ಸನಾತನ ಭಾರತೀಯ ಸಂಸ್ಕೃತಿ ಅಚಲವಾಗಿದೆ: ದೊಡ್ಡರಂಗೇ ಗೌಡ

ujire sahithya sammelanaಬೆಳ್ತಂಗಡಿ: ಸನಾತನ ಭಾರತೀಯ ಸಂಸ್ಕೃತಿಯ ಬೇರು ಆಳವಾಗಿದೆ. ಈ ಬೇರುಗಳಿಗೆ ಕೊಳ್ಳಿಯಿಡುವ ಕೆಲಸ ನಡೆಯುತ್ತಿದ್ದು, ನಮ್ಮ ಅಸ್ತಿತ್ವಕ್ಕೆ ಕಳಂಕವಾಗಿದೆ. ನಮ್ಮ ಸಂಸ್ಕೃತಿ ಅಚಲ, ಸುಗಮ ಮತ್ತು ಸಕಾರಾತ್ಮಕ ಚಿಂತನೆಗಳಿಂದ ಕೂಡಿದೆ. ಭಾರತೀಯ ಸಂಸ್ಕೃತಿಯ ಉತ್ಕರ್ಷ ಸಂವರ್ಧನೆಗೆ ಯುವಕರು ಹೊಸ ಯೋಚನೆ, ಚಿಂತನೆಗಳ ಮೂಲಕ ಅಂತರಮುಖಿಗಳಾಗಬೇಕು ನಮ್ಮ ದೇಶ, ಮಣ್ಣಿನ ಕಡೆ ಅಭಿಮುಖವಾಗಬೇಕು ಎಂದು ಖ್ಯಾತ ಸಾಹಿತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ದೊಡ್ಡರಂಗೇ ಗೌಡ ಹೇಳಿದರು.
ಅವರು ಆ.20ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ
ಮಾತನಾಡಿದರು. ಮಲಿನ ಮನಸ್ಸಿನಿಂದ ದೇಶ ಕಟ್ಟಲು ಸಾಧ್ಯವಿಲ್ಲ, ಸತ್ಪಥ, ಸಂಸ್ಕೃತಿಯ ಸತ್ಪಾತ್ರದಿಂದ ದೇಶ ಮುನ್ನಡೆಯಲು ಸಾಧ್ಯ, ಯುವಕರು ದೂರ ದೇಶಗಳಿಗೆ ಹೋಗಿ ವಿದೇಶದ ಉದ್ಧಾರ ಮಾಡದೇ ಭಾರತದ ಉದ್ಧಾರದೆಡೆಗೆ ತಾಯಿಯ ಸೌಶೀಲ್ಯದ ಗುಣಗಾನದಿಂದ ದೇಶದ ಉತ್ಕಷ್ಠತೆಗೆ ಕೊಡುಗೆಯಾಬೇಕು. ಮುರಿದು ಹೋದ ಮನಸ್ಸುಗಳನ್ನು ಬೆಸೆದು ಪರಿಪೂರ್ಣ ವ್ಯಕ್ತಿತ್ವದಿಂದ ಸಮೃದ್ಧ ಭಾರತ ಕಟ್ಟೋಣ ಎಂದು ಕರೆ ನೀಡಿದರು. ಬೆಳ್ತಂಗಡಿ ತಾಲೂಕು ಘಟಕ ಮತ್ತು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ವಿಜಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆಯವರು ಮಾತನಾಡಿ, ದೇಶದ ಸಂಸ್ಕೃತಿ ನಮ್ಮ ಭಾವನೆಗಳ ಪ್ರತೀಕ. ಭಾಷೆ, ಭಾವನೆ, ನೆಲಜಲ ಸಂಸ್ಕೃತಿಯಿಂದಲೇ ನಾವು ಇಂದು ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ. ಒಡೆಯುವ ಭಾವನೆ ಮತ್ತು ಮನಸ್ಸುಗಳನ್ನು ತಿದ್ದುವ ಕೆಲಸ ಸಾಹಿತ್ಯ ಪರಿಷತ್ ಮಾಡುತ್ತದೆ. ದೇಶದಲ್ಲಿ ಅತೀ ಹೆಚ್ಚು ಜನ ಮಾತನಾಡುವ ಭಾಷೆ ಹಿಂದಿ. ಇಡೀ ದೇಶ ಜನರನ್ನು ಭಾವನಾತ್ಮಕವಾಗಿ ಒಂದು ಗೂಡಿಸಲು ಹಿಂದಿಯನ್ನು ತರಲಾಗಿದೆ. ನಮ್ಮ ನಡುವಿನ ಕಂದಕವನ್ನು ದೂರ ಮಾಡುವ ಬಗ್ಗೆ ಯೋಚಿಸಬೇಕಾಗಿದೆ. ಪ್ರತಿಯೊಂದನ್ನು ಜಾತಿ ಮತ್ತು ರಾಜಕೀಯ ಲಾಭದ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ತಿಳಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ದಿಕ್ಸೂಚಿ ಭಾಷಣ ಮಾಡಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ಎತ್ತರಿಸುವ ಕೆಲಸವಾಗಬೇಕು ಎಂದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಡಾ| ಎಸ್.ಎನ್. ಸುಬ್ಬರಾವ್ ರಚಿಸಿ, ನಾವುಜಿರೆ ಸಂಪಾದಕತ್ವದ ಭೋಜರಾಜ ಹೆಗ್ಡೆ ಪ್ರಕಟಿಸಿದ `ರಾಷ್ಟ್ರೀಯ ಪ್ರೇರಣಾ ಗೀತೆಗಳು’ ಕೃತಿಯನ್ನು ದೊಡ್ಡರಂಗೇ ಗೌಡ ಲೋಕಾರ್ಪಣೆಗೊಳಿಸಿದರು. ಬೆಳ್ತಂಗಡಿ ತಾಲೂಕು ಘಟಕದ ಸಂಚಾಲಕ ಚಂದ್ರಮೋಹನ ಮರಾಠೆ, ಗೌರವಾಧ್ಯಕ್ಷ ಪ್ರತಾಪಸಿಂಹ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ವಿದ್ಯಾಪುನೀತ್ ಮತ್ತು ಶ್ರವಣ್ ಯಕ್ಷಗಾನ ಹಾಡಿನೊಂದಿಗೆ ಪ್ರಾರ್ಥಿಸಿದರು. ಘಟಕಾಧ್ಯಕ್ಷ ಡಾ. ಶ್ರೀಧರ ಭಟ್ ಸ್ವಾಗತಿಸಿ, ಉಜಿರೆ ಜೇಸಿ ಅಧ್ಯಕ್ಷ ದೇವುದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಮುರಳೀಕೃಷ್ಣ ಆಚಾರ್ ವಂದಿಸಿದರು.
ಸಾಹಿತ್ಯ ಮತ್ತು ರಾಷ್ಟ್ರೀಯ ಪ್ರಜ್ಞೆ ಗೋಷ್ಠಿ : ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎನ್.ಜಿ. ಪಟವರ್ಧನ್ ವಹಿಸಿದ್ದರು. ಜನಪದ ವಿದ್ವಾಂಸ ದಯಾನಂದ ಕತ್ತಲ್‌ಸಾರ್, ಯಕ್ಷಗಾನ ಅಕಾಡೆಮಿ ಸದಸ್ಯ ತಾರಾನಾಥ ಬಲ್ಯಾಯ, ಸ್ತ್ರೀರೋಗ ತಜ್ಞೆ ಡಾ| ವೀಣಾ ವಿಷಯ ಮಂಡಿಸಿದರು. ಆತ್ಮೀಯ ಶೆಟ್ಟಿ ಮತ್ತು ಜಿನಪ್ರಸಾದ್ ನಿರೂಪಿಸಿ, ನಾರಾಯಣ ಫಡ್ಕೆ ಸ್ವಾಗತಿಸಿ, ಭಾಸ್ಕರ ಹೆಗ್ಡೆ ವಂದಿಸಿದರು.ಬಹುಭಾಷಾ ಕವಿಗೋಷ್ಠಿ: ನಿವೃತ್ತ ಉಪನ್ಯಾಸಕ ನಾವುಜಿರೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ರಘುನಾಥ ರೈ, ಡಾ. ದಿವಾ ಕೊಕ್ಕಡ, ವಿಜಯಾ ಶೆಟ್ಟಿ, ಪ್ರಸನ್ನ ಕುಮಾರ್ ಐತಾಳ್, ಅರವಿಂದ ಹೆಬ್ಬಾರ್ ಸ್ವರಚಿತ ಕವನ ವಾಚಿಸಿದರು. ಮುರಳೀಕೃಷ್ಣಾಚಾರ್ ಸ್ವಾಗತಿಸಿ, ವಿಜಯಾನಂದ ನಿರೂಪಿಸಿ, ವಂದಿಸಿದರು.
ಚಾವಡಿ ಚರ್ಚೆ : ಡಾ| ಎಂ.ಎಂ ದಯಾಕರ್ ಸಂಯೋಜನೆಯಲ್ಲಿ ನಡೆದ ಚಾವಡಿ ಚರ್ಚೆಯಲ್ಲಿ ಡಾ| ಪ್ರದೀಪ್ ನಾವೂರು, ಸಂಪತ್‌ಸುವರ್ಣ ಮತ್ತು ಡಾ| ರೋಹಿಣಾಕ್ಷ ಶಿರ್ಲಾಲು ಅಭಿಪ್ರಾಯ ಮಂಡಿಸಿದರು. ಲಾವಣ್ಯ ನಿರೂಪಿಸಿ ರಮೇಶ್ ಮಯ್ಯ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.