ಪಡಿತರ ಅಂಗಡಿಗಳಿಗೆ ಕಳಪೆ ಅಕ್ಕಿ ಪೂರೈಕೆ : ತೂಕದಲ್ಲಿ ಖೋತಾ ತನಿಖೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಶಾಸಕರ ತಾಕೀತು

KDP sabhe copy11 ಅಂಬೇಡ್ಕರ್ ಭವನ ಮಂಜೂರಾಗಿ 2 ವರ್ಷವಾದರೂ ನಡೆಯದ ಕಾಮಗಾರಿ
ಬೆಳ್ತಂಗಡಿ ತಾಲೂಕಿಗೆ 11 ಅಂಬೇಡ್ಕರ್ ಭವನ ಮಂಜೂರಾಗಿ 2 ವರ್ಷ ಆದರೂ ಇದರ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ, ಸಮಾಜ ಕಲ್ಯಾಣ ಇಲಾಖೆ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಜಿ.ಪಂ.ಸ. ಶೇಖರ ಕುಕ್ಕೇಡಿ ಆರೋಪಿಸಿದರು.
ಜಾಗದ ಸಮಸ್ಯೆಯಿಂದ ತಡವಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್ ಹೇಳಿದಾಗ ತರಾಟೆಗೆ ತೆಗೆದುಕೊಂಡ ಶಾಸಕರು ಅನುದಾನ ಕೈಯಲ್ಲಿದ್ದರೂ ಜಾಗವನ್ನು ಗುರುತಿಸಲು ಎರಡು ವರ್ಷವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಎಷ್ಟು ಸಮಯದಲ್ಲಿ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಈಗ ಎಲ್ಲದಕ್ಕೂ ಜಾಗ ಆಗಿದೆ ಒಂದು ತಿಂಗಳ ಒಳಗೆ ಕ್ರಿಯಾಯೋಜನೆ ಮಾಡಿಸುವುದಾಗಿ ಮೋಹನ್‌ಕುಮಾರ್ ಭರವಸೆಯಿತ್ತರು. ಆದರೆ ಇದಕ್ಕೆ ಅಸಮ್ಮತಿ ಸೂಚಿಸಿದ ಸಿ.ಆರ್. ನರೇಂದ್ರ ಅವರು ಇದು ಮಾರ್ಚ್ ತಿಂಗಳು ಈ ತಿಂಗಳಲ್ಲಿ ಕ್ರಿಯಾಯೋಜನೆ ಮಾಡಲು ಸಾಧ್ಯವಿಲ್ಲ ಎಂದರು.

ಬೆಳ್ತಂಗಡಿ: ಆಹಾರ ಇಲಾಖೆಯಿಂದ ತಾಲೂಕಿನ ಪಡಿತರ ಅಂಗಡಿಗಳಿಗೆ ಪೂರೈಕೆಯಾ ಗುತ್ತಿರುವ ಅಕ್ಕಿ ಮೂಟೆಗಳಲ್ಲಿ ತೂಕದಲ್ಲಿ 7 ರಿಂದ 8 ಕೆ.ಜಿಯಷ್ಟು ಕಡಿಮೆಯಾಗುತ್ತಿದೆ. ಸರಕಾರ ಗುಣಮಟ್ಟದ ಅಕ್ಕಿ ನೀಡುತ್ತಿದ್ದರೂ, ಅಂಗಡಿಗಳಿಗೆ ಕಳಪೆ ಅಕ್ಕಿ ಪೂರೈಕೆ ಮಾಡಲಾಗುತ್ತಿದ್ದು, ಇದೊಂದು ಗಂಭೀರ ಸಮಸ್ಯೆಯಾಗಿದೆ. ಇದರ ವಿರುದ್ಧ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, 15 ದಿವಸದೊಳಗೆ ವರದಿ ನೀಡುವಂತೆ ಶಾಸಕ ಕೆ. ವಸಂತ ಬಂಗೇರ ಆಹಾರ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಳ್ತಂಗಡಿ ತಾಲೂಕು ತ್ರೈಮಾಸಿಕ ಕೆ.ಡಿ.ಪಿ. ಸಭೆ ಮಾ.7 ರಂದು ಶಾಸಕ ಕೆ. ವಸಂತ ಬಂಗೇರ ಇವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಜರುಗಿತು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ವ್ಯವಸ್ಥಾಪಕ ಗಣೇಶ್ ಪೂಜಾರಿ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ್, ಶೇಖರ ಕುಕ್ಕೇಡಿ, ನಮಿತಾ, ಮಮತಾ ಎಂ. ಶೆಟ್ಟಿ, ಧರಣೇಂದ್ರ ಕುಮಾರ್, ನಾಮನಿರ್ದೇಶನ ಸದಸ್ಯರಾದ ಸುಕುಮಾರ್, ಅಭಿನಂದನ್, ರಮೇಶ್, ಹರೀಶ್ ಗೌಡ, ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಸಭೆಯಲ್ಲಿ ನ್ಯಾಯ ಬೆಲೆ ಅಂಗಡಿಗಳಿಗೆ ಪೂರೈಕೆಯಾಗುತ್ತಿರುವ ಅಕ್ಕಿ ಗೋಣಿ ಚೀಲದ ತೂಕದಲ್ಲಿ ಎಳೆಂಟು ಕೆ.ಜಿ. ಕಡಿಮೆ ಬರುತ್ತಿದೆ ಎಂಬ ದೂರಿದೆ. ಅಲ್ಲದೆ ಅಕ್ಕಿ ಕಳಪೆಯಾಗಿದೆ ಇದರ ಬಗ್ಗೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕರು ಪ್ರಶ್ನಿಸಿದರು. ಈ ಸಮಯ ಸಭೆಯಲ್ಲಿದ್ದ ಆಹಾರ ಇಲಾಖಾಧಿಕಾರಿ ಉತ್ತರಿಸಲು ತಡವರಿಸಿದಾಗ ಅಸಮಾಧಾನಗೊಂಡ ಶಾಸಕರು ತಹಶೀಲ್ದಾರರು ಎಲ್ಲಿ ಎಂದು ಪ್ರಶ್ನಿಸಿದರು. ಅವರು ಮೀಟಿಂಗ್‌ಗೆ ಮಂಗಳೂರಿಗೆ ಹೋಗಿದ್ದಾರೆ ಎಂಬ ಉತ್ತರ ಬಂತು. ಇದರಿಂದ ಆಕ್ರೋಶಗೊಂಡ ಶಾಸಕರು ಇದು ಕೆಡಿಪಿ ಸಭೆಯಾ ಅಥವಾ ಸಂತೆಯಾ ಎಂದು ಹೇಳಿ ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ
ಹಾಜರಾಗಬೇಕು ಎಂದು ತಾಕೀತು ಮಾಡಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ತಹಶೀಲ್ದಾರ್ ಸಭೆಗೆ ಆಗಮಿಸಿದರು. ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡುತ್ತಿರುವ ಅಕ್ಕಿ ಕಳಪೆ ಮತ್ತು ತೂಕದಲ್ಲಿ ವ್ಯತ್ಯಾಸವಾಗುತ್ತಿರುವ ಬಗ್ಗೆ ಅಧಿಕಾರಿಗಳು ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ಕೊಟ್ಟು ತನಿಖೆ ನಡೆಸಿ 15 ದಿವಸಗಳ ಒಳಗೆ ವರದಿ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
94ಸಿ ಕಡತ ಮರುಪರಿಶೀಲನೆ:
94ಸಿ ಹಾಗೂ ಅಕ್ರಮ ಸಕ್ರಮದಲ್ಲಿ ಅರಣ್ಯ ಇಲಾಖೆ ಬಫರ್ ಎಂಬ ಕಾರಣ ನೀಡಿ ಕಡತಗಳನ್ನು ಉಪ ಅರಣ್ಯಾಧಿಕಾರಿ ಮಂಗಳೂರಿಗೆ ಕಳುಹಿಸುತ್ತಿದ್ದಾರೆ. ಇಂತಹ 64 ಕಡತಗಳು ಅಲ್ಲಿಗೆ ಹೋಗಿದೆ ಇದು ಮತ್ತೆ ಬರುವುದಿಲ್ಲ ಎಂದು ಜಿ.ಪಂ.ಸ. ಕೊರಗಪ್ಪ ನಾಯ್ಕ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕರು ಬಫರ್ ಜಾಗದ ಮಂಜೂರಾತಿಗೆ ಸರಕಾರ ಅನುಮತಿ ನೀಡಿದೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿ ಬೇಕಿಲ್ಲ, ಇನ್ನು ಮುಂದೆ ಯಾವುದೇ ಕಡತವನ್ನು ಅರಣ್ಯ ಇಲಾಖೆಗೆ ಕಳುಹಿಸಬಾರದು, ಈಗಾಗಲೇ ಕಳುಹಿಸಿದ ಕಡತಗಳನ್ನು ಹಿಂದಕ್ಕೆ ತರಿಸಿ, ಮರುಪರಿಶೀಲನೆ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಬರಪೀಡಿತ ತಾಲೂಕು ಘೋಷಣೆಯಾಗಲಿ :
ಬೆಳ್ತಂಗಡಿ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಸಮಸ್ಯೆ ಕಾಡುತ್ತಿದ್ದು, ಇದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ನಿರ್ಣಯಿಸಲಾಯಿತು.
ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ 10 ಮಂದಿ ರೈತರು ಬೆಳೆದ ಭತ್ತದ ಬೆಳೆಗೆ ನೀರಿಲ್ಲದೆ ಫೈರನ್ನು ಕಟಾವು ಮಾಡಿ ದನಗಳಿಗೆ ಹಾಕಿದ ವಿಷಯವನ್ನು ಪ್ರಸ್ತಾಪಿಸಿದ ಶಾಸಕರು ಇಲಾಖೆಯ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಈ ಸಂದರ್ಭ ಇಲಾಖೆಯ ಅಧಿಕಾರಿ ತಿಲಕ್‌ಪ್ರಸಾದ್ ಸ್ಥಳೀಯ ಗ್ರಾಮ ಕರಣಿಕರು ಸ್ಥಳಕ್ಕೆ ಭೇಟಿ ನೀಡಿ, ತಹಶೀಲ್ದಾರರಿಗೆ ವರದಿ ನೀಡಬೇಕು ಪರಿಹಾರ ಕಂದಾಯ ಇಲಾಖೆ ಮೂಲಕ ವಿತರಣೆಯಾಗುತ್ತದೆ ಎಂದರು. ಆದರೆ ಇದಕ್ಕೆ ಒಪ್ಪದ ತಹಶೀಲ್ದಾರ್ ತಿಪ್ಪೇಸ್ವಾಮಿಯವರು ಕೃಷಿ ಇಲಾಖೆಯವರು ವರದಿ ನೀಡಬೇಕು ನಷ್ಟ ಎಷ್ಟು ಆಗಿದೆ ಎಂಬುದು ಗ್ರಾಮಕರಣಿಕರಿಗೆ ಗೊತ್ತಾಗುವುದಿಲ್ಲ ಎಂದರು. ಇಷ್ಟು ಸಮಯವಾದರೂ ಸ್ಥಳಕ್ಕೆ ಭೇಟಿ ನೀಡದಿರುವುದಕ್ಕೆ ಸಿಟ್ಟಾದ ಶಾಸಕರು ಕೂಡಲೇ ಸ್ಥಳ ಭೇಟಿ ಮಾಡುವಂತೆ ಸೂಚಿಸಿದರು.
ಆರೋಗ್ಯಾಧಿಕಾರಿ ಮೇಲೆ ಕ್ರಮ:
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ ಎಂದು ಯಾರಾದರೂ ವೈದ್ಯರು ಹೇಳಿದರೆ ತಾಲೂಕು ಆರೋಗ್ಯ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಶಾಸಕರು ಹೇಳಿದರು. ವೈದ್ಯರಿಗೆ ದುರಾಂಕಾರ ಇರಬಾರದು, ಸಲುಗೆಯ ದುರುಪಯೋಗವಾಗಬಾರದು, ನಾನು ಪೋನ್ ಮಾಡುವ ಸ್ಥಿತಿ ನಿರ್ಮಾಣವಾಗಬಾರದು, ಇನ್ನು ಮುಂದೆ ವೈದ್ಯರು ಸತಾಯಿಸುವಂತಿಲ್ಲ ಎಂದು ಎಚ್ಚರಿಸಿದರು.
ಬೆಳ್ತಂಗಡಿ ತಾಲೂಕಿನ ಎಳನೀರು ಪ್ರದೇಶದಲ್ಲಿ ಹಳೆ ವಿದ್ಯುತ್ ತಂತಿ ಬದಲಾವಣೆ ಮಾಡಬೇಕು, ತಾಲೂಕಿನ ಪ್ರತಿ ಮನೆಗೂ 3 ತಿಂಗಳ ಒಳಗೆ ವಿದ್ಯುತ್ ಹೋಗಬೇಕು, ಅರಣ್ಯ ಎಂಬ ನೆಪವೊಡ್ಡಿ ಲೈನ್ ಎಳೆಯಲು ಅಡ್ಡಿ ಮಾಡಬಾರದು ಎಂದು ಶಾಸಕರು ಸೂಚಿಸಿದರು. ಶಿಶಿಲ ಪರಿಸರದಲ್ಲಿ ಹಳೆ ವಿದ್ಯುತ್ ಲೈನ್ ಬದಲಾವಣೆಗೆ ಕೊರಗಪ್ಪ ನಾಯ್ಕ ಒತ್ತಾಯಿಸಿದರು. ಪರಿಶೀಲನೆ ನಡೆಸುವುದಾಗಿ ಮೆಸ್ಕಾಂ ಇಲಾಖಾಧಿಕಾರಿ ಭರವಸೆಯಿತ್ತರು.
ಗುರುವಾಯನಕೆರೆಯಿಂದ ಉಜಿರೆ ತನಕ ರಸ್ತೆಯಲ್ಲೆ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು, ಕಳೆಂಜ ಮತ್ತು ನಾವೂರು ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಜಾಗ, ಬಂದಾರು ಅಂಗನವಾಡಿ ಜಾಗದ ಜಂಟೀ ಸರ್ವೆ, ಉಜಿರೆ ಬಿ.ಸಿ.ಎಂ. ಹಾಸ್ಟೇಲ್ ಜಾಗ ಸರ್ವೇ, ತಾಲೂಕಿಗೆ 42 ಹೆಚ್ಚುವರಿ ಸರಕಾರಿ ಬಸ್ಸಿನ ಬೇಡಿಕೆ, ಅಂಟ್ರಿಂಜ 5 ಪ.ಜಾತಿ ಕುಟುಂಬಗಳಿಗೆ ಜಾಗ ಮಂಜೂರು, ಕುಡಿದು ಬರುವ ಕೊಕ್ಕಡ ಪಶುವೈದ್ಯರ ಬದಲಾವಣೆ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು. ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಬೆಳ್ತಂಗಡಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟಕ್ಕೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಬಂದಿರುವುದಕ್ಕೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.