ರಾಷ್ಟ್ರ ಮಟ್ಟದ ಕ್ರೀಡಾಪಟು ಶಿಕ್ಷಕ ಪ್ರಭಾಕರ ಹೆಗ್ಡೆಯವರಿಗೆ ರಾಷ್ಟ್ರಪ್ರಶಸ್ತಿ

Prabhakar hegde copy ಪ್ರಶಸ್ತಿಗಳು: 2009-10ರಲ್ಲಿ ದ.ಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2013-14ರಲ್ಲಿ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಯವರು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ. 

ವಿವಿಧ ಕ್ಷೇತ್ರಗಳ ಸಾಧಕ : ಪ್ರಗತಿಪರ ಕೃಷಿಕರಾಗಿರುವ ಇವರು ಕೆಲ ವರ್ಷ ಸಿಂಡಿಕೇಟ್ ಬ್ಯಾಂಕ್ ವೇಣೂರು ಶಾಖೆಯಲ್ಲಿ ಫೀಲ್ಡ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು. ಇವರು ಬರೆದ ಶಿಶುಗೀತೆಗಳ ಪುಸ್ತಕ ‘ಸದಾಪುಷ್ಪ’ ಬಿಡುಗಡೆಗೊಂಡಿತ್ತು. ಬಜಿರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಹೊಸಪಟ್ನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ವೇಣೂರು ಮಂಡಲ ಪಂಚಾಯತು ಸದಸ್ಯರಾಗಿ, ಉಪಪ್ರಧಾನರಾಗಿ, ಸಿಂಡಿಕೇಟ್ ಬ್ಯಾಂಕ್ ವೇಣೂರು ಶಾಖೆಯಲ್ಲಿ ಪೀಲ್ಡ್ ಅಸಿಸ್ಟೇಂಟ್ ಆಗಿ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿ, ವೇಣೂರು ಸಿ.ಎ ಬ್ಯಾಂಕಿನ ನಿರ್ದೇಶಕರಾಗಿ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ , ಮೂಡಬಿದ್ರೆ ವೀರ ಮಾರುತಿ ದೇವಸ್ಥಾನದ ಮೊಕ್ತೇಸರರಾಗಿ, ಮಿತ್ರ ಮಂಡಳಿ ಬಜಿರೆಯ ಅಧ್ಯಕ್ಷರಾಗಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳ್ತಂಗಡಿ : ಶಿಕ್ಷಕರಾಗಿ ಮಾಡಿದ ಪ್ರಾಮಾಣಿಕ ಸೇವೆ, ಶಿಕ್ಷಣಕ್ಕೆ ಪೂರಕ ಕಾರ್ಯಕ್ರಮ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡಿದ ಉತ್ತಮ ಸಾಧನೆ ಇವುಗಳನ್ನು ಪರಿಗಣಿಸಿ ಮಂಗಳತೇರು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, ರಾಷ್ಟ್ರ ಮಟ್ಟದ ಕ್ರೀಡಾ ಪಟು, ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಹಟ್ಟಾಜೆ ಇವರು 2015-16ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೆ.5ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್‌ಮುಖರ್ಜಿ ಅವರು ಪ್ರಭಾಕರ ಹೆಗ್ಡೆಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ. ಈ ಹಿಂದೆ 1982ರಲ್ಲಿ ಶಿಶಿಲ ಹಿ.ಪ್ರಾ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವರಾಮ ಶಿಶಿಲ ಅವರು ತಾಲೂಕಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದು, ಇದೀಗ ಪ್ರಭಾಕರ ಹೆಗ್ಡೆ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಎಡನೇ ಶಿಕ್ಷಕರು ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಪರಿಚಯ: ಕಾರ್ಕಳ ತಾಲೂಕಿನ ಕಾಬೆಟ್ಟು ಏಳ್ನಾಡು ಗುತ್ತು ಕುಟುಂಬಸ್ಥರಾದ ಹಟ್ಟಾಜೆಗುತ್ತು ವಿ. ಪ್ರಭಾಕರ ಹೆಗ್ಡೆಯವರು 1957 ಫೆ.9ರಂದು ಕುಂಟಾಡಿ ಮಾಬಿಗುತ್ತು ಶಿಕ್ಷಕ ಕೆ. ಧರ್ಣಪ್ಪ ಹೆಗ್ಡೆ ಮತ್ತು ವಾಲ್ಪಾಡಿ ಹೆಗ್ಗಡೆ ಮನೆ ಕಮಲ ಹೆಗ್ಗಡ್ತಿ ದಂಪತಿಗಳ ಪುತ್ರರಾಗಿ ಶಿರ್ತಾಡಿ  ವಾಲ್ಪಾಡಿ ಗ್ರಾಮದ ಹೆಗ್ಗಡೆ ಮನೆಯಲ್ಲಿ ಜನಿಸಿದರು. ಚಿಕ್ಕಂದಿನಿಂದ ಸಾಕಿ ವಿದ್ಯಾಭ್ಯಾಸ ಕೊಟ್ಟವರು ದೊಡ್ಡಪ್ಪ ಶಿಕ್ಷಕ ಹಟ್ಟಾಜೆ ಗುತ್ತು ಬಿ. ನಾರಾಯಣ ಹೆಗ್ಡೆ ಹಾಗೂ ನೇತ್ರಾವತಿ ಹೆಗ್ಗಡ್ತಿ ದಂಪತಿಗಳು. ಇವರು ವಾಲ್ಪಾಡಿ ಪೆರಿಯೊಟ್ಟು ಕಿ.ಪ್ರಾ ಶಾಲೆ, ಹಿ.ಪ್ರಾ ಶಾಲೆ ಬಜಿರೆ ಹಾಗೂ ವಿದ್ಯೋದಯ ಶಾಲೆ ವೇಣೂರಿನಲ್ಲಿ ಪ್ರಾಥಮಿಕ ಶಿಕ್ಷಣ, ವೇಣೂರು ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು ಸರ್ವೋದಯ ಶಿಕ್ಷಕರ ತರಬೇತಿ ಕೇಂದ್ರ ವಿರಾಜಪೇಟೆಯಲ್ಲಿ ಶಿಕ್ಷಣ ತರಬೇತಿಯನ್ನು ಪಡೆದಿದ್ದರು.
1991ರಿಂದ 1999ರ ವರೆಗೆ ಕಿ.ಪ್ರಾ ಶಾಲೆ ತಿಮ್ಮಣಬೆಟ್ಟು, 2000ದಿಂದ 2007ರ ವರೆಗೆ ಕಿ.ಪ್ರಾ ಶಾಲೆ ನೆಕ್ಕಿಲು, 2007ರಿಂದ ಹಿ.ಪ್ರಾ. ಶಾಲೆ ಮಂಗಳತೇರು ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂರು ಶಾಲೆಗಳಲ್ಲೂ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ವಿವಿಧ ಮೂಲಗಳಿಂದ ಒದಗಿಸಲು ಯಶಸ್ವಿಯಾಗಿದ್ದಾರೆ.
ದೈಹಿಕ ಶಿಕ್ಷಕರಲ್ಲದಿದ್ದರೂ ಮಕ್ಕಳಿಗೆ ತರಬೇತಿ ಕೊಟ್ಟು, ವಿದ್ಯಾರ್ಥಿಗಳು ವಲಯ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆಯಲು ಶ್ರಮಿಸಿದ್ದಾರೆ. ಉತ್ತಮ ಕ್ರೀಡಾ ಪಟುವಾಗಿರುವ ಇವರು ಚಕ್ರ ಎಸೆತ, ಗುಂಡೆಸೆತ, 500 ಮೀಟರ್ ನಡಿಗೆ, 10ಸಾವಿರ ಮೀ ನಡಿಗೆಯಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಪದಕವನ್ನು ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.
ಚಿತ್ರಕಲಾವಿದ : ಉತ್ತಮ ಚಿತ್ರಕಲಾವಿದರಾದ ಇವರು ನೆಕ್ಕಿಲು, ಬಜಿರೆ, ಮಂಗಳತೇರು ಶಾಲೆಗಳ ಗೋಡೆಯಲ್ಲಿ ಪಾಠಕ್ಕೆ ಪೂರಕವಾದ ವರ್ಣ ಚಿತ್ರಗಳನ್ನು, ಗೋಡೆ ಬರಹಗಳನ್ನು ತಮ್ಮ ಸ್ವಂತ ಖರ್ಚಿನಿಂದ ರಜೆಯ ವೇಳೆಯಲ್ಲಿ ಮಾಡಿದ್ದಾರೆ. ಮಂಗಳತೇರು ಶಾಲಾ ಗೋಡೆಯಲ್ಲಿ ಸಿಮೆಂಟು ಉಬ್ಬು ಚಿತ್ರಗಳು ಎಲ್ಲರ ಗಮನವನ್ನು ಸೆಳೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.