ಪೆರಿಂಜೆ ಪಡ್ಡ್ಯಾರಬೆಟ್ಟ ಕ್ಷೇತ್ರದ ಜಾತ್ರೋತ್ಸವ-ಧಾರ್ಮಿಕ ಸಭೆ ತುಳುನಾಡಿನ ದೈವಾರಾಧನೆ ಸತ್ಯ ಧರ್ಮದ ಪ್ರತೀಕ

padyarabettu deiva copy

padyarabettu jatre copyಸನ್ಮಾನ:  ಕ್ಷೇತ್ರದ ವತಿಯಿಂದ ಸುದೀರ್ಘ ಸೇವೆ ಹಾಗೂ ಸಹಕಾರ ನೀಡಿದ ಆರ್‌ಕೆ ಭಟ್ ಮೂಡಬಿದಿರೆ, ರಮೇಶ್ ಹೆಗ್ಡೆ ಕೊಡಮಣಿ, ಸಂದೀಪ್ ಬನ್ನಡ್ಕ, ಸುಧಾಕರ ಶೆಟ್ಟಿ ಹಾಗೂ ಬಾಲಪ್ರತಿಭೆ ಚೇತನ್ ಪೆರಿಂಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇಣೂರು: ನಾಗಾರಾಧನೆ ಮತ್ತು ದೈವಾರಾಧನೆ ತುಳುನಾಡು ಕರಾವಳಿಯ ಜೀವಂತ ಆರಾಧನೆ ಆಗಿದೆ. ಸತ್ಯ ಹಾಗೂ ಭಕ್ತಿಯ ನಂಬಿಕೆಯ ಪ್ರತೀಕವಾಗಿ ಈ ಆರಾಧನೆ ನಡೆದುಕೊಂಡು ಬಂದಿದೆ. ದೈವಾರಾಧನೆ ಬಗ್ಗೆ ಸಂಶೋಧನೆ ಮಾಡಿದವರಿಗೆ ಬೆಚ್ಚಿಬೀಳಿಸುವ ಅನುಭವ ಆಗಿದೆ. ಜಗತ್ತನ್ನು ಒಂದು ಶಕ್ತಿ ಆಳುತ್ತಿದೆ ಎಂಬುವುದನ್ನು ಸಂಶೋಧನೆ ಮೂಲಕ ಅರಿತುಕೊಂಡಿರುವ ವಿಜ್ಞಾನಿಗಳು ದೈವ ಹಾಗೂ ನಾಗಾರಾಧನೆಯ ಶಕ್ತಿಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಕರ್ನಾಟಕ ಜೆಸಿಐ ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್ ಹೇಳಿದರು.
ಅವರು ಮಾ. 19ರಂದು ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ತುಳುನಾಡಿದ ದೈವ ಮತ್ತು ನಾಗಾರಾಧನೆ ಜಗತ್ತಿನ ವಿಸ್ಮಯ ಆಗಿದೆ. ದೈವಗಳ ನುಡಿ ನಂಬಿಕೆಯುಳ್ಳವರಿಗೆ ಸಾಕ್ಷಾತ್ಕಾರ ಆಗುತ್ತದೆ. ದೈವಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಪದ್ಧತಿ ನಮ್ಮಲ್ಲಿದೆ. ನಾಗಾರಾಧನೆ ಮತ್ತು ದೈವರಾಧನೆಯ ಸಾತ್ವಿಕ ಚಿಂತನೆಯಿಂದ ಆತ್ಮದ ಸಾಕ್ಷಾತ್ಕಾರ ಆಗುತ್ತದೆ. ಮೂರು ತಲೆಮಾರಿನ ಕೂಡುಕುಟುಂಬ ಒಟ್ಟಾಗಿ ಆರಾಧಿಸುತ್ತಿದ್ದ ಪದ್ದತಿ ಇಂದು ಬದಲಾಗಿದೆ. ವಿಜ್ಞಾನ ಕಲಿಯುತ್ತಿರುವ ಯುವಪೀಳಿಗೆ ನಾಗ-ದೈವರಾಧನೆ ಬಗ್ಗೆ ಪ್ರಶ್ನಿಸಲು ಮುಂದಾಗುತ್ತಿರುವುದು ವಿಷಾದನೀಯ. ದರ್ಶನ ಪಾತ್ರಿಯ ನುಡಿ, ಪಾಡ್ದನಗಳು ನಮ್ಮ ಸಂಸ್ಕೃತಿಯ ಒಂದು ಭಾಗ. ಇದನ್ನೆಲ್ಲ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಆತ್ಮ ನಿವೇದನೆಗೆ ದೈವಸ್ಥಾನಗಳು ಅಗತ್ಯ. ದೈವರಾಧನೆ ಗುಡಿಯೊಳಗೆ ಇರಬೇಕು. ಮೆರವಣಿಗೆ, ಸಾಂಸ್ಕೃತಿಕ ವೇದಿಕೆ ಮೂಲಕ ಅದನ್ನು ಬೀದಿಗೆ ತರುವ ಕೆಲಸ ಆಗಬಾರದು ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಜೈನ್ ಟ್ರಾವೆಲ್ಸ್‌ನ ರತ್ನಾಕರ ಜೈನ್ ಅವರು ಮಾತನಾಡಿ, ಭಗವಂತನ ಆರಾಧನೆ ಯಿಂದ ಮನಸ್ಸು ಸ್ವಚ್ಛವಾಗುತ್ತದೆ. ಮನಸ್ಸಿನ ಸ್ವಚ್ಚತೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎಂದರು.
ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷರು, ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರು ಮಾತನಾಡಿ, ತುಳು ಸಂಸ್ಕೃತಿಯ ತಿರುಳು ಎಂದೆನಿಸುವ ದೈವಾರಾಧನೆ ಪರಿಪೂರ್ಣ ರೂಪದಲ್ಲಿ ಉಳಿಯಬೇಕು. ಅದಕ್ಕಾಗಿ ದೈವಸ್ಥಾನ ಗಳನ್ನು ಉಳಿಸಿ ಅಭಿವೃದ್ಧಿಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಬರೋಡ ತುಳು ಸಂಘದ ಅಧ್ಯಕ್ಷರು
ಉದ್ಯಮಿ ಶಶಿಧರ ಶೆಟ್ಟಿ ಮಾತನಾಡಿ ದೈವ, ದೇವರನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿದರೆ ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು ಎಂದರು. ಪೆರಿಂಜೆಗುತ್ತುವಿನ ಡಾ| ಶ್ರೀಧರ ಕಂಬಳಿ ಉಪಸ್ಥಿತರಿದ್ದರು.
ಕ್ಷೇತ್ರದ ಪ್ರಧಾನ ಅರ್ಚಕ ರಾಮದಾಸ ಅಸ್ರಣ್ಣ ಪ್ರಾರ್ಥಿಸಿ ಪಡ್ಡ್ಯಾರಬೆಟ್ಟ ಕ್ಷೇತ್ರದ ಅನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕ್ಷೇತ್ರದ ವಿಕಾಸ್ ಜೈನ್ ವಂದಿಸಿದರು. ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೊಪ್ಪದ ದೂರದರ್ಶನ ಕಲಾವಿದರಿಂದ ಭಕ್ತಿ-ಭಾವ-ಸಂಗಮ ಕಾರ್ಯಕ್ರಮ ಜರಗಿತು. ದೈವಸ್ಥಾನದಲ್ಲಿ ಹೂವಿನ ಪೂಜೆ, ತುಲಾಭಾರ ಸೇವೆ ಮತ್ತು ಶ್ರೀ ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.