ಬೆಳ್ತಂಗಡಿ : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚ ಮುಕ್ತ ನಗರಗಳಾಗಿ ಮಾಡಲು ಸರಕಾರ ಮಾಡಿದ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಬೆಳ್ತಂಗಡಿ ನಗರ ಪಂಚಾಯತು ಪ್ರಥಮ ಹಂತದಲ್ಲೇ ಪ್ರಶಸ್ತಿಗೆ ಆಯ್ಕೆಯಾಗಿದೆ.
ಆ.15ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಬೆಳ್ತಂಗಡಿ ನಗರ ಪಂಚಾಯತು ಉಪಾಧ್ಯಕ್ಷ ಜಗೀಶ್ ಡಿ. ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್ ಅವರು ಪಂಚಾಯತು ಆಡಳಿತದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್, ಶಾಸಕರಾದ ಮೊದೀನ್ ಭಾವ, ಜೆ.ಆರ್. ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಐಜಿಪಿ ಹರಿಶೇಖರನ್, ಎಸ್.ಪಿ. ಸುಧೀರ್ ರೆಡ್ಡಿ, ಜಿ.ಪಂ. ಸಿಇಒ ಡಾ. ಎಂ.ಆರ್. ರವಿ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಎಲ್ಲಾ ಮನೆಗಳಲ್ಲೂ ಜನರು ಶೌಚಾಲಯವನ್ನು ಬಳಸುತ್ತಿದ್ದಾರೆ. ಶೌಚಾಲಯ ಇಲ್ಲದ ಬಡ ಕುಟುಂಬಗಳಿಗೆ ನಗರ ಪಂಚಾಯತು ವತಿಯಿಂದ ಪ್ರತಿ ವರ್ಷ ಶೌಚಾಲಯ ನಿರ್ಮಾಣಕ್ಕೆ ಸಾಮಾಗ್ರಿ ಹಾಗೂ ಅನುದಾನವನ್ನು ನೀಡಲಾಗುತ್ತದೆ. ಅಲ್ಲದೆ ಬೆಳ್ತಂಗಡಿ ಬಸ್ ನಿಲ್ದಾಣ ಮತ್ತು ಸಂತೆಕಟ್ಟೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದ್ದು, ಇದರ ನಿರ್ವಹಣೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ನಗರದ ಸ್ವಚ್ಛತೆಗೆ ಆಡಳಿತ ಹೆಚ್ಚಿನ ಗಮನ ಹರಿಸಿ ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡುತ್ತಿದೆ. ನಗರದ ತ್ಯಾಜ್ಯ ವಿಲೇಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಅಂಗಡಿ ಹಾಗೂ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಯೂ ಪ್ರತಿ ದಿನ ನಡೆಯುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬೆಳ್ತಂಗಡಿ ನಗರ ಪಂಚಾಯತನ್ನು ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.