HomePage_Banner_
HomePage_Banner_

ಸಚಿವ ರೈಯವರಿಗೆ ಗೃಹಖಾತೆ ನೀಡಲು ಬಿಜೆಪಿ ಸಂಘ ಪರಿವಾರದ ಸರ್ಟಿಫಿಕೇಟು ಅಗತ್ಯವಿಲ್ಲ : ಪತ್ರಿಕಾಗೋಷ್ಠಿಯಲ್ಲಿ ವಸಂತ ಬಂಗೇರ

Vasanth bagera newಬೆಳ್ತಂಗಡಿ : ಬಂಟ್ವಾಳ ತಾಲೂಕಿನಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿರುವ ಸಚಿವ ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡಲು ಬಿಜೆಪಿ ಹಾಗೂ ಸಂಘ-ಪರಿವಾರದವರ ಸರ್ಟಿಫಿಕೇಟ್ ಅಗತ್ಯವಿಲ್ಲ, ರೈಯವರು ಯಾವುದೇ ಖಾತೆಯನ್ನು ನೀಡಿದರೂ ನಿಭಾಯಿಸಲು ಸಮರ್ಥರಿದ್ದಾರೆ, ಗೃಹ ಖಾತೆಯನ್ನು ಕೊಡುವ ಕೆಲಸ ಮುಖ್ಯ ಮಂತ್ರಿಯವರು ಮಾಡಲಿದ್ದಾರೆ ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ಜು.29ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸಚಿವ ರೈಯವರು ಕ್ಷೇತ್ರದಲ್ಲಿ ಬಡವರ ಪರವಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರು ಆರು ಬಾರಿ ಆಯ್ಕೆಯಾಗಲು ಕಾರಣ. ಅವರು ಸರಕಾರದಲ್ಲಿ ಅನೇಕ ಬಾರಿ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಬಿಜೆಪಿಯವರ ಸಲಹೆ ಅಗತ್ಯವಿಲ್ಲ. ಇದು ಮುಖ್ಯ ಮಂತ್ರಿಯವರಿಗೆ ಬಿಟ್ಟ ವಿಚಾರ. ನಮ್ಮ ಪಕ್ಷದ ಆಂತರಿಕ ವಿಷಯದಲ್ಲಿ ಕೈಹಾಕುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದರು.
ಬೆಂಕಿ ಹಚ್ಚುವ ಕೆಲಸ : ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಬಿಜೆಪಿ ಹಾಗೂ ಸಂಘ ಪರಿವಾರದವರು ಗಲಭೆಯನ್ನು ಸೃಷ್ಟಿಸುತ್ತಿದ್ದಾರೆ. ಇಬ್ಬರ ಕೊಲೆಯಾಗಿದೆ. ಶರತ್ ಹತ್ಯೆಯ ಆರೋಪಿಗಳು ಪತ್ತೆಯಾಗಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಸಂಸದ ನಳಿನ್ ಕುಮಾರ್ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಚುನಾವಣೆ ಹತ್ತಿರ ಬರುತ್ತಿರುವಾಗ ನಮ್ಮ ಸರಕಾರದ ಮೇಲೆ ಕೆಟ್ಟ ಹೆಸರು ಬರಲು ಬಿಜೆಪಿಯವರು ಮಾಡುತ್ತಿರುವ ಕುತಂತ್ರ. ಜಿಲ್ಲೆಯ ಜನರು ವಿದ್ಯಾವಂತರು, ಬುದ್ಧಿವಂತರು ಇವರ ಮೋಸ ಜನತೆಗೆ ಈಗ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಉದ್ದೇಶ ಪೂರ್ವ ಗಲಭೆ: ಜಿಲ್ಲೆಯಲ್ಲಿ ಗಲಭೆಯಾದಾಗ ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಿ, ಕಲ್ಲಡ್ಕ ಪ್ರಭಾಕರ ಭಟ್ಟರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಂಡು ನಿಷ್ಪಕ್ಷವಾಗಿ ತನಿಖೆ ನಡೆಸಿ ಎಂದು ಎಸ್.ಪಿಯವರಲ್ಲಿ ರಮಾನಾಥ ರೈ ಹೇಳಿರುವುದನ್ನೇ ತಮಗೆ ಬೇಕಾದಂತೆ ತಿರುಚಿ ಇದನ್ನೇ ಬಂಡವಾಳವನ್ನಾಗಿಸಿ ಬಿಜೆಪಿ ಹಾಗೂ ಸಂಘ- ಪರಿವಾರ ಉದ್ದೇಶಪೂರ್ವಕವಾಗಿ ಜಿಲ್ಲೆಯಲ್ಲಿ ಗಲಭೆ ಎಬ್ಬಿಸಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 129 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದ್ದು, ಇದನ್ನು ಸಹಿಸಲು ಸಾಧ್ಯವಾಗದೇ ಅವರು ಈ ತಂತ್ರಗಾರಿಕೆ ನಡೆಸಿದ್ದಾರೆ ಎಂದರು.
ಶೇ 95 ಭರವಸೆ ಈಡೇರಿಕೆ: ರಾಜ್ಯ ಸರಕಾರ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳಲ್ಲಿ ಶೇ 95ನ್ನು ಈಗಾಗಲೇ ಈಡೇರಿಸಿದೆ. ಇನ್ನೂ ಶೇ 5ನ್ನು ಮುಂದಿನ ನಾಲ್ಕೈದು ತಿಂಗಳಲ್ಲಿ ಈಡೇರಿಸಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ನೀವು ಮಾಡಿ, ಸಹಕಾರಿ ಸಂಘಗಳ ಸಾಲ ಮನ್ನಾ ನಾವು ಮಾಡುತ್ತೇವೆ ಎಂದು ಮುಖ್ಯ ಮಂತ್ರಿಯವರು ಪ್ರಧಾನಿಯವರಲ್ಲಿ ಹಲವು ಬಾರಿ ಒತ್ತಾಯಿಸಿದರೂ ಇದಕ್ಕೆ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಮುಖ್ಯಮಂತ್ರಿಯವರು ಸಹಕಾರಿ ಬ್ಯಾಂಕ್‌ಗಳ ರೂ.8 ಸಾವಿರ ಕೋಟಿ ಸಾಲ ಮನ್ನಾ ಮಾಡಿ, 22 ಲಕ್ಷ ರೈತರಿಗೆ ಸಹಕಾರಿಯಾಗಿದ್ದಾರೆ. ಇದರಿಂದ ಜನರ ಒಲವು ಕಾಂಗ್ರೆಸ್ ಪರ ಇರುವುದನ್ನು ತಿಳಿದ ಬಿಜೆಪಿ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹಿಂದೂ-ಮುಸ್ಲಿಂ ನಡುವೆ ಗಲಾಟೆ ಎಬ್ಬಿಸಿ, ಜಿಲ್ಲೆಯ ಜನರು ಭಯದಿಂದ ಜೀವನ ಸಾಗಿಸುವ ಸ್ಥಿತಿ ನಿರ್ಮಿಸಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ ನಾರಾವಿ, ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.