ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಕಳ್ಳತನ: ಕುಖ್ಯಾತ ಕಳ್ಳರಿಬ್ಬರ ಬಂಧನ

  • kallaruಒಬ್ಬಾತ ಪರಾರಿ
  • 4 ಬೈಕ್, ಚಿನ್ನಾಭರಣ, ಮೊಬೈಲ್ ಸಹಿತ ಅಪಾರ ಸೊತ್ತುಗಳು ವಶಕ್ಕೆ
  • ಆರೋಪಿಗಳಿಗೆ ನ್ಯಾಯಾಂಗ ಬಂಧನ
  • ಸಿಕ್ಕಿದ ಬೈಕ್‌ಗಳು ಕಳವುಗೈದಿದ್ದ ಬೈಕ್‌ಗಳು ಚಾರ್ಮಾಡಿ ಚೆಕ್‌ಪೋಸ್ಟ್ ಬಳಿ ಆರೋಪಿಗಳು ವಶಕ್ಕೆ
  • ಶೆಡ್ಡ್‌ನಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವುಗೈದು ಕೃತ್ಯಕ್ಕೆ ಬಳಸುತ್ತಿದ್ದ ಕಳ್ಳರು  

ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನೇ ಪ್ರಮುಖ ಗುರಿಯಾಗಿಸಿಕೊಂಡು ಕಳ್ಳತನ ಕೃತ್ಯವೆಸಗುತ್ತಿದ್ದ ಕುಖ್ಯಾತ ಕಳ್ಳರಿಬ್ಬರನ್ನು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಪೊಲೀಸ್ ತಂಡ ಜು. 28 ರಂದು ಖೆಡ್ಡಾಕ್ಕೆ ಕೆಡಹುವಲ್ಲಿ ಯಶಸ್ವಿಯಾಗಿದೆ.
ಬಂಧಿತರನ್ನು ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕು ಬಾನಸಂದ್ರಪಾಳ್ಯದ ಉಮೇಶ್ ಬಿ.ಎನ್. (30ವ.), ಬೆಂಗಳೂರು ಗೇರುಪಾಳ್ಯ ಕುಂಬಳಗೋಡು ನಿವಾಸಿ ವೆಂಕಟೇಶ್ (38ವ) ಎಂಬವರೆಂದು ಗುರುತಿಸಲಾಗಿದೆ. ಇಡೀ ಪ್ರಕರಣದ ಪ್ರಮುಖ ಎಂದು ಗುರುತಿಸಿಕೊಂಡಿರುವ ನವೀನ್ ಎಂಬವರು ತಪ್ಪಿಸಿಕೊಂಡಿದ್ದು ಅವರ ಪತ್ತೆಗಾಗಿ ವಿಶೇಷ ತಂಡ ರಚಿಸಿಕೊಳ್ಳಲಾಗಿದೆ. ಬಂಧಿತರಿಂದ ೪ ಬೈಕ್‌ಗಳು, ದೇವರ ಆಭರಣಗಳೂ
ಸೇರಿದಂತೆ ಚಿನ್ನಾಭರಣ, ಟಿ.ವಿ, ಮೊಬೈಲ್ ಇತ್ಯಾಧಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯದ ಅನುಮತಿಯಂತೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಸ್ಥಳ ಮಹಜರು ಮತ್ತು ಹೆಚ್ಚಿನ ತನಿಖೆ ನಡೆಸಿದ ಬಳಿಕ ಜು. 31 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರು ಜಿಲ್ಲಾ ಉಪಕಾರಾಗೃಹಕ್ಕೆ ತಳ್ಳಲಾಗಿದೆ.
ಬಂಧನ ಆದದ್ದು ಹೇಗೆ? :ಚಿಕ್ಕಮಗಳೂರು ಕಡೆಯಿಂದ 2 ಬೈಕ್‌ಗಳು ಬರುವುದನ್ನು ಕಂಡ ಪೊಲೀಸರು ಚಾರ್ಮಾಡಿ ಚೆಕ್‌ಪೋಸ್ಟ್ ಬಳಿ ಬೈಕ್ ನಿಲ್ಲಿಸಲು ಸೂಚನೆ ನೀಡಿದಾಗ, ಪೊಲೀಸರ ಸೂಚನೆ ಮೀರಿ ಮುಂದಕ್ಕೆ ಚಲಿಸಿದ ಬೈಕ್‌ಗಳನ್ನು ಬೆನ್ನತ್ತಿದಾಗ ಇಬ್ಬರು ಆರೋಪಿಗಳು ಪೊಲೀಸ್ ಬಲೆಗೆ ಬಿದ್ದರೆ ಒಬ್ಬಾತ ಪರಾರಿಯಾಗಿದ್ದಾರೆ.
ಕದ್ದಿದ್ದ ಬೈಕುಗಳು : ಆರೋಪಿಗಳು ಅಂದು ಪ್ರಯಾಣಿಸುತ್ತಿದ್ದ ಬೈಕ್‌ಗಳು ಸುಮಾರು 2 ತಿಂಗಳ ಹಿಂದೆ ಧರ್ಮಸ್ಥಳ ರಸ್ತೆ ಬೀಜ ಫ್ಯಾಕ್ಟರಿಯ ಶೆಡ್‌ನಲ್ಲಿ ನಿಲ್ಲಿಸಿದ್ದ ಬೈಕನ್ನು ಕಳವುಮಾಡಿದ್ದಾಗಿತ್ತು. ಇನ್ನೊಂದು ಬುಲೆಟ್ ಬೈಕ್ ನವೀನ್ ಎಂಬವರೊಂದಿಗೆ ಸೇರಿ ಬೇಲೂರು ರಸ್ತೆಯ ಮಣಚನಹಳ್ಳಿ ಗ್ರಾ.ಪಂ. ಕಚೇರಿ ಹಿಂಬದಿಯಲ್ಲಿ ನಿಲ್ಲಿಸಿದ್ದನ್ನು ಕಳವುಗೈದಿದ್ದಾಗಿತ್ತು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ವಶಪಡಿಸಿಕೊಂಡ ಸೊತ್ತುಗಳು: ಬಂಧಿತರಿಂದ ಬಜಾಜ್ ಕಂಪೆನಿಯ 1.75 ಲಕ್ಷ ರೂ. ಬೆಲೆಬಾಳುವ ಕೆಡಿಎಂ ಡ್ಯೂಕ್ ಬೈಕ್, 1 ಲಕ್ಷ ರೂ ಮೌಲ್ಯದ ರೋಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್, ಕಪ್ಪು ಬಣ್ಣದ ಪಲ್ಸರ್ ಬೈಕ್, ನೀಲಿ ಬಣ್ಣದ ಪಲ್ಸರ್ ಬೈಕ್, ಎಲ್.ಜಿ. ಕಂಪೆನಿಯ ಮೋನಿಟರ್, ಸರ, ಕೈ ಬಳೆ, ಕರಿಮಣಿ ಸರ, ಒಟ್ಟು 50.8 ಗ್ರಾಂ ಚಿನ್ನದ ವಿವಿಧ ಆಭರಣಗಳು, ಬೆಳ್ಳಿಯ ಆಭರಣಗಳು, ದೇವಸ್ಥಾನಗಳಲ್ಲಿ ಉಪಯೋಗಿಸುತ್ತಿದ್ದ ವಿವಿಧ ಬೆಳ್ಳಿಯ ಆಭರಣಗಳು, ಬ್ಯಾಟರಿಗಳು, ಹಣ ಎಣಿಸುತ್ತಿದ್ದ ಮೆಷಿನ್, 4 ಮೊಬೈಲ್ ಫೋನ್‌ಗಳು, ಎಲ್‌ಸಿಡಿ, ಟ್ಯಾಬ್, ಏಸುದೇವರ ಮೂರ್ತಿಯ ಕೆತ್ತನೆ, ಕಾಲ್ಚೈನ್, ಮಿಕ್ಸಿ, 500-1000 ಮುಖ ಬೆಲೆಯ ಕೆಲವು ನೋಟುಗಳು ಇತ್ಯಾಧಿ ಪೊಲೀಸ್ ವಶಕ್ಕೆ ಬಂದಿದೆ.
ಧಾರ್ಮಿಕ ಕೇಂದ್ರಗಳೇ ಇವರ ಗುರಿ : ಬೆಳ್ತಂಗಡಿ ತಾಲೂಕಿನ ಬಂದಾರು ಶ್ರೀ ಕೊರಗಜ್ಜ ದೈವಸ್ಥಾನ, ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನ ಕಳ್ಳತನ ಯತ್ನ, ಶಿಶಿಲ ದೇವಸ್ಥಾನ, ಸೌತಡ್ಕ ದೇವಸ್ಥಾನ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಬಸದಿ, ಅಡೆಂಜ ಶ್ರೀ ಮಹಾಗಣಪತಿ ದೇವಸ್ಥಾನ, ಮಡಂತ್ಯಾರು ಚರ್ಚ್ ಸ್ಕೂಲ್, ಬಳೆಂಜ ಸ್ಕೂಲ್, ಬಳೆಂಜ ಮತ್ತು ಕಲ್ಮಂಜ ಸೊಸೈಟಿಯಲ್ಲಿ ಇವರು ಕಳ್ಳತನಗೈದಿದ್ದರು.
ಅಲ್ಲದೆ ಉಜಿರೆ ಪೆರ್ಲ ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಕೆ.ಟಿ.ಎಂ ಡ್ಯೂಕ್ ಬೈಕ್, ಧರ್ಮಸ್ಥಳ ಗ್ರಾಮದ ನೀರಚಿಲುಮೆ ಬಳಿ ಕೆ.ಟಿ.ಎಂ ಡ್ಯೂಕ್ ಬೈಕ್, ಜೊತೆಗೆ ತೆಂಕಕಾರಂದೂರ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕಿತ್ತುಕೊಂಡಿದ್ದರು. ತಾಲೂಕು ಮಾತ್ರವಲ್ಲದೆ ಇನ್ನೂ ಠಾಣೆಗಳಾದ ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ, ಕಾರ್ಕಳ ಗ್ರಾಮಾಂತರ, ಹಾಸನ ಗ್ರಾಮಾಂತರ, ಜ್ಞಾನಭಾರತಿ, ಹರೆಹಳ್ಳಿ, ಪಡುಬಿದ್ರೆ, ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಗಳಲ್ಲಿ ಅನೇಕ ಕಡೆ ಅವರು ಕಳ್ಳತನಗೈದಿದ್ದನ್ನು ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ.
ಸ್ಥಳ ಮಹಜರು: ಅಳದಂಗಡಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಸನ್ಮಾನ:
ಆರೋಪಿಗಳು ವಿಚಾರಣೆಯ ವೇಳೆ ಒಪ್ಪಿಕೊಂಡ ಕಳ್ಳತನಗೈದ ಪ್ರದೇಶಕ್ಕೆ ಅವರನ್ನು ಬಿಗಿ ಪೊಲೀಸ್ ಬಂದೂಬಸ್ತಿನಲ್ಲಿ ಶನಿವಾರ ಮತ್ತು ರವಿವಾರ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಯಿತು. ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನ ಕಳ್ಳತನ ಯತ್ನ ಪ್ರಕರಣವನ್ನು ಬೇಧಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರನ್ನು ದೇವಳದ ಆಡಳಿತ ಮಂಡಳಿ ಈ ಸಂದರ್ಭದಲ್ಲಿ ಸನ್ಮಾನಿಸಿತು.
ಕಾರ್ಯಾಚರಣೆ ತಂಡದಲ್ಲಿ ಯಾರ್‍ಯಾರು?
ಎಸ್‌ಪಿ, ಎಡಿಶನಲ್ ಎಸ್.ಪಿ, ಬಂಟ್ವಾಳ ಎಎಸ್ಪಿ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರ ಮುಖಂಡತ್ವದಲ್ಲಿದ್ದ ತಂಡದಲ್ಲಿ ಬೆಳ್ತಂಗಡಿ ಎಸ್.ಐ. ರವಿ, ಎಎಸ್‌ಐ ದೇವಪ್ಪ, ಸಿಬ್ಬಂದಿಗಳಾದ ಪ್ರವೀಣ್ ದೇವಾಡಿಗ, ವೆಂಕಟೇಶ್ ನಾಯ್ಕ್, ಪೌಲೋಸ್, ರಾಜೇಶ್, ಪ್ರಮೋದ್, ಪ್ರಸನ್ನ ಕುಮಾರ್ ವೇಣೂರು, ಅಬ್ದುಲ್ ಲತೀಫ್, ಕಂಪ್ಯೂಟರ್ ವಿಭಾಗದ ಸಂಪತ್ ಕುಮಾರ್ ಮತ್ತು ದಿವಾಕರ್ ಅಲ್ಲದೆ ಕಡಬ ಠಾಣಾ ಎಸ್‌ಐ ಮತ್ತು ಸಿಬ್ಬಂದಿಗಳು ಸಹಕರಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.