ಕುದುರೆಮುಖ ಉದ್ಯಾನವನ ವ್ಯಾಪ್ತಿಯ ಸಮಸ್ಯೆಗಳ ನಿವಾರಣೆಗೆ ಬೆಳ್ತಂಗಡಿಯಲ್ಲಿ ವಿಶೇಷ ಸಭೆ: ಸಿಇಒ ರವಿ

CS elaneeru beti copyಬೆಳ್ತಂಗಡಿ : ಮಲವಂತಿಗೆ ಗ್ರಾಮ ವ್ಯಾಪ್ತಿಯ ಎಳನೀರು, ಗುತ್ಯಡ್ಕ, ಬಡಮಣೆ, ಬಂಗಾರುಪಲ್ಕೆ ಪ್ರದೇಶಕ್ಕೆ ನೂತನ ರಸ್ತೆ, ವಿದ್ಯುತ್‌ಲೈನ್, ಕುಡಿಯುವ ನೀರಿನ ಪೈಪ್‌ಲೈನ್ ಮೊದಲಾದ ಮೂಲಭೂತ ಸೌಕರ್ಯ ಒದಗಿಸಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಇಲಾಖೆಯಿಂದ ತೊಡಕಾಗುತ್ತಿದ್ದು, ಇದರ ಪರಿಹಾರಕ್ಕೆ ಮುಂದಿನ ತಿಂಗಳಲ್ಲಿ ಬೆಳ್ತಂಗಡಿಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಎಂ.ಆರ್ ರವಿ ಹೇಳಿದರು.
ಅವರು ಫೆ.28ರಂದು ಮಲವಂತಿಗೆ ಗ್ರಾಮದ ಎಳನೀರು ಸಮುದಾಯ ಭವನದಲ್ಲಿ ಆ ಭಾಗದ ವಿವಿಧ ಇಲಾಖೆಗಳಿಂದ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಪರಿಶೀಲನೆ ಮತ್ತು ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ಐಟಿಡಿಪಿ ಇಲಾಖೆಯಿಂದ ಗಿರಿಜನ ಕಾಲನಿಯ ಮೂರು ರಸ್ತೆಗಳ ಕಾಂಕ್ರೀಟೀಕರಣಕ್ಕೆ ರೂ.887ಲಕ್ಷದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ದಿಡುಪೆ-ತಿಮ್ಮಯಕಂಡ ಕಾಲನಿ ರಸ್ತೆ ನಿರ್ಮಾಣಕ್ಕೆ ವನ್ಯಜೀವಿ ಇಲಾಖೆಯ ಪರವಾನಿಗೆ ಬೇಕು, ಬಂಗಾರಪಲ್ಕೆ ರಸ್ತೆಗೆ ರೂ.10ಲಕ್ಷ ಇಟ್ಟಿದ್ದು, ಇದನ್ನು ಅರಣ್ಯ ಇಲಾಖೆ ತಿರಸ್ಕರಿಸಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಕಾಮಗಾರಿ ಮಾಡಲು ಇಲಾಖೆ ಅನುಮತಿ ಬೇಕಾಗಿದೆ ಎಂದು ಅಧಿಕಾರಿ ಹೇಮಲತಾ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಮಾಜಿ ಸದಸ್ಯ ಅರುಣ್‌ಕುಮಾರ್ ಬಂಗಾರುಪಲ್ಕೆಯಲ್ಲಿ 700 ಮೀಟರ್ ರಸ್ತೆ ಮಾತ್ರ ಅರಣ್ಯ ಇಲಾಖೆ ಜಾಗದಲ್ಲಿ ಹಾದು ಹೋಗುತ್ತದೆ ಉಳಿದ ಭಾಗ ಕಂದಾಯ ಭೂಮಿಯಲ್ಲಿ ಹೋಗುತ್ತದೆ. ಅರಣ್ಯ ಬಿಟ್ಟು ಉಳಿದ ಭಾಗವನ್ನು ಕಾಂಕ್ರೀಟಿಕರಣ ಮಾಡಿ ಎಂದು ಒತ್ತಾಯಿಸಿದರು. ದಿಡುಪೆ- ಎಳನೀರು 9 ಕಿ.ಮೀ ರಸ್ತೆ ಮಂಜೂರು ಮಾಡಬೇಕು ಎಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ. ಹತ್ತು ಮಂದಿ ಜಿಲ್ಲಾಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಭರವಸೆ ನೀಡಿ ಹೋಗಿದ್ದಾರೆ ಆದರೆ ಅದು ಇಂದಿಗೂ ಈಡೇರಿಲ್ಲ ಇದಕ್ಕೆ ಅರಣ್ಯ ಇಲಾಖೆಯ ಕಾನೂನು ಅಡ್ಡಿಯಾಗುತ್ತಿದೆ ನಾವೀಗ ಬೆಳ್ತಂಗಡಿಗೆ ಹೋಗಬೇಕಾದರೆ 120 ಕಿ.ಮೀ ಸುತ್ತು ಬಳಸಿ ಹೋಗಬೇಕು ಎಂದು ಜನರ ಸಮಸ್ಯೆಯನ್ನು ವಿವರಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು ವ್ಯಾಪ್ತಿ ಪ್ರದೇಶದ ಮನೆಗಳಿಗೆ ಅಲ್ಲಿಯ ಮೆಸ್ಕಾಂನವರು ಕಂಬ ಹಾಕಿ ವಿದ್ಯುತ್ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇದು ರಾಷ್ಟ್ರೀಯ ಉದ್ಯಾನವನ ಅವರ ಪರವಾನಿಗೆ ಬೇಕು ಎನ್ನುತ್ತಾರೆ. ನಿಯಮವಿದ್ದರೆ ಎರಡು ಕಡೆಗೂ ಒಂದೇ ಇರಬೇಕಿತ್ತು ಎಂದು ಅರುಣ್‌ಕುಮಾರ್, ಗೋಪಾಲ ಗೌಡ, ಗಣೇಶ್ ಮೊದಲಾದವರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ರವಿ ಅವರ
ಗಮನಕ್ಕೆ ತಂದರು. ಈ ಸಂದರ್ಭ ಮಾತನಾಡಿದ ವನ್ಯಜೀವಿ ವಲಯಾರಣ್ಯಾಧಿಕಾರಿ ಉದ್ಯಾನವನದೊಳಗೆ ಯಾವುದೇ ಚಟುವಟಿಕೆ ನಡೆಯಬೇಕಾದರೂ ಇದಕ್ಕೆ ನ್ಯಾಷನಲ್ ವೈಲ್ಡ್‌ಲೈಫ್‌ನ ಅನುಮತಿ ಬೇಕು ಎಂದರು. ಅರಣ್ಯ ಹಕ್ಕು ಕಾಯ್ದೆಯಲ್ಲಿ ರಸ್ತೆಗೆ ಅವಕಾಶ ಇದೆ ಎಂದು ಅರುಣ್‌ಕುಮಾರ್ ಹೇಳಿದಾಗ ರಸ್ತೆ ನಿರ್ಮಾಣಕ್ಕೆ ಅವಕಾಶ ಇಲ್ಲ, ಕಾಲನಿ ರಸ್ತೆಯಾದರೆ ಮೊದಲೇ ಅನುಮತಿಗೆ ಅರ್ಜಿ ಕೊಡಬೇಕು ಎಂದು ಅರಣ್ಯಾಧಿಕಾರಿ ತಿಳಿಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಯಾವ ರೀತಿ ವಿದ್ಯುತ್ ಲೈನ್‌ಗೆ ಅನುಮತಿ ನೀಡಿದ್ದಾರೆ ಎಂಬುದರ ಮಾಹಿತಿ ಪಡೆದುಕೊಳ್ಳುವಂತೆ ಮೆಸ್ಕಾಂ ಸ.ಕಾ. ಇಂಜಿನಿಯರ್‌ಗೆ ಸಿ.ಎಸ್ ಸೂಚನೆ ನೀಡಿದರು. ಎಳನೀರು ಗುತ್ಯಡ್ಕ ಸೇರಿದಂತೆ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕಾನೂನುಗಳು ಅಡ್ಡಿಯಾಗುತ್ತಿದೆ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಾರ್ಚ್ ತಿಂಗಳಲ್ಲಿ ಬೆಳ್ತಂಗಡಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸುವುದಾಗಿ ಅವರು ಘೋಷಿಸಿದರು.
ಕುಡಿಯುವ ನೀರು ಸಮಸ್ಯೆ: ಕಳೆದ 3 ವರ್ಷದ ಹಿಂದೆ ನಿರ್ಮಿಸಲಾದ ಅಂಗನವಾಡಿ, ಸಮುದಾಯ ಭವನ, ಆಸ್ಪತ್ರೆ ಕಟ್ಟಡ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂದು ದಿನೇಶ್ ಗೌಡ ದಿಡುಪೆ ಮತ್ತು ಅರುಣ್‌ಕುಮಾರ್ ತಿಳಿಸಿದರು. ಕಟ್ಟಡದ ಹಿಂದೆ ಬರೆ ಇದ್ದುದರಿಂದ ಸಮಸ್ಯೆ ಇತ್ತು ಇದನ್ನು ತಾ.ಪಂ, ಗ್ರಾ.ಪಂ. ಅನುದಾನ ಇಟ್ಟು ತೆಗೆಸಲಾಗಿದೆ. ಈಗ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ತಿಳಿಸಿದರು. ಇಲ್ಲಿ ಪ್ರಕೃತಿಕವಾಗಿ ಝರೀ ನೀರಿದ್ದು ಅಲ್ಲಿಗೆ ಒಡ್ಡು ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಬಹುದು ಎಂದು ಗ್ರಾ.ಪಂ. ಸದಸ್ಯ ಪ್ರಕಾಶ್ ಕುಮಾರ್ ಮತ್ತು ತಾ.ಪಂ. ಸದಸ್ಯ ಜಯರಾಮ ಸಲಹೆಯಿತ್ತರು. ಇದರ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಕೊಡಿ ಎಂದು ಇಂಜಿನಿಯರ್ ಕನಿಷ್ಕ ಅವರಿಗೆ ಸಿ.ಎಸ್. ಸೂಚನೆ ನೀಡಿದರು. ಜಿ.ಪಂ. ಸದಸ್ಯೆ ಸೌಮ್ಯಲತಾ ರೂ.1ಲಕ್ಷ ತಮ್ಮ ಅನುದಾನ ನೀಡುವುದಾಗಿ ಭರವಸೆಯಿತ್ತರು. ಇಲ್ಲಿ ಕೊಳವೆ ಬಾವಿ ಬೇಡ ಉದ್ಯೋಗ ಖಾತ್ರಿಯಲ್ಲಿ ತೆರೆದ ಬಾವಿಗೆ ಅವಕಾಶ ಇದೆ. ಇಲ್ಲಿ ಎಷ್ಟು ಮಂದಿಗೆ ಬಾವಿ ಬೇಕು ಎಂದು ಮನೆ, ಮನೆಗೆ ಹೋಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪಿಡಿಒ ಸಂಜೀವ ನಾಯ್ಕ್ ಅವರಿಗೆ ಸಿ.ಓ. ಸೂಚನೆ ನೀಡಿದರು.
ಗುತ್ಯಡ್ಕಕ್ಕೆ ಅಂಗನವಾಡಿ ಕಟ್ಟಡ: ಗುತ್ಯಡ್ಕದಲ್ಲಿ ಅಂಗನವಾಡಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದಾಗ ಇಲ್ಲಿಗೆ ನಬಾರ್ಡ್‌ನಿಂದ ಈಗಾಗಲೇ ರೂ.9.17 ಲಕ್ಷ ಮಂಜೂರಾಗಿದೆ. ನರೇಗಾದಲ್ಲಿ ರೂ.5ಲಕ್ಷ ಸೇರಿ ಒಟ್ಟು ರೂ.13ಲಕ್ಷದಲ್ಲಿ ಕಟ್ಟಡ ನಿರ್ಮಿತಿ ಕೇಂದ್ರದವರು ನಿರ್ಮಿಸಲಿದ್ದಾರೆ ಇದಕ್ಕೆ ಊರಿನವರು ಜಾಗ ತೋರಿಸಿ ಕೊಡಿ ಎಂದು ಸಿ.ಎಸ್. ಹೇಳಿದರು. ಜಾಗ ತೋರಿಸಿಕೊಡುವುದಾಗಿ ಊರವರು ತಿಳಿಸಿದರು.
ಕುದುರೆಮುಖ ರಕ್ಷಿತಾರಣ್ಯದಿಂದ ಬಿಟ್ಟು ಹೋಗುವವರ ಜಾಗದಲ್ಲಿರುವ ಕೃಷಿಯನ್ನು ಅವರು ಜಾಗ ಬಿಟ್ಟು ಹೋಗುವ ಮೊದಲೇ ಅವರ ಎದುರಿಗೇ ಕಡಿಯಬೇಡಿ ಇದು ಕೃಷಿ ಮಾಡಿದವನಿಗೆ ನೋವು ತರುವ ಕಾರ್ಯ ಎಂದು ಸದಸ್ಯ ಪ್ರಕಾಶ್ ಕುಮಾರ್ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು. ಅರಣ್ಯ ಇಲಾಖೆಯವರು ಜಾಗದ ನೋಂದಾವಣೆಯಾದ ಕೂಡಲೇ ಬಂದು ಅವರ ಜಾಗದ ಕೃಷಿ ಕಡಿದು ಹಾಕುತ್ತಾರೆ. ಆದರೆ ಅದನ್ನು ಬೆಳೆಸಿದವರಿಗೆ ಹಣ ಸಿಕ್ಕಿದರೂ ಮಾಡಿದ ಕೃಷಿ ಕಡಿಯುವಾಗ ಮನಸ್ಸಿಗೆ ನೋವಾಗುತ್ತದೆ ಆದ್ದರಿಂದ ಅವರು ಬಿಟ್ಟು ಹೋದ ಬಳಿಕ ಕಡಿಯಿರಿ ಎಂದರು. ಇದಕ್ಕೆ ಸಮ್ಮತಿಸಿದ ಸಿ.ಎಸ್. ಅವರಿಗೆ ಬೆಳೆದ ಬೆಳೆಯನ್ನು ತೆಗೆಯುವ ತನಕ ಅವಕಾಶ ನೀಡಿ ಜಾಗ ಬಿಟ್ಟು ಹೋದ ಬಳಿಕ ಕಡಿಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯುತ್ ಸಮಸ್ಯೆ: ಎಳನೀರು, ಗುತ್ಯಡ್ಕ, ಬಂಗೇರ ಪಲ್ಕೆ, ಬಡಮಣೆ ಪ್ರದೇಶದಲ್ಲಿ ಲೋವೋಲ್ಟೆಜ್ ಸಮಸ್ಯೆ ಬಗ್ಗೆ ಗ್ರಾಮಸ್ಥರು ಹಾಗೂ ಗ್ರಾ.ಪಂ. ಸದಸ್ಯ ಪ್ರಕಾಶ್ ಸಿ.ಎಸ್. ಗಮನಕ್ಕೆ ತಂದರು. ಲೊವೋಲ್ಟೆಜ್ ಸಮಸ್ಯೆಯನ್ನು ಎರಡು ತಿಂಗಳಲ್ಲಿ ಬಗೆಹರಿಸುವುದಾಗಿ ತಿಳಿಸಿದ ಮೆಸ್ಕಾಂ ಸ.ಕಾ. ಇಂಜಿನಿಯರ್ ಶಿವಶಂಕರ್ ಎರಡು ಟಿ.ಸಿ.ಗಳನ್ನು ಇಲ್ಲಿಗೆ ಹಾಕಿಸುವುದಾಗಿ ಹೇಳಿದರು. ಬಂಗಾರಪಲ್ಕೆಯಲ್ಲಿ 10 ಮಲೆಕುಡಿಯ ಮನೆಗಳಿದ್ದು, ಇಲ್ಲಿಗೆ ವಿದ್ಯುತ್ ಒದಗಿಸುವ ಕುರಿತು ದಿನೇಶ್ ಗೌಡ ಪ್ರಸ್ತಾಪಿಸಿದರು. ಇಲ್ಲಿ ಸೋಲಾರ್ ವರ್ಕ್ ಆಗುವುದಿಲ್ಲ ಮಿನಿ ವಿದ್ಯುತ್ ಘಟಕ ನಿರ್ಮಿಸಿ ಕೊಡಿ ಎಂದು ಅರಣ್‌ಕುಮಾರ್ ಒತ್ತಾಯಿಸಿದಾಗ ಪರಿಶೀಲನೆಗೆ ಆದೇಶಿಸಲಾಯಿತು.
ಎಳನೀರಿನ ಮಾದಲ್‌ಕಟ್ಟೆ ಶ್ರೀವರ್ಮ ಶೆಟ್ಟಿಯವರು ತನ್ನ ಮನೆ ಬಳಿ ನಿರ್ಮಿಸಿದ ರಸ್ತೆಯಿಂದಾಗಿ ಮಣ್ಣು ಕುಸಿಯುತ್ತಿರುವುದನ್ನು ಸಿ.ಎಸ್. ಗಮನಕ್ಕೆ ತಂದರು. ಇಲ್ಲಿ ತಡೆಗೋಡೆ ನಿರ್ಮಿಸಬೇಕು ಎಂಬ ಜನರ ಬೇಡಿಕೆಯಂತೆ ಇಲ್ಲಿಗೆ ತಡೆಗೋಡೆ ನಿರ್ಮಿಸುವಂತೆ ಸಿ.ಎಸ್. ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಳನೀರು ಪ್ರದೇಶಕ್ಕೆ ಪಡಿತರ ವ್ಯವಸ್ಥೆ ಬಗ್ಗೆ ಸುಕುಮಾರ್, ಇಲ್ಲಿ ಕೆಲವರ ಜಾಗ ತಂದೆ, ಅಜ್ಜನ ಹೆಸರಿನಲ್ಲಿದ್ದು, ಸರಿಯಾದ ದಾಖಲೆ ಪತ್ರ ಇಲ್ಲದೆ ಸರಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತಿರುವ ಕುರಿತು ಸುಕುಮಾರ್, ಮಲವಂತಿಗೆ ಪೂರ್ಣ ಕಾಲಿಕ ಗ್ರಾಮಕರಣಿಕರ ಬೇಡಿಕೆಯನ್ನು ದಿನೇಶ್ ಗೌಡ ಸಲ್ಲಿಸಿದರು. ಎಳನೀರು ಪ್ರದೇಶದಲ್ಲಿ 2 ಸಾರ್ವಜನಿಕ ಶೌಚಾಲಯ, ಸ್ಮಶಾನಕ್ಕೆ ಜಾಗ, ಮೊಬೈಲ್ ಟವರ್, ನಿವೇಶನ ರಹಿತರಿಗೆ ಜಾಗ ಖಾದಿರಿಸುವ ಕುರಿತು ಸದಸ್ಯ ಪ್ರಕಾಶ್ ಬೇಡಿಕೆ ಸಲ್ಲಿಸಿದರು. ಸಂಚಾರಿ ಪಡಿತರ ಬಗ್ಗೆ ಪರಿಶೀಲನೆ ಮಾಡುವುದಾಗಿ ತಹಶೀಲ್ದಾರ್ ತಿಳಿಸಿದರು.
ವೇದಿಕೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಜಿ.ಪಂ. ಸದಸ್ಯೆ ಸೌಮ್ಯಲತಾ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯ ಜಯರಾಮ್, ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಪೂಜಾರಿ, ಉಪಾಧ್ಯಕ್ಷೆ ಲೀಲಾ, ಜಿ.ಪಂ. ಉಪಕಾರ್ಯದರ್ಶಿ ಉಮೇಶ್, ತಹಶೀಲ್ದಾರ್ ತಿಪ್ಪೇಸ್ವಾಮಿ, ತಾ.ಪಂ. ಕಾರ್ಯನಿರ್ವಾ ಹಣಾಧಿಕಾರಿ ಸಿ.ಆರ್. ನರೇಂದ್ರ, ಆರೋಗ್ಯಾದಿ ಕಾರಿ ಡಾ| ಕಲಾಮಧು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ, ಸಿಡಿಪಿಓ ಸರಸ್ವತಿ, ವಾರ್ತಾಧಿಕಾರಿ ಖಾದರ್ ಶಾ, ಸಮಾಜ ಕಲ್ಯಾಣಾಧಿಕಾರಿ ಮೋಹನ್‌ಕುಮಾರ್, ಐಟಿಡಿಪಿ ಅಧಿಕಾರಿ ಹೇಮಲತಾ, ನೆರವು ಘಟಕದ ಮಂಜುಳಾ, ಯೋಜನಾ ನಿರ್ದೇಶಕ ಲೋಕೇಶ್ ಉಪಸ್ಥಿತರಿದ್ದರು. ಕು| ಅಶ್ವಿನಿಯರ ಪ್ರಾರ್ಥನೆ ಬಳಿಕ ಪಿ.ಡಿ.ಒ. ಸಂಜೀವ ನಾಯ್ಕ್ ಸ್ವಾಗತಿಸಿದರು ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.