ಝೀ ಕನ್ನಡ ಚಾನೆಲ್‌ನಲ್ಲಿ ಕಾಮಿಡಿ ಕಿಲಾಡಿಗಳಾಗಿ ಮಿಂಚುತ್ತಿರುವ ತಾಲೂಕಿನ ಯುವಪ್ರತಿಭೆಗಳಾದ ಹಿತೇಶ್ ಕುಮಾರ್ ಮತ್ತು ಅನೀಸ್ ಅಮೀನ್

   ಕನ್ನಡದ ಹೆಸರಾಂತ ಮಾಧ್ಯಮವಾದ ಝೀ ಕನ್ನಡ ವಾಹಿನಿಯಲ್ಲಿ ನಡೆಯುತ್ತಿರುವ ಕಾಮಿಡಿ ಕಿಲಾಡಿಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ತಾಲೂಕಿನ ಇಬ್ಬರು ಪ್ರತಿಭೆಗಳು ಅವಕಾಶ ಪಡೆದುಕೊಂಡಿದ್ದು ತಾಲೂಕಿನ ಗರಿಮೆಯನ್ನು ರಾಜ್ಯಾಧ್ಯಂತ ಪಸರಿಸುವಂತೆ ಮಾಡಿದ್ದಾರೆ.
ಬಳೆಂಜ ಸನಿಹದ ಕಾಪಿನಡ್ಕ ನಿವಾಸಿ ಹಿತೇಶ್ ಕುಮಾರ್ ಮತ್ತು ವೇಣೂರಿನ ಅನೀಸ್ ಅಮೀನ್ ಅವರೇ ಇದೀಗ ಝಿ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರು, ಟಿ.ವಿ. ವೀಕ್ಷಕರು ಹಾಗೂ ತೀರ್ಪುಗಾರರ ಮನಸೆಳೆಯುವ ರೀತಿಯಲ್ಲಿ ಪ್ರದರ್ಶನ ನೀಡುತ್ತಿರುವ ಯುವ ಪ್ರತಿಭೆಗಳು.
hithesh (3) copyಹಿತೇಶ್ ಕುಮಾರ್ ಬಗ್ಗೆ ಒಂದಿಷ್ಟು :
ಕಾಪಿನಡ್ಕ ಗಾಂಧಿನಗರದ ಮುತ್ತಪ್ಪ ಪೂಜಾರಿ ಮತ್ತು ಶ್ರೀಮತಿ ರತ್ನಾ ದಂಪತಿಯ ಪುತ್ರರಾಗಿರುವ ಹಿತೇಶ್ ಅವರು ತಾಲೂಕಿನ ಹೆಮ್ಮೆಯ ಗ್ರಾಮೀಣ ಪ್ರತಿಭೆಯಾಗಿ ಮಿಂಚಿ ಇದೀಗ ಇಡೀ ರಾಜ್ಯದಲ್ಲೇ ಹಾಸ್ಯದ ಹೊನಲು ಹರಿಸಿದ್ದಾರೆ.
ತನ್ನ ವಿದ್ಯಾರ್ಥಿ ಜೀವನದಿಂದಲೇ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದ ಇವರು ಒಂದೊಂದೇ ವೇದಿಕೆಗಳನ್ನು ಏರುತ್ತಾ ಪ್ರೇಕ್ಷಕರ ಮನಗೆದ್ದು ತಾಲೂಕಿನ ಹೆಮ್ಮೆಯ ಕಲಾತಂಡವಾದ ಶ್ರೀಗುರು ಮಿತ್ರ ಸಮೂಹ (ರಿ) ಬೆಳ್ತಂಗಡಿ ತಂಡದಲ್ಲಿ ಕಳೆದ ೬ ವರ್ಷಗಳಿಂದ ಸರ್ವಾಂಗೀಣ ಕಲಾವಿದರಾಗಿ ಕಲಾ ಪ್ರೌಢಿಮೆ ಮೆರೆದಿದ್ದಾರೆ. ತಾಲೂಕು ಜಿಲ್ಲೆ ಹಾಗೂ ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಹಾಡು, ನೃತ್ಯ, ಅಭಿನಯಗಳಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಸಾಧನೆ ಅವರದ್ದು. ಅಷ್ಟೇ ಅಲ್ಲದೇ ತನ್ನ ವಿಭಿನ್ನ ರೀತಿಯ ಮಿಮಿಕ್ರಿ ಹಾಗೂ ಹಾಸ್ಯ ನಟನೆಯಿಂದ ಎಲ್ಲರನ್ನು ತನ್ನತ್ತ ಸೆಳೆಯುವ ಹಿತೇಶ್ ಹಲವಾರು ಸಂಸ್ಥೆಗಳಿಂದ ಸನ್ಮಾನಿತಗೊಂಡು, ಕಾಮಿಡಿ ಕಿಂಗ್ ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡವರಾಗಿದ್ದಾರೆ.
Anish copyಅನೀಶ್ ಅಮೀನ್ ವೇಣೂರು ಬಗ್ಗೆ ಒಂದಿಷ್ಟು :
ದೂರದಿಂದ ನೋಡಿದರೆ ಗಂಭೀರತೆಯ ನಡವಳಿಕೆ. ಹತ್ತಿರ ಹೋಗಿ ಮಾತನಾಡಿದರೆ ಹಾಸ್ಯದ ಮಾತುಗಳು. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು, ತನ್ನ ೨೩ನೇ ವಯಸ್ಸಿಗೇ ಶಾಲೆಯ ಮುಖ್ಯೋಪಾಧ್ಯಾಯ ಎನ್ನುವ ಜವಾಬ್ಧಾರಿಯುತ ಪಟ್ಟ ಅಲಂಕರಿಸಿದವರು ಅನೀಶ್ ಅಮೀನ್ ಅವರು. ವೇಣೂರು ಕೋಟ್ಯಪ್ಪ ಪೂಜಾರಿಯವರ ಪುತ್ರರಾಗಿರುವ ಅನೀಶ್ ತನ್ನ ವಿದ್ಯಾರ್ಥಿ ದೆಸೆಯಿಂದಲೇ ಅಭಿನಯ, ಹಾಡು, ನಾಟಕ ಬರಹಗಾರಿಕಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದವರು. ತಾಲೂಕಿನ ಉತ್ತಮ ಕಾರ್ಯಕ್ರಮ ಉದ್ಘೋಷಕರಾಗಿಯೂ ಹಲವಾರು ವೇದಿಕೆಯನ್ನು ಚಂದಕಾಣಿಸಿದ್ದಾರೆ. ಉತ್ತಮ ಕಲಾವಿದರಾಗಿರುವ ಅವರು ಶ್ರೀಗುರು ಮಿತ್ರ ಸಮೂಹ (ರಿ) ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಪ್ರಮುಖ ಕಲಾವಿದರ ಸಾಲಿನಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿದ್ದು, ತಾಲೂಕಿನಿಂದ ಹಿಡಿದು ರಾಜ್ಯ ಮಟ್ಟದವರೆಗೆ ಭಾಗವಹಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಅದಲ್ಲದೇ, ನಾಟಕದಲ್ಲಿ ವಿಶೇಷ ಅಭಿರುಚಿಯನ್ನು ಹೊಂದಿರುವ ಇವರು ನಾಟಕ ರಚನೆಗಾರ ಹಾಗೂ ಹಾಸ ಕಲಾವಿದರಾಗಿಯೂ ಕಲಾರಸಿಕರ ಮನಗೆದ್ದಿದ್ದಾರೆ. ಮರ್ಲ್ ಕಟ್ಟೊರ್ಚಿ ಸಾಮಾಜಿಕ ಹಾಸ್ಯ ನಾಟಕ ಬರೆದು ಈಗಾಗಲೇ ಎಲ್ಲರ ಮನಗೆದ್ದಿರುವ ಅವರನ್ನು ಹಲವಾರು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿವೆ. ಪ್ರತೀ ಶನಿವಾರ ಮತ್ತು ಆದಿತ್ಯವಾರ ರಾತ್ರಿ ಝೀ ಕನ್ನಡ ವಾಹಿನಿಯಲ್ಲಿ ಇವರ ಪ್ರದರ್ಶನ ವೀಕ್ಷಿಸಬಹುದಾಗಿದೆ. ರಾಜ್ಯದ ೧೫ ಸಾವಿರ ಕಲಾವಿದರ ಪೈಕಿ ಆಯ್ಕೆಗಾರರ ಮನಗೆಲ್ಲುವ ರೀತಿಯ ಕಲಾಗಾರಿಕೆ ಪ್ರದರ್ಶನ ನೀಡಿರುವ ಈ ಇಬ್ಬರು ಕಲಾವಿದರು ದ.ಕ. ಜಿಲ್ಲೆಯಿಂದಲೇ ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದು, ಮುಂದಕ್ಕೆ ಇವರ ಕಲಾ ಪ್ರದರ್ಶನ ತೀರ್ಪುಗಾರರು ಮತ್ತು ಪ್ರೇಕ್ಷಕರ ಮನಗೆದ್ದು ಇನ್ನಷ್ಟು ಉತ್ತಮ ಅವಕಾಶಗಳು ಅವರ ಪಾಲಿಗೆ ದೊರೆಯಲಿ ಎಂದು ಶುಭ ಹಾರೈಸೋಣ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.