ಲಭ್ಯ ವ್ಯವಸ್ಥೆಯೊಳಗೆ ಎಂಡೋ ಪಾಲನಾ ಕೇಂದ್ರ ಸುವ್ಯವಸ್ಥೆಗೆ ಕೆಲವೊಂದು ಮಾರ್ಗಸೂಚಿ ಪಾಲನಾ ಕೇಂದ್ರದ ಕಾರ್ಯವೈಖರಿ ಪರಿಶೀಲನಾ ಸಭೆಯಲ್ಲಿ ಎಸಿ ಸೂಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

yendo palana kendra posakarondige samvada copyಶಾಶ್ವತ ಎಂಡೋ ಪುನರ್ವಸತಿ ಕೇಂದ್ರಕ್ಕೆ ಸ್ಥಳಕ್ಕೆ ಕ್ರಮ :
ಕೊಕ್ಕಡದ ಸಮೀಪವೇ ಇರುವ ಎಂಡೋ ದುರಂತಕ್ಕೆ ಕಾರಣವೂ ಆಗಿರುವ ಗೇರು ಅಭಿವೃದ್ದಿ ನಿಗಮದ ವ್ಯಾಪ್ತಿಯೊಳಗೆ ಸರಕಾರಿ ದಾಖಲೆಯ ಪ್ರಕಾರ ಸರಕಾರಿ, ಗೋಮಾಳ ಸೇರಿದಂತೆ ಅನೇಕ ಎಕ್ರೆ ಭೂಮಿಯಿದ್ದು ಕೊಕ್ಕಡದಲ್ಲಿ ಎಂಡೋ ಸಂತ್ರಸ್ಥರಿಗಾಗಿ ಶಾಶ್ವತ ಪುನರ್ವಸತಿ ಕೇಂದ್ರವನ್ನು ಭವಿಷ್ಯದಲ್ಲಿ ಇಲ್ಲಿ ರಚಿಸಲು ಬೇಕಾದ ಕನಿಷ್ಠ ೫ ಎಕ್ರೆ ಸ್ಥಳವನ್ನು ಹಲ್ಲಿಂಗೇರಿ ಅಥವ ಸೌತಡ್ಕ ಪ್ರದೇಶದಲ್ಲಿ ನೀಡಬೇಕು ಅನ್ನುವುದು ಸಂತ್ರಸ್ಥರ ಮುಖ್ಯ ಆಗ್ರಹವಾಗಿದ್ದು ಈ ಬಗ್ಗೆ ಸ್ಪಂದಿಸಿದ ಎಸಿಯವರು ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರಿಗೆ ಸ್ಥಳದಲ್ಲೇ ಸೂಚನೆಯನ್ನು ನೀಡಿ ಮುಂದಿನ ವಾರದೊಳಗೆ ನನಗೆ ಎಲ್ಲಿ ಈ ಬಗ್ಗೆ ಸ್ಥಳ ಗುರುತಿಸಬಹುದು ಅನ್ನುವ ಬಗ್ಗೆ ದಾಖಲೆ ನೀಡಬೇಕು ಎಂದು ಸೂಚಿಸಿದರು.

ಕೊಕ್ಕಡ : ರಾಜ್ಯ ಸರಕಾರದ ಅನುದಾನ ದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರವರ್ತಿತವಾಗಿರುವ ಕೊಕ್ಕಡದ ಎಂಡೋ ಪಾಲನಾ ಕೇಂದ್ರದ ಕಾರ್ಯವೈಖರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ವರದಿಯನ್ನು ನೀಡಲು ಪಾಲನಾ ಕೇಂದ್ರದ ಪೋಷಕರೊಂದಿಗಿನ ಸಂವಾದ ಆ.23 ರಂದು ಕೊಕ್ಕಡದ ಎಂಡೋ ಪಾಲನಾ ಕೇಂದ್ರದಲ್ಲಿ ನಡೆಯಿತು.
ಪುತ್ತೂರು ಉಪವಿಭಾಗದ ಆಯುಕ್ತರಾದ ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಪಾಲನಾ ಕೇಂದ್ರದ ಸಮನ್ವಯಾಧಿಕಾರಿ ಅವಿನಾಶ್ ಎ. ಆರ್. ರವರು ಇಲ್ಲಿ ಎಂಡೋ ಪಾಲನಾ ಕೇಂದ್ರ ಆರಂಭಿಸಿದಂದಿನಿಂದ ಇಲ್ಲಿವರೆಗೆ ನಡೆದು ಬಂದ ವಿಷಯಗಳನ್ನು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಬಳಿಕ ಪೋಷಕರೊಂದಿಗೆ ನೇರ ಸಂವಾದವನ್ನು ಉಪವಿಭಾಗಾಧಿ ಕಾರಿಯವರು ನಡೆಸಿದರು. ಇಲ್ಲಿವರೆಗೆ ಪ್ರತೀ ತಿಂಗಳೂ ಎಂಡೋ ಸಂತ್ರಸ್ಥರ ಚಿಕಿತ್ಸೆಗಾಗಿ ಬರುತ್ತಿರುವ ತಜ್ಞ ವೈದ್ಯರುಗಳು ಸಂತ್ರಸ್ಥರಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಮತ್ತು ಅವರಲ್ಲಿ ಈ ಚಿಕಿತ್ಸೆಯಿಂದುಂಟಾಗಿರುವ ಬದಲಾವಣೆಯ ಬಗ್ಗೆ ಸಂತ್ರಸ್ಥರಲ್ಲಿ ಮತ್ತು ಪೋಷಕರಲ್ಲಿ ಕೇಸ್ ಸ್ಟಡಿ ರಿಪೋರ್ಟ್ ಇಲ್ಲದಿರುವುದು ಎಸಿಯವರ ಗಮನಕ್ಕೆ ಬಂದಿದ್ದು ಈ ಬಗ್ಗೆ ಮುಂದೆ ಪಾಲನಾ ಕೇಂದ್ರ ಮತ್ತು ಹೊರಗಿನಿಂದ ಚಿಕಿತ್ಸೆಗಾಗಿ ಬರುವ ಸಂತ್ರಸ್ಥರಲ್ಲಿ ಚಿಕಿತ್ಸೆಯ ವಿವರವನ್ನು ಒಳಗೊಂಡ ರಿಪೋರ್ಟ್ ಕಡ್ಡಾಯ ಇರಬೇಕು , ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ಮತ್ತು ನಿರ್ವಹಣಾ ಸಂಸ್ಥೆಗೆ ಸೂಚಿಸಿದರು. ಈಗಾಗಲೇ ಅರ್ಜಿ ನೀಡಿ ಬಾಕಿಯುಳಿದ ಎಂಡೋ ಸಂತ್ರಸ್ಥರಿದ್ದಲ್ಲಿ ಮುಂದಿನ ಮಂಗಳವಾರ ಬೆಳ್ತಂಗಡಿಯಲ್ಲಿ ತನಗೆ ಮಾಹಿತಿ ನೀಡಬೇಕು. ಕೂಡಲೇ ಗುರುತಿನ ಚೀಟಿ ನೀಡುವ ಕ್ರಮ ಕೈಗೊಳ್ಳಲಾಗುವುದು , ಎಂಡೋ ಪಾಲನಾ ಕೇಂದ್ರದ ನಿರ್ವಹಣೆಯ ಬಗ್ಗೆ ಈಗಿರುವ ಸಂಸ್ಥೆಯಲ್ಲದೆ ಮುಂದಿನ ಅವಧಿಗೆ ಇನ್ನೂ ಉತ್ತಮವಾಗಿ ನಿರ್ವಹಿಸುವ ಆಸಕ್ತ ಸ್ವಯಂಸೇವಾ ಸಂಸ್ಥೆಗಳು ಯಾವುದಾದರೂ ಇದ್ದಲ್ಲಿ ಮುಂದಿನ ವರ್ಷದ ಮಾರ್ಚಿ ತಿಂಗಳೊಳಗೆ ವಿವರವನ್ನು ನೀಡಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಕೇಳಿ ಬಂದ ವಿಷಯಗಳು ; ಇದೀಗ ಎಂಡೋ ಪಾಲನಾ ಕೇಂದ್ರದಲ್ಲಿ ಅಂದಾಜು 27 ಸಂತ್ರಸ್ಥರು ದಿನಂಪ್ರತಿ ಬರುತ್ತಿದ್ದು ಇವರನ್ನು ನೋಡಿಕೊಳ್ಳಲೆಂದು ಇರುವವರು ಕೇವಲ ಒಬ್ಬ ಕೇರ್ ಟೇಕರ್ ಮಾತ್ರ. ಇಷ್ಟು ಮಂದಿ ಸಂತ್ರಸ್ಥರನ್ನು ನೋಡಿಕೊಳ್ಳಲು ಹೆಚ್ಚುವರಿ ಒಬ್ಬ ವಿಶೇಷ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸುವುದು ಅಗತ್ಯ ಎಂದು ಎಸಿ ಯವರು ಅಭಿಪ್ರಾಯ ಪಟ್ಟರು. ಮತ್ತು ನಿರ್ವಹಣಾ ಸಂಸ್ಥೆಗೆ ಈ ಬಗ್ಗೆ ನೇಮಕ ಮಾಡಲು ಸೂಚನೆಯನ್ನು ನೀಡಿದರು.
ಶೌಚಾಲಯವು ಈಗ ಸೆಂಟರ್ ನಿಂದ ಹೊರಭಾಗದಲ್ಲಿದ್ದು ಮಳೆಗಾಲದ ಸಂದರ್ಭ ಮಕ್ಕಳಿಗೆ ಹೋಗಲು ತೊಂದರೆ ಯಾಗುವುದನ್ನು ತಪ್ಪಿಸಬೇಕು, ಪ್ರತೀ ತಿಂಗಳ ಎರಡನೇ ಬುಧವಾರ ಎಂಡೋ ಸಂತ್ರಸ್ಥರ ತಪಾಸಣೆಗಾಗಿ ಬರುತ್ತಿರುವ ವೈದ್ಯರುಗಳ ತಂಡದಲ್ಲಿ ಈ ವರೆಗೂ ಕಲಿಕಾ ವಿದ್ಯಾರ್ಥಿಗಳೇ ಬರುತ್ತಿರುವ ಬಗ್ಗೆ ಸಂತ್ರಸ್ಥರಿಂದ ಆಕ್ಷೇಪ ವ್ಯಕ್ತವಾಯಿತು. ಈ ಬಗ್ಗೆ ಎಸಿಯವರು ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ಮುಂದಿನ ತಿಂಗಳಿನಿಂದ ಬರುವ ಪ್ರತೀ ವೈದ್ಯರ ತಂಡದಲ್ಲಿಯೂ ಆಯಾಯ ವಿಭಾಗಗಳ ಸ್ಪೆಷಾಲಿಸ್ಟ್ ವೈದ್ಯರುಗಳೇ ಬರಬೇಕು ಮತ್ತು ಕನಿಷ್ಠ ಎರಡು ತಿಂಗಳಿಗೊಮ್ಮೆ ಸೂಪರ್ ಸ್ಪೆಷಾಲಿಟಿ ವೈದ್ಯರುಗಳೂ ಇಲ್ಲಿಗೆ ಭೇಟಿ ನೀಡಬೇಕೆನ್ನುವ ಬಗ್ಗೆ ತಕ್ಷಣ ಬದಲಾವಣಾ ಮಾರ್ಗದರ್ಶಿಯನ್ನು ಅಳವಡಿಸುವಂತೆ ಸೂಚಿಸಿದರು. ಈಗಾಗಲೇ ಎಂಡೋ ಸಂತ್ರಸ್ಥರಿಗೆ ನೀಡಿರುವ ಸ್ಮಾರ್ಟ್ ಕಾರ್ಡುಗಳು ಸಂತ್ರಸ್ಥರ ತುರ್ತು ಚಿಕಿತ್ಸೆ ಪಡೆಯುವ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳೂ ಮಾನ್ಯತೆ ಮಾಡಬೇಕು,ಮಾನಸಿಕ ಮತ್ತು ಇನ್ನಿತರ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯರುಗಳು ನೀಡುವ ಮದ್ದಿನ ಚೀಟಿಯನ್ನು ಖಾಸಗಿ ಮೆಡಿಕಲ್ ಗಳಲ್ಲೇ ದುಬಾರಿ ಹಣ ಪಾವತಿಸಿ ಪಡೆಯಬೇಕಿದ್ದು ಮುಂದಕ್ಕೆ ಸರಕಾರದಿಂದಲೇ ಈ ಔಷಧಿಗಳನ್ನು ನೀಡಬೇಕು, ದಿನಂಪ್ರತಿ ಸಂತ್ರಸ್ಥರಿಗೆ ನೀಡಲಾಗುವ ಆಹಾರದ ವಿವರಗಳನ್ನು ಸೆಂಟರ್ ನಲ್ಲಿ ಗೋಡೆಯಲ್ಲಿ ಪೋಷಕರು ಕಾಣುವಂತೆ ಬರೆದು ಹಾಕುವುದು, ಕಳೆದ ವರ್ಷದಲ್ಲಿ ಬಾಕಿಯಾಗಿರುವ ಎಂಡೋ ಸಂತ್ರಸ್ಥರ 5 ತಿಂಗಳ ಮಾಸಾಶನವನ್ನು ಸಂತ್ರಸ್ಥರಿಗೆ ನೀಡಬೇಕು, ಕೊಕ್ಕಡ ಭಾಗದ ಸುಮಾರು 8 ಸಂತ್ರಸ್ಥರ ಮಾಸಾಶನವು ಕಳೆದ ಹಲವು ತಿಂಗಳಿನಿಂದ ಬಾರದೇ ಉಳಿದಿದ್ದು ಬೇರೆಯವರ ಹೆಸರಲ್ಲಿ ಹೋಗುತ್ತಿದೆ ಅನ್ನುವ ಅಸ್ಪಷ್ಟ ಮಾಹಿತಿಯನ್ನು ಸಂತ್ರಸ್ಥರು ತಿಳಿಸಿದಾಗ ಎಸಿಯವರು ಕೂಡಲೇ ಈ ಬಗ್ಗೆ ಕ್ರಮಕೈಗೊಂಡು ನಾಳೆ ಸಂಜೆಯೊಳಗೆ ಇದನ್ನು ಸರಿಪಡಿಸತಕ್ಕದ್ದು ಎಂದು ತಹಶೀಲ್ದಾರರಿಗೆ ಸೂಚಿಸಿದರು. ಮಲಗಿದ್ದಲ್ಲಿರುವ ಎಂಡೋ ಸಂತ್ರಸ್ಥರ ಚಿಕಿತ್ಸೆಗಾಗಿ ಮುಂದಿನ 2 ತಿಂಗಳೊಳಗೆ 4 ಮೊಬೈಲ್ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆಯಿಂದ ಆರಂಭಿಸಲಾಗುವುದು, ಮಲಗಿದಲ್ಲಿರುವ ಸಂತ್ರಸ್ಥರ ಪೋಷಕರಿಗೂ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು, ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆ ಗೇರಿಸಿದ್ದು ಕೂಡಲೇ ಕಾಮಗಾರಿ ಆರಂಬಿಸಬೇಕು, ಮುಂತಾದ ಬೇಡಿಕೆಗಳು ಪೋಷಕರಿಂದ ವ್ಯಕ್ತವಾದವು. ಎಂಡೋ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮನವಿಯೊಂದನ್ನು ನೀಡಿ ಎಂಡೋ ಸಂತ್ರಸ್ಥರ ಪುರ್ನವ್ಯವಸ್ಥೆಗಾಗಿ ಕೇರಳ ಮಾದರಿಯಲ್ಲಿ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಮತ್ತು ಎಂಡೋ ಪಾಲನಾ ಕೇಂದ್ರವನ್ನು ಮುಂದಕ್ಕೆ ನಿರ್ವಹಣೆಗಾಗಿ ಬೇರೆಯವರಿಗೆ ನೀಡುವಂತಹ ಸಂದರ್ಭ ಇದ್ದಲ್ಲಿ ನಿರ್ವಹಣೆ ಪಡಕೊಳ್ಳುವ ಯಾವುದೇ ಸಂಸ್ಥೆಯು ಮಾಹಿತಿ ಹಕ್ಕಿನಲ್ಲಿ ಸಾರ್ವಜನಿಕರು ಕೇಳಬಹುದಾದ ಮಾಹಿತಿಯನ್ನು ನೀಡುವ ಸಂಸ್ಥೆಯಾಗಿರಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಒಟ್ಟು ಎಂಡೋ ಪಾಲನಾ ಕೇಂದ್ರದ ನಿರ್ವಹಣೆಯನ್ನು ಈ ವರೆಗೆ ನಡೆಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆಯ ಬಗ್ಗೆ ಪೋಷಕರ ಸಭೆಯಲ್ಲಿ ಉತ್ತಮ ಅಭಿಪ್ರಾಯಗಳು ಕೇಳಿಬಂದಿದ್ದು ನಿರ್ವಹಣೆಯ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅರುಣ್ ಕುಮಾರ್, ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾ. ಕಲಾ ಮಧು ಶೆಟ್ಟಿ, ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅನುಷ್ಠಾನಾಧಿಕಾರಿ ಗಣೇಶ ಭಟ್, ಯೋಜನಾಧಿಕಾರಿ ಸತೀಶ್ ನಾಯಕ್, ಕೊಕ್ಕಡದ ವೈದ್ಯಾಧಿಕಾರಿ ಡಾ. ಪ್ರಕಾಶ್ , ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪ್ರತೀಶ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್ , ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಉಪಸ್ಥಿತರಿದ್ದರು .ಯೋಜನಾಧಿಕಾರಿ ಸತೀಶ್ ನಾಯಕ್ ಸ್ವಾಗತಿಸಿದರು. ಅನುಷ್ಠಾನಾಧಿಕಾರಿ ಗಣೇಶ ಭಟ್ ವಂದಿಸಿದರು. ಸಮನ್ವಯಾಧಿಕಾರಿ ಅವಿನಾಶ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.