ಮಡಂತ್ಯಾರು : ಮಡಂತ್ಯಾರು ಪ್ರಾ.ಕೃ.ಪ.ಸ.ಸಂಘ ಇದರ ವತಿಯಿಂದ ಸಂಘದಲ್ಲಿ ಸುದೀರ್ಘ ಸುಮಾರು 40 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಹಾಗೂ ಕಳೆದ ಮೂರು ವರ್ಷಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಜು.31 ರಂದು ನಿವೃತ್ತಿ ಹೊಂದಿದ ಶ್ರೀಮತಿ ತುಳಸಿ ಪಿ ಇವರಿಗೆ ಬೀಳ್ಕೊಡುವ ಸಮಾರಂಭವು ಸೆ.18 ರಂದು ಜರುಗಿತು. ನಿವೃತ್ತ ಶ್ರೀಮತಿ ತುಳಸಿ.ಪಿ ಇವರಿಗೆ ಸಂಘದ ಅಧ್ಯಕ್ಷ ಕೆ. ಅರವಿಂದ ಜೈನ್ ಹಾಗೂ ಎಲ್ಲಾ ನಿರ್ದೇಶಕರ ಉಪಸ್ಥಿತಿಯಲ್ಲಿ ಸಂಘದ ಪರವಾಗಿ ಶಾಲು ಹೊದಿಸಿ ಚಿನ್ನದ ಉಂಗುರ ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಪೂರ್ಣವಾಗಿ ಅಭಿನಂದಿಸಲಾಯಿತು. ಜೊತೆಗೆ ಅವರ ಪತಿ ಪುರುಶೋತ್ತಮ ಆಚಾರ್ ದಂಪತಿ ಸಮೇತ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು. ಅದೇ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರ ಪರವಾಗಿ ಶಾಲು ಹೊದಿಸಿ ಚಿನ್ನದ ಉಂಗುರ ಫಲ ಪುಷ್ಪ ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು. ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜ ಸನ್ಮಾನ ಪತ್ರ ವಾಚಿಸಿ ಶುಭ ಕೋರಿದರು. ಸಂಘದ ಉಪಾಧ್ಯಕ್ಷ ಧರ್ಣಪ್ಪ ಗೌಡ ಮಾತನಾಡಿ ಶ್ರೀಮತಿ ತುಳಸಿ ಪಿ ಸುದೀರ್ಘ ಸೇವೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಘದ ಅಭಿವೃದ್ದಿಗೆ ಗಣನೀಯ ಕೊಡುಗೆಯನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತನ್ನ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡು ಅಭಿನಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಂಘದ ಸರಾಫರಾದ ಕೆ. ದಾಮೋದರ ಆಚಾರ್ಯ ಹೂಗುಚ್ಚ ನೀಡಿ ಗೌರವಿಸಿದರು.