ಮಾಲಾಡಿ ಐಟಿಐಗೆ ರೂ.2 ಕೋಟಿ ವೆಚ್ಚದ ನೂತನ ಕಟ್ಟಡ : ಬಂಗೇರ


Maladi ITI

Maladi ITI sanmanaಈ ಸಂದರ್ಭದಲ್ಲಿ ಮಾಲಾಡಿ ಗ್ರಾಮದಲ್ಲಿ ಸರಕಾರಿ ಐಟಿಐ ಆರಂಭಕ್ಕೆ ಕಾರಣರಾದ ಹಾಜಿ ಅಬ್ದುಲ್‌ಲತೀಫ್ ಸಾಹೇಬ್ ಅವರ ನ್ನು ಶಾಸಕರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಮಾಲಾಡಿ: ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ಮಾಲಾಡಿ ಸಂಸ್ಥೆ ಆರಂಭಗೊಂಡು ಇಪ್ಪತ್ತು ವರ್ಷಗಳ ಬಳಿಕ ಕೇಂದ್ರಕ್ಕೆ ರೂ.1.16 ಕೋಟಿ ವೆಚ್ಚದ ಕಟ್ಟಡ ಇಂದು ಉದ್ಘಾಟನೆಗೊಂಡಿದೆ. ಇನ್ನೂ ರೂ.2 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಜು.4 ರಂದು ಉದ್ಯೋಗ ಮತ್ತು ತರಬೇತಿ ಇಲಾಖೆ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಾಲಾಡಿ ಇದರ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, 1997ರಲ್ಲಿ ಮಾಲಾಡಿಗೆ ಐ.ಟಿ.ಐ. ಮಂಜೂರುಗೊಂಡಿತ್ತು. ಇದಕ್ಕೆ ಮೂಲ ಕಾರಣಕರ್ತರು ಹಾಜಿ ಅಬ್ದುಲ್‌ಲತೀಫ್ ಸಾಹೇಬ್ ಅವರು ಸತತ ಒತ್ತಾಯ ಮಾಡಿದ್ದರಿಂದ ಮಾಲಾಡಿಯಲ್ಲಿ ಈ ಸಂಸ್ಥೆ ತೆರೆಯುವಂತೆ ಆಗಿತ್ತು ಎಂದು ತಿಳಿಸಿದರು.
1998ರಿಂದ ಮಾಲಾಡಿ ಐಟಿಐಗೆ ಕಟ್ಟಡ ಮಂಜೂರು ಮಾಡಬೇಕು ಎಂದು ಸರಕಾರಕ್ಕೆ ಪತ್ರ ಬರೆಯುತ್ತಾ ಬರುತ್ತಿದ್ದೇನೆ. 20 ವರ್ಷದ ಬಳಿಕ ಇಲ್ಲಿಗೆ ಕಟ್ಟಡ ಮಂಜೂರಾಗಿ ಇಂದು ಉದ್ಘಾಟನೆ ನಡೆದಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಈ ಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ವೃತ್ತಿಪರ ಕೋರ್ಸು ಆರಂಭಕ್ಕೆ ಸರಕಾರದಿಂದ ಮಂಜೂರಾತಿ ಕೊಡಿಸುತ್ತೇನೆ. ಈ ಸಂಸ್ಥೆ ಜಿಲ್ಲೆಯಲ್ಲೇ ಉತ್ತಮ ಮಾದರಿ ಸಂಸ್ಥೆ ಎಂಬ ಖ್ಯಾತಿಯನ್ನು ಗಳಿಸಲಿ ಎಂದು ಹಾರೈಸಿದರು.
ಭಾರತೀಯ ಸ್ಕೌಟ್ಸ್ ಗೈಡ್ಸ್ ಮಡಂತ್ಯಾರು ವಲಯದ ಅಧ್ಯಕ್ಷ ಹಾಜಿ ಅಬ್ದುಲ್‌ಲತೀಫ್ ಸಾಹೇಬ್ ಅವರು ಮಾತನಾಡಿ, 1997ರಲ್ಲಿ ನಾವು ಶಾಸಕರಲ್ಲಿ ಮಾಲಾಡಿ ಗ್ರಾಮಕ್ಕೆ ಪ್ರೌಢ ಶಾಲೆ ಕೇಳಿದ್ದೇವು. ಆಗ ಇದು ಮಂಜೂರಾತಿಗೆ ಕಷ್ಟ ಎಂದು ತಿಳಿದು ಆ ಸಮಯ ಕಾಶಿಬೆಟ್ಟು ಎಂಬಲ್ಲಿಗೆ ಮಂಜೂರಾಗಿದ್ದ ಐಟಿಐನ್ನು ಮಾಲಾಡಿಗೆ ಕೇಳಿದೆವು ಬಂಗೇರರು ಒಪ್ಪಿದ್ದರಿಂದ ಈ ಸಂಸ್ಥೆ ಇಲ್ಲಿಗೆ ಬರಲು ಕಾರಣವಾಯಿತು. ಆ ಸಮಯವೇ ಸಂಸ್ಥೆಗೆ 7 ವೃತ್ತಿಪರ ಕೋರ್ಸು ಆರಂಭಕ್ಕೆ ಅನುಮತಿ ದೊರಕಿತ್ತು. ಅದನ್ನು ಮುಂದಿನ ದಿನಗಳಲ್ಲಿ ಆರಂಭಿಸಬೇಕು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ ಅವರು ಮಾತನಾಡಿ, ಮಾಲಾಡಿ ಐಟಿಐಗೆ ಕಟ್ಟಡ ಬೇಕೆಂಬುದು ಬಹು ವರ್ಷಗಳ ಬೇಡಿಕೆ ಅದು ಇಂದು ಈಡೇರಿದೆ. ಐಟಿಐ ಆದವರಿಗೆ ಉದ್ಯೋಗ ಸೃಷ್ಟಿಸುವ ಅವಕಾಶವಿದೆ. ಒಂದು ಉದ್ಯಮವನ್ನು ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಬಹುದು. ಈ ಸಂಸ್ಥೆಯಲ್ಲಿಯೂ ಮುಖ್ಯ ಮಂತ್ರಿಯವರ ಕೌಶಲ್ಯ ತರಬೇತಿಯನ್ನು ಆರಂಭಿಸಬೇಕು ಎಂದು ಸಲಹೆಯಿತ್ತರು. ಗ್ರಾ.ಪಂ. ಸದಸ್ಯ ರವಿಶಂಕರ ಶೆಟ್ಟಿ ಮಾತನಾಡಿ ಮಾಲಾಡಿ ಶಾಲೆಯಲ್ಲಿ 8ನೇ ತರಗತಿ ತನಕ ಅವಕಾಶವಿದ್ದು, ಇಲ್ಲಿಗೆ ಪ್ರೌಢ ಶಾಲೆ ಮಂಜೂರುಗೊಳಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಮಂಗಳೂರು ಸರಕಾರಿ ಐಟಿಐ ಪ್ರಾಚಾರ್ಯ ಗಿರಿಧರ ಸಾಲ್ಯಾನ್ ಮಾತನಾಡಿ ಐಟಿಐಯ ವೃತ್ತಿ ತರಬೇತಿಗಳಿಗೆ ಉತ್ತಮ ಬೇಡಿಕೆಯಿದ್ದು, ಇಲ್ಲಿಯೂ ಕೌಶಲ್ಯ ತರಬೇತಿಯನ್ನು ಆರಂಭಿಸಬಹುದು ಎಂದರು.
ವೇದಿಕೆಯಲ್ಲಿ ಮಾಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಸದಸ್ಯರಾದ ಪೂರ್ಣಿಮ, ಜಯಂತಿ, ಹಿರಿಯರಾದ ಸುಬ್ಬಯ್ಯ ಶೆಟ್ಟಿ ಕೂರಬೆಟ್ಟು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗ್ರೇಸಿಯಾನ್ ವೇಗಸ್, ಐ.ಎಂ.ಸಿ. ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಾಲಾಡಿ ಉಪಾಧ್ಯಕ್ಷ ಅರುಣ್‌ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಚಿನ್, ಯತೀಶ್ ಇವರ ಪ್ರಾರ್ಥನೆ ಬಳಿಕ ಸಂಸ್ಥೆಯ ಪ್ರಾಂಶುಪಾಲೇ ವೆಂಕಟೇಶ್ವರೀ ಸ್ವಾಗತಿಸಿ, ವಂದಿಸಿದರು. ಕುಸುಮಾವತಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.