ವೇಣೂರು: ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ 100 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಶ್ರಮ: ಬಂಗೇರ

marody silanyasa copyವೇಣೂರು: ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಕಿಂಡಿ ಅಣೆಕಟ್ಟು, ಸೇತುವೆ, ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ರೂ. 100 ಕೋಟಿ ಮೊತ್ತದ ಅನುದಾನವನ್ನು ಬಿಡುಗಡೆಗೊಳಿಸಲು ಶ್ರಮವಹಿಸುತ್ತೇನೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಅವರು ಭರವಸೆ ನೀಡಿದರು.
ಅವರು ಮಾ. 9ರಂದು ಪಡಂಗಡಿ ಗ್ರಾ.ಪಂ. ವ್ಯಾಪ್ತಿಯ ಗರ್ಡಾಡಿ ರನ್ನಾಡಿಪಲ್ಕೆ ಎಸ್‌ಸಿ ಕಾಲನಿ, ಮರೋಡಿ ಗ್ರಾ.ಪಂ. ವ್ಯಾಪ್ತಿಯ ಪೆರಾಡಿಯ ಬಂಡಸಾಲೆ-ಗಾಣದಕೊಟ್ಯ ಎಸ್‌ಸಿ ಕಾಲನಿ ಹಾಗೂ ಮರೋಡಿ ಗ್ರಾಮದ ಹೆಟ್ಲಕಜೆ ಕುಟ್ಟಿಕಲ ಎಸ್‌ಸಿ ಕಾಲನಿಯಲ್ಲಿ ತಲಾ ರೂ. 10 ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಲಿರುವ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಎಸ್‌ಸಿ-ಎಸ್‌ಟಿ ಕಾಲನಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ 400 ಕ್ಕೂ ಅಧಿಕ ರಸ್ತೆಗಳಿಗೆ ಕಾಂಕ್ರಿಟೀಕರಣ ಮಾಡಲಾಗಿದೆ. ಭಾರೀ ಮೊತ್ತದ ಯೋಜನೆಗಳಾದ ಸೇತುವೆ, ಕಿರುಸೇತುವೆಗಳ ನಿರ್ಮಾಣ, ತಡೆಗೋಡೆ, ಓವರ್‌ಹೆಡ್ ಟ್ಯಾಂಕ್, ರಸ್ತೆ ಡಾಮರೀಕರಣ ಕಾಮಗಾರಿ ನಡೆದಿದೆ. 1982ರಲ್ಲಿದ್ದ ಬೆಳ್ತಂಗಡಿ ತಾಲೂಕಿನ ಚಿತ್ರಣ ಇಂದು ಪೂರ್ಣ ಬದಲಾಗಿದೆ. ಅಕ್ರಮ-ಸಕ್ರಮ, ಹಾಗೂ 94ಸಿ ಯೋಜನೆಯ ಫಲಾನುಭವಿಗಳಿಗೆ ಅವಧಿಯ ಒಳಗೆ ನಿವೇಶನ ಲಭಿಸುವಂತೆ ಹಾಗೂ ತಾಲೂಕಿನ 81 ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮವಹಿಸುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿಯೇ ತಾಲೂಕಿಗೆ ಅತ್ಯಧಿಕ ಯೋಜನೆಗಳನ್ನು ಜಾರಿಗೆ ತಂದಿರುವ ಹೆಮ್ಮೆ ಇದೆ. ಸತತ 5 ಬಾರಿ ಶಾಸಕನಾಗಿ ಆಯ್ಕೆಯಾದ ರಾಜಕಾರಣಿಯಾಗಿ ಅಭಿವೃದ್ಧಿ ನನ್ನ ಕರ್ತವ್ಯವೂ ಆಗಿದೆ ಎಂದರು.
ಈ ಸಂದರ್ಭದಲ್ಲಿ ಮರೋಡಿ ಹೆಟ್ಲಕಜೆ-ಕುಟ್ಟಿಕಲ ರಸ್ತೆಗೆ ತಮ್ಮ ಜಾಗವನ್ನು ಬಿಟ್ಟುಕೊಟ್ಟ ಅನಂತ ಆಚಾರಿ ಮತ್ತು ರಾಮಪ್ಪ ಪೂಜಾರಿ ಅವರನ್ನು ಶಾಸಕರು ಅಭಿನಂದಿಸಿದರು.
ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯೆ ರೂಪಲತಾ, ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಉಪಾಧ್ಯಕ್ಷ ಅಶೋಕ ಪಾಣೂರು, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಸೇವಂತಿ, ಸುಮಿತ್ರಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಗುತ್ತಿಗೆದಾರ ಮೋಹನದಾಸ್ ಭಂಡಾರ್ಕರ್ ಉಜಿರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.