ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳು ರುಡ್‌ಸೆಟ್ ಸಂಸ್ಥೆಗಳು

rudset varshika samavesa udhgatane copyಧರ್ಮಸ್ಥಳದಲ್ಲಿ  ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

  ಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸಹಭಾಗಿತ್ವದೊಂದಿಗೆ ಪ್ರಾರಂಭಿಸಲಾದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳು ಸ್ಪೂರ್ತಿಯ ಸೆಲೆಯಾಗಿದ್ದು ಇದರ ಯಶಸ್ಸನ್ನು ಕೇಂದ್ರ ಸರ್ಕಾರ ಗಮನಿಸಿ ಅದೇ ಮಾದರಿಯಲ್ಲಿ 523 ಆರ್‌ಸೆಟಿಗಳನ್ನು ಪ್ರಾರಂಭಿಸಿದೆ. ರುಡ್‌ಸೆಟ್ ನಾಯಕತ್ವದಲ್ಲಿ ಅದೇ ಮಾದರಿಯಲ್ಲಿ ಆರ್‌ಸೆಟಿಗಳು ಕೂಡಾ ಕೆಲಸ ಮಾಡುತ್ತಿವೆ.ಉಭಯ ಸಂಸ್ಥೆಗಳು ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳಾಗಿವೆ ಎಂದು ಕೇಂದ್ರ ಸರ್ಕಾರದ ಗ್ರಾಮಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಟಿ.ಸಿ. ನೌತಿಯಾಲ್ ಹೇಳಿದರು.
ಅವರು ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಆ.18 ರಂದು ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರ ಮತ್ತು ಸಮಾಜ ಎರಡೂ ಸಂಸ್ಥೆಗಳಿಂದ ಬಹಳಷ್ಟು ಸೇವೆ-ಸಾಧನೆಯ ನಿರೀಕ್ಷೆಯಲ್ಲಿದೆ. ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉತ್ತಮ ಮಾರುಕಟ್ಟೆ ವ್ಯವಸ್ಥೆ ಹಾಗೂ ಉದ್ಯಮಶೀಲತೆ ಬಗ್ಗೆ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸೇವೆ-ಸಾಧನೆ ಶ್ಲಾಘನೀಯವಾಗಿದೆ. ಇಂತಹ ಸೇವಾ ಸಂಸ್ಥೆಗಳು ದೇಶದೆಲ್ಲೆಡೆ ಇರಬೇಕೆಂದು ಅವರು ಆಶಿಸಿದರು.
ಜನರಲ್ಲಿ ಅನೇಕ ಪ್ರತಿಭೆ ಹಾಗೂ ಕೌಶಲ ಇದ್ದರೂ ಅದನ್ನು ಬಳಸುವ ವಿಧಾನ ಅವರಿಗೆ ಗೊತ್ತಿರುವುದಿಲ್ಲ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದಲ್ಲಿ ರುಡ್‌ಸೆಟ್ ಮತ್ತು ಆರ್‌ಸೆಟ್ ಸಂಸ್ಥೆಗಳ ಕೊಡುಗೆ ಶ್ಲಾಘನೀಯವಾಗಿದ್ದು ಕೇಂದ್ರ ಸರ್ಕಾರ ಕೂಡಾ ಅನೇಕ ಪ್ರಗತಿಪರ ಯೋಜನೆಗಳನ್ನು ಉಭಯ ಸಂಸ್ಥೆಗಳ ಮೂಲಕ ಜಾರಿಗೆ ತರಲು ಉದ್ದೇಶಿಸಿದೆ ಎಂದರು. ಆರ್ಥಿಕ ಪ್ರಗತಿಯೊಂದಿಗೆ ಜನರ ಜೀವನಮಟ್ಟವೂ ಸುಧಾರಣೆ ಆದ ಬಗ್ಗೆ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಪ್ರೇರಣೆಗೆ ಅಭಿನಂದಿಸಿದರು.
ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ದೀನಬಂಧು ಮಹಾಪಾತ್ರ ಮಾತನಾಡಿ, ಉತ್ತಮ ತರಬೇತಿಯಿಂದ ಕೌಶಲಾಭಿವೃದ್ಧಿಯಾಗಿ ಮಾನವ ಸಂಪನ್ಮೂಲದ ಸದುಪಯೋಗವಾಗುತ್ತದೆ. ಯುವಶಕ್ತಿಯ ಸದ್ಬಳಕೆಯಿಂದ ಉತ್ತಮ ಪ್ರಗತಿ ಸಾಧ್ಯವಾಗುತ್ತದೆ. ರುಡ್‌ಸೆಟ್ ಮತ್ತು ಆರ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ಮತ್ತು ತರಬೇತುದಾರರು ಸಾಮಾಜಿಕ ಪ್ರಗತಿಯ ಹರಿಕಾರರಾಗಿದ್ದು ಅವರು ಮಾಡುವ ಮಾನವ ಸೇವೆ ಸ್ತುತ್ಯಾರ್ಹವಾಗಿದೆ. ತರಬೇತಿ ಹಾಗೂ ಕೌಶಲಾಭಿವೃದ್ಧಿಯಿಂದ ಮಾನವ ಸಂಪನ್ಮೂಲ ಸದುಪಯೋಗವಾಗುತ್ತದೆ. ಮೌಲ್ಯ ವರ್ಧನೆಯಾಗುತ್ತದೆ ಎಂದರು. ಕೇಂದ್ರ ಸರ್ಕಾರ ಕೂಡಾ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ ಎಂದರು.
ಸಿಂಡಿಕೇಟ್ ಬ್ಯಾಂಕಿನ ಹಿರಿಯ ಅಧಿಕಾರಿ ಸತೀಶ್ ಕಾಮತ್ ಮತ್ತು ಕೆ.ಎನ್. ಜನಾರ್ಧನ್ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಆರ್ಥಿಕ ಲಾಭ-ನಷ್ಟಕ್ಕಿಂತಲೂ ಸೇವೆಯಿಂದ ನಮಗೆ ಸಿಗುವ ಸಂತೋಷ ತೃಪ್ತಿಯನ್ನುಂಟು ಮಾಡುತ್ತದೆ. ಸ್ವ-ಉದ್ಯೋಗಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗಬಾರದು ಸ್ವ-ಉದ್ಯೋಗಿಗಳಿಗೆ ಬ್ಯಾಂಕ್‌ಗಳು ನೀಡುವ ಸಾಲದ ಮೊತ್ತವನ್ನು ಹೆಚ್ಚಿಸಬೇಕು ಎಂದು ಕೋರಿದರು. ಯುವ ಜನತೆಯ ಪ್ರಗತಿಗಾಗಿ ಅನೇಕ ಹೊಸ ಕಾರ್ಯಕ್ರಮಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ವಿ.ಜೆ. ಅರುಣ್ ಸ್ವಾಗತಿಸಿದರು. ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜಿತ್ ಕೆ. ರಾಜಣ್ಣವರ್ ಧನ್ಯವಾದವಿತ್ತರು. ಅನುಸೂಯ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.