ಲಾಲ : ಬೈರ ಸಮಾಜ ಸೇವಾ ಸಂಘ ಪುತ್ರಬೈಲು ಹಾಗೂ ಮಹಾಮ್ಮಾಯಿ ಬೈರ ಯುವ ವೇದಿಕೆ ಪುತ್ರಬೈಲು ಇವರ ವತಿಯಿಂದ ಶ್ರೀ ಕ್ಷೇತ್ರದ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಅ.23 ರಂದು ಪುತ್ರಬೈಲು ಸಮಾಜ ಮಂದಿರ ವಠಾರದಲ್ಲಿ ಜರುಗಿತು.
ಉದ್ಘಾಟನೆಯನ್ನು ಬಿಜೆಪಿ ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ನೆರವೇರಿಸಿದರು.
ಅಧ್ಯಕ್ಷತೆಯನ್ನು ಬೈರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎನ್. ಕೆ. ಸುಂದರ್ ವಹಿಸಿದ್ದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ, ತಾ.ಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ನರೇಂದ್ರ, ಗ್ರಾ. ಯೋ. ಯೋಜನಾಧಿಕಾರಿ ರೂಪಾ ಜಿ ಜೈನ್, ಬಂಟ್ವಾಳ ತಾ| ಬೈರ ಸಮಾಜ ಸೇವಾ ಸಂಘದ ಅಧ್ಯಕ್ಷ ತಮ್ಮಣ್ಣ ಕೆ, ಕಾಸರಗೋಡು ಜಿಲ್ಲಾ ಸಂಘದ ಪ್ರ. ಕಾರ್ಯದರ್ಶಿ ರಮೇಶ್ ಕೂರಡ್ಕ, ಲಾಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಮೊದಲಾದವರು ಭಾಗಿಯಾಗಿದ್ದರು.
ಸಾಧಕರಿಗೆ ಸನ್ಮಾನ :
ಈ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್, ದೇಶ ಸೇವೆಗಾಗಿ ನಿವೃತ್ತ ಸೇನಾಧಿಕಾರಿ ಹಾಗೂ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿರುವ ಕಾಂಚೋಡು ಗೋಪಾಲಕೃಷ್ಣ ಭಟ್, ಕಲಾಸೇವೆಗಾಗಿ ಯಕ್ಷಗಾನ ಕಲಾವಿದ ವಿಲನ್ ಕುಮಾರ್ ಕೆ ಪಣಂಬೂರು, ಸಾಮಾಜಿಕ ಸೇವೆಗಾಗಿ ಉರಗ ಪ್ರೇಮಿ ಸ್ನೇಕ್ ಅಶೋಕ್ ಅವರನ್ನು ಸನ್ಮಾನಿಸಲಾಯಿತು.
ಸರ್ವಧರ್ಮೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಧಾಖಲಿಸಿದ ಸರ್ವ ಧರ್ಮೀಯ ವಿದ್ಯಾರ್ಥಿಗಳನ್ನೂ ಈ ಸಮಾರಂಭದಲ್ಲಿ ಪ್ರೋತ್ಸಾಹಿಸಲಾಯಿತು. ಅಶಕ್ತರಿಗೆ ನೆರವು : ಸಮಾರಂಭದಲ್ಲಿ ವಿಕಲಾಂಗೆಯಾಗಿರುವ ರುಮೈಝಾ ಬಾನು ಅವರಿಗೆ ಮತ್ತು ಇತ್ತೀಚೆಗಷ್ಟೇ ಶಂಕಿತ ಡೆಂಗ್ಯೂ ರೋಗದಿಂದ ಮೃತಪಟ್ಟ ನವೀನ್ ಅವರ ಮನೆಯವರಿಗಾಗಿ ಸಾಂತ್ವನ ನಿಧಿಯನ್ನು ಅವರ ತಂದೆ ಚಂದಪ್ಪ ಅವರಿಗೆ ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ : 151 ಕಾಳಿಂಗ ಸರ್ಪ, 4 ಸಾವಿರದಷ್ಟು ಇತರೆ ಹಾವುಗಳನ್ನು ಹಿಡಿದು ಸಂರಕ್ಷಿಸಿದ ಖ್ಯಾತ ಉರಗ ಪ್ರೇಮಿ ಸ್ನೇಕ್ ಜೋಯ್ ಅವರಿಂದ ಉರಗ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು. ಸಾಂಸ್ಕೃತಿಕ ಕಾರ್ಯಕ್ರಮ ದ ಭಾಗವಾಗಿ ಗಾನ, ನೃತ್ಯ, ಯಕ್ಷಗಾನ, ಹಾಸ್ಯ ಸಂಗಮ ನಡೆಯಿತು. ಉದಯ ಕುಮಾರ್ ಲಾಲ ಸ್ವಾಗತಿಸಿದರು. ಚಿದಾನಂದ ಧನ್ಯವಾದವಿತ್ತರು. ಧನಂಜಯ ನಿರೂಪಿಸಿದರು.