಂದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ಮುನಿಶ್ರೀಯವರ ಪ್ರವಚನದಿಂದ ಸಮಾಜದಲ್ಲಿ ಶಾಂತಿ ನೆಲೆಯಾಗಲಿ, ಧರ್ಮ ಪ್ರಭಾವನೆಯಾಗಲಿ ಎಂದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ, ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಬಿ. ಪದ್ಮಶೇಖರ ಜೈನ್, ಪಿ. ಧರಣೇಂದ್ರ ಕುಮಾರ್, ಚಂದ್ರಪ್ರಕಾಶ್ ರೈ, ಉದ್ಯಮಿ ಧನ್ಯ ಕುಮಾರ್ ರೈ, ಸಮಿತಿಯ ಕಾರ್ಯಾಧ್ಯಕ್ಷ ನವೀನ್‌ಚಂದ್ ಬಳ್ಳಾಲ್, ಕೋಶಾಧಿಕಾರಿ ಪ್ರವೀಣ್ ಕುಮಾರ್ ಇಂದ್ರ, ಉಪಾಧ್ಯಕ್ಷರುಗಳಾದ ರತ್ನವರ್ಮ ಇಂದ್ರ, ಉದಯ ಕುಮಾರ್ ಸೇಮಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಹೊರನಾಡು ಜಿನಗಾನವಿಶಾರದೆ ಜಯಶ್ರೀ ಧರಣೇಂದ್ರ ಜೈನ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಜರಗಿತು. ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ, ವೇಣೂರು ಬಾಹುಬಲಿ ಯುವಜನ ಸಂಘ, ಜೈನ್ ಮಿಲನ್ ಹಾಗೂ ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.