ತಾಲೂಕು ಮಟ್ಟದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರಪ್ರೇಮ, ಕರ್ತವ್ಯಪ್ರಜ್ಞೆ ಎಲ್ಲರಲ್ಲೂ ಮೂಡಬೇಕು

Thaluku mattada swathanthra dinacharaneಬೆಳ್ತಂಗಡಿ: ಜಾತಿ, ಧರ್ಮ, ಪ್ರಾಂತ್ಯದ ಹೆಸರಿನಲ್ಲಿ ನಮ್ಮ ನಡುವೆ ನಡೆಯುವ ಸಂಘರ್ಷವನ್ನು ನಿಲ್ಲಿಸಿ ದೇಶದ ಪ್ರಗತಿಗಾಗಿ ನಾವೆಲ್ಲ ಸಂಘಟಿತರಾಗಬೇಕು, ರಾಷ್ಟ್ರಪ್ರೇಮ, ಕರ್ತವ್ಯಪ್ರಜ್ಞೆ ನಮ್ಮಲ್ಲಿ ಮೂಡಬೇಕು ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಕರೆ ನೀಡಿದರು.
ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ವಾಣಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ರಿಟೀಷರ ವಿರುದ್ಧ ನಮ್ಮ ದೇಶದ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ದೇಶಭಕ್ತರು ಹೋರಾಟ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗಳು ನಡೆದಿದೆ. ಇವರೆಲ್ಲರ ಪ್ರಯತ್ನದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಇಂದು ನಮ್ಮ ದೇಶ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಧ್ವಜಾರೋಹಣವನ್ನು ನೆರವೇರಿಸಿ ಸಂದೇಶ ನೀಡಿದ ಬೆಳ್ತಂಗಡಿ ತಹಶೀಲ್ದಾರ್ ಎಚ್.ಕೆ ತಿಪ್ಪೇಸ್ವಾಮಿಯವರು ಸ್ವಾತಂತ್ರ್ಯಕ್ಕಾಗಿ ಹಿರಿಯರ ತ್ಯಾಗ, ಬಲಿದಾನವನ್ನು ನಾವೆಲ್ಲ ಸದಾ ನೆನಪಿಸಬೇಕು. ಇಂದು ನಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಭಯೋತ್ಪಾದನೆ, ನಕ್ಸಲ್‌ನಂತಹ ಚಟುವಟಿಕೆಗಳನ್ನು ನಿಗ್ರಹಿಸಬೇಕಾಗಿದೆ. ದೇಶ, ಭಾಷೆಯನ್ನು ಬೆಳೆಸುವುದರೊಂದಿಗೆ ನಮ್ಮ ರಾಷ್ಟ್ರವನ್ನು ಕಟ್ಟಿಬೆಳೆಸುವ ಕಾರ್ಯದಲ್ಲಿ ನಾವೆಲ್ಲ ಕೈಜೋಡಿಸಬೇಕು ಎಂದರು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ಬೋನವೆಂಚರ್ ನಜ್ರೆತ್ ಪ್ರಧಾನ ಭಾಷಣ ಮಾಡಿ, ನಾವಿಂದು ನೆಮ್ಮದಿಯಿಂದ ಇರುವಲ್ಲಿ ಗಡಿಗಳಲ್ಲಿ ರಕ್ಷಣೆ ನೀಡುತ್ತಿರುವ ನಮ್ಮ ದೇಶದ ಸೈನಿಕರನ್ನು ನಾವು ಗೌರವಿಸಬೇಕು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಮ್ಮ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ನಾವು ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿದು, ಸಮೃದ್ಧ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ನಗರ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬೆಳ್ತಂಗಡಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ೧೦೦ ಫಲಿತಾಂಶ ಪಡೆದ ತಾಲೂಕಿನ 10 ಶಾಲೆಗಳನ್ನು ಗುರುತಿಸಿ, ಗೌರವಿಸಲಾಯಿತು. ಕನ್ನಡ ಮಾಧ್ಯಮದಲ್ಲಿ 600ಕ್ಕಿಂತ ಹೆಚ್ಚು ಅಂಕಪಡೆದ 3 ವಿದ್ಯಾರ್ಥಿನಿಯರಿಗೆ ಸರಕಾರದಿಂದ ಕೊಡಲಾದ ಲ್ಯಾಬ್‌ಟಾಪ್‌ನ್ನು ಶಾಸಕರು ವಿತರಿಸಿದರು.
ಶಾಲಾವಾರು ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಗುರುಪ್ರಸಾದ್, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೋಮೇ ಗೌಡ, ಬೆಳ್ತಂಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಲೋಕೋಪಯೋಗಿ ಇಲಾಖಾ ಸ.ಕಾ.ಇಂಜಿನಿಯರ್ ಶಿವಪ್ರಸಾದ ಅಜಿಲ, ವಾಣಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ತಾಲೂಕು ಸಂಯೋಜಕ ಜಯಾನಂದ ಲಾಯಿಲ, ಶಂಕರ
ಸುವರ್ಣ, ಸಿಡಿಪಿಒ ಸರಸ್ವತಿ ಉಪಸ್ಥಿತರಿದ್ದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಣ ಸಂಯೋಜಕ ಸುಭಾಶ್‌ಜಾದವ್ ವಂದಿಸಿದರು. ಚರ್ಚ್ ಕೂಡುರಸ್ತೆಯಿಂದ ವಾಣಿ ಕಾಲೇಜು ತನಕ ಸ್ವಾತಂತ್ರೋತ್ಸವದ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.