ದಿಲ್ಲಿಯಲ್ಲಿ ಸದ್ದು ಮಾಡಿದ ಹಳ್ಳಿಯ ಅಂಗನವಾಡಿ ಕುಕ್ಕೇಡಿಯ ನಿಷ್ಠಾವಂತ ಕಾರ್ಯಕರ್ತೆ ಜಾನಕಿಯವರಿಗೆ ರಾಷ್ಟ್ರ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

janaki P copy ವೇಣೂರು: ಕುಕ್ಕೇಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕುಂಡದಬೆಟ್ಟು ಅಂಗನವಾಡಿ ಕೇಂದ್ರ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಇದಕ್ಕೆ ಕಾರಣ ಇಲ್ಲಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ಪಿ. ಜಾನಕಿಯವರು. ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಇವರು ಡಿ. 22ರಂದು ನವದೆಹಲಿಯ ವಿಜ್ಞಾನ ಮಂದಿರದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.
ಅಂಗನವಾಡಿಯ ಚಿತ್ರಣ: ಹಂಚಿನ ಮಹಡಿಯ ಬಣ್ಣ ಕಳೆದುಕೊಂಡಿರುವ ಸಣ್ಣ ಕಟ್ಟಡ. ಅಂಗಳದಲ್ಲಿ ಬೆಳೆದುನಿಂತ ಎರಡು ಫಲ ಭರಿತ ತೆಂಗಿನ ಮರಗಳು. ಹಿಂಭಾಗದಲ್ಲಿ ಗೊನೆ ತುಂಬಿಕೊಂಡಿರುವ ಕಲ್ಪವೃಕ್ಷ. ಪಕ್ಕದಲ್ಲಿಯೇ ಚಿಗುರುತ್ತಿರುವ ನಾಲ್ಕೈದು ತೆಂಗಿನ ಗಿಡಗಳು. ಅಲಸಂಡೆ ಸಸಿಗಳು, ಒಂದಿಷ್ಟು ಬಾಳೆಗಿಡಗಳು. ಇದು ರಾಜ್ಯ ಹೆದ್ದಾರಿ ಗುರುವಾಯನಕೆರೆ-ವೇಣೂರು ಮಧ್ಯೆ ಇರುವ ಕುಂಡದಬೆಟ್ಟು ಅಂಗನವಾಡಿ ಕೇಂದ್ರದ ಚಿತ್ರಣ.
ಸಮಾಜಸೇವೆ: ವಯಸ್ಕರ ಶಿಕ್ಷಣ, ಸಾಕ್ಷರತಾ ಆಂದೋಲನ, ಮುಂದುವರಿಕೆ ಶಿಕ್ಷಣ, ನಿರಂತರ ಶಿಕ್ಷಣ ಇವುಗಳಲ್ಲಿ ಸೇವೆ ಸಲ್ಲಿಸಿರುವ ಪಿ. ಜಾನಕಿಯವರು ಜನಸಾಮಾನ್ಯ ರಿಗೆ ಪ್ರಯೋಜನ ವಾಗುವಂತಹ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ‘ನಮ್ಮ ಸಮಾಜ ಸೇವೆಗೆ ಬೆಂಬಲವಾಗಿ ನಿಂತವರು ಮಾಜಿ ಜಿಲ್ಲಾ ಪರಿಷತ್ತು ಸದಸ್ಯೆ ಗುಲಾಬಿ ಹೆಗ್ಗಡ್ತಿಯವರು. ನನಗೂ ಒಂದಿಷ್ಟು ಅಸಹಾಯಕರಿಗೆ ಸಹಾಯ ಮಾಡಬೇಕು ಎಂಬ ಉಮೇದು ಇತ್ತು. ಅದಕ್ಕಾಗಿ ಜನಸಾಮಾನ್ಯರಿಗೆ ಪ್ರಯೋಜನವಾಗು ವಂತಹ ಸರಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದೇನೆ ಎನ್ನುತ್ತಾರೆ ಜಾನಕಿ.
ಬಾಲವಾಡಿ ಸೇವಾ ತರಬೇತಿ: ಅಂದಿನ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ. 75 ಅಂಕ ಗಳಿಸಿದ್ದ ಜಾನಕಿಯವರಿಗೆ ಆರ್ಥಿಕ ಅಡಚಣೆ ಯಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಮನೆಯಲ್ಲೇ ಉಳಿದು ಕೃಷಿ ಕೆಲಸದಲ್ಲಿ ಸಹಾಯ ಮಾಡಿದರು. ಆದರೆ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ಹೆಚ್ಚಿನ ಒಲವು ಹೊಂದಿದ್ದ ಅವರು ೧೯೮೨ರಲ್ಲಿ ಬೆಂಗಳೂರಿಗೆ ಹೋಗಿ ಒಂದು ವರ್ಷದ ಬಾಲವಾಡಿ ಸೇವಾ ತರಬೇತಿ (ಬಿಎಸ್‌ಟಿ) ಮುಗಿಸಿದರು. ಆಗ ಅವರಿಗೆ ತರಬೇತಿ ವೇಳೆ ವೇತನವೂ ಸಿಗುತ್ತಿತ್ತು. ಪರೀಕ್ಷೆಯಲ್ಲಿ ರಾಜ್ಯದಲ್ಲಿ ೫ನೇ ರ‍್ಯಾಂಕಿನೊಂದಿಗೆ ಉತ್ತೀರ್ಣಗೊಂಡರೂ ಸೂಕ್ತ ಕೆಲಸ ಮಾತ್ರ ಸಿಗಲೇ ಇಲ್ಲ!
ಆವರಣ ಗೋಡೆಯ ನಿರ್ಮಾಣ: 1983ರಲ್ಲಿ ಅಂಗನವಾಡಿ ಕಾರ್ಯಕರ್ತೆ ಯಾಗಿ ನಿಟ್ಟಡೆಯಲ್ಲಿ ನಿಯೋಜನೆ ಗೊಂಡರು. ನಿಟ್ಟಡೆಯ ಅಂಗನವಾಡಿ ಕಟ್ಟಡ ಬಳಿಕ ಕುಂಡದಬೆಟ್ಟು ಬಳಿಯ ಸಮಾಜಕಲ್ಯಾಣ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರವಾಯಿತು. 1995ರಲ್ಲಿ ಕುಂಡದಬೆಟ್ಟುವಿನಲ್ಲಿ ಕೇಂದ್ರಕ್ಕೆ ಸ್ವಂತ ಕಟ್ಟಡದ ನಿರ್ಮಾಣವಾಯಿತು. ಜಾನಕಿಯವರು ತನ್ನ ಗೌರವ ವೇತನದಲ್ಲಿ ಮತ್ತು ಮಕ್ಕಳ ಪೋಷಕರ ನೆರವಿನಿಂದ ಕೇಂದ್ರದ ಸುತ್ತ ಆವರಣ ಗೋಡೆ ನಿರ್ಮಿಸಿದರು. ಅಲ್ಲದೆ ಇತ್ತೀಚೆಗೆ ಜಾನಕಿಯವರು ಕೇಂದ್ರದ ವರಾಂಡವನ್ನು ರೂ. 10 ಸಾವಿರ ಖರ್ಚು ಮಾಡಿ ಸಮತಟ್ಟು ಮಾಡಿದ್ದಾರೆ. ತೆಂಗಿನ ಗಿಡ, ಬಾಳೆಗಿಡ ಜನತೆಯ ಸಹಕಾರದೊಂದಿಗೆ ನೆಡಲಾಗಿದೆ.
ಮಹಿಳೆಯರಿಗೆ ಅಕ್ಷರಭ್ಯಾಸ: ಊರಿನ ಜನತೆ, ಕುಕ್ಕೇಡಿ ಗ್ರಾ.ಪಂ. ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಸಹಕಾರದಿಂದ ಕಟ್ಟಡದ ಮುಂಭಾಗವನ್ನು ವಿಸ್ತರಿಸಲಾಗಿದೆ. ಕುಕ್ಕೇಡಿ ಗ್ರಾ.ಪಂ. ವತಿಯಿಂದ ಕೇಂದ್ರಕ್ಕೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದೆ. ಕುಕ್ಕೇಡಿ ಮಾಜಿ ಗ್ರಾ.ಪಂ. ಅಧ್ಯಕ್ಷ ಸೋಮನಾಥ ಕೆ.ವಿ.ಯವರು ತನ್ನ ಸ್ವಂತ ಖರ್ಚಿನಿಂದ ಕುಂಡದಬೆಟ್ಟು ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಜ್ಞಾನಜ್ಯೋತಿ ಕಾರ್ಯಕ್ರಮದಡಿ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರಭ್ಯಾಸ ಜಾನಕಿ ಮಾಡಿದ್ದಾರೆ. ಅದರಲ್ಲಿ ಶಾಲೆಯ ಮೆಟ್ಟಿಲೇರದ ಗೌರಿ ಎಂಬವರು ಗ್ರಾ.ಪಂ. ಅಧ್ಯಕ್ಷರಾಗುವ ಮಟ್ಟಕ್ಕೆ ಬೆಳೆದು ನಿಂತುದ್ದನ್ನು ಜಾನಕಿಯವರು ಧನ್ಯತೆಯಿಂದ ನೆನಪಿಸುತ್ತಾರೆ.
– ಪದ್ಮನಾಭ, ಗುಂಡೂರಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.