ಸಹಕಾರಿ ಸಂಸ್ಥೆಗಳ ವ್ಯವಹಾರಕ್ಕೆ ಸರಕಾರ ಭದ್ರತೆ ಒದಗಿಸಬೇಕು

Sahakari press copyಬೆಳ್ತಂಗಡಿ : ಕೇಂದ್ರ ಸರಕಾರ ನೋಟುಗಳ ನಿಷೇಧದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಗ್ರಾಹಕರು ಆತಂಕದಲ್ಲಿದ್ದಾರೆ. ಕೇರಳ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳ ವ್ಯವಹಾರಗಳಿಗೆ ಅಲ್ಲಿಯ ರಾಜ್ಯ ಸರಕಾರ ಭದ್ರತೆ ನೀಡಿದ್ದು, ಕರ್ನಾಟಕ ರಾಜ್ಯ ಸರಕಾರ ರಾಜ್ಯದ ಸಹಕಾರ ಸಂಸ್ಥೆಗಳಿಗೆ ಅಗತ್ಯದ ರಕ್ಷಣೆ ನೀಡಬೇಕು ಎಂದು ಮುಂಡಾಜೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎಸ್. ಗೋಖಲೆ ಒತ್ತಾಯಿಸಿದರು.
ಅವರು ನ.30ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಜನತೆಯ ದಿನನಿತ್ಯದ ಕಷ್ಟ ಸುಖಗಳಿಗೆ ಸ್ಪಂದಿಸುವ ಅವಿಭಜಿತ ದ.ಕ. ಜಿಲ್ಲಾ ‘ಪಾಕ್ಸ್’ಗಳು ತಮ್ಮೆಲ್ಲ ವ್ಯವಹಾರವನ್ನು ಸದಸ್ಯರೊಂದಿಗೆ ಮಾತ್ರ ಮಾಡುವ ದೃಢ ನಿರ್ಧಾರದೊಂದಿಗೆ ಕೆವೈಸಿ, ಆಧಾರ್, ಪಾನ್‌ಕಾರ್ಡ್ ಎಲ್ಲರೂ ಹೊಂದಿಕೊಂಡು ದುಡಿಯಲು ತೀರ್ಮಾನಿಸಿದ್ದೇವೆ. ಸದಸ್ಯರಿಗೆ ವಿವಿಧ ತೆರಿಗೆಗಳ ಮಾಹಿತಿ, ನಗದು ರಹಿತ ವ್ಯವಹಾರದ ತರಬೇತಿ ನೀಡಲು ತೀರ್ಮಾನಿಸಿದ್ದೇವೆ. ಆರ್.ಬಿ.ಐ.ಯವರ ಮಾರ್ಗದರ್ಶನ-ಹತೋಟಿಯನ್ನು ಅಂಗೀಕರಿಸಲು ಮುಂದೆ ಬಂದಿದ್ದೇವೆ ಆರ್.ಟಿ.ಜಿ.ಎಸ್, ಎನ್.ಇ.ಎಫ್.ಟಿ, ಸಿ.ಬಿ.ಎಸ್, ಇನ್ನಾವುದೇ ವಿದ್ಯುನ್ಮಾನ ವ್ಯವಹಾರಗಳಿಗೆ ಹೊಂದಿಕೊಳ್ಳಲು ಪಾಕ್ಸ್‌ಗಳು ಸಿದ್ಧವಿದೆ. ನಮ್ಮ ವ್ಯವಹಾರಗಳನ್ನೂ ಆರ್.ಬಿ.ಐ. ಹಾಗೂ ಸರಕಾರಗಳು ಮಾನ್ಯ ಮಾಡಬೇಕು ಎಂದು ಆಗ್ರಹಿಸಿದರು.
ಪಾಕ್ಸ್‌ಗಳಿಗೆ ಇತರ ಬ್ಯಾಂಕುಗಳು ಹಣ ನೀಡುವಾಗ ಸಾವಿರಾರು ಸದಸ್ಯರನ್ನ ಹೊಂದಿರುವ ಪಾಕ್ಸ್‌ಗಳನ್ನು ವೈಯಕ್ತಿಕ ಖಾತೆದಾರರಂತೆಯೇ ನೋಡುವುದು ವಿಷಾದನೀಯ. ಪಾಕ್ಸ್‌ಗಳಿಂದ ಸಾಲ ಪಡೆದು ಡಿ.೮ಕ್ಕೆ ವಾಯಿದೆ ಆಗುವ ಎಲ್ಲಾ ಸಾಲಗಳ ಕಂತುಗಳ ವಾಯಿದೆಯನ್ನು ಪರಿಸ್ಥಿತಿ ಸುಗಮವಾಗುವವರೆಗೆ ಮುಂದುವರಿಸಿ ಸರಕಾರ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕಿನಲ್ಲಿ ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದಾರೆ. ಒಂದು ಸೊಸೈಟಿಗೆ ರೂ. 24 ಸಾವಿರ ಮಾತ್ರ ನೀಡುತ್ತಿದ್ದಾರೆ. ಇದನ್ನು ಎಲ್ಲಾ ಹಾಲು ಹಾಕುವವರಿಗೆ ಹಂಚುವುದು ಕಷ್ಟವಾಗಿದೆ. ಜೊತೆಗೆ ಹೈನುಗಾರಿಕೆ ಮಾಡುವುದು ಸಮಸ್ಯೆಯಾಗಿ ಕಾಡಿದೆ. ಆದುದರಿಂದ ಪ್ರತಿ ಹಾಲು ಸೊಸೈಟಿಗೆ ರೂ.1ಲಕ್ಷ ನೀಡಬೇಕು ಎಂದು ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಂಡಾಜೆ ಸೊಸೈಟಿ ಉಪಾಧ್ಯಕ್ಷ ಸೆಬಾಸ್ಟಿನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಫಡ್ಕೆ, ನಿರ್ದೇಶಕರಾದ ಅಶೋಕ್ ಕುಮಾರ್, ಪ್ರಕಾಶ ನಾರಾಯಣ ರಾವ್, ಮಡಂತ್ಯಾರಿನ ನಿರ್ದೇಶಕ ಮಹಾವೀರ ಬಲ್ಲಾಳ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.