ಇನ್ನೂ ನಿಂತಿಲ್ಲ ನೋಟು, ಚಿಲ್ಲರೆಗಾಗಿ ಪರದಾಟ ಬ್ಯಾಂಕ್‌ಗಳ ಮುಂದೆ ಸರತಿ ಸಾಲು; ವ್ಯಾಪಾರ ವಾಹಿವಾಟು ಸ್ಥಬ್ಧ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Bank 1 copy

Bank 2 copy

ಬೆಳ್ತಂಗಡಿ: ಪ್ರಮುಖವಾಗಿ ಭ್ರಷ್ಟಾಚಾರ ಹಾಗೂ ಕಪ್ಪು ಹಣಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ಪ್ರಧಾನ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ನ.೮ರ ಮಧ್ಯರಾತ್ರಿಯಿಂದ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ದಿಢೀರ್ ಸ್ಥಗಿತಗೊಳಿಸಿದ್ದು, ನೋಟು ಬದಲಾವಣೆ ಹಾಗೂ ಚಿಲ್ಲರೆಗಾಗಿ ಜನತೆಯ ಪರದಾಟ ಇನ್ನೂ ಮುಂದುವರಿದಿದೆ.
ದೇಶದ ಆರ್ಥಿಕತೆಯಲ್ಲೇ ಮಹಾಕ್ರಾಂತಿ ಎಂದು ಹೇಳಲಾಗುವ ಕ್ರಮವೊಂದರಲ್ಲಿ ದೇಶದಲ್ಲಿ ಕಪ್ಪು ಹಣ, ಖೋಟಾ ನೋಟು, ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೈಗೊಂಡ ದಿಟ್ಟ ಕ್ರಮದಿಂದಾಗಿ ಜನಸಾಮಾನ್ಯರ ಆರ್ಥಿಕ ವಹಿವಾಟಿನಲ್ಲಿ ಭಾರೀ ಅಸ್ತವ್ಯಸ್ಥತೆ ಉಂಟಾಗಿದೆ.
ಡಿ.೩೦ರವರೆಗೆ ಅವಕಾಶ: ಜನರು ತಾವು ಹೊಂದಿರುವ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಖಾತೆಗಳಿಗೆ ಜಮೆ ಮಾಡಲು ಡಿ. 30ರವರೆಗೆ ಕಾಲಾವಕಾಶ ನೀಡಲಾಗಿದೆ. ನ.8ರಂದು ಮೋದಿಯವರು ನೋಟು ರದ್ದತಿಯ ವಿಚಾರ ಬಹಿರಂಗ ಮಾಡಿದ್ದರು. ಮರುದಿನ ಬ್ಯಾಂಕ್‌ಗಳಲ್ಲಿ ವ್ಯವಹಾರ ಸ್ಥಗಿತ ಮಾಡಲಾಗಿತ್ತು. ಅಲ್ಲದೆ ಎಟಿಎಂಗಳನ್ನು ಬಂದ್ ಮಾಡಲಾಗಿತ್ತು. ನ.10ರಂದು ಬ್ಯಾಂಕ್‌ಗಳು ತೆರೆಯುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನೋಟು ಬದಲಾವಣೆಗಾಗಿ ಜನರ ದಂಡೇ ಮುಗಿ ಬಿದ್ದರು. ಎಟಿಎಂನಲ್ಲೂ ಇಲ್ಲ ನೋಟು: ಎಟಿಎಂಗಳಲ್ಲೂ ರೂ. 100ರ ನೋಟು ಹೊರತುಪಡಿಸಿ ಬೇರೆ ನೋಟು ಬರುತ್ತಿಲ್ಲ. 2000 ರೂ. ನೋಟುವಿನ ಗಾತ್ರ ಎಟಿಎಂಗೆ ಸರಿ ಹೊಂದುತ್ತಿಲ್ಲವಾದ್ದರಿಂದ ಎಟಿಎಂನ ಸೆಟ್ಟಿಂಗ್ ಬದಲಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೆಲವೆಡೆ ಪೂರ್ಣಗೊಂಡಿದ್ದು, 500 ಮತ್ತು 2000 ರೂ.ನ ನೋಟು ಎಟಿಎಂನಲ್ಲಿ ದೊರೆಯಲು ಆರಂಭವಾಗಿದೆ. ಆದರೆ ತಾಲೂಕಿಗೆ ಇದ್ಯಾವುದೂ ಇನ್ನೂ ಬಂದಿಲ್ಲ.
ಮೋದಿ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರ ಎಂದು ಹೇಳುವ ಮಂದಿಯೇ ತಮಗೆ ವೈಯುಕ್ತಿಕವಾಗಿ ತೊಂದರೆಯಾಗಿರುವುದಾಗಿ ಗುಟ್ಟಾಗಿ ಶಪಿಸುತ್ತಿದ್ದಾರೆ. ಬ್ಯಾಂಕ್‌ನವರು ತಮ್ಮ ಸಂಕಷ್ಟವನ್ನು ಅನುಭವಿಸಿಕೊಂಡು ಶಕ್ತಿ ಮೀರಿ ಶನಿವಾರ, ಆದಿತ್ಯವಾರ ಎನ್ನದೆ ಸೇವೆ ನೀಡಿದ್ದಾರೆ.ಜನ ಸಾಮಾನ್ಯರು ತಮ್ಮಲ್ಲಿರುವ ಹಳೆಯ ನೋಟುಗಳನ್ನು ಬದಲಾಯಿಸಲು ಬ್ಯಾಂಕ್‌ಗಳ ಮುಂದೆ ಕ್ಯೂ ನಿಂತಿದ್ದರೆ ಲೆಕ್ಕವಿಲ್ಲದಷ್ಟು ನೋಟುಗಳನ್ನು ಹೊಂದಿರುವವರು ಬೇರೆ ಬೇರೆ ದಾರಿಯ ಮೂಲಕ ರಂಗೋಲಿ ಕೆಳಗೆ ತೂರಲು ಪ್ರಯತ್ನಿಸಿದ್ದಾರೆ. ಕೆಲವರು ತಮ್ಮ ಆಪ್ತರ ಮೂಲಕ ಬ್ಯಾಂಕ್ ಅಕೌಂಟಿಗೆ ಹಾಕುವ ಪ್ರಯತ್ನ ಮಾಡುತ್ತಿದ್ದು, ಕೆಲವರು ಬಾಕಿ ಇರುವ ಸಾಲ ತೀರಿಸಲು ನೋಟುಗಳನ್ನು ಬಳಸಿದ್ದಾರೆ. ಕೆಲವರು ಜನ್‌ಧನ್ ಖಾತೆದಾರರಿಗೆ 25,000, 50,000 ರೂ. ನೀಡಿ ಕಪ್ಪು ಹಣವನ್ನು ಬಿಳಿಯನ್ನಾಗಿ ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಆದರೆ ಜನ್‌ಧನ್ ಯೋಜನೆ ತೀರಾ ಬಡವರಿಗೆ ಸೀಮಿತವಾದ ಯೋಜನೆಯಾಗಿದ್ದು, ಹಣ ಹಾಕಿಸಿಕೊಂಡವರು ಸರ್ಕಾರದ ಎಲ್ಲಾ ಯೋಜನೆಗಳಿಂದ ವಂಚಿತವಾಗಲಿದ್ದಾರೆ. ಕೆಲವರು ಚಿನ್ನ ಖರೀದಿಯಲ್ಲ್ಲಿ ತೊಡಗಿದ್ದು, ಕೇಂದ್ರ ಸರ್ಕಾರ ಇದರ ಮೇಲೂ ಕಣ್ಣಿಟ್ಟಿದೆ. ಪದೇ ಪದೇ ಹಣ ಬದಲಾಯಿಸುವವರ ಮೇಲೂ ಸರ್ಕಾರ ಕಣ್ಣಿಟ್ಟಿದ್ದು, ಬೆರಳಿಗೆ ಶಾಯಿ ಹಾಕುವ ಪ್ರಕ್ರಿಯೆಯೂ ನ.16ರಿಂದ ಕೆಲವಡೆ ಜಾರಿಯಾಗಿದೆ. ಡಿ.30ರ ನಂತರವೂ ಬದಲಾವಣೆಗೆ ಅವಕಾಶ: ಡಿ. 30ರ ಅವಧಿ ಮೀರಿದ ಬಳಿಕವೂ ನೋಟುಗಳನ್ನು ಬದಲಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, 2017ರ ಮಾರ್ಚ್ 31ರವರೆಗೂ ಅವಕಾಶ ಪಡೆದುಕೊಳ್ಳಬಹುದು. ಆದರೆ ಇವರು ನಿಗಧಿತ ಆರ್‌ಬಿಐ ಕಚೇರಿಗಳಲ್ಲಿ ಘೋಷಣಾ ಪತ್ರ ತುಂಬಿಸಿ ಕೊಡಬೇಕು. ಜತೆಗೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಸೂಕ್ತ ಕಾರಣ ನೀಡಬೇಕಾಗುತ್ತದೆ.
ವ್ಯಾಪಾರ ವಾಹಿವಾಟು ಸ್ಥಭ್ಧ: ಪ್ರಮುಖವಾಗಿ ಅಡಿಕೆ ವ್ಯಾಪಾರಸ್ಥರು, ದೊಡ್ಡ ದೊಡ್ಡ ಉದ್ಯಮಗಳು ವ್ಯಾಪಾರ ವಾಹಿವಾಟು ಇಲ್ಲದೆ ಸ್ಥಗಿತಗೊಂಡಿದೆ. ಹೋಟೇಲ್, ಅಂಗಡಿ ಉದ್ಯಮಗಳಿಗೂ ನೋಟು ರದ್ದತಿಯಿಂದ ವ್ಯಾಪಾರ ತೀವ್ರವಾಗಿ ಇಳಿಮುಖವಾಗಿದ್ದು, ಕೆಲವು ಅಂಗಡಿಗಳು ಇನ್ನೂ ಚೇತರಿಸಿಕೊಂಡಿಲ್ಲ.
ಸಂಘಗಳೂ ಸ್ಥಭ್ಧ: ರೈತರ ಪ್ರಮುಖ ಆರ್ಥಿಕ ವ್ಯವಹಾರ ಹೊಂದಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು ನೋಟು ರದ್ದತಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ಇಲ್ಲಿನ ಗ್ರಾಹಕರು, ರೈತರು ತೀರಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಹಣ ಬರಬೇಕಾಗಿದ್ದು, ಆದರೆ ಅದಿನ್ನೂ ತಲುಪಿಲ್ಲ. ಈಗಾಗಿ ಸಂಘಗಳಲ್ಲಿ ವಾಹಿವಾಟು ಸಂಪೂರ್ಣ ಸ್ಥಬ್ಧಗೊಂಡಿದೆ.
7 ಗಂಟೆಗೇ ಕ್ಯೂ ನಿಲ್ಲುವ ಜನ: ಬ್ಯಾಂಕ್‌ಗಳ ಮುಂದೆ ಜನರ ಕ್ಯೂ ಬೆಳಿಗ್ಗೆ 7 ಗಂಟೆಯಿಂದಲೇ ಪ್ರಾರಂಭವಾಗುತ್ತಿದೆ. ದಿನವೊಂದಕ್ಕೆ ರೂ. ತೆಗೆಯಲು ಮಾತ್ರ ಅವಕಾಶ. ೫೦೦ರ ನೋಟು ಸಾಕಷ್ಟು ಬಾರದೇ ಇರುವುದರಿಂದ ಇಡೀ ದಿನ ಬ್ಯಾಂಕ್‌ನಲ್ಲಿ ಕಾದು ಪಡೆದುಕೊಳ್ಳುವ ೨೦೦೦ ರೂ.ಯ ನೋಟಿನಿಂದ ಬೇರೆಡೆಗೆ ವ್ಯವಹಾರಕ್ಕೆ ಬಳಸಿದರೆ ಅಲ್ಲಿ ಮತ್ತೆ ಚಿಲ್ಲರೆಗಾಗಿ ಜನ ಪರದಾಡುವಂತಾಗಿದೆ. ಈ ನಡುವೆ ವಾಪ್ಸ್‌ಅಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಟು ರದ್ದತಿ ಬಗ್ಗೆ ಹರಿದಾಡುತ್ತಿರುವ ಜೋಕುಗಳು ತಲೆ ಬಿಸಿಯಲ್ಲಿರುವ ಗ್ರಾಹಕರ ಮನದಲ್ಲಿ ಹಾಸ್ಯದ ಅಲೆ ಹುಟ್ಟಿಸಿದ್ದಂತೂ ಸತ್ಯ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.