ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಅರೋಗ್ಯಾ ಧಿಕಾರಿ ಕಚೇರಿಯಲ್ಲಿ ಕಳೆದ 3 ವರ್ಷಗಳಿಂದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ಸೇವೆಯಲ್ಲಿರುವ ಶ್ರೀಮತಿ ಅಮ್ಮಿ ಎ ಅವರ ಸುದೀರ್ಘ 26 ವರ್ಷಗಳ ಸೇವಾ ಅವಧಿಯ ಕಾರ್ಯವೈಖರಿಯನ್ನು ಗುರುತಿಸಿ ದ. ಕ. ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ಜ. 26ನೇ ಗಣರಾಜ್ಯೋತ್ಸವದಂದು ಮಂಗಳೂರಿನಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ. ರಮಾನಾಥ ರೈ ಅವರು ಜಿಲ್ಲಾಧಿಕಾರಿ ಡಾ| ಜಗಧೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ಸಹಿತ ಜಿಲ್ಲೆಯ ಪ್ರಮುಖ ಅಧಿಕಾರಿಗಳ ಸಮ್ಮುಖ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿದರು. ಅಮ್ಮಿ ಅವರು ಬಂಟ್ವಾಳ ತಾಲೂಕು ಅರಳ ಬೆಂಗಿನಪದವು ಇಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಆರೋಗ್ಯ ಇಲಾಖೆಯ ಕರ್ತವ್ಯಕ್ಕೆ ಸೇರಿದವರು ಬಳಿಕ ವರ್ಗಾವಣೆಗೊಂಡು ನಡ ಗ್ರಾ. ಪಂಚಾಯತ್ಗೆ ಒಳಪಟ್ಟ ಕನ್ಯಾಡಿ 1 ಗ್ರಾಮದ ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 22 ವರ್ಷಗಳ ಕಾಲ ಇದೇ ಹುದ್ದೆಯಲ್ಲಿ ಕರ್ತವ್ಯ ಸಲ್ಲಿಸಿದ್ದರು. 2014 ರಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ಪದೋನ್ನತಿಗೊಂಡು ಪ್ರಸ್ತುತ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಸೇವಾ ಅವಧಿಯುದ್ದಕ್ಕೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಅವರು ಆ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.