HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನಾಧ್ಯಕ್ಷರಾಗಿ ಡಾ| ಕೆ. ಚಿನ್ನಪ್ಪ ಗೌಡ

dr chinappa gawda copy*  ಕನ್ನಡ- ತುಳು ಸಾಹಿತ್ಯ ಸಾಧಕ, ಸಂಶೋಧಕ.
* ಹಳೆಗನ್ನಡ-ಹೊಸಗನ್ನಡ ಕ್ಷೇತ್ರದ ಅಧ್ಯಯನಕಾರ.
* ಜನಪದ ಸಾಹಿತ್ಯದ ಸಾಧಕ.
* ಉಪನ್ಯಾಸಕ.
* ಉತ್ತಮ ಆಡಳಿತಗಾರ.

ಬೆಳ್ತಂಗಡಿ : ಜನಪದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಧ್ಯಯನ ಸಹಿತ ವಿಶೇಷವಾಗಿ ಹಳೆಗನ್ನಡ ಮತ್ತು ಆಧುನಿಕ ಕನ್ನಡ, ತುಳು ಭಾಷಾ ಅಧ್ಯಯನ ನಡೆಸಿರುವ ಡಾ. ಕೆ. ಚಿನ್ನಪ್ಪ ಗೌಡ ಅವರು ಈ ಬಾರಿ ಜನವರಿ, 27, 28 ಮತ್ತು 29 ರಂದು ಉಜಿರೆಯಲ್ಲಿ ಜರಗಲಿರುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭೂತಾರಾಧನೆ – ಕೆಲವು ಅಧ್ಯಯನಗಳು, ಜಾಲಾಟ, ಭೂತಾರಾಧನೆ – ಜನಪದೀಯ ಅಧ್ಯಯನ, ಸಂಸ್ಕೃತಿಸಿರಿ ಇತ್ಯಾದಿ ಸಾಹಿತ್ಯಿಕ ಕೆಲಸಗಳನ್ನೂ ಮಾಡಿರುವ ಇವರು ಅನೇಕ ಪುಸ್ತಕಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಹಾಗೂ ಬೇಸಿಗೆ ಕಾಲದ ಶಾಲಾ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ವಿಸ್ತರಿಸಿದ್ದಾರೆ. ಟರ್ಕಿ, ಫಿನ್ಲೇಂಡ್, ಜರ್ಮನಿ, ಜಪಾನ್ ಇತ್ಯಾದಿ ದೇಶಗಳ ವಿಶ್ವವಿದ್ಯಾಲಯಗಳಿಗೆ ಭೇಟಿಯಿತ್ತು ಸಂಶೋಧನೆ ಅಧ್ಯಯನಗಳನ್ನು ನಡೆಸಿದವರಾಗಿದ್ದಾರೆ.
ಚಿನ್ನಪ್ಪ ಗೌಡರ ಸಂಕ್ಷಿಪ್ತ ಪರಿಚಯ:
ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕೂಡೂರಿನ ಕೃಷಿ ಕುಟುಂಬದಲ್ಲಿ ಜನಿಸಿ ತನ್ನ ಸ್ವಂತ ಪ್ರತಿಭೆಯೊಂದಿಗೆ ವಿದ್ಯಾಕ್ಷೇತ್ರ, ವಿದ್ವತ್‌ಕ್ಷೇತ್ರ, ಜಾನಪದ, ಯಕ್ಷಗಾನ ಹಾಗೂ ಸಾಹಿತ್ಯದ ಎಲ್ಲಾ ನೆಲೆಗಳಲ್ಲಿ ಸಾಧನೆಗಳನ್ನು ಗೈದ ಡಾ. ಚಿನ್ನಪ್ಪ ಗೌಡರು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಮಾರ್ಗದರ್ಶನ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನ, ಮೂಡಬಿದ್ರೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಯಕ್ಷಗಾನ ಸಾಹಿತ್ಯ ಸಮ್ಮೇಳನಗಳು, ಆಳ್ವಾಸ್ ನುಡಿಸಿರಿ, ಮಂಗಳೂರು ವಿಶ್ವವಿದ್ಯಾನಿಲಯದ ಮತ್ತು ಕರ್ನಾಟಕ ಸರಕಾರ, ಜಿಲ್ಲಾಡಳಿತದ ಅನೇಕ ಸಾಹಿತ್ಯ ಸಾಂಸ್ಕೃತಿಕ ಭೂಮಿಕೆಗಳು ಹೀಗೆ ಹತ್ತುಹಲವು ರಾಜ್ಯಮಟ್ಟದ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಅನುಪಮ ಸೇವೆ ಸಲ್ಲಿಸಿ ಸಾಧನೆ ತೋರಿದ್ದಾರೆ.
ಪ್ರಶಸ್ತಿ, ಸನ್ಮಾನಗಳು :
ಇವರ ಸಾಧನೆಗೆ ಅನೇಕ ಪ್ರಶಸ್ತಿಗಳೂ ಲಭಿಸಿವೆ. ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ವಾಸುದೇವ ಭೂಪಾಲಮ್ ಎಂಡೊಮೆಂಟ್ ಪ್ರಶಸ್ತಿ, ಡಾ. ಶಿವರಾಮ ಕಾರಂತ ಎಂಡೋಮೆಂಟ್ ಪ್ರಶಸ್ತಿ, ಕು.ಶಿ. ಜಾನಪದ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂದೇಶ ಪುರಸ್ಕಾರ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ ಅವರಿಗೆ ಸಲ್ಲಿಕೆಯಾಗಿರುವ ಪ್ರಶಸ್ತಿಗಳಲ್ಲಿ ಪ್ರಮುಖವಾದವುಗಳಾಗಿವೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಆಗಿ ಸೇವೆಗೈದಿದ್ದ ಇವರು ವಿದ್ಯಾರ್ಥಿ ಕ್ಷೇಮನಿಧಿ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದವರಾಗಿದ್ದಾರೆ. ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಉಜಿರೆಯ ಶ್ರೀ ಧ. ಮಂಜುನಾಥೇಶ್ವರ ಕಾಲೇಜಿನಲ್ಲೂ ಉಪನ್ಯಾಸಕರಾಗಿ ಸೇವೆ ನೀಡಿದ್ದಾರೆ.
ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಅವರು ಜಿಲ್ಲೆಯ ಸಾರಸ್ವತ ಲೋಕದ ಓರ್ವ ಹಿರಿಯ ಸಾಧಕ ಶ್ರೇಷ್ಠ ಎನ್ನುವುದು ನಮ್ಮೆಲ್ಲರ ಅಭಿಮಾನದ ಸಂಗತಿ.
ಭರದಿಂದ ಸಾಗುತ್ತಿದೆ ಸಮ್ಮೇಳನದ ತಯಾರಿಗಳು :
ಜನವರಿ 27, 28 ಮತ್ತು 29ರಂದು 3 ದಿನಗಳ ಕಾಲ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ದನ ದೇವಸ್ಥಾನದ ಆವರಣದಲ್ಲಿ ಸಮ್ಮೇಳನದ ಪೂರ್ವತಯಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಉಜಿರೆ ಜನಾರ್ದನ ದೇವಳದ ಧರ್ಮದರ್ಶಿಗಳಾದ ವಿಜಯರಾಘವ ಪಡುವೆಟ್ನಾಯ ಅವರ ಅಧ್ಯಕ್ಷತೆಯಲ್ಲಿ, ಪ್ರೊ. ಎಸ್. ಪ್ರಭಾಕರ, ಡಿ. ಹರ್ಷೇಂದ್ರ ಕುಮಾರ್, ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಬಿ. ಯಶೋವರ್ಮ, ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್, ಕಾರ್ಯದರ್ಶಿ ಡಾ| ಎಂ.ಎಂ. ದಯಾಕರ್, ಕೋಶಾಧಿಕಾರಿ ಹರೀಶ್ ಪೂಂಜ, ಕಾರ್ಯದರ್ಶಿಗಳಾದ ಕೇಶವ ಪಿ. ಬೆಳಾಲು, ಸಂಪತ್ ಸುವರ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಎಂ.ಪಿ. ಶ್ರೀನಾಥ್, ತಾಲೂಕು ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್, ಅಶ್ರಫ್ ಆಲಿಕುಂಞಿ ಮುಂಡಾಜೆ ಸಾಹಿತ್ಯದ ಇನ್ನೂ ಹಲವಾರು ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿಯ ಉಸ್ತುವಾರಿಯಲ್ಲಿ ಕೆಲಸಕಾರ್ಯಗಳು ಈಗಾಗಲೇ ಭರದಿಂದ ಸಾಗುತ್ತಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.