ಅ.24: ಡಾ. ಡಿ. ವೀರೇಂದ್ರ ಹೆಗ್ಗಡೆಯವರ 49ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ


veerendra hegde copy * 1968 ನೇ ಅ.24ರಂದು ಪಟ್ಟಾಭಿಷೇಕ.

* ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್, ಯೋಗ ಶಿಕ್ಷಣ ಮಹಾ ವಿದ್ಯಾಲಯ, ಜನಜಾಗೃತಿ ವೇದಿಕೆ, ಜ್ವಾನವಿಕಾಸ ಯೋಜನೆ ಸೇರಿದಂತೆ ಅನೇಕ ನೂತನ ಯೋಜನೆಗಳ ಸಂಸ್ಥಾಪಕ.
* ವಿದ್ಯೆ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಅಧ್ವಿತೀಯ ಕೊಡುಗೆ.
* ರಾಜರ್ಷಿ, ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳ ಸರದಾರ.
* ಪ್ರಕೃತಿ ಚಿಕಿತ್ಸೆ, ಧರ್ಮೋತ್ಥಾನ ಟ್ರಸ್ಟ್, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಭಜನಾ ತರಭೇತಿ ಕಮ್ಮಟದಂತಹಾ ವೈಶಿಷ್ಟ್ಯಪೂರ್ಣ
ಕಾರ್ಯಕ್ರಮದ ರೂವಾರಿ.

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ 49ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.24ರಂದು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ದಿನ ಊರ-ಪರವೂರ ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸಂಸ್ಥೆಯವರು, ಸರಕಾರಿ ಅಧಿಕಾರಿಗಳು ಸೇರಿದಂತೆ ನಾಗರಿಕರು ಕ್ಷೇತ್ರಕ್ಕೆ ಬಂದು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ಅಭಿವಂದನೆಗಳನ್ನು ಸಲ್ಲಿಸಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಕ್ಷೇತ್ರದ ಹಿರಿಯ ಸಿಬ್ಬಂದಿಯವರನ್ನು ಸನ್ಮಾನಿಸುವ ಕಾರ್ಯಕ್ರಮ ವರ್ಷಂಪ್ರತಿ ನಡೆಯುತ್ತಿದೆ.
1968ನೇ ಅಕ್ಟೋಬರ್ 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ೨೧ನೇ ಧರ್ಮಾಧಿಕಾರಿ ಯಾಗಿ ಡಾ. ವೀರೇಂದ್ರ ಹೆಗ್ಗಡೆಯವರು  ಪಟ್ಟಾಭಿಷಿಕ್ತರಾಗಿದ್ದರು. ಬಳಿಕ ಅವರು ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಅನೇಕ ಪರಿವರ್ತನೆಗಳನ್ನು, ಹೊಸ- ಹೊಸ ಯೋಜನೆಗಳನ್ನು ಜಾರಿಗೆ ತಂದು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಕ್ಷೇತ್ರವಾಗಿ ಜನಮನ್ನಣೆಗೆ ಪಾತ್ರವಾಗಿರುವುದು ಭಕ್ತ ಸಮೂಹಕ್ಕೆ ಹರ್ಷವನ್ನುಂಟು ಮಾಡಿದೆ.
ಶ್ರೀ ಕ್ಷೇತ್ರದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಚರ್ತುವಿಧ ದಾನ ಪರಂಪರೆಯನ್ನು ಮುಂದುವರಿಸಿಕೊಂಡು, ಕಾಲದ ಅಗತ್ಯತೆಗೆ ಅನುಗುಣವಾಗಿ ಈ ಪರಂಪರೆಗೆ ಹೊಸ ದಿಕ್ಕನ್ನು ನೀಡಿದವರು ಡಾ| ಹೆಗ್ಗಡೆಯವರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ಯೋಜನೆಗಳು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮಗಳು, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು, ಆರೋಗ್ಯ ಸುರಕ್ಷ ಮತ್ತು ನೈರ್ಮಲ್ಯ ಯೋಜನೆಗಳು, ಪರಿಸರ ಸಂಬಂಧಿತ ಕಾರ್ಯಕ್ರಮಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳು, ರುಡ್‌ಸೆಟ್ ಮೂಲಕ ಸ್ವ ಉದ್ಯೋಗ ತರಬೇತಿ
ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳು ಇಂದು ರಾಜ್ಯದಾದ್ಯಂತ ನಡೆಯುತ್ತಿದ್ದು, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮನ್ನಣೆಗೂ ಪಾತ್ರವಾಗಿದೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ ರಾಜ್ಯ ಹಾಗೂ ಹೊರ ರಾಜ್ಯದ ನೂರಾರು ದೇವಸ್ಥಾನ, ಬಸದಿಯನ್ನು ಶಾಸ್ತ್ರ ಬದ್ಧವಾಗಿ ನವೀಕರಿಸಲಾಗಿದೆ. ಶಾಂತಿವನ ಟ್ರಸ್ಟ್, ಯೋಗ ಮತ್ತು ನೈತಿಕ ಶಿಕ್ಷಣ, ಭಜನಾ ತರಬೇತಿ ಕಮ್ಮಟಗಳು, ಯಕ್ಷಗಾನ ತರಬೇತಿ, ಮಂಜೂಷಾ ವಸ್ತು ಸಂಗ್ರಹಾಲಯ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಮೊದಲಾದ ಸಂಸ್ಥೆಗಳ ಮೂಲಕ ಸಂಸ್ಕೃತಿ ರಕ್ಷಣೆಯ ಕಾರ್ಯ ಕ್ರಮಗಳನ್ನೂ ಹೆಗ್ಗಡೆಯವರು ಮಾಡುತ್ತಿದ್ದಾರೆ.
ಪ್ರತಿ ವರ್ಷ ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡ ಕುಟುಂಬಗಳಿಗೆ ಆಧಾರವಾಗಿದ್ದು, ಅನೇಕ ಸಂಘ-ಸಂಸ್ಥೆಗಳು ಧರ್ಮಸ್ಥಳದ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಲ್ಲಿ ಸೇರಿ ಮದ್ಯಮುಕ್ತರಾಗಿರುವ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನೇಕ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಕಾಲೇಜು, ಕಾನೂನು ಕಾಲೇಜುಗಳು ನಡೆಯುತ್ತಿವೆ. ತಮ್ಮ ಸಂಸ್ಥೆಗಳ ಮೂಲಕ ಈಗಾಗಲೇ 3 ಗಿನ್ನಿಸ್ ದಾಖಲೆಗಳನ್ನೂ ಕೂಡ ಮಾಡಲಾಗಿದೆ. ಸ್ವಚ್ಚ ಧಾರ್ಮಿಕ ನಗರ ಎಂಬ ಹಿರಿಮೆಗೂ ಪಾತ್ರರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಈ ಎಲ್ಲಾ ಕ್ರಾಂತಿಕಾರಕ ಕಾರ್ಯಕ್ರಮಗಳು ಅಪಾರ ಜನಮನ್ನಣೆ ಹಾಗೂ ಹಿರಿಮೆಗೆ ಪಾತ್ರವಾಗಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಿಗೂ ಪಾತ್ರವಾಗಿವೆ. ಡಾ. ಹೆಗ್ಗಡೆಯವರಿಗೂ ಪದ್ಮವಿಭೂಷಣ ಗೌರವವನ್ನೂ ತಂದುಕೊಟ್ಟಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.