ಇನ್ನು ಮುಂದೆ ಹಳ್ಳಿಯಲ್ಲಿ ಒಬ್ಬ ಪೊಲೀಸ್ ಎಸ್.ಐ. ಶೈಲಿಯಲ್ಲಿ ಕರ್ತವ್ಯ ! : ಎಸ್.ಪಿ ಗುಲಾಬ್ ರಾವ್ ಘೋಷಣೆ

Advt_NewsUnder_1
Advt_NewsUnder_1
Advt_NewsUnder_1

dalithara kundu korate copyದಲಿತರ ಕುಂದು ಕೊರತೆ ಆಲಿಕೆ ಸಭೆ

* ಗ್ರಾಮಕ್ಕೊಬ್ಬ ಪೊಲೀಸ್ ಸಿಬ್ಬಂದಿ ನೇಮಕ
* ಎಲ್ಲಾ ದೂರುಗಳನ್ನೂ ಅವರಲ್ಲೇ ಹೇಳಿಕೊಳ್ಳಬಹುದು
* ಗ್ರಾಮದಲ್ಲೇ ಅವರಿಗೆ ವಾಸ್ತವ್ಯ
* ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ
ಪ್ರಾಯೋಗಿಕ ಅನುಷ್ಠಾನ
* ನಂತರ ಎಲ್ಲಾ ಠಾಣೆಗಳಲ್ಲಿ ಆರಂಭ
* ಕಳೆಂಜದಲ್ಲಿ ಅಕ್ರಮ ಸಾರಾಯಿ ಅಡ್ಡೆ
* ವಿದ್ಯಾರ್ಥಿಗೆ ಮದ್ಯ ಕುಡಿಸಿದ ಪ್ರಕರಣ
* ಪೆರಿಯಶಾಂತಿ ಬಳಿ ಬ್ರಹ್ಮಕಲಶದ ಹೆಸರಿನಲ್ಲಿ ಚಂದಾ ಎತ್ತುವ ದಂಧೆ
* 1574 ಎಕರೆ ಡಿಸಿ ಮನ್ನಾಭೂಮಿಯಲ್ಲಿ 990 ಎಕ್ರೆ ಮಾತ್ರ
ದಲಿತರಿಗೆ ನೀಡಲಾಗಿದೆ.

ಬೆಳ್ತಂಗಡಿ: ಮಾರ್ಚ್ ತಿಂಗಳಿನಿಂದ ಹಳ್ಳಿಗೊಬ್ಬ ಪೊಲೀಸ್ ಸಿಬ್ಬಂದಿ ಎಂಬ ನೆಲೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಿದ್ದು ಅವರು ಅದೇ ಗ್ರಾಮದಲ್ಲಿ ವಾಸ್ತವ್ಯವನ್ನೂ ಹೂಡಿ ಗ್ರಾಮದ ಯಾವುದೇ ಸಮಸ್ಯೆಯ ಬಗ್ಗೆ ದೂರು ಆಲಿಸಬಹುದಾಗಿದೆ. ಅವರು ಹಳ್ಳಿಯಲ್ಲಿ ಎಸ್.ಐ ಇರುವಂತೆ ಕಾರ್ಯನಿರ್ವ ಹಿಸಲಿದ್ದಾರೆ. ಈ ಯೋಜನೆಯನ್ನು ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಿದ್ದು ಮುಂದಕ್ಕೆ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಘೋಷಿಸಿದರು.
ಫೆ. 26 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ದಲಿತರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಅವರು ಮಾತನಾಡಿದರು.
ಪೊಲೀಸರನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ಉದ್ಧೇಶ ನಮ್ಮ ಇಲಾಖೆಗಿದೆ. ಜನತೆಗೆ ಪೊಲೀಸರು ಸುಲಭವಾಗಿ ಸಿಗುವಂತಾಗಬೇಕು. ಆ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ ಎಂದರು.
ಅಕ್ರಮ ಸಾರಾಯಿ ಮತ್ತು ಏರ್‌ಗನ್ ಪ್ರಕರಣ ಪ್ರತಿಧ್ವನಿ:
ಕಳೆಂಜ ಗ್ರಾಮದಲ್ಲಿ ಅಕ್ರಮ ಸಾರಾಯಿ ಅಡ್ಡೆಗಳು ಕಾರ್ಯಾಚರಿಸುತ್ತಿದ್ದು ಫೆ. 20 ರಂದು ಗ್ರಾಮದಲ್ಲಿ ಬಾಲಕನೋರ್ವನಿಗೆ ಮೋಹನ್ ಎಂಬವರು ಅಕ್ರಮವಾಗಿ ಮದ್ಯ ಕುಡಿಸಿದ ಘಟನೆ ನಡೆದಿದ್ದು ರಸ್ತೆ ಬದಿ ಬಿದ್ದುಕೊಂಡಿದ್ದ ಬಾಲಕನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಬಾಲಕ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಶಾಲೆಗೆ ಹೋಗಲೂ ಭಯಪಡುತ್ತಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಿದರೂ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಲ್ಲ. ಅಲ್ಲದೆ ಇಬ್ಬರು ಅವರಿಗೆ ನೆರವು ನೀಡುವ ಕೆಲಸ ಕೂಡ ಮಾಡಿದ್ದಾರೆ. ಅವರನ್ನೂ ಆರೋಪಿಗಳೆಂದು ಪರಿಗಣಿಸಿ ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕು. ದಲಿತ ಮುಖಂಡರ ಹೆಸರಿನಲ್ಲಿ ವಿಶ್ವನಾಥ ಎಂಬವರು ಪಂಚಾತಿಕೆ ಮಾಡಿ ಪ್ರಕರಣ ಮುಗಿಸಲು ಸಂಚು ರೂಪಿಸಿದ್ದು ಅಂತಹ ಮಧ್ಯವರ್ತಿಗಳಿಗೆ ಅವಕಾಶ ಕೊಡಬಾರದು ಎಂಬುದಾಗಿ ಸಭೆಯಲ್ಲಿ ಒತ್ತಾಯಿಸಲಾಯಿತು. ಶ್ರೀಧರ ಕಳೆಂಜ, ಚಂದು ಎಲ್, ಬಿ.ಕೆ ವಸಂತ್, ಬೇಬಿ ಸುವರ್ಣ ಮೊದಲಾದವರು ಈ ವಿಚಾರವಾಗಿ ವಾದ ಮಂಡಿಸಿದರು. ಬೆಳಾಲು ಗ್ರಾಮದ ಕೊಲ್ಪಾಡಿ ಎಂಬಲ್ಲಿ ವೇದಾ ವತಿ ಎಂಬ ಮಹಿಳೆಗೆ ಶ್ರೇಯಸ್, ಧರ್ಣಪ್ಪ ಗೌಡ
ಮೊದಲಾದವರು ಏರ್‌ಗನ್ ತೋರಿಸಿ ಜೀವಬೆದರಿಕೆಯೊಡ್ಡಿದ್ದಲ್ಲದೆ ಅದರಿಂದ ಸ್ಪೋಟವನ್ನೂ ನಡೆಸಿ ಕೊಲೆಯತ್ನ ನಡೆಸಿದ್ದಾರೆ. ಗೋಲಿ ಗುರಿ ತಪ್ಪಿ ನಾಯಿಗೆ ತಗುಲಿದೆ. ಅಲ್ಲದೆ ಈ ಕುಟುಂಬಕ್ಕೆ ಜಾಗದ ತಕರಾರು ಇದ್ದು ನಿರಂತರ ಕಿರುಕುಳ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೂಡ ಸಭೆಯಲ್ಲಿ ವ್ಯಕ್ತವಾಯಿತು. ಪ್ರಕರಣದ ಬಗ್ಗೆ ಧರ್ಮಸ್ಥಳ ಠಾಣೆಗೆ ತಿಳಿದಿದ್ದರೂ ಆರೋಪಿಯ ರಕ್ಷಣೆ ನಡೆಯುತ್ತಿದೆ ಎಂದು ಸೇಸಪ್ಪ ಅವರು ದೂರಿದರು. ಈ ಸಂದರ್ಭ ಮಾತನಾಡಿದ ಶೇಖರ್ ಎಲ್ ಅವರು, ಜನತೆಗೆ ನ್ಯಾಯ ದೊರಕಿ ಅನ್ಯಾಯವೆಸಗುವವರಿಗೆ ಭಯ ಹುಟ್ಟಬೇಕಾದ ಠಾಣೆಯಲ್ಲಿ ಪಂಚಾತಿಕೆ ಕಟ್ಟೆಯಾಗ ಬಾರದು ಎಂದರು. ಅದರ ಜೊತೆಗೆ ಉಜಿರೆ ಕೇಂದ್ರೀಕೃತವಾಗಿ ಸಂಚಾರಿ ಠಾಣೆ ಮಂಜೂರುಗೊಂಡದ್ದಕ್ಕೆ ಅಭಿನಂದನೆ ಕೂಡ ಸಲ್ಲಿಸಿದರು. ಉಜಿರೆಯಿಂದ ಗುರುವಾಯನಕೆರೆವರೆಗೆ ವಾಹನ ದಟ್ಟನೆ ಇದ್ದು ಅಕ್ರಮ ಅಂಗಡಿ ಮುಂಗಟ್ಟುಗಳು ರಸ್ತೆಯಂಚಿಗೇ ಬಂದಿರುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಕಂದಾಯ ಇಲಾಖೆ ಈ ಬಗ್ಗೆ ಶೀಘ್ರ ಕ್ರಮಕ್ಕೆ ಮುಂದಾಗಬೇಕು. ಸಂಚಾರಿ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ನಕಲಿ ಬ್ರಹ್ಮಕಲಶೋತ್ಸವ ಕಲೆಕ್ಷನ್ ಆರೋಪ:
ಪೆರಿಯಶಾಂತಿ ಎಂಬಲ್ಲಿ ಕೇಸರಿ ಶಾಲು ಹಾಕಿದ ಯುವಕರ ಪಡೆಯೊಂದು ಟೂರಿಸ್ಟ್ ಹಾಗೂ ಖಾಸಗಿ ವಾಹನಗಳನ್ನು ತಡೆದು ಬ್ರಹ್ಮಕಲಶೋತ್ಸವ ಹೆಸರಿನಲ್ಲಿ ಜನರನ್ನು ಸುಳಿಗೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಚಂದು ಎಲ್ ದೂರಿದರು. ಇದಕ್ಕೆ ಆ ವ್ಯಕ್ತಿಗಳು ಪರವಾನಿಗೆ ಪಡೆದಿದ್ದಾರೆಯೇ. ಅಥವಾ ಅವರು ಚೀಟಿ ನೀಡುವ ಜಾಗದಲ್ಲಿ ಬ್ರಹ್ಮಕಲಶೋತ್ಸವ ಇದೆಯೇ ಎಂಬುದು ತನಿಖೆಯಾಗಬೇಕಿದೆ. ಇಲ್ಲಿ ವಾಹನಗಳನ್ನು ನಿಲ್ಲಿಸಲಾಗುವುದರಿಂದ ಅಪಘಾತಗಳು ನಡೆದರೆ ಅದಕ್ಕೆ ಹೊಣೆ ಯಾರು ಎಂಬುದಾಗಿ ಪೊಲೀಸ್ ಇಲಾಖೆ ಉತ್ತರ ನೀಡಬೇಕಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಎಸ್‌ಪಿ ಯವರು ಯಾರೇ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಹಣ ಸಂಗ್ರಹಕ್ಕೆ ಯಾರಿಗೂ ಅನುಮಿತ ಇಲ್ಲ. ಇದು ಕಾನೂನು ಬಾಹಿರ ಎಂದರು.
ಡಿ.ಸಿ ಮನ್ನಾ ಭೂಮಿ: ತಾಲೂಕಿನಲ್ಲಿ 1574 ಎಕರೆ ಡಿಸಿ ಮನ್ನಾ ಭೂಮಿಯ ಪೈಕಿ 990 ಎಕ್ರೆ ಮಾತ್ರ ದಲಿತರಿಗೆ ಮೀಸಲಿಡಲಾಗಿದೆ ಎಂದು ಕಂದಾಯ ಇಲಾಖೆ ವರದಿ ನೀಡಿದೆ. ದಲಿತರ ಭೂಮಿ ಅತಿಕ್ರಮಿಸಿದರೆ ಅವರ ವಿರುದ್ಧ ಎಟ್ರಾಸಿಟಿ ಕೇಸು ದಾಖಲಿಸಬೇಕೆಂದಿದೆ. ಹಾಗಾದರೆ ಇಲ್ಲೇಕೆ ತಡ ಎಂದು ಶೇಖರ್ ಲಾಯಿಲ ಒತ್ತಾಯಿಸಿದರು. ಕೇರಳ ಮುಖ್ಯಮಂತ್ರಿ ಕಾರ್ಯಕ್ರಮದ ಪ್ರಚಾರಾರ್ಥ ಬೆಳ್ತಂಗಡಿಯಾಧ್ಯಂತ ಅನುಮತಿ ಪಡೆದು ಅಳವಡಿಸಿದ್ದ ಬ್ಯಾನರ್‌ಗಳಿಗೆ ಹಾನಿ ಮಾಡಿದವರನ್ನು ಪತ್ತೆಹಚ್ಚಿ ಅವರನ್ನು ಬಂಧಿಸಬೇಕೆಂದೂ ಅವರು ಈ ವೇಳೆ ಆಗ್ರಹಿಸಿದರು.
ಪಂಚಾಯತ್ ಬೆಂಕಿ ಪ್ರಕರಣದ ಬಗ್ಗೆ ಪ್ರಶ್ನೆ: ಲಾಯಿಲ ಪಂಚಾಯತ್ ಬೆಂಕಿ ದುರಂತದ ಬಗ್ಗೆ ಪ್ರಸ್ತಾಪಿಸಿದ ನಾಗರಾಜ್ ಎಸ್ ಲಾಯಿಲ ಅವರು, ಘಟನೆ ಬಗ್ಗೆ ಮೆಸ್ಕಾಂ ಮತ್ತು ಟೆಲಿಕಾಂ ಇಲಾಖೆ ಶಾರ್ಟ್ ಸರ್ಕ್ಯುಟ್ ಅಲ್ಲ ಎಂದು ಲಿಖಿತ ಉತ್ತರ ನೀಡಿದೆ. ಹಾಗಾದರೆ ಆಡಿಟ್ ಹಿಂದಿನ ದಿನ ಸರಕಾರಿ ಕಡತಕ್ಕೆ ಬೆಂಕಿ ಹಚ್ಚಿದವರು ಯಾರು ಎಂದು ಮರುತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಭಾಗವಹಿಸಿದ ದಲಿತ ಮುಖಂಡರುಗಳು: ಸಭೆಯಲ್ಲಿ ಚಂದು ಎಲ್, ಶೇಖರ್ ಲಾಯಿಲ, ವೆಂಕಣ್ಣ ಕೊಯ್ಯೂರು, ವಸಂತ ಬಿ.ಕೆ, ಶೇಖರ್ ಕುಕ್ಕೇಡಿ, ನಾಗರಾಜ್ ಎಸ್ ಲಾಯಿಲ, ಜಯಾನಂದ ಕೊಯ್ಯೂರು, ಬೇಬಿ ಸುವರ್ಣ, ಮೊದಲಾದವರು ಸಕ್ರೀಯವಾಗಿ ಭಾಗವಹಿಸಿದರು. ಸಭೆಯಲ್ಲಿ ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ. ಆರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್,ತಾ.ಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಿ. ಆರ್ ನರೇಂದ್ರ, ಕಂದಾಯ ಇಲಾಖೆ ಪ್ರಥಮ ದರ್ಜೆ ಸಹಾಯಕ ಗೋವಿಂದ್ ನಾಯ್ಕ್, ಸಬ್‌ಇನ್ಸ್‌ಪೆಕ್ಟರ್ ರವಿ, ಸರ್ಕಲ್‌ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್, ದಲಿತ ದೌರ್ಜನ್ಯ ತಡೆ ಸಮಿತಿ ಜಿಲ್ಲಾ ಸಮಿತಿ ಸದಸ್ಯ ಸಂಜೀವ ನೆರಿಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.