ಅರ್ಜಿ ಸಲ್ಲಿಸಿದರೂ ಬಾರದ ಬಿಪಿಎಲ್‌ಕಾರ್ಡ್ ಭಾಗ್ಯಲಕ್ಷ್ಮೀ ಯೋಜನೆಯ ಬಡವರಿಗೆ ಸಂಕಷ್ಟ

KDP sabheಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತದ ಮಾಸಿಕ ಕೆಡಿಪಿ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ದಿವ್ಯಾಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಆ.7ರಂದು ತಾ.ಪಂ. ಸಭಾಂಗಣದಲ್ಲಿ ಜರುಗಿತು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀರ್ ಆರ್.ಸುವರ್ಣ, ಕಾರ್ಯನಿರ್ವಾ ಹಣಾಧಿಕಾರಿ ಗುರುಪ್ರಸಾದ್, ವ್ಯವಸ್ಥಾಪಕಿ ಸುವರ್ಣ ಜೆ. ಕುಮಾರಿ, ಕಚೇರಿ ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ಸಂಯೋಜಕ ಜಯಾನಂದ ಲಾಯಿಲ ಉಪಸ್ಥಿತರಿದ್ದರು.
ಸರಕಾರದ ಕೃಷಿ ಹೊಂಡ ನಿರ್ಮಾಣ ಯೋಜನೆಗೆ ರೈತ ಕನಿಷ್ಠ ಪಕ್ಷ ಒಂದು ಎಕ್ರೆ ಜಾಗವನ್ನು ಹೊಂದಿರಬೇಕು, ಇದರಲ್ಲಿ ಇತರರಿಗೆ ಶೇ 80 ಹಾಗೂ ಪ.ಜಾತಿ, ಪಂಗಡದ ವರಿಗೆ ಶೇ 90 ಸಹಾಯಧನ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ತಿಲಕ್‌ಪ್ರಸಾದ್ ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಬಂದ ದಿನಗಳು ಜಾಸ್ತಿ ಆದರೆ ಮಳೆ ಪ್ರಮಾಣ ಕಡಿಮೆ ಎಂದು ಅವರು ವಿವರ ನೀಡಿದರು.
ಶಿಶುಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿಯವರು ತಮ್ಮ ಇಲಾಖೆಯ ಪ್ರಗತಿ ನೀಡಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾರ್ಡ್ ದೊರೆಯದ ಬಡವರಿಗೆ ಭಾಗ್ಯಲಕ್ಷ್ಮೀ ಯೋಜನೆ ಬಾಂಡ್ ದೊರೆಯುವಲ್ಲಿ ಸಮಸ್ಯೆಯಾಗಿದೆ. ಹಲವು ಮಂದಿ ಬಡವರು ಅರ್ಜಿ ನೀಡಿದ್ದಾರೆ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೂ ಅವರಿಗೆ ಇನ್ನೂ ಕಾರ್ಡ್ ಸಿಕ್ಕಿಲ್ಲ, ಅರ್ಜಿಯಲ್ಲಿ ಕಾರ್ಡ್‌ನ ನಂಬ್ರ ಎಂಟ್ರಿ ಮಾಡಬೇಕು. ಇದರಿಂದಾಗಿ ಹಲವು ಮಂದಿ ವಂಚಿತರಾಗುತ್ತಿದ್ದಾರೆ ಎಂದರು. ಮುಂದಿನ ಅ.2ರಿಂದ ಅಂಗನವಾಡಿಗಳ ಮೂಲಕ ಮಾತೃಪೂರ್ಣ ಯೋಜನೆ ಜಾರಿಯಾಗಲಿದ್ದು, ದ.ಕ ಜಿಲ್ಲೆಯಲ್ಲಿ ಇದರ ಅನುಷ್ಠಾನ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ 12 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಡೆಂಗ್ಯೂ, ಹೆಚ್1 ಎನ್1 ಪ್ರಕರಣ ಪತ್ತೆಯಾಗಿಲ್ಲ, ವೇಣೂರಿನ ಗ್ರಾ.ಪಂ ಸಿಬ್ಬಂದಿ ಗಂಜಿಮಠದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದು ತಾಲೂಕು ವ್ಯಾಪ್ತಿಗೆ ಬರುವುದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ತಿಳಿಸಿದರು. ಆ.10ರಂದು ಶಾಲಾ ಮಕ್ಕಳಿಗೆ ಜಂತುಹುಳು ಗುಳಿಗೆ ನೀಡುವ ಕಾರ್ಯಕ್ರಮವಿದ್ದು, ತಾಲೂಕಿನ ಪ್ರಾಥಮಿಕ ಶಾಲೆಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ವಿವರಿಸಿದರು. ತಾಲೂಕಿನ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಅವರು ಮಾಹಿತಿ ನೀಡಿದರು.
ಇಂದಬೆಟ್ಟು ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳ ತಪಾಸಣೆ ಮಾಡುವುದಿಲ್ಲ ಎಂಬ ದೂರು ಇದೆ ಎಂದು ತಾ.ಪಂ ಉಪಾಧ್ಯಕ್ಷೆ ವೇದಾವತಿ ಸಭೆಗೆ ಮಾಹಿತಿ ನೀಡಿದರು. ರೋಗಿಗಳು ಬಂದಾಗ ಕನಿಷ್ಠ ಅವರ ಮುಖವನ್ನು ನೋಡುವುದಿಲ್ಲ, ಜ್ವರ ಬಂದವರನ್ನು ಪರೀಕ್ಷೆ ನಡೆಸುವುದಿಲ್ಲ, ಬಂದವರು ತಮ್ಮ ಕಾಯಿಲೆ ತಿಳಿಸಿದಾಗ ಔಷಧಿ ಚೀಟಿ ಕೊಡುತ್ತಾರೆ ಎಂದು ನಾಗರಿಕರು ಗ್ರಾಮ ಸಭೆಯಲ್ಲಿ ದೂರಿಕೊಂಡಿದ್ದಾರೆ ಎಂದರು. ಅವರು ಆಯುರ್ವೇದಿಕ್ ವೈದ್ಯರಾಗಿದ್ದು, ಸೂಚನೆ ನೀಡಲಾಗುವುದು ಎಂದು ಡಾ| ಕಲಾಮಧು ಹೇಳಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖಾ ಪ್ರಗತಿಯನ್ನು ನೀಡಿದರು.
ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಗುರುಪ್ರಸಾದ್ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.