HomePage_Banner_
HomePage_Banner_

ಕುತ್ಲೂರು ರಾಮಚಂದ್ರ ಭಟ್‌ರವರ ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣ ರಾಜ್ಯ ನಕ್ಸಲ್ ನಾಯಕ ಶಿವಕುಮಾರ್ ಯಾನೆ ಚಿನ್ನಿ ರಮೇಶ್ ಪೊಲೀಸ್ ವಶಕ್ಕೆ

2

ನಕ್ಸಲ್ ಶಿವಕುಮಾರ್ ಅವರನ್ನು ಮಹಜರು ಪ್ರಕ್ರಿಯೆಗೆ ರಾಮಚಂದ್ರ ಭಟ್ ಮನೆಯ ಬಳಿಗೆ ಪೊಲೀಸರು ಕರೆತರುತ್ತಿರುವುದು.

3

೨೦೧೩ ನ.೮ರಂದು ರಾತ್ರಿ ಶಂಕಿತ ನಕ್ಸಲರಿಂದ ಬೆಂಕಿಗೆ ಆಹುತಿಯಾದ ರಾಮಚಂದ್ರ ಭಟ್‌ರವರ ಕಾರು.

 

ಬೆಳ್ತಂಗಡಿ : ಕುತ್ಲೂರು ಗ್ರಾಮದ ಕುಕ್ಕುಜೆ ನಿವಾಸಿ ರಾಮಚಂದ್ರ ಭಟ್ ಅವರ ಮನೆಗೆ ೨೦೧೩ ನ. ೯ ರಂದು ರಾತ್ರಿ ಸಶಸ್ತ್ರಧಾರಿ ಶಂಕಿತ ನಕ್ಸಲರ ತಂಡವೊಂದು ಘೋಷಣೆಗಳನ್ನು ಕೂಗುತ್ತಾ ಅವರ ಮಾರುತಿ ಕಾರು ಹಾಗೂ ಬೈಕ್‌ಗೆ ಬೆಂಕಿ ಹಚ್ಚಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಕ್ಸಲ್ ನಾಯಕ, ಆಂದ್ರ ಪೊಲೀಸರಿಂದ ಬಂಧಿಸಲ್ಪಟ್ಟು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲ್ಪಟಿರುವ ಆರೋಪಿಯೋರ್ವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಎ. ೪ ರಂದು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ವೇಳೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆರೋಪಿಯ ನ್ನು ಎಎನ್‌ಎಫ್ ಮತ್ತು ಡಿಆರ್‌ಪಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರುತ್ತಿದ್ದಂತೆ ನ್ಯಾಯಾಲಯದ ಹೊರಗಿನ ಅಂಗಣದವರೆಗೂ ಅವರು ನಕ್ಸಲ್ ಪರ ಘೋಷಣೆ ಕೂಗಿ ಅಚ್ಚರಿಮೂಡಿಸಿದರು.
ಬಂಧಿತರನ್ನು ಬೆಂಗಳೂರು ಕೋರಮಂಗಳ ಕ್ರೀಡಾಂಗಣದ ಕೃಷ್ಣ ನಗರ ಸ್ಲಂ ನಿವಾಸಿ, ಸಿಪಿಐ (ಮಾವೋವಾದಿ) ರಾಜ್ಯ ಸಮಿತಿ ಸದಸ್ಯ, ನಕ್ಸಲ್ ರಾಜ್ಯ ನಾಯಕ ಸಮೀರ್ ಯಾನೆ ರಫಿ ಯಾನೆ ಮಾಧವ ಯಾನೆ ಶಿವಕುಮಾರ್ (೫೨ವ.) ಎಂಬವರೆಂದು ಗುರುತಿಸಲಾಗಿದೆ.
ನಾರಾವಿ ಕುತ್ಲೂರು ಬೆಂಕಿ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರನ್ನು ಗುರುವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅಂತೆಯೇ ಸ್ಥಳ ಮಹಜರು ನಡೆಸುವ ಸಲುವಾಗಿ ಅವರನ್ನು ಪೊಲೀಸರು ಸಕಲ ಭದ್ರತೆಯೊಂದಿಗೆ ಎ. ೫ ರಂದು ಕುತ್ಲೂರಿಗೆ ಕರೆತಂದಿದ್ದಾರೆ.
ಶಿವಕುಮಾರ್ ಬಗ್ಗೆ:
ಬೆಂಗಳೂರಿನ ಸ್ಲಂ ಏರಿಯಾ ನಿವಾಸಿ ಶಿವಕುಮಾರ್ ಜನಿಸಿದ್ದು ೧೯೬೫ರಲ್ಲಿ. ಬಿ.ಎ. ಪದವೀಧರ. ಕಾಲೇಜು ವಿದ್ಯಾಭ್ಯಾಸದ ಬಳಿಕ ಕೋಳಿ ಅಂಗಡಿ ಹಾಗೂ ಬಾರ್‌ನಲ್ಲಿ ಕೆಲಸ ಪ್ರಾರಂಭಿಸಿ ದ್ದರು. ಪಡಿತರಕ್ಕಾಗಿ ನಡೆಯುತ್ತಿದ್ದ ಹೋರಾಟ, ಬೆಂಗಳೂರು ಗಾಂಧಿನಗರ ಸ್ಲಂ ಜನವಸತಿ ಪ್ರದೇಶದಲ್ಲಿ ಸರಕಾರದ ವತಿಯಿಂದ ಸಭಾಭವನ ನಿರ್ಮಾಣಕ್ಕೆ ಮುಂದಾದಾಗ ಅದರ ವಿರುದ್ಧ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ನಂತರ ಪ್ರೋಗ್ರೆಸಿವ್ ಯೂತ್ ಸೆಂಟರ್ (ಪಿವೈಸಿ) ಸಂಘಟನೆ ಮೂಲಕ ವಿವಿಧೆಡೆ ನಡೆಯುತ್ತಿದ್ದ ಹೋರಾಟಗಳಲ್ಲೂ ಭಾಗಿಯಾಗಿ ಸರಕಾರದ ವಿರುದ್ಧ ಬಂಡವಾಳಶಾಹಿ ನೀತಿಯ ವಿರುದ್ಧ ಭಾಷಣಗಳನ್ನು ಮಾಡುತ್ತಿದ್ದರು. ಬಳಿಕ ಎಡಪಂಥೀಯ ಹೋರಾಟಗಾರ ಚುರುಕುರಿ ರಾಜ್‌ಕುಮಾರ್ ಯಾನೆ ಆಝಾದ್ ಯಾನೆ ನಾಗರಾಜ್‌ರ ಪರಿಚಯವಾಗಿ ಆಂಧ್ರಪ್ರದೇಶದ ವಾರಂಗಲ್‌ನಲ್ಲಿ ನಡೆದ ರೈತ ಕೂಲಿ ಸಂಘದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ೧೯೯೦ ರಿಂದ ಮೂರು ವರ್ಷಗಳ ಕಾಲ ಈ ಸಂಘಟನೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.
ದೊಂಗರಾಮಪುರ ಪಂಚಾಯತ್ ವಿರುದ್ಧದ ಪ್ರತಿಭಟನೆಯಲ್ಲಿ ಮೊದಲ ಪೊಲೀಸ್ ಕೇಸು ಹಾಕಿಸಿಕೊಂಡಿದ್ದ ಅವರು ಬಳಿಕ ಕೊಲೆ, ಕೊಲೆ ಯತ್ನ ಸೇರಿದಂತೆ ೧೯ ಕ್ಕೂ ಅಧಿಕ ಪ್ರಕರಣಗಳನ್ನು ಎದುರಿಸಿದ್ದರು. ಇದಕ್ಕಾಗಿ ಹಲವು ಬಾರಿ ಕರ್ನಾಟಕ, ಆಂದ್ರ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದರು. ಹಾಗೆ ಮುಂದುವರಿದಂತೆ ನಕ್ಸಲ್ ಹೋರಾಟಗಾರ ಚುರುಕುರಿ ನಾಗರಾಜ್‌ರಿಂದ ಪಿಸ್ತೂಲ್ ಕೂಡ ದೊರೆತು ಗಂಭೀರ ಪ್ರಕರಣಗಳಲ್ಲೂ ಭಾಗಿಯಾಗಿದ್ದರು. ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಕೊಂಡ ಶಿವಕುಮಾರ್ ಸಿಪಿಐ (ಮಾವೋವಾದಿ) ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲ್ಯುಜಿ)ಗೆ ಸೇರಿಕೊಂಡು ಜನರ ಕಣ್ಣೆದುರಿಗೆ ಸಿಗದೇ ರಹಸ್ಯ ಕಾರ್ಯಾಚರಣೆ ತಂಡಕ್ಕೆ ಸೇರಿಕೊಂಡಿದ್ದರು. ೧೯೯೫ರಲ್ಲಿ ರಾಯಚೂರಿನ ರೌಡಿ ಸುದರ್ಶನ ರೆಡ್ಡಿ ಕೊಲೆ ಪ್ರಕರಣದಲ್ಲಿ ಶಿವಕುಮಾರ್ ಪ್ರಮುಖ ಆರೋಪಿ. ೧೯೯೭ರಲ್ಲಿ ರಾಯಚೂರಿನ ಅಪ್ನದೊಡ್ಡಿಯಲ್ಲಿ ಲಕ್ಷ್ಮಣ್ ಜತೆ ಸೇರಿ ನರಸಿಂಹಲು ಅವರನ್ನು ಗುಂಡಿಕ್ಕಿ ಕೊಲ್ಲಲು ನೋಡಿದ ಕೇಸು ದಾಖಲಾಯಿತು. ನಂತರ ಕುಪ್ಪುಸ್ವಾಮಿ ರಾಜ್ಯ ನಾಯಕತ್ವದಲ್ಲಿ ನಕ್ಸಲೀಯರ ಚಂದ್ರಬಂಡ ದಳದ ನಾಯಕನಾಗಿ ಆಯ್ಕೆಯಾದ ಶಿವಕುಮಾರ್ ೧೯೯೯ರಲ್ಲಿ ತಂಡದ ಜೊತೆ ರಾಯಚೂರಿನಲ್ಲಿ ಸಿದ್ದನ ಗೌಡ ಎಂಬವರ ಹತ್ಯೆ ಮಾಡಿದ್ದರು. ನಂತರ ಪಾರ್ವತಿ ಮೊದಲಾದವರು ತಂಡಕ್ಕೆ ಸೇರ್ಪಡೆಯಾಗಿ ಜೆಗರ್ಕಲ್ ದಳ ಎಂಬ ಹೊಸ ಹೆಸರು ಬಂತು. ಕುಪ್ಪುಸ್ವಾಮಿ ಕೇಂದ್ರ ಸಮಿತಿ ನಾಯಕತ್ವ ವಹಿಸಿ ರಾಜ್ಯ ತಂಡಕ್ಕೆ ಸಾಕೇತ್‌ರಾಜನ್ ನಾಯಕತ್ವ ಬಂತು. ಪಾರ್ವತಿಯನ್ನು ೨೦೦೦ನೇ ಇಸವಿಯಲ್ಲಿ ಮದುವೆಯಾಗಿದ್ದ ಶಿವಕುಮಾರ್ ಮದುವೆಯಾಗಿ ಕೆಲವೇ ಸಮಯದಲ್ಲಿ ಆಂಧ್ರ ಪೊಲೀಸರಿಂದ ಬಂದಿಸಲ್ಪಟ್ಟು ಜೈಲು ಸೇರಿದ್ದರು. ಇದೇ ಸಂದರ್ಭ ಅಂದರೆ ೨೦೦೩ರ ನವಂಬರ್ ೧೭ ರಂದು ಕಾರ್ಕಳ ಸನಿಹದ ಈದು ಎನ್‌ಕೌಂಟರ್‌ನಲ್ಲಿ (ಕರ್ನಾಟಕದ ಮೊದಲ ನಕ್ಸಲ್ ಎನ್‌ಕೌಂಟರ್) ಶಿವಕುಮಾರ್ ಅವರ ಪತ್ನಿ ಪಾರ್ವತಿ ಅವರು ಹತ್ಯೆಯಾಗಿದ್ದರು.
ಶಿವಕುಮಾರ್‌ರ ಪಾತಕ ಕೃತ್ಯಗಳು:
ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕುತ್ಲೂರಿನ ದಿನಕರ, ಸುಂದರಿ, ಗೀತಾ, ಆನಂದ, ಮುಂಡಗಾರು ಪ್ರಭಾ, ವಿಕ್ರಂ ಗೌಡ, ನೀಲಗುಳಿ ಪದ್ಮನಾಭ ಮೊದಲಾದವರು ಇವರ ಜೊತೆಯಿದ್ದರು. ಹೆಬ್ರಿಯ ಸೀತಾನದಿಯ ಭೋಜಶೆಟ್ಟಿ ಕೊಲೆ ಪ್ರಕರಣ, ಪೊಲೀಸ್ ಮಾಹಿತಿದಾರ ಕೇಶವ ಯಡಿಯಾಲ್ ಕೊಲೆ ಪ್ರಕರಣ, ಸದಾಶಿವ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿಯಲ್ಲಿ ನಡೆದ ನಾಲ್ಕು ರಾಜ್ಯಗಳ ನಕ್ಸಲರು ಭಾಗವಹಿಸಿದ್ದ ಸಭೆಯಲ್ಲಿ ಶಿವಕುಮಾರ್ ಭಾಗಿಯಾಗಿದ್ದರು. ಪೊಲೀಸ್ ದಾಳಿಯ ಸಂದರ್ಭ ಇಡೀ ತಂಡವೇ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಕಾರ್ಯಾಚರಣೆಯ ಬಳಿಕ ಅವರ ಚಟುವಟಿಕೆಗಳನ್ನು ಮಲೆನಾಡಿನಿಂದ ಕೇರಳಕ್ಕೆ ಸ್ಥಳಾಂತರಿಸಲು ತೀರ್ಮಾನ ಕೈಗೊಂಡಿದ್ದರು. ಫಾರೆಸ್ಟ್ ಗೇಟ್‌ದಾಳಿ ಸಹಿತದ ಅನೇಕ ದಾಳಿಗಳಲ್ಲಿ ಶಿವಕುಮಾರ್ ಭಾಗಿಯಾಗಿದ್ದರು. ಸಂಘಟನೆಯ ಕೆಲಸಕ್ಕೋಸ್ಕರವಾಗಿಯೇ ೨೦೧೬ರ ಸೆ.೧೧ ರಂದು ಜನಸಮಾನ್ಯರಂತೆ ಬೆಂಗಳೂರು ನಗರಕ್ಕೆ ಬಂದಿದ್ದ ಶಿವಕುಮಾರ್ ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ನಾರಾವಿಯಲ್ಲಿ ಅಂದು ನಡೆದಿದ್ದೇನು?
ನಾರಾವಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ರಾಮಚಂದ್ರ ಭಟ್ ಅವರು ಸರಕಾರದ ಪ್ಯಾಕೇಜ್‌ನಂತೆ ಜನರು ಸ್ವ ಇಚ್ಚೆಯಿಂದ ಅರಣ್ಯ ತೊರೆದು ಊರಿಗೆ ಬರುವಂತೆ ಅರಣ್ಯ ವಾಸಿಗಳನ್ನು ಪ್ರೇರೇಪಿಸುತ್ತಿದ್ದಾರೆ ಎಂಬುದಾಗಿ ಆವರ ಮೇಲಿನ ಆಕ್ರೋಶದಿಂದಾಗಿ ಅವರ ಕುತ್ಲೂರಿನ ಕುಕ್ಕುಜೆ ಕ್ರಾಸ್ ಸನಿಹದ ಮನೆಗೆ ೨೦೧೩ರ ನ.೮ರಂದು ರಾತ್ರಿ ೧೦ರಿಂದ ೧೫ ಮಂದಿಯ ಸಶಸ್ತ್ರ ನಕ್ಸಲರ ತಂಡ ಆಗಮಿಸಿ ಅವರ ಮನೆ ಶೆಟ್ಡ್‌ನಲ್ಲಿ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರಿಗೆ ಬೆಂಕಿ ಇಟ್ಟು ಸುಟ್ಟುಹಾಕಿತ್ತು. ಈ ವೇಳೆ ಕಾರಿನ ಶೆಡ್ಡ್ ಕೂಡ ಉರಿದುಹೋಗಿತ್ತು. ಅವರ ಬೈಕಿಗೆ ಕೂಡ ಹಾನಿ ಎಸಗಲಾಗಿತ್ತು. ನಕ್ಸಲರಿಗೆ ಅವರ ಮೇಲಿದ್ದ ಆಕ್ರೋಶವನ್ನು ಕೈ ಬರಹದ ಮೂರು ಪುಟಗಳ ಪತ್ರದಲ್ಲಿ ಬರೆದು ಅದನ್ನು ಅಲ್ಲಿ ಎಸೆದುಹೋಗಿದ್ದರು. ಅವರಿಗೆ ಬಂದೂಕು ತೋರಿಸಿ ಬೆದರಿಕೆಯನ್ನೂ ಒಡ್ಡಿದ್ದರು.
ನಕ್ಸಲ್ ಚಟುವಟಿಕೆ ಇಲ್ಲ ಎನ್ನುವುದಾದರೆ ಮತ್ಯಾಕೆ ೨,೫೦೦ ಪೊಲೀಸರು ಕರ್ತವ್ಯದಲ್ಲಿದ್ದಾರೆ?
ಪೊಲೀಸ್ ವರದಿಗಳ ಪ್ರಕಾರ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಇಲ್ಲ ಎಂದಾದರೆ ಮತ್ಯಾಕೆ ೨,೫೦೦ ಮಂದಿ ಎಎನ್‌ಎಫ್ ವಿಭಾಗದ ಪೊಲೀಸರನ್ನು ಇನ್ನೂ ಕರ್ತವ್ಯದಲ್ಲಿಟ್ಟುಕೊಂಡಿದ್ದಾರೆ ಎಂದಿರುವ ಶಿವಕುಮಾರ್, ಸರಕಾರ ಮಾಧ್ಯಮದ ಮೂಲಕ ನಮ್ಮನ್ನು ಮಾತುಕತೆ ಕರೆದಿದೆಯೇ ಹೊರತು ಯಾವುದೇ ಪತ್ರದ ಮೂಲಕ ಆಹ್ವಾನ ನೀಡಿದ್ದಲ್ಲಿ ದಾಖಲೆ ನೀಡಲಿ ಎಂದು ಸವಾಲೆಸೆದರು. ಬಂಡವಾಳಶಾಹಿಗಳ ಪರ ನಿಲುವನ್ನು ಬಿಟ್ಟು ಸರಕಾರ ನಮ್ಮ ಜೊತೆ ಮಾತುಕತೆ ಮಾಡುವುದಾದರೆ ನಾವು ಅದಕ್ಕೆ ಬದ್ಧ ಎಂದು ಮಾಧ್ಯಮದವರ ಮೂಲಕ ಸರಕಾರಕ್ಕೆ ಆಹ್ವಾನವನ್ನೂ ನೀಡಿದರು. ಭೂರಹಿತರಿಗೆ ಭೂಮಿ ಕೊಡಿ, ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಿ, ಎಂಬಿತ್ಯಾದಿಯಾಗಿ ಮಾತನಾಡುತ್ತಲೇ ಇದ್ದ ಅವರು ಘೋಷಣೆ ವೇಳೆ ನಕ್ಸಲ್ ವಾದಕ್ಕೆ ಜಯವಾಗಲಿ, ಭಗತ್‌ಸಿಂಗ್, ಸುಖ್‌ದೇವ್ ಹೋರಾಟ ಚಿರಾಯುವಾಗಲಿ ಎಂಬಿತ್ಯಾಧಿಯಾಗಿ ಘೋಷಣೆ ಕೂಗುತ್ತಿದ್ದರು.
ಡಿವೈಎಸ್‌ಪಿ ರವೀಶ್ ಅವರ ನೇತೃತ್ವದಲ್ಲಿ ಶಿವಕುಮಾರ್ ಯಾನೆ ಚಿನ್ನಿ ರಮೇಶ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬೆಳ್ತಂಗಡಿ ಎಸ್.ಐ. ರವಿ, ಧರ್ಮಸ್ಥಳ ಎಸ್.ಐ. ಯಾಗಿದ್ದು ವೇಣೂರು ಠಾಣಾ ಪ್ರಭಾರಿಕೆಯಲ್ಲೂ ಇರುವ ರಾಮ ನಾಯ್ಕ್, ಸಹಿತ ಡಿ. ಆರ್‌ನ ಪೊಲೀಸರು ಹಾಗೂ ಎಎನ್‌ಎಫ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

* ಈದು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ಪಾರ್ವತಿಯ ಪತಿ ಶಿವಕುಮಾರ್
* ಆಂಧ್ರ ಪೊಲೀಸರಿಂದ ಬಂಧಿಸಲ್ಪಟ್ಟು ಕರ್ನಾಟಕ ಪೊಲೀಸರಿಗೆ ಹಸ್ತಾಂತರ
* ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಕ್ರಿಯಾಶೀಲ ಬಂಧಿತ ಆರೋಪಿಯ ಹೇಳಿಕೆ

ನಕ್ಸಲ್ ಚಳವಳಿ ಇನ್ನೂ ಇದೆ: ಶಿವಕುಮಾರ್
ನ್ಯಾಯಾಲಯದ ಬಳಿ ಸುಮಾರು ೧ ತಾಸುಗಳ ಕಾಲ ಮಾಧ್ಯಮದವರ ಜತೆ ಮಾತನಾಡಿದ ಶಿವಕುಮಾರ್, ನಕ್ಸಲೈಟ್ ಹೋರಾಟ ಹಿಂಸಾವಾದ ಅಲ್ಲ. ಆತ್ಮರಕ್ಷಣೆಗಾಗಿ ಪ್ರತಿಹಿಂಸೆ ನಡೆದಿರಬಹುದು. ಪಶ್ಚಿಮಘಟ್ಟಗಳನ್ನು ಕಾಪಾಡಲು ನಾವು ಹೋರಾಡುತ್ತಿದ್ದೇವೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾಗಿಲ್ಲ. ಕ್ರಿಯಾಶೀಲವಾಗಿದೆ. ನಮ್ಮ ಹೋರಾಟ ಸಾಮ್ರಾಜ್ಯಶಾಹಿ ವಿರುದ್ಧ, ದಲ್ಲಾಳಿ ಬಂಡವಾಳಶಾಹಿ ವಿರುದ್ದ ಮತ್ತು ದೊಡ್ಡ ಪ್ರಮಾಣದ ಭೂ ಮಾಲಿಕರ ವಿರುದ್ಧವಾಗಿದೆ. ಕರ್ನಾಟಕದಲ್ಲಿ ನಾವು ಯಾವತ್ತೂ ಪೊಲೀಸರಿಗೆ ತೊಂದರೆ ನೀಡಿದಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ವಿವಿಧ ಯೋಜನೆಗಳ ಹೆಸರಿನಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದು ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡುವ ಹುನ್ನಾರ ನಡೆಸುತ್ತಿದೆ. ಅಂತವರ ವಿರುದ್ಧ ನೂತನ ಪ್ರಜಾತಂತ್ರ ಕ್ರಾಂತಿ ಮಾಡಲಾಗುವುದು. ನಮ್ಮ ಸಂಘಟನೆ ಪಶ್ಚಿಮಘಟ್ಟದಲ್ಲಿ ಸಕ್ರೀಯವಾಗಿ ಕೆಲಸನಿರತವಾಗಿದೆ. ನಾವು ಕಾಡಿನಲ್ಲಿರುವುದಲ್ಲ. ಹಳ್ಳಿಯ ಜನರ ಜೊತೆ ಇದ್ದೇವೆ ಎಂದರು. ಅಲ್ಲದೆ ಆದಿವಾಸಿಗಳ ಪರ ಲೇಖನ ಬರೆಯುತ್ತಿದ್ದ ಆಪಾದನೆಯಲ್ಲಿ ಅಮಾಯಕ ವಿಠಲ ಮಲೆಕುಡಿಯ ಅವರನ್ನು ಅನ್ಯಾಯವಾಗಿ ಬಂಧಿಸಿದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ನಮ್ಮಂತೆ ಆದಿವಾಸಿಗಳ ಪರ ಮಾತನಾಡಿದರೆ ಇಲ್ಲದ ಕೇಸುಗಳನ್ನು ನಮ್ಮ ತಲೆಮೇಲೆ ಕಟ್ಟುತ್ತಿದೆ ಎಂದು ಆರೋಪಿಸಿದರು.

ಅಂದು ತಂಡದಲ್ಲಿದ್ದ ಉಳಿದವರ ಶೀಘ್ರ ಬಂಧನವಾಗಲಿ : ರಾಮಚಂದ್ರ ಭಟ್ ಕುತ್ಲೂರು
ಘಟನೆಯ ಆ ಸಂದರ್ಭದಲ್ಲಿ ನನ್ನ ಮೇಲೆ ಕೆಲವರು ಮಾಡಿದ್ದ ಆರೋಪಕ್ಕೆ ಈಗ ಉತ್ತರ ಸಿಕ್ಕಿದಂತಾಗಿದೆ. ಅರೋಪಿ ಈ ಪ್ರಕರಣದಲ್ಲಿ ೧೫ ಮಂದಿ ಶಾಮೀಲಾಗಿದ್ದಾರೆಂದು ತನಿಖೆ ವೇಳೆ ತಿಳಿಸಿದ್ದು ಅವರು ಯಾರು ಎಂದು ಪೊಲೀಸರು ಶೀಘ್ರಪತ್ತೆಹಚ್ಚಲಿ. ಅವರ ಜೊತೆಗಿದ್ದವರು ಎಲ್ಲರೂ ನಕ್ಸಲರಾಗಿರಲು ಸಾಧ್ಯವಿಲ್ಲ. ನನ್ನ ಮನೆ ಗೊತ್ತಿರುವವರು ಸಹಕಾರ ನೀಡಿರುವ ಸಾಧ್ಯೆತೆ ಕೂಡಾ ಇದೆ. ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.