ಕೋಲೋಡಿ 5.5 ಕಿ.ಮೀ ಕಾಂಕ್ರೀಟ್ ರಸ್ತೆ, 7 ಸೇತುವೆಗೆ ಒಟ್ಟು 11.65 ಕೋಟಿ ರೂ. ಮಂಜೂರು

kolodi (1)ಜೀತ ಮುಕ್ತಿ ಕೋಲೋಡಿಗೆ ಇನ್ನು 6 ತಿಂಗಳಲ್ಲಿ ಸಂಕಷ್ಟ ಮುಕ್ತಿ: ಶಾಸಕ ವಸಂತ ಬಂಗೇರ ಭರವಸೆ

ನೆರಿಯ : ಕೋಲೋಡಿ ಜೀತ ಮುಕ್ತಿ ಕಾಲನಿಯ ಬಹು ವರ್ಷಗಳ ಬೇಡಿಕೆ ಮತ್ತು ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದ್ದ ಕಾಲನಿಯ ಮುಖ್ಯ ರಸ್ತೆಯ 5.5 ಕಿ. ಮೀ. ಪೂರ್ಣ ಕಾಂಕ್ರೀಟೀಕರಣ, ಇದೇ ರಸ್ತೆಯಲ್ಲಿ 5 ದೊಡ್ಡ ಸೇತುವೆಗಳು ಮತ್ತು 2 ಸಣ್ಣ ಸೇತುವೆಗಳು ಸೇರಿ ಒಟ್ಟು 11. 65 ಕೋಟಿ ರೂ. ಮಂಜೂರಾಗಿದೆ. ಹಿಂದೊಂದು ಕಾಲದಲ್ಲಿ ಜೀತ ಮುಕ್ತಿ ಗೊಂಡು ಸ್ವತಂತ್ರ್ಯ ಬದುಕು ಕಟ್ಟಿಕೊಂಡಿದ್ದ ಇಲ್ಲಿನ ಮಲೆಕುಡಿಯ ಕುಟುಂಬಗಳ ಸಂಕಷ್ಟಕ್ಕೆ ಇನ್ನೂ ಆರೇ ತಿಂಗಳಲ್ಲಿ ಮುಕ್ತಿ ದೊರೆಯಲಿದೆ ಎಂದು ಶಾಸಕ ವಸಂತ ಬಂಗೇರ ವಿಶ್ವಾಸ ವ್ಯಕ್ತಪಡಿಸಿದರು.
ಕೋಲೋಡಿಯಲ್ಲಿ ಆ. 22 ರಂದು ನಡೆದ 11.65 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ, ಕೋಲೋಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಕಾಲನಿ ನಿವಾಸಿಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕೋಲೋಡಿ ಪರಿಸರದ ನಿವಾಸಿಗಳಲ್ಲಿ ಒಗ್ಗಟ್ಟು ಇರಲಿಲ್ಲ, ಸ್ವಂತ ಮನೆಯೂ ಇಲ್ಲದೆ ನದಿ ತೊರೆಯ ಬದಿ ತಾತ್ಕಾಲಿಕ ಮನೆ ಮತ್ತು ಕೃಷಿ ಮಡಿಕೊಂಡಿದ್ದ ಜನಾಂಗ 2 ವರ್ಷಕ್ಕೊಮ್ಮೆ ಜಾಗ ಬದಲಾಯಿಸುತ್ತಾ ಜೀವನಸಾಗಿಸುತ್ತಿದ್ದರು. 1974ರಲ್ಲಿ ಭೂ ಮಸೂದೆ ಬಂದ ಬಳಿಕ ಸ್ವಂತ ಭೂಮಿ ಹೊಂದಿ ಸ್ವಂತ ಜಾಗ ಕೃಷಿ ಹೊಂದುವಂತಾಯಿತು. ಆದರೂ ಮೂಲಭೂತ ಅವಶ್ಯಕತೆಯಾಗಿದ್ದ ವಿದ್ಯುತ್ ಇಲ್ಲ, ರಸ್ತೆ ಕೂಡ ಸರಿಯಿಲ್ಲದಿದ್ದರಿಂದ ಅನಾರೋಗ್ಯ ಪೀಡಿತರನ್ನು ಏಳೂವರೆ ಕಿ.ಮೀ. ಹೊತ್ತುಕೊಂಡು ಹೋಗುವ ಸನ್ನಿವೇಶವಿತ್ತು. ಜನತೆಗೆ ವಿದ್ಯೆ ಕೂಡ ಇಲ್ಲದ್ದರಿಂದ ಸಂಕಷ್ಟದ ಬದುಕು ಸಾಗಿಸುತ್ತಿದ್ದರು. ಇದೀಗ ಕಾಲನಿಗೆ ಹೊಸ ರಸ್ತೆ ಕಾಮಗಾರಿ ನಡೆಯಲಿದ್ದು ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ನಾನೇ ಉದ್ಘಾಟನೆ ನಡೆಸಲಿದ್ದೇನೆ, ಅಲ್ಲಿಗೆ ನಿಮ್ಮ ಸಂಕಷ್ಟಕ್ಕೆ ಮುಕ್ತಿ ದೊರೆತು ನೀವೂ ಸುಖದ ಜೀವನ ನಡೆಸುವಂತಾಗಬೇಕು ಎಂದರು.
ಪೇಟೆ ಪಟ್ಟಣಗಳಲ್ಲಿ ಜನ ಮುಂದುವರಿದ ವ್ಯವಸ್ಥೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಇಂತಹಾ ಕುಗ್ರಾಮಗಳಿಗೆ ಅನುಕೂಲ ಒದಗಿಸಿಕೊಟ್ಟು ನೀವೂ ಕೂಡ ಸ್ವಾಭಿಮಾನದ ಬದುಕು ಸಾಗಿಸುವಂತೆ ಮಾಡುವುದು ಯಾರೇ ಜನಪ್ರತಿನಿಧಿಯಾದರೂ ಅವರ ಕರ್ತವ್ಯ, ನನ್ನ ಶಾಸಕ ಅಧಿಕಾರವಧಿ ಇನ್ನು ಆರು ತಿಂಗಳು ಮಾತ್ರ ಇದೆ, ಈ ವೇಳೆಯಲ್ಲಿ ಕಾಮಗಾರಿ ಮುಗಿದರೂ ಮುಗಿಯದಿದ್ದರೂ ನಾನೇ ಉದ್ಘಾಟನೆ ಮಾಡುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನೆರಿಯ ಗ್ರಾ.ಪಂ. ಅಧ್ಯಕ್ಷ ಪಿ. ಮುಹಮ್ಮದ್ ವಹಿಸಿದ್ದರು.
ವೇದಿಕೆಯಲ್ಲಿ ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ನೆರಿಯ ಗ್ರಾ.ಪಂ. ಸದಸ್ಯರಾದ ಪಿ.ಕೆ. ರಾಜನ್, ಚಂದ್ರಾವತಿ, ಇಬ್ರಾಹಿಂ, ಕಸ್ತೂರಿ, ಮಥಾಯಿ, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಸದಸ್ಯ ರೋಯಿ ಯಾನೆ ಜೋಸೆಫ್, ಚಾರ್ಮಾಡಿ ಪಂ. ಸದಸ್ಯ ಶಾಜಿ, ಮುಗೆರೋಡಿ ಕನ್ಟ್ರಕ್ಷನ್ಸ್ ಮಾಲಕ ಸುಧಾಕರ ಶೆಟ್ಟಿ ಮುಗೆರೋಡಿ, ಕಾರ್ಯಪಾಲಕ ಅಭಿಯಂತರ ದಯಾನಂದ ಪೂಜಾರಿ, ಇನ್ನೋರ್ವ ಅಭಿಯಂತರ ಕೀರ್ತಿ ಎಸ್. ಅಮೀನ್, ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಗ್ರೇಸಿಯನ್ ವೇಗಸ್, ನೆರಿಯ ಗ್ರಾ.ಪಂ. ಪಿಡಿಒ ಅಜಿತ್, ಹಿರಿಯ ನಾಗರಿಕ ಬಿ. ಕರಿಯ ಉಪಸ್ಥಿತರಿದ್ದರು.
ಗ್ರಾ.ಪಂ. ಸದಸ್ಯ ಹಾಗೂ ಕೋಲೋಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ ಕೋಲೋಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ಅಶ್ರಫ್ ಕಾರ್ಯಕ್ರಮ ನಿರೂಪಿಸಿ, ಶಾಸಕರು ಮತ್ತು ಜಿ.ಪಂ. ಸದಸ್ಯೆ ನಮಿತಾ ಅವರು ನೀಡಿದ ಅನುದಾನಗಳ ವಿವರ ನೀಡಿದರು.
ಎಲ್ಯಣ್ಣ ಮಲೆಕುಡಿಯ ವಂದಿಸಿದರು. ಸುಮಲತಾ, ಪುಷ್ಪಾ, ಮತ್ತು ದೀಪಿಕಾ ಪ್ರಾರ್ಥನೆ ಹಾಡಿದರು.
ಸಮಾರಂಭದಲ್ಲಿ ಪ್ರಮುಖರಾದ ಮೂಸೆಕುಂಞಿ, ಲಕ್ಷ್ಮಣ ಎಂ.ಕೆ, ನೀಲಯ್ಯ ಗೌಡ, ಹೇಮಾವತಿ, ರಾಮ್ ಕುಮಾರ್ ಬೋವಿನಡಿ, ಮಂಜಪ್ಪ, ತಿಮ್ಮಪ್ಪ ಬಿ, ರಾಘವ ಕೆ.ಬಿ, ಕೊರಗಪ್ಪ ಬಿ, ಅಭಿಲಾಷ್ ಆಂಟೊನಿ, ಶ್ಯಾಮಲಾ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.