ಬೆಳ್ತಂಗಡಿ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ನೂತನ ಕಟ್ಟಡ `ಛಾಯಭವನ’ ಇದರ ಉದ್ಘಾಟನಾ ಸಮಾರಂಭ ಆ.6 ರಂದು ಗುರುವಾಯನಕೆರೆ ಅಯ್ಯಪ್ಪ ಮಂದಿರದ ಬಳಿ ಜರುಗಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಅವರು ಛಾಯಾಭವನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಛಾಯಾಗ್ರಾಹಕರಿಗೆ ಹೆಚ್ಚಿನ ಮಹತ್ವ ಮತ್ತು ಗೌರವದ ಸ್ಥಾನವಿದೆ. ಈ ವೃತ್ತಿಗೆ ನಿವೃತ್ತಿ ಎಂಬುದಿಲ್ಲ, ಛಾಯಾಗ್ರಾಹಕರು ಉತ್ತಮ ದೃಷ್ಟಿಕೋನ ಮತ್ತು ಕೈಚಲಕದಿಂದ ಈ ಕಲೆಯಲ್ಲಿ ಹೊಸ, ಹೊಸ ಅನ್ವೇಷಣೆಯನ್ನು ಮಾಡಬೇಕು, ಯುವ ಸಮುದಾಯ ಈ ಕ್ಷೇತ್ರಕ್ಕೆ ಹೆಚ್ಚು ಸಂಖ್ಯೆಯಲ್ಲಿ ಬರಬೇಕು ಎಂದರು.
ಬೆಳ್ತಂಗಡಿ ಛಾಯಾಗ್ರಾಹಕ ಸಂಘದವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಈ ಸುಂದರ ಕಟ್ಟಡ 14 ವರ್ಷಗಳ ಹಿಂದಿನ ಕನಸು ಇಂದು ನನಾಸಾಗಿದೆ. ಇದು ಛಾಯಗ್ರಾಹಕ ವಲಯದಲ್ಲೇ ಪ್ರಥಮ ಕಟ್ಟಡ ಎಂಬುದು ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ. ಈ ಸಂಘದ ಮೂಲಕ ಇನ್ನಷ್ಟು ಸಮಾಜ ಮುಖಿ ಕಾರ್ಯಗಳು ನಡೆಯಲಿ ಎಂದು ಅವರು ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಎಸ್.ಕೆ.ಪಿ.ಎ. ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿಯವರು ಮಾತನಾಡಿ, ಬೆಳ್ತಂಗಡಿ ವಲಯ 140 ಸದಸ್ಯರಿರುವ ಚಿಕ್ಕ ವಲಯವಾದರೂ ಇವರ ಸಾಧನೆ ದೊಡ್ಡದು. ಛಾಯಾಗ್ರಾಹಕ ವಲಯದಲ್ಲಿ ಸ್ವಂತ ಕಟ್ಟಡ ಮಾಡಿದವರು ಎಂದರೆ ಬೆಳ್ತಂಗಡಿ ವಲಯದವರು ಮಾತ್ರ ಇದು ಜಿಲ್ಲೆಯ ಛಾಯಗ್ರಾಹಕರಿಗೆ ಹೆಮ್ಮೆಯ ವಿಷಯದ ಜೊತೆಗೆ ಪ್ರೇರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್ ಮಾತನಾಡಿ ಇಂದು ಸರಕಾರಿ ಸ್ಥಳ ಅಕ್ರಮ ಮಾಡಿದವರಿಗೆ, ದೊಡ್ಡ ದೊಡ್ಡ ಭೂ ಹಿಡುವಳಿದಾರರಿಗೆ ಜಾಗವನ್ನು ಸಕ್ರಮ ಮಾಡುವ ಕೆಲಸ ಸರಕಾರದಿಂದ ಆಗುತ್ತಿದೆ. ಆದರೆ ಇಂತಹ ಸೇವಾ ಸಂಸ್ಥೆಗಳಿಗೆ ಕಟ್ಟಡ ಕಟ್ಟಲು ನಿವೇಶ ನೀಡುವುದಿಲ್ಲ ಇದರ ಬಗ್ಗೆ ಹಕ್ಕೊತ್ತಾಯ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಟ್ಟಡ ಸಮಿತಿ ಅಧ್ಯಕ್ಷ ಸುಂದರ್ ಕೆ. ಮಾತನಾಡಿ ಸಂಘದ ಈಗಿನ ಹಾಗೂ ಹಿಂದಿನ ಅಧ್ಯಕ್ಷರುಗಳು ಹಾಗೂ ಎಲ್ಲಾ ಸದಸ್ಯರ ಪೂರ್ಣ ಸಹಕಾರದಿಂದ ಇಷ್ಟು ಉತ್ತಮವಾದ ಕಟ್ಟಡ ನಿರ್ಮಾಣವಾಗಿದೆ ಎಂದು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಗುತ್ತಿಗೆದಾರ ಹಾಜಿ ಅಬ್ದುಲ್ ರಹಿಮಾನ್ ಅವರನ್ನು ಛಾಯಾಗ್ರಾಹಕರ ಅಸೋಸಿಯೇಶನ್ವತಿಯಿಂದ ಅರಸರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ವಾಣಿಶ್ರೀ ವೇಣೂರು ಇವರ ಪ್ರಾರ್ಥನೆ ಬಳಿಕ ಅಸೋಸಿಯೇಶನ್ನ ಗೌರವಾಧ್ಯಕ್ಷ ಹಾಗೂ ಕಟ್ಟಡ ಸಮಿತಿ ಕಾರ್ಯದರ್ಶಿ ಪಾಲಾಕ್ಷ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಟ್ಟಡ ನಿರ್ಮಾಣದ ಹಿನ್ನಲೆಯನ್ನು ಅದಕ್ಕಾಗಿ ಪಟ್ಟ ಶ್ರಮದ ಬಗ್ಗೆ ಸಮಗ್ರ ಮಾಹಿತಿ ನೀಡಿ, ಸ್ವಾಗತಿಸಿದರು. ಜಗದೀಶ್ ಜೈನ್ ಮತ್ತು ವಿಲ್ಸನ್ ಗೋನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿ, ಸಂಘದ ಅಧ್ಯಕ್ಷ ಮೌರಿಸ್ ಫೆರ್ನಾಂಡಿಸ್ ವಂದಿಸಿದರು. ಕೋಶಾಧಿಕಾರಿ ಮಹಾವೀರ ಜೈನ್, ಕಾಂiiದರ್ಶಿ ಸುರೇಶ್ ಕೌಡಂಗೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.