ತಾಲೂಕಿನ ಎಲ್ಲಾ ಗ್ರಾ.ಪಂ. ವ್ಯಾಪ್ತಿಯ ಕಿಂಡಿ ಅಣೆಕಟ್ಟುಗಳಲ್ಲಿ ನೀರು ನಿಲ್ಲಿಸುವ ವ್ಯವಸ್ಥೆಗೆ ಆದೇಶ

Venuru hobali jana samparka sabhe copyಅಳದಂಗಡಿ : ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಕಿಂಡಿಅಣೆಕಟ್ಟುಗಳು ಮತ್ತು ತೋಡಿನ ಕಟ್ಟಗಳಲ್ಲಿ ನೀರು ನಿಲ್ಲಿಸುವ ಬಗ್ಗೆ ಈ ಜನವರಿ ತಿಂಗಳ ಒಳಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸರಕಾರದಿಂದ ಇಲಾಖೆಗೆ ಆದೇಶ ಬಂದಿದೆ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಆರ್. ನರೇಂದ್ರ ಹೇಳಿದರು. ವೇಣೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆ ಜ.೭ರಂದು ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್‌ಕುಮಾರ್ ಮಿತ್ತಮಾರ್ ಇವರ ಅಧ್ಯಕ್ಷತೆಯಲ್ಲಿ ಅಳದಂಗಡಿ ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆಯಿತು. ಶಾಸಕ ಕೆ. ವಸಂತ ಬಂಗೇರ, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸದಸ್ಯರಾದ ವಿನೂಷ ಪ್ರಕಾಶ್, ಜಯಶೀಲ, ಗ್ರಾ.ಪಂ. ಅಧ್ಯಕ್ಷರಾದ ಶಶಿಕಲಾ ಶಿರ್ಲಾಲು, ಯಶೋಧ ಸುಲ್ಕೇರಿ, ಸದಾನಂದ ಶೆಟ್ಟಿ ಮರೋಡಿ, ತೇಜಾಕ್ಷಿ ಕುಕ್ಕೇಡಿ, ಮೋಹನ್ ಅಂಡಿಂಜೆ, ಸತೀಶ್ ಕಾಶಿಪಟ್ಣ, ರವೀಂದ್ರ ಪೂಜಾರಿ ನಾರಾವಿ, ಅಳದಂಗಡಿ ತಾ.ಪಂ. ಮಾಜಿ ಸದಸ್ಯ ಪ್ರಶಾಂತ ವೇಗಸ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ ಹಾಗೂ ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಅಳದಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಉಂಗಿಲಬೈಲು ಮಾತನಾಡಿ, ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಆದರೆ ದ.ಕ. ಜಿಲ್ಲೆಯಲ್ಲಿ ದೀರ್ಘಾವಧಿ ಕೃಷಿಯಾದ ಅಡಿಕೆ ಮತ್ತು ತೆಂಗು ಕೃಷಿ ಇರುವುದರಿಂದ ಇಲ್ಲಿ ಕೊಳವೆ ಬಾವಿ ಅಗತ್ಯವಾಗಿದೆ. ಅಲ್ಲದೆ ಮಳೆಗಾಲದಲ್ಲಿ ಮಳೆ ನೀರು ನೇರ ಸಮುದ್ರಕ್ಕೆ ಸೇರುವುದನ್ನು ತಡೆಯಲು ನದಿ ಮತ್ತು ತೋಡಿಗೆ ಅಲ್ಲಲ್ಲಿ ಕಟ್ಟ ಕಟ್ಟಿ ನೀರು ನಿಲ್ಲಿಸುವ ಕೆಲಸವಾಗಬೇಕು ಇದಕ್ಕೆ ಸರಕಾರ ಅನುದಾನ ನೀಡಲಿ ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಆರ್. ನರೇಂದ್ರ ಅವರು ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಇದನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ನೀರು ಉಳಿಯಲಿ ಎಂಬ ದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಅಲ್ಲದೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಲ್ಲಾ ಕಿಂಡಿಅಣೆಕಟ್ಟುಗಳು, ತೋಡಿನ ಕಟ್ಟಗಳಲ್ಲಿ ನೀರು ನಿಲ್ಲಿಸಲು ಏನೆಲ್ಲಾ ವ್ಯವಸ್ಥೆ ಬೇಕು ಅದನೆಲ್ಲಾ ಈ ತಿಂಗಳ ಒಳಗೆ ಮಾಡಿ ನೀರು ನಿಲ್ಲಿಸುವ ವ್ಯವಸ್ಥೆ ಮಾಡಲು ಸರಕಾರದಿಂದ ಆದೇಶ ಬಂದಿದೆ. ಇದರ ಬಗ್ಗೆ ಎಲ್ಲಾ ಗ್ರಾ.ಪಂ.ಗಳಿಗೆ ಆದೇಶ ಕಳುಹಿಸಲಾಗುವುದು ಎಂದು ತಿಳಿಸಿದರು.
ವೇಣೂರು ಅರಣ್ಯ ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಲಾಗಿದೆ. ಇದರಲ್ಲಿ ೯೪ಸಿ ಹಕ್ಕುಪತ್ರ ಕೊಡುವ ಬಗ್ಗೆ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ವೇಣೂರು ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ತಿಳಿಸಿದರು. 94ಸಿಯಲ್ಲಿ ವನ್ಯಜೀವಿ ಇಲಾಖೆಗೆ ಕಳುಹಿಸಬೇಕಾದ ಕಡತಗಳನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಕಳುಹಿಸುತ್ತಿದೆ ಎಂದು ನಾಗರಿಕರೋರ್ವರು ತಿಳಿಸಿದಾಗ ಇದನ್ನು ಸರಿಪಡಿಸುವಂತೆ ತಹಶೀಲ್ದಾರ್ ತಿಪ್ಪೇಸ್ವಾಮಿ ಕಂದಾಯ ನಿರೀಕ್ಷಕರಿಗೆ ಸೂಚಿಸಿದರು.
ಸರಕಾರದಿಂದ ಬರುವ ಸುತ್ತೋಲೆಯನ್ನು ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ತರುವುದಿಲ್ಲ. ಬಡಗಕಾರಂದೂರು ಶಾಲೆಯ ಶಿಕ್ಷಕಿಯನ್ನು ಬೆಳ್ತಂಗಡಿಗೆ ಕರೆದು, ಬೇರೆ ಶಾಲೆಗೆ ನಿಯೋಜನೆಗೊಳ್ಳಲು ಶಾಲೆಗಳ ಆಯ್ಕೆಗೆ ಸೂಚಿಸಿದೆ. ಇದು ಶಿಕ್ಷಕರನ್ನು ಬ್ಲಾಕ್‌ಮೇಲ್ ಮಾಡುವಂತಿದೆ. ಇಂತಹ ವಿಷಯಗಳನ್ನು ಮೊದಲೇ ತಿಳಿಸಬೇಕು, ಶಾಲಾಭಿವೃದ್ಧಿ ಗಮನಕ್ಕೂ ತರಬೇಕು ಎಂದು ಸದಾನಂದ ಪೂಜಾರಿ ಒತ್ತಾಯಿಸಿದರು. ಶಿಕ್ಷಣ ಸಂಯೋಜಕ ರಮೇಶ್ ಮಾತನಾಡಿ ಅತಿಥಿ ಶಿಕ್ಷಕರ ನೇಮಕ ತರಾತುರಿಯಲ್ಲಿ ನಡೆದಿರುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಮುಂದೆ ಎಲ್ಲಾ ಮಾಹಿತಿಯನ್ನು ಶಾಲಾಭಿವೃದ್ಧಿಗೆ ಸಮಿತಿಗೆ ತರಲಾಗುವುದು ಎಂದು ಹೇಳಿದರು.
ಪಿಲ್ಯ ಗ್ರಾಮದಲ್ಲಿ ಸರ್ವೆ ನಂಬ್ರ 83/84ರಲ್ಲಿ ತಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ 2ರಿಂದ 3ಎಕ್ರೆ ಜಾಗವನ್ನು ಮನೆ ನಿವೇಶನಕ್ಕೆ ಕಾಯ್ದಿರಿಸಲಾಗಿತ್ತು. ಆದರೆ ಅದು ಇಂದಿಗೂ ಮಂಜೂರಾಗಿಲ್ಲ, ಅಲ್ಲದೆ ಈ ಪಂಚಾಯತು ವ್ಯಾಪ್ತಿಯಲ್ಲಿ ಹಕ್ಕು ಪತ್ರ ದೊರೆತವರ ಪ್ಲೋಟಿಂಗ್ ಆಗಿಲ್ಲ ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ ಅವರು ತಹಶೀಲ್ದಾರರ ಗಮನಕ್ಕೆ ತಂದರು. ಇದರ ಪರಿಶೀಲನೆಗೆ ತಹಶೀಲ್ದಾರ್ ಸೂಚನೆ ನೀಡಿದರು. ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿದರು.
ಸಭೆಯಲ್ಲಿ ಶಾಸಕ ಕೆ. ವಸಂತ ಬಂಗೇರ ಅವರು 94ಸಿಯ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿ, 94ಸಿಯಲ್ಲಿ ಅರ್ಜಿ ಸಲ್ಲಿಸದೇ ಯಾರಾದರೂ ಬಾಕಿ ಇದ್ದರೆ ಅಂತವರು ಈ ತಿಂಗಳ 27ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೩೧ ಎಕ್ರೆ ಸರಕಾರಿ ಜಾಗ ಇರುವ ಬಗ್ಗೆ ಮತ್ತು 300 ಮಂದಿ ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ಗಮನಕ್ಕೆ ತಂದಿದ್ದಾರೆ ಅದನ್ನು ಮನೆ ನಿವೇಶನಕ್ಕೆ ಕಾದಿರಿಸಿ ಅದರಲ್ಲಿ ಹಕ್ಕುಪತ್ರ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ ೯೪ಸಿಯಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಹಕ್ಕುಪತ್ರ ಕೊಡುವ ಕೆಲಸವನ್ನು ಕಂದಾಯ ಇಲಾಖೆ ಮಾಡಿದೆ. ಅದೇ ರೀತಿ, ಅರಣ್ಯ ಮತ್ತು ಗೋಮಾಳದಲ್ಲಿ ಮನೆ ಕಟ್ಟಿ ಕುಳಿತವರಿಗೆ ಹಕ್ಕು ಪತ್ರ ಕೊಡಲು ಸರಕಾರ ಆದೇಶ ನೀಡಿದೆ ಎಂದರು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಮಾತನಾಡಿ 94ಸಿಯಲ್ಲಿ ಹಕ್ಕು ಪತ್ರ ಕೊಡಿಸುವ ಕೆಲಸ ಶೀಘ್ರವಾಗಿ ನಡೆಯಬೇಕು ಅಲ್ಲದೆ ಕೃಷಿ ಸಿಂಚನಿ ಕಾರ್ಯಕ್ರಮವನ್ನು ಜಾರಿ ಮಾಡಬೇಕು ಎಂದು ಸಲಹೆಯಿತ್ತರು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಸತೀಶ್‌ಕುಮಾರ್ ಮಿತ್ತಮಾರ್ ಮಾತನಾಡಿ ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 31 ಎಕ್ರೆ ಸರಕಾರಿ ಜಾಗವಿದೆ ಇದನ್ನು ನಿವೇಶನಕ್ಕೆ ಮೀಸಲಿಡಬೇಕು. ಇಲ್ಲಿ 300 ಮಂದಿ ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದು, ಅವರಿಗೆ ನಿವೇಶನಕ್ಕೆ ಹಕ್ಕುಪತ್ರ ನೀಡಬೇಕು. ಕೆಲವು ಮಂದಿ ಬಡವರು ಅರಣ್ಯ ಜಾಗದಲ್ಲಿದ್ದು, ಅವರಿಗೂ ಕಾನೂನು ತೊಡಕನ್ನು ನಿವಾರಿಸಿ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡುವಂತೆ ಶಾಸಕರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಣ್ಣಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಕೆ.ವಸಂತ ಬಂಗೇರರನ್ನು ಗ್ರಾ.ಪಂ. ವತಿಯಿಂದ ಅಧ್ಯಕ್ಷ ಸತೀಶ್‌ಕುಮಾರ್ ಹಾಗೂ ಸದಸ್ಯರು ಸನ್ಮಾನಿಸಿದರು.
ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು. ಜೊಕೀಮ್ ಕ್ರಾಸ್ತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.