ಹತ್ಯಡ್ಕ : ಮನೆಯ ಬಳಿ ಕಟ್ಟಿದ ದನ ಕಳವು: 4 ಮಂದಿಯ ಬಂಧನ

Advt_NewsUnder_1
Advt_NewsUnder_1

Rekhyaರೆಖ್ಯ : ಹುಲ್ಲುಮೇಯಲು ಕಟ್ಟಿದ್ದ ಮೂರುವರೆ ತಿಂಗಳ ಗಬ್ಬದ ದನವನ್ನು ಕಳವುಗೈದು ಪಕ್ಕದ ಕಾಡಿನಲ್ಲೇ ಮಾಂಸ ಮಾಡಿ ರುಂಡ ಮತ್ತು ಇತರೇ ನಿರುಪಯುಕ್ತ ವಸ್ತುಗಳನ್ನು ಅಲ್ಲೇ ಬಿಟ್ಟುಹೋದ ವಿಲಕ್ಷಣಕಾರಿ ಘಟನೆಯೊಂದು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಹತ್ಯಡ್ಕ ಗ್ರಾಮದ ಕಾಪಿನಡ್ಕ ಎಂಬಲ್ಲಿ ಆ. 8 ರಂದು ಬೆಳಕಿಗೆ ಬಂದಿದೆ.
ಈ ಸಂಬಂಧ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ರೆಖ್ಯ ಗ್ರಾಮದ ಎಂಜಿರ ನಿವಾಸಿಗಳಾದ ರಿಕ್ಷಾ ಚಾಲಕ ಸಂತೋಷ್, ಬಿನೀಶ್, ಬಿನೋಜ್ ಯಾನೆ ಬಿನು ಮತ್ತು ರಾಜು ಯಾನೆ ರಾಜಪ್ಪ ಎಂಬವರೆಂದು ಗುರುತಿಸಲಾಗಿದೆ. ಬಂಧಿತರಿಂದ ಮಾಂಸ ಮಾಡಲು ಬಳಸಿದ ಆಯುಧ ಮತ್ತು ಇತರ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಆ. 7ರಂದು ಗ್ರಾಮದ ಆನಂದ ಗೌಡ ಅವರು ಮನೆಯ ಪಕ್ಕದಲ್ಲೇ ಮೇಯಲು ಕಟ್ಟಿದ್ದ 2 ಜಾನುವಾರುಗಳ ಪೈಕಿ ಒಂದನ್ನು ಹಾಡಹಗಲೇ ಹಗ್ಗ ಬಿಚ್ಚಿಕೊಂಡು ಕಳವುಗೈದಿದ್ದು, ಅಲ್ಲೇ ಪಕ್ಕದ ಕಾಡಿನೊಳಗೆ ಕೊಂಡೊಯ್ದು ಕೃತ್ಯವೆಸಗಿದ್ದಾಗಿದೆ. ಬೆಳಿಗ್ಗೆ 11.30ಕ್ಕೆ ದನ ಕಟ್ಟಿ ಬಂದಿದ್ದ ಆನಂದ ಗೌಡರು 12.30ರ ವೇಳೆಗೆ ಕಟ್ಟಿದ ಜಾಗ ಬದಲಾಯಿಸಿ ಮೇಯಲು ಕಟ್ಟುವ ಉದ್ದೇಶದಿಂದ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಒಂದು ದನ ನಾಪತ್ತೆಯಾಗಿತ್ತು. ಬಳಿಕ ಮನೆಯವರು, ಊರವರು ಸೇರಿ ಸಂಜೆಯವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮರುದಿನ ಮತ್ತೆ ಊರವರು ಒಂದಾಗಿ ದನದ ಹೆಜ್ಜೆಯ ಗುರುತನ್ನು ಬೆನ್ನತ್ತಿ ಹುಡುಕಾಟ ನಡೆಸಿದ ವೇಳೆ ಅಲ್ಲೇ ಪಕ್ಕದ ನಿರ್ಜನ ಪ್ರದೇಶದಲ್ಲಿ ದನದ ರುಂಡ ಪತ್ತೆಯಾಗಿದೆ. ಈ ಸಂಬಂಧ ಆನಂದ ಗೌಡ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆ. 9ರಂದು ಆರೋಪಿಗಳನ್ನು ಬಂಧಿಸಿದ್ದಾರೆನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.