HomePage_Banner_
HomePage_Banner_
HomePage_Banner_

ಪುದುವೆಟ್ಟು: 7.42 ಕೋಟಿ ರೂ. ವೆಚ್ಚದ ನೂತನ ಸೇತುವೆ, ರಸ್ತೆ ಉದ್ಘಾಟನೆ ಮುಂದಿನ ಮಾರ್ಚ್ ಒಳಗಡೆ ಇನ್ನೂ 100 ಕೋಟಿ ರೂ. ಕಾಮಗಾರಿ ಭರವಸೆ : ಶಾಸಕ ಬಂಗೇರ

puduvettu 1ಪುದುವೆಟ್ಟು : ತಾಲೂಕಿನ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಾನು ಇಟ್ಟಿದ್ದ 500 ಕೋಟಿ ರೂ. ಬೇಡಿಕೆಯ ಹಿನ್ನೆಲೆಯಲ್ಲಿ 100 ಕೋಟಿ ರೂ. ನೀಡುವ ಭರವಸೆಯನ್ನು ನೀಡಿದ್ದು, ಅದರಲ್ಲಿ ಈಗಾಗಲೇ 25 ಕೋಟಿ ರೂ. ಗಳ ಒಂದು ಹಂತದ ಪಟ್ಟಿ ಪಡೆದುಕೊಂಡು ಕೆಲವೊಂದಕ್ಕೆ ಮಂಜೂರಾತಿ ನೀಡಿದ್ದಾರೆ. ಉಳಿದ ಮೂರು ಪಟ್ಟಿ ಶೀಘ್ರ ನೀಡಿ ಮುಂದಿನ 11 ತಿಂಗಳ ಅವಧಿಯಲ್ಲಿ ಎಲ್ಲ ಪ್ರಮುಖ ಕಾಮಗಾರಿಗಳಿಗೆ ಮಂಜೂರಾತಿ ಮಾಡಿಸಿಕೊಂಡು ಬರಲಿದ್ದೇನೆ. ಕೈಗೊಂಡ ಕಾಮಗಾರಿಗಳನ್ನು ಮುಂದಿನ ಫೆಬ್ರವರಿ ಮಾರ್ಚ್ ವೇಳೆಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆಗೊಳಿಸುವ ಭರವಸೆ ಇದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ವಸಂತ ಬಂಗೇರ ಹೇಳಿದರು.
ಪುದುವೆಟ್ಟು ನಾಗರಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಅವರು ಮಂಜೂರು ಮಾಡಿಸಿಕೊಂಡು ಬಂದಿದ್ದ 7.42 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆಯಡಿ ಕೈಗೊಳ್ಳಲಾದ ನೂತನ ರಸ್ತೆ ಕಾಮಗಾರಿಯನ್ನು ಮೇ 31 ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ವರ್ಷ ತಾಲೂಕಿನಲ್ಲಿ 11 ಸೇತುವೆಗಳಿಗೆ 15 ಕೋಟಿ ರೂ ಮಂಜೂರು ಮಾಡಿಸಿಕೊಂಡು ಬರಲಾಗಿತ್ತು. 1982 ರಲ್ಲಿ ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಪುದುವೆಟ್ಟು ಜನತೆ ನನ್ನಲ್ಲಿ ಬೇಡಿಕೆ ಇಟ್ಟಿದ್ದ ಸೇತುವೆ ಕಾಮಗಾರಿಯನ್ನು ನನ್ನ ಅವಧಿ
ಮುಗಿಯುವ ಮುನ್ನ ಮಾಡಿಕೊಡುವುದಾಗಿ ಭರವಸೆ ನೀಡಿದ್ದಂತೆ ಇದೀಗ ಈಡೇರಿಕೆ ಮಾಡಿದ್ದೇನೆ. ಅಂದು ತಾಲೂಕು ಇದ್ದ ಸ್ಥಿತಿ ಮತ್ತು ಈಗ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದಿ ಕಂಗೊಳಿಸುತ್ತಿರುವ ತಾಲೂಕನ್ನು ಒಮ್ಮೆ ಜನ ಗಮನಿಸಬೇಕು. ರಸ್ತೆ, ಸೇತುವೆ, ಕುಡಿಯುವ ನೀರು ಎಲ್ಲ ವಿಚಾರಗಳಲ್ಲೂ ಈ ತಾಲೂಕು ಅಭಿವೃದ್ಧಿಯಾಗಿದೆ. ವೈಕುಂಠ ಬಾಳಿಗರು ತಾಲೂಕಿಗೆ ತಂದಿದ್ದ ವಿದ್ಯುತ್ ಶಕ್ತಿ ಸೌಲಭ್ಯವನ್ನು ಜನ ನನಗೆ ನೀಡಿದ ೫ ಅವಧಿಯ ಶಾಸಕತ್ವದ ಅವಧಿಯಲ್ಲಿ ಅದನ್ನು 2017ಕ್ಕೆ ಎಲ್ಲ ಗ್ರಾಮಗಳ ಎಲ್ಲ ಮನೆಗಳಿಗೆ ಕೊಂಡೊಯ್ಯಲು ಶ್ರಮಿಸಿದ್ದೇನೆ. ಮತದಾರರು ನನ್ನ ಮೇಲೆ ಇಟ್ಟಿದ್ದ ಭರವಸೆಯನ್ನು ಈಡೇರಿಸಿ, ಎಲ್ಲೂ ಕೂಡ ಭ್ರಷ್ಠಾಚಾರಕ್ಕೆ ಅವಕಾಶ ಕೊಡದೆ ಎಲ್ಲರ ಗೌರವ ಉಳಿಸಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಜಿರೆ ಕ್ಷೇತ್ರದ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ನೆರಿಯ ಕ್ಷೇತ್ರದ ಸದಸ್ಯ ವಿ.ಟಿ. ಸೆಬಾಸ್ಟಿಯನ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್, ಶ್ರೀವನದುರ್ಗಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಪ್ರಭು, ಸೈಂಟ್ ಮೇರಿಸ್ ಚರ್ಚ್ ಬೊಳ್ಮನಾರು ಇಲ್ಲಿನ ಧರ್ಮಗುರು ಫಾ| ಜೋಸ್, ಮೊಹ್ಯುದ್ದೀನ್ ಜುಮ್ಮಾ ಮಸೀದಿ ಬೊಳ್ಮನಾರು ಇಲ್ಲಿನ ಧರ್ಮಗುರು ಮೊಹ್ಯುದ್ದೀನ್ ಝುಹುರಿ, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಸಂದರ್ಭೋಚಿತವಾಗಿ ಮಾತನಾಡಿ ಶುಭ ಕೋರಿದರು.
ಬೆಳ್ಳಿ ಕಿರೀಟ ತೊಡಿಸಿ ಶಾಸಕರಿಗೆ ಸನ್ಮಾನ : ಪುದುವೆಟ್ಟು ಜನತೆಗೆ ಮರೆಯಲಾಗದ ಕೊಡುಗೆ ನೀಡಿದ ಶಾಸಕ ವಸಂತ ಬಂಗೇರ ಅವರನ್ನು ಪುದುವೆಟ್ಟು ಗ್ರಾಮ ಪಂಚಾಯತ್, ಹಾಗೂ ಊರವರ ಪರವಾಗಿ ಬೆಳ್ಳಿ ಕಿರೀಟ ತೊಡಿಸಿ ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ದೇವಸ್ಥಾನ ಕಡೆಯಿಂದ ಹಾಗೂ ಕೆಲವರು ವೈಯುಕ್ತಿವಾಗಿ ಶಾಸಕರನ್ನು ಅಭಿನಂದಿಸಿದರು. ಕಾಮಗಾರಿ ಗುತ್ತಿಗೆ ವಹಿಸಿದ್ದ ಮೊಗೆರೋಡಿ ಸುಧಾಕರ ಶೆಟ್ಟಿ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ) ಜಯಾನಂದ ಪೂಜಾರಿ ಅವರನ್ನು ಊರವರ ಪರವಾಗಿ ಸನ್ಮಾನಿಸಲಾಯಿತು. ಇಂಜಿನಿಯರ್ ಉದಯಕುಮಾರ್ ಮತ್ತು ಕೀರ್ತಿ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರನ್ನು ಭಾರೀ ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರಮಾಡಿಕೊಂಡು ಮೆರವಣಿಗೆ ಮೂಲಕ ಕರೆತರಲಾಯಿತು. ಬೊಳ್ಮನಾರಿನಿಂದ ಸೇತುವೆವರೆಗೂ ಶಾಸಕರು ಜನತೆಯೊಂದಿಗೆ ಕಾಲ್ನಡಿಗೆಯಲ್ಲೇ ಹೆಜ್ಜೆಹಾಕಿ ಸಾಗಿ ಬಂದರು. ಗ್ರಾಮಸ್ಥ ವಸಂತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ. ಸದಸ್ಯ ಕೆ.ಜೆ. ಜೋಸೆಫ್ ಯಾನೆ ರೋಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ ಧನ್ಯವಾದವಿತ್ತರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ನಾರಾಯಣ, ಲಿಂಗಪ್ಪ ಸಾಲಿಯಾನ್, ಸುಜಾತಾ, ವಾರಿಜಾ, ಮಂಜುಳಾ, ವಸಂತಿ, ಅಭಿವೃದ್ಧಿ ಅಧಿಕಾರಿ ಸರೋಜಿನಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿ. ಅಶ್ರಫ್, ಗ್ರೇಸಿಯನ್ ವೇಗಸ್, ಕೇಶವ ಪಿ. ಬೆಳಾಲು, ವಿಜಯ ಕುಮಾರ್ ಕಳೆಂಜ, ಸುಕುಮಾರನ್ ಮೇರ್ಲ, ಶ್ರೀಧರ ನಾಯರ್, ವಸಂತ ಭಟ್ ಸಹಿತ ಅನೇಕ ಮಂದಿ ಗಣ್ಯ ಮಹನೀಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.