ಉಜಿರೆ : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಬ್ರಾಯ ಚೊಕ್ಕಾಡಿ ಕಾವ್ಯಯಾನ ಕಾಣಿಸಿದ ಕವಿನಮನ

kavi ಉಜಿರೆಯಲ್ಲಿ ನಡೆಯುತ್ತಿರುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರ ಕಾವ್ಯಯಾನದ ವಿವಿಧ ಮಜಲುಗಳು ಪರಿಚಯಿಸಲ್ಪಟ್ಟವು. ಅವರ ಕಾವ್ಯದ ವಿಶೇಷತೆ ಬಿಂಬಿತವಾಯಿತು.
ಮಹತ್ವದ ಕಾವ್ಯಕಾಣ್ಕೆಗಳನ್ನು ನೀಡಿದ ಅವರನ್ನು ಗೌರವಿಸುವ ’ಕವಿ ನಮನ’ ಕಾರ್ಯಕ್ರಮ ಅರ್ಥಪೂರ್ಣ ಸಂವಾದಕ್ಕೆ ವೇದಿಕೆಯಾಯಿತು.
ಅವರು ಬರೆದ ಗೀತೆಗಳನ್ನು ಮಂಗಳೂರಿನ ರಂಗಭಾರತಿಯ ಕೆ.ವಿ. ರಮಣ್ ಗಾಯನ ರೂಪದಲ್ಲಿ ಪ್ರಸ್ತುತ ಪಡಿಸಿದರು. ಇಡೀ ಕಾರ್ಯಕ್ರಮವನ್ನು ಮಾತುಕತೆಯ ಮೂಲಕ ಅರ್ಥಪೂರ್ಣವಾಗಿ ನಿರ್ವಹಿಸಲಾಯಿತು. ಗಾಯನಕ್ಕಾಗಿ ಆರಿಸಿಕೊಳ್ಳಲಾದ ಹಾಡುಗಳ ಬರೆಯುವಿಕೆಯ ಹಿನ್ನಲೆ, ಕವಿಯ ವಿವಿಧ ಅನುಭವಗಳು ಮಾತುಕತೆಯ ಕೇಂದ್ರ ವಸ್ತುವಾಗಿದ್ದವು.
ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವದಿಂದ ಕವಿತೆ ಬೇರೆ, ಹಾಡುವಂತ ಕವಿತೆಯೇ ಬೇರೆ ಎನ್ನುವ ಭೇಧ ಹುಟ್ಟುಕೊಂಡಿದೆ. ಆದ್ದರಿಂದ ಹಾಡು ಬರೆಯುವುದು ಕೆಟ್ಟದ್ದು ಎನ್ನುವ ಭಾವನೆ ಮೂಡಿದೆ. ಇದರಿಂದ ನನ್ನನ್ನು ಬ್ರಾಂಡ್ ಮಾಡುವ ಕಾರ್ಯವೂ ನಡೆದಿದೆ ಎಂದು ಅಭಿಪ್ರಾಯಪಟ್ಟರು.
ನಾಡಗೀತೆ ಹಾಗೂ ರಾಷ್ಟ್ರಗೀತೆಗಳನ್ನು ಗಮನಿಸಿದಾಗ ವಿವಿಧ ಸ್ಥಳಗಳ ಹೆಸರು, ವ್ಯಕ್ತಿಯ ಹೆಸರುಗಳನ್ನು ಇಟ್ಟುಕೊಂಡು ಕವಿತೆ ಬರೆಯುವ ರೂಢಿ ಇತ್ತು. ಇದರಿಂದ ಹಲವಾರು ಚರ್ಚೆ, ವಿವಾದಗಳೂ ನಡೆದಿದ್ದವು. ಇದನ್ನು ಮುರಿದು ಕಟ್ಟುವ ಸಲುವಾಗಿಯೇ ’ಎಂಥಾ ಗುಣವೇ ಕನ್ನಡಾಂಬೆ’ ಕವನವನ್ನು ರಚಿಸಿದ್ದೇನೆ ಎಂದು ಹೇಳಿದರು. ನಂತರ ಈ ಕವಿತೆಯನ್ನು ಪ್ರಸ್ತುತ ಪಡಿಸಲಾಯಿತು.
ಇಂದು ನಾವು ಧ್ಯಾನಹೀನ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ತಮ್ಮ ’ಧ್ಯಾನ’ ಕವಿತೆಯ ಬಗ್ಗೆ ಪ್ರಸ್ತಾಪಿಸಿದರು. ಈ ಗೀತೆಯನ್ನು ಕುಮಾರ ಅಮೃತ್ ಪ್ರಸ್ತುತ ಪಡಿಸಿದರು. ’ಮುಗಿಲಿನ ಮುಸುಕು’ ಕವಿತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಜಂಟಿ ಆಯುಕ್ತರಾದ ಕೆ.ಪಿ.ಚಂದ್ರಶೇಖರ್ ಹಾಗೂ ಸಮ್ಮೇಳನಾಧ್ಯಕ್ಷ ಡಾ.ಕೆ ಚಿನ್ನಪ್ಪ ಗೌಡ ಉಪಸ್ಥಿತರಿದ್ದರು. ಅಜಿತ್ ಕುಮಾರ್ ಕೊಕ್ರಾಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಗಾಯನ ಪ್ರಸ್ತುತಿಗಾಗಿ ಪಕವಾದ್ಯ ತಬಲಾದಲ್ಲಿ ದೀಪಕ್ ರಾಜ್ ಉಲ್ಲಾಲ್ ಹಾಗೂ ಕೀಬೋರ್ಡಿನಲ್ಲಿ ಸತೀಶ್ ಸೂರತ್ಕಲ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.