ಎಪಿಎಂಸಿಯಿಂದ ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ : ಬಂಗೇರ

Advt_NewsUnder_1
Advt_NewsUnder_1
Advt_NewsUnder_1

APMC Belthangady

ನಿವೃತ್ತ ಕಾರ್ಯದರ್ಶಿ ಕೃಷ್ಣಮೂರ್ತಿಯವರಿಗೆ ಬೀಳ್ಕೊಡುಗೆ

  • ಎ.ಪಿ.ಎಂ.ಸಿಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲು ಬಹಳಷ್ಟು ಶ್ರಮಿಸಿದ್ದಾರೆ. -ಕುಶಾಲಪ್ಪ ಗೌಡ ಮಾಜಿ ಅಧ್ಯಕ್ಷ
  • ಸರಕಾರಿ ರಜೆ ಇದ್ದರೂ ರಜೆ ಹಾಕದೆ ಕೆಲಸ ಮಾಡಿದ್ದರಿಂದ ಸಂಸ್ಥೆ ಇಷ್ಟು ಅಭಿವೃದ್ಧಿ ಹೊಂದಿದೆ. -ಸತೀಶ್ ಕಾಶಿಪಟ್ಣ ಅಧ್ಯಕ್ಷ
  • ಯಾವುದೇ ಕಟ್ಟಡ ನಿರ್ಮಾಣಕ್ಕೆ ಮೊದಲು ನ.ಪಂ. ದಿಂದ ಪರವಾನಿಗೆ ಪಡೆದುಕೊಳ್ಳಬೇಕು. – ಮುಗುಳಿ ನಾರಾಯಣ ರಾವ್ ನ.ಪಂ. ಅಧ್ಯಕ್ಷ
  • ಸರಕಾರದಿಂದ ಪ್ರಶಸ್ತಿ ಪಡೆಯಲು ಕಾರ್ಯದರ್ಶಿ ಕೃಷ್ಣಮೂರ್ತಿಯವರೇ ಕಾರಣ -ಶ್ರೀನಿವಾಸ ವಿ.ಕಿಣಿ ಮಾಜಿ ಅಧ್ಯಕ್ಷ

ಬೆಳ್ತಂಗಡಿ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ರೈತರ ಪರವಾಗಿ ಕೆಲಸ ಮಾಡುವ ಸಂಸ್ಥೆಗಳಾಗಿದ್ದು, ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಕಾರ್ಯವನ್ನು ಮಾಡಬೇಕು ಎಂದು ಶಾಸಕ ಹಾಗೂ ರಾಜ್ಯಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ಎ.ಪಿ.ಎಂ.ಸಿಯಲ್ಲಿ 12 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್.ಕೆ ಕೃಷ್ಣಮೂರ್ತಿ ಇವರಿಗೆ ಬೀಳ್ಕೊಡುಗೆ ಸಮಾರಂಭವು ಜು.31ರಂದು ಎ.ಪಿ.ಎಂ.ಸಿ ಸಭಾಂಗಣ ದಲ್ಲಿ ಜರುಗಿತು.
ಸಮಾರಂಭದಲ್ಲಿ ಭಾಗವಹಿಸಿ ಕೃಷ್ಣಮೂರ್ತಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದ ಶಾಸಕ ಕೆ.ವಸಂತ ಬಂಗೇರ ಅವರು ಹಲವು ವರ್ಷಗಳ ಹಿಂದೆ ರೂ.25 ಲಕ್ಷಕ್ಕೆ ಈ ಜಾಗವನ್ನು ಖರೀದಿಸಲಾಗಿ ದ್ದು, ಇದನ್ನು ಅಭಿವೃದ್ಧಿ ಪಡಿಸಲಾಗು ವುದು. ಇಲ್ಲಿ ಕೃಷ್ಣಮೂರ್ತಿಯವರು ಕಾರ್ಯದರ್ಶಿಯಾಗಿ ಉತ್ತಮವಾಗಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ನಿವೃತ್ತಿ ನಂತರವೂ ಚಟುವಟಿಕೆಯಿಂದ ಇದ್ದು, ಸಾರ್ವಜನಿಕ ಸೇವೆಯನ್ನು ಮಾಡುವ ಕಾರ್ಯವನ್ನು ಮುಂದುವರಿಸಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರು ಮಾತನಾಡಿ ಕೃಷ್ಣಮೂರ್ತಿ ಯವರು ಶಿಸ್ತಿನ ಸಿಫಾಯಿಯಾಗಿ ತನ್ನ ಸ್ವಂತ ಸಂಸ್ಥೆ ಎಂಬ ಭಾವನೆಯಿಂದ ಉತ್ತಮವಾಗಿ ಕೆಲಸ ಮಾಡಿ, ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಿದ್ದಾರೆ. ಸರಕಾರಿ ರಜೆ ಇದ್ದರೂ ರಜೆ ಹಾಕದೆ ಕೆಲಸ ಮಾಡಿದ ಪರಿಣಾಮವಾಗಿ ಸಂಸ್ಥೆ ಇಷ್ಟು ಅಭಿವೃದ್ಧಿ ಹೊಂದಲು ಕಾರಣವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಅವರು ಕೃಷ್ಣಮೂರ್ತಿಯವರು ನಿಷ್ಠಾವಂತ ಅಧಿಕಾರಿಯಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮೀಯತೆಯಿಂದ ಕೆಲಸ ಮಾಡಿದ್ದಾರೆ ಎ.ಪಿ.ಎಂ.ಸಿಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲು ಬಹಳಷ್ಟು ಶ್ರಮಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಬೆಳ್ತಂಗಡಿ ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್
ಮಾತನಾಡಿ ನ.ಪಂ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಮೊದಲು ಕಾನೂನು ಪ್ರಕಾರ ಪಂಚಾಯತದಿಂದ ಪರವಾನಿಗೆ ಪಡೆದುಕೊಳ್ಳಬೇಕು ಎಂದು ಸಲಹೆಯಿತ್ತರು. ಮಾಜಿ ಅಧ್ಯಕ್ಷ ಶ್ರೀನಿವಾಸ ಕಿಣಿ ಮಾತನಾಡಿ ಆರಂಭದಲ್ಲಿ ರೂ. 18 ಲಕ್ಷ ಇದ್ದ ಎಪಿಎಂಸಿ ಆದಾಯವನ್ನು ರೂ.1 ಕೋಟಿಗೆ ಏರಿಸಿ, ಸರಕಾರದಿಂದ ಪ್ರಶಸ್ತಿ ಪಡೆಯಲು ಕಾರ್ಯದರ್ಶಿ ಕೃಷ್ಣಮೂರ್ತಿಯವರೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಮಾತನಾಡಿ ಜಿಲ್ಲೆಯ ಎಲ್ಲಾ ಎ.ಪಿ.ಎಂ.ಸಿ ಯಾರ್ಡ್‌ಗೆ ವರ್ತಕರು ಬರಲು ಒಪ್ಪುದಿಲ್ಲ, ಅವರನ್ನು ಮನ ಒಲಿಸಿ ತರುವ ಕೆಲಸವಾಗಬೇಕು ಎಂದರು. ಈ ಸಂದರ್ಭದಲ್ಲಿ ಎಪಿಎಂಸಿಯ ಸಿಬ್ಬಂದಿ ವರ್ಗ, ವರ್ತಕರು ಹಾಗೂ ಸಂಘ-ಸಂಸ್ಥೆಯವರು, ಸಾರ್ವಜನಿಕರು ಹೂಹಾರ ಹಾಕಿ ಗೌರವ ಸಲ್ಲಿಸಿದರು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಕೃಷ್ಣಮೂರ್ತಿಯವರು ಬೆಳ್ತಂಗಡಿ ಎಪಿಎಂಸಿಯಲ್ಲಿ ವಿವಿಧ ಅಧ್ಯಕ್ಷರ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ, ಸಹಕಾರ ನೀಡಿದ ಎಲ್ಲಾ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ, ವರ್ತಕರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಧರಣೇಂದ್ರ ಕುಮಾರ್, ಭರತ್ ಕುಮಾರ್, ಕೃಷಿ ಮಾರಾಟ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಭಾರತಿ ಪಿ.ಎಸ್, ವಿನಾಯಕ ರೈಸ್ ಮಿಲ್‌ನ ಮಾಲಕ ಶ್ರೀಕಾಂತ್ ಕಾಮತ್, ನಿವೃತ್ತ ಲೆಕ್ಕ ಪರಿಶೋಧಕ ನಾರಾಯಣ, ವಿಶೇಷ ಲೆಕ್ಕಾಧಿಕಾರಿ ಮಹೇಶ್, ಇಂಜಿನಿಯರ್ ಅಶೋಕ್ ಕುಮಾರ್, ರೈತಬಂಧು ಮಾರುತಿಪುರ ಇದರ ಮಾಲಕ ಶಿವಶಂಕರ್ ನಾಯಕ್, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಶ್ರೀಮತಿ ಕೃಷ್ಣಮೂರ್ತಿ, ಎ.ಪಿ.ಎಂ.ಸಿ ಸದಸ್ಯರಾದ ಪಲ್ಲವಿ, ಗಫೂರ್ ಸಾಹೇಬ್, ಸೆಲೆಸ್ಟಿನ್ ಡಿ ಸೋಜ, ಪುಷ್ಪರಾಜ ಹೆಗ್ಡೆ, ಎ.ಸಿ ಮ್ಯಾಥ್ಯೂ, ಈಶ್ವರ ಭೈರ, ಅಶೋಕ್ ಗೋವಿಯಸ್, ಜಗದೀಶ್ ಹೆಗ್ಡೆ, ಆನಂದ ನಾಯ್ಕ, ಜಯಾನಂದ ಕಲ್ಲಾಪು, ಚಿದಾನಂದ ಪೂಜಾರಿ, ಪ್ರೇಮ ಉಪಸ್ಥಿತರಿದ್ದರು. ಎಪಿಎಂಸಿ ಸಿಬ್ಬಂದಿಗಳ ಪ್ರಾರ್ಥನೆ ಬಳಿಕ ಎಪಿಎಂಸಿ ಸದಸ್ಯ ಜೀವಂಧರ್ ಕುಮಾರ್ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿ, ಎ.ಪಿ.ಎಂ.ಸಿ ಕಾರ್ಯದರ್ಶಿ ಶ್ರೀಮತಿ ವಿಮಲ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.