ಕಲಾವಿದರ ಪ್ರತಿಭಾ ವಿಕಸನಕ್ಕೆ ಪ್ರೋತ್ಸಾಹ ಅಗತ್ಯ : ಕೋಟ

YUVA VAHINI KOTAಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ರಂಗ ಸಮ್ಮಾನ

ಉಭಯ ಜಿಲ್ಲೆಗಳ ಅಂತರ್ ಘಟಕ ಸಾಂಸ್ಕೃತಿಕ ವೈಭವ.
೧೯ ಯುವವಾಹಿನಿ ಘಟಕಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
ವಿವಿಧ ಕ್ಷೇತ್ರದ ಸಾಧಕರಿಗೆ ಸಾಂಸ್ಕೃತಿಕ ರಂಗ ಸಮ್ಮಾನ.
ಯುವ ಪ್ರತಿಭೆಗಳಿಗೆ ಪುರಸ್ಕಾರ.
ಸಾಂಸ್ಕೃತಿಕ ಸೇವೆಗೈಯುತ್ತಿರುವ ಸಂಸ್ಥೆಗಳಿಗೆ ಗೌರವ.
ದಿನವಿಡಿ ಯುವ ಪ್ರತಿಭೆಗಳ ಸಾಂಸ್ಕೃತಿಕ ಲೋಕದ ಸಾಕ್ಷಾತ್ಕಾರ.
ಸಂಸ್ಕ್ರತಿ – ಸಂಪ್ರದಾಯವನ್ನು ಪ್ರತಿಬಿಂಬಿಸುವ ವೇದಿಕೆ.

  ಬೆಳ್ತಂಗಡಿ : ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬಿಲ್ಲವ ಕಲಾವಿದರಿದ್ದಾರೆ. ಅನೇಕ ಮಂದಿ ಉನ್ನತ ಸ್ಥಾನದಲ್ಲಿದ್ದಾರೆ. ಆದರೂ ತೆರೆಮರೆಯಲ್ಲಿ ಬೆಳಕಿಗೆ ಬಾರದ ಇನ್ನೂ ಅನೇಕ ಶ್ರೇಷ್ಠ ಕಲಾವಿದರಿದ್ದು, ಅವರಿಗೆ ಯುವ ವಾಹಿನಿಯಂತಹ ಸಂಘಟನೆಗಳು ಅವಕಾಶ ನಿರ್ಮಿಸಿ ಪ್ರೋತ್ಸಾಹ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ನ.20ರಂದು ಬೆಳ್ತಂಗಡಿ ಆಶಾ ಸಾಲಿಯಾನ್ ಕಲ್ಯಾಣ ಮಂಟಪದ ದಿ| ಶ್ರೀಮತಿ ಮುತ್ತಕ್ಕೆ ಮತ್ತು ದಿ| ಕೋಟ್ಯಪ್ಪ ಪೂಜಾರಿ ವರ್ಪಾಳೆ ಸಭಾ ವೇದಿಕೆಯಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕ ಆತಿಥ್ಯದಲ್ಲಿ ನಡೆದ ತುಳುನಾಡಿನ ಉಭಯ ಜಿಲ್ಲೆಗಳ ಅಂತರ್ ಘಟಕ ಸಾಂಸ್ಕೃತಿಕ ವೈಭವ ಡೆನ್ನನ ಡೆನ್ನನ ವರ್ಣ ರಂಜಿತಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಬಿಲ್ಲವ ಸಮಾಜದ ಸಾಧಕ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.
ಯುವ ವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಇಂದು ಸಾಂಸ್ಕೃತಿಕ ಲೋಕಕ್ಕೆ ಹೊಸ ಮೆರಗು ಬಂದಿದೆ. ಕಲೆ, ಅನೇಕ ಕ್ಷೇತ್ರಗಳ ಕಲಾವಿದರನ್ನು ಯುವ ವಾಹಿನಿ ಗುರುತಿಸಿ ಪ್ರೋತ್ಸಾಹಿಸಿದೆ. ನಮ್ಮ ಸಮಾಜ ಸಂಸ್ಕೃತಿಗೆ ವಿಶೇಷ ಗೌರವ ಕೊಟ್ಟ ಸಮಾಜ, ಬಿಲ್ಲವ ಸಮಾಜದ ಕಲಾವಿದರು, ನಾಟಕ, ಸಂಗೀತ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ತೆರೆಮರೆಯಲ್ಲಿರುವ ಅನೇಕ ಕಲಾವಿದರು ಇಂತಹ ಕಾರ್ಯಕ್ರಮಗಳ ಮೂಲಕ ಬೆಳಕಿಗೆ ಬರಲಿ ಅವರ ಪ್ರತಿಭೆ ಬೆಳಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಚಲನಚಿತ್ರ ನಟ ಹಾಗೂ ನಿರ್ಮಾಪಕರಾದ ರಾಜಶೇಖರ ಕೋಟ್ಯಾನ್ ಅವರು ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಒಬ್ಬರಿಗೊಬ್ಬರು ಮಾತನಾಡಲು ಸಮಯ ಸಿಗುತ್ತಿಲ್ಲ ಆದರೆ ಯುವವಾಹಿನಿ ಅತ್ಯುತ್ತಮ ಕಲಾ ಕಾರ್ಯಕ್ರಮ ಆಯೋಜಿಸಿ ಬಿಲ್ಲವ ಕುಟುಂಬಗಳನ್ನು ಒಗ್ಗೂಡಿಸಿದೆ. ಯುವ ಬಿಲ್ಲವ ಸಮಾಜದ ತಳಹದಿಯಾಗಿ ಯುವ ವಾಹಿನಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಲ್ಲವ ಸಮಾಜದ ಯುವಕರು ಸೂತ್ರಧಾರಿಗಳಾಗಬಾರದು, ಪಾತ್ರಧಾರಿಗಳಾಗಬೇಕು ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಬರಬೇಕು, ಬಿಲ್ಲವ ಸಮಾಜ ಬಲಿಷ್ಠ ಸಮಾಜವಾಗಬೇಕು ಎಂಬುದೇ ನನ್ನ ಗುರಿಯಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಅವರು ಮಾತನಾಡಿ ನಮ್ಮ ಸಮಾಜದಲ್ಲಿ ಅನೇಕ ಪ್ರತಿಭೆಗಳಿವೆ ಅವರನ್ನು ಗುರುತಿಸಿ, ಅವರ ಪ್ರತಿಭಾ ವಿಕಸನಕ್ಕೆ ವೇದಿಕೆ ಒದಗಿಸಿದ ಯುವ ವಾಹಿನಿಯ ಕಾರ್ಯಕ್ರಮ ಸಮಾಜಕ್ಕೆ ಆದರ್ಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಬಿಲ್ಲವ ಏಕೀಕರಣ ಅಧ್ಯಕ್ಷ ರವಿ ಪೂಜಾರಿ ಮಜಲು, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಶ್ರೀಮತಿ ಸುಜಿತಾ ವಿ. ಬಂಗೇರ, ಉದ್ಯಮಿ ಸುರೇಶ್ ಪೂಜಾರಿ ಮುಂಬಯಿ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಭಗೀರಥ ಜಿ. ಉಪಸ್ಥಿತರಿದ್ದರು.
ಪ್ರಧಾನ ಸಂಚಾಲಕ ಸಂಪತ್ ಬಿ. ಸುವರ್ಣ ಸ್ವಾಗತಿಸಿದರು. ಚಂದ್ರಹಾಸ ಬಳೆಂಜ, ಸುಧಾಮಣಿ ಕಾರ್ಯಕ್ರಮ ನಿರೂಪಿಸಿದರು. ಕಲೆ, ಸಾಹಿತ್ಯ, ಸಂಸ್ಕೃತಿ ನಿರ್ದೇಶಕ ರಾಕೇಶ್ ಮೂಡುಕೋಡಿ ಸಂದೇಶ ವಾಚಿಸಿದರು. ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.