ಬೆಳ್ತಂಗಡಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶೋಷಿತ ಮಹಿಳೆಯರ ರಕ್ಷಣೆಗೆ ಮಹಿಳಾ ಸಂಘ, ಒಕ್ಕೂಟಗಳು ಮುಂದಾಗಬೇಕು: ಲಾರೆನ್ಸ್ ಮುಕ್ಕುಯಿ

blt womans copyಬೆಳ್ತಂಗಡಿ: ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಸದೃಢರಾಗಬೇಕಾದರೆ ಶೋಷಣೆ ಮುಕ್ತರಾಗಬೇಕು. ಮಹಿಳಾ ಸಮಾಜಕ್ಕೆ ಅನ್ಯಾಯ, ದೌರ್ಜನ್ಯವಾದಾಗ ಮಹಿಳಾ ಸಂಘ, ಒಕ್ಕೂಟಗಳು ನ್ಯಾಯ ಒದಗಿಸಿ ರಕ್ಷಣೆ ನೀಡುವ ಕೆಲಸಕ್ಕೆ ಮುಂದಾಗಬೇಕು ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರು ಅ| ವಂ| ಲಾರೆನ್ಸ್ ಮುಕ್ಕುಯಿ ನುಡಿದರು.
ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 8ರಂದು ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ವತಿಯಿಂದ ಜನಜಾಗೃತಿ ಜಾಥಾ ಮತ್ತು ಬೆಳ್ತಂಗಡಿ ಸಾನ್‌ತೋಮ್ ಟವರ್ ಸಭಾಭವನದಲ್ಲಿ ಜರಗಿದ ಮಹಿಳಾ ಸಮಾವೇಶ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಅತ್ಯಧಿಕ ಕೊಳವೆ ಬಾವಿಯ ಕೊರೆಯುವಿಕೆಯಿಂದ ಇಂದು ಅಂತರ್ಜಲದ ಮಟ್ಟ ತೀರಾ ಕುಸಿದಿದೆ. ಇದೇ ರೀತಿ ಮುಂದುವರಿದರೆ ನೀರಿಗಾಗಿ ಕಿತ್ತಾಟ ನಡೆಯುವ ದಿನಗಳು ಬರಬಹುದು. ಇದಕ್ಕಾಗಿ ನೀರಿನ ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ತೀರಾ ಅಗತ್ಯ ಇದ್ದಲ್ಲಿ ಮಾತ್ರ ಕೊಳವೆಬಾವಿ ಕೊರೆಯುವ ಮುಂದಾಗಬೇಕು ಎಂದರು. ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಏಲಿಯಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳ್ತಂಗಡಿಯ ಹಿರಿಯ ವಕೀಲೆ ಶ್ರೀಮತಿ ಸ್ವರ್ಣಲತಾ ಅವರು ಮಹಿಳಾ ಒಕ್ಕೂಟಗಳ ದಶಮಾನೋತ್ಸವದ ಸವಿನೆನಪಿಗಾಗಿ ಮುದ್ರಿಸಲಾದ ಸ್ನೇಹ ಕಿರಣ ಸಂಚಿಕೆಯನ್ನು ಅನಾವರಣ ಗೊಳಿಸಿ ಮಾತನಾಡಿ, ಸಮಾಜದ ಮುಖ್ಯ ವಾಹಿನಿಗೆ ಬರಲು ಮಹಿಳೆಯರಿಗೆ ಹಲವಾರು ಸವಾಲುಗಳು ಎದುರಾಗುತ್ತದೆ. ಅದನ್ನು ಹೋಗಲಾಡಿ ಸಬೇಕಾದರೆ ಇಂತಹ ಸಂಘ, ಒಕ್ಕೂಟಗಳಲ್ಲಿ ಸಕ್ರೀಯರಾಗಬೇಕು ಎಂದರು.
ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ಸಂತ ಲಾರೆನ್ಸರ ಪ್ರಧಾನ ದೇವಾಲಯದ ಧರ್ಮಗುರು ವಂ|ಸ್ವಾ| ಜೋಸೆಫ್ ಕುರ‍್ಯಾಳಶೇರಿ, ಉಜಿರೆ ಎಸ್‌ಡಿಎಂ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಪ್ರೊ| ಮೇರಿ ಎಂ.ಜೆ., ಕಾಶಿಬೆಟ್ಟು ನವಚೈತನ್ಯ ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮ, ಡಿಕೆಡಿಆರ್‌ಡಿಎಸ್ ನಿರ್ದೇಶಕಿ ವಂ| ಫಾ. ಜೋಸ್ ಆಯಾಂಕುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ತಂಗಡಿ ನಗರ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ಸನ್ಮಾನ: ಕುಲ್ಲೂರು ಸ್ಪಂದನಾ ಕ್ಲಿನಿಕ್‌ನ ಡಾ| ವಾಣಿ ಸುಗುಣ ಕುಮಾರ್ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಕು| ಮಧುಶ್ರೀ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸಿ| ನಿಮಿ ರೋಸ್ ಅವರು ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಮಂಜುಳಾ ಸ್ವಾಗತಿಸಿ ಒಕ್ಕೂಟದ ಕೋಶಾಧಿಕಾರಿ ಶ್ರೀಮತಿ ಮರ್ಸಿ ವಂದಿಸಿದರು. ಶುಭ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.