HomePage_Banner_
HomePage_Banner_
HomePage_Banner_

ಕುರಾಯ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಜದ ಸುವ್ಯವಸ್ಥೆಗೆ ಧರ್ಮ ಆಧಾರ: ಸುಬ್ರಹ್ಮಣ್ಯ ಶ್ರೀ

Advt_NewsUnder_1

 

1

ಬಂದಾರು: ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು, ದೈವ, ದೇವರ ಮೇಲೆ ನಂಬಿಕೆ ಇರಬೇಕು, ಸಮಾಜ ಸುವ್ಯವಸ್ಥಿತವಾಗಿ ನಡೆಯಬೇಕಾದರೆ ಧರ್ಮ ಬೇಕು, ಸಮಾಜ ರಕ್ಷಣೆಗೆ ಧರ್ಮ ಆಧಾರವಾಗಿದೆ ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಎ.೨ರಂದು ಜರುಗಿದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ನಾವು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕಾದರೆ ದೇವಾಲಯ, ದೈವಾಲಯಗಳು ಸುಸ್ಥಿತಿಯಲ್ಲಿ ಇರಬೇಕು. ದೇವಸ್ಥಾನ ಎಂಬುದು ದೊಡ್ಡ ಮರವಿದ್ದಂತೆ, ನಾವು ಅದರ ಗೆಲ್ಲುಗಳು, ಮರದ ಬುಡಕ್ಕೆ ನೀರು, ಗೊಬ್ಬರ ಹಾಕಿದರೆ, ಗೆಲ್ಲು, ಎಲೆಗಳು ಸೊಂಪಾಗಿ ಬೆಳೆಯುವಂತೆ, ದೇವಸ್ಥಾನ ಅಭಿವೃದ್ಧಿಯಾದರೆ ನಮ್ಮ ಪ್ರಗತಿಯಾದಂತೆ ಎಂದು ತಿಳಿಸಿದರು. ಕುರಾಯದಲ್ಲಿ ಎಲ್ಲರ ಸಂಘಟಿತ ಶ್ರಮ ಮತ್ತು ಯುವಕರ ಕರಸೇವೆಯಿಂದ ಉತ್ತಮ ದೇವಾಲಯ ನಿರ್ಮಾಣವಾಗಿದೆ. ಸದಾಶಿವ ಮನಸ್ಸಿಗೆ ಶಕ್ತಿ ಕೊಡುವ ದೇವರು ಇಂತಹ ಶಕ್ತಿ ದೇವರು ಎಲ್ಲರಿಗೂ ನೀಡಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ಖ್ಯಾತ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ವಹಿಸಿ, ದೇವಸ್ಥಾನ ಅಭಿವೃದ್ಧಿಯಾದರೆ ಊರಿನ ಪ್ರಗತಿಯಾದಂತೆ, ಊರವರು ಶ್ರಮಪಟ್ಟು ದುಡಿದ ಪರಿಣಾಮ ಇಂತಹ ಸುಂದರ ದೇವಸ್ಥಾನ ನಿರ್ಮಾಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ದಿವಾ ಕೊಕ್ಕಡ ಅವರು ಧಾರ್ಮಿಕ ಉಪನ್ಯಾಸ ನೀಡಿ, ನಾಗರಾಧನೆ, ಭೂತರಾಧನೆ ತುಳುನಾಡಿದ ಜೀವಾಳವಾಗಿದೆ. ನಾಗಬನದಲ್ಲಿ ಮರಗಳು ಮಾಯಾವಾಗಿ, ಸಿಮೆಂಟಿನ ನಾಗನ ಕಟ್ಟೆ ನಿರ್ಮಾಣವಾಗಿದೆ. ಕೃಷಿ ಸಂಸ್ಕೃತಿ ನಮ್ಮಿಂದ ದೂರವಾಗುತ್ತಾ ಇದೆ. ಹಿಂದೆ ಇದ್ದ ಕೂಡು ಕುಟುಂಬ ಪದ್ಧತಿ ನಮ್ಮಲ್ಲಿಲ್ಲ, ಕುಟುಂಬಗಳು ವಿಘಟನೆಯಾಗುತ್ತಿದೆ ಧರ್ಮ ದರ್ಬಾರಿನ ಕಡೆ ಹೋಗುತ್ತಿದೆ ಇದರ ಬಗ್ಗೆ ಪ್ರತಿಯೊಬ್ಬರು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದರು.
ಇಂದಿನ ಆಧುನಿಕ ಪರಿವರ್ತನೆಯಲ್ಲಿ ಶಿಕ್ಷಣದಲ್ಲಿ ಮೌಲ್ಯಗಳಿಲ್ಲ, ಶಿಕ್ಷಣ ಎಂಬುದು ಹಣ ಗಳಿಕೆಗೆ ಎಂಬ ಭಾವನೆ ಬೆಳೆದು ಬಿಟ್ಟಿದೆ. ರಾಜಕೀಯ ಹೊಲಸಾಗಿದೆ. ಇಂದು ನಾವು ಸೇವಿಸುವ ನೀರು, ಆಹಾರ, ಗಾಳಿ ವಿಷಯುಕ್ತವಾಗಿದೆ ಇದಕ್ಕಾಗಿ ಪಂಚ ಶಕ್ತಿಗಳನ್ನು ಉಳಿಸುವ ಕೆಲಸ ಆಗಬೇಕು, ಬಲಿ ಕೊಡುವ ಸಂಸ್ಕೃತಿ ದೂರವಾಗಿ ಸಾತ್ವಿಕ ಸಂಸ್ಕೃತಿ ಬರಬೇಕು ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ ಕುಮಾರ್ ಕರಿಕ್ಕಳ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ತಾಲೂಕು ಅಧ್ಯಕ್ಷ ಸೋಮೇ ಗೌಡ, ವಕೀಲ ಉಮೇಶ್ ವೈ ಬಿ.ಸಿ. ರೋಡು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಬಂದಾರು ಗ್ರಾ.ಪಂ. ಸದಸ್ಯರಾದ ಲಲಿತಾ ಬದ್ಯಾರ್, ವಸಂತಿ ಡೀಕಯ್ಯ ಗೌಡ ಅತಾವು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವೆಟ್ನಾಯ, ಅಧ್ಯಕ್ಷ ಹರೀಶ್ ಪೂಂಜ, ಪ್ರಧಾನ ಕಾರ್ಯದರ್ಶಿ ಶ್ರೀಪತಿ ಭಟ್, ಕೋಶಾಧಿಕಾರಿ ಹರೀಶ್ ಹೊಳ್ಳ ಮತ್ತು ಪಿ. ಬಾಲಕೃಷ್ಣ ಗೌಡ, ಕಾರ್ಯಾಧ್ಯಕ್ಷರಾದ ಗೋಪಾಲಕೃಷ್ಣ ಹೊಳ್ಳ ಕಲ್ರೋಡಿ, ಧರ್ಣಪ್ಪ ಗೌಡ ಅಂಡಿಲ ಬಾನಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಗೌಡ, ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್ಯ, ಶ್ರೀ ಸದಾಶಿವ ಭಜನಾ ಮಂಡಳಿ ಅಧ್ಯಕ್ಷ ಧನಂಜಯ ಗೌಡ ಪಿಲಿಂಗುಡೇಲು, ಕಾರ್ಯದರ್ಶಿ ಶಿವಣ್ಣ ಗೌಡ ಕುಂಬುಡಂಗೆ, ಬೈಲುವಾರು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಕ್ಷಾ ಮತ್ತು ಅಶಿಕಾ ಇವರ ಪ್ರಾರ್ಥನೆ ಬಳಿಕ ಸುಬ್ರಹ್ಮಣ್ಯ ಭಟ್ ಉಳಿಯ ಸ್ವಾಗತಿಸಿದರು. ನಾರಾಯಣ ಗೌಡ ಇಚ್ಚೂರು ಮತ್ತು ನವೀನ್ ಕುಮಾರ್ ಪದ್ಮುಂಜ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಪುತ್ತೂರು ಇವರಿಂದ ಚಿದಾನಂದ ಕಾಮತ್ ಕಾಸರಗೋಡು ಇವರ ನಿರ್ದೇಶನದಲ್ಲಿ ಬಾರಿಸು ಕನ್ನಡ ಡಿಂಡಿಮವ ಕನ್ನಡ ಭಕ್ತಿ, ಭಾವಗಾನ, ‘ನೃತ್ಯವೈಭವ’ ಜರುಗಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.