HomePage_Banner_
HomePage_Banner_

56 ವರ್ಷಗಳಿಂದ ಹೋರಾಟ ನಡೆಸಿದರೂ ಮಲೆಕುಡಿಯರಿಗೆ ದೊರೆಯದ ಹಕ್ಕುಪತ್ರ

SC ST sabhe 1 copy

SC ST sabhe copy

ಜಿಲ್ಲಾ  ಮಟ್ಟದ ಎಸ್.ಸಿ, ಎಸ್.ಟಿ ಕುಂದುಕೊರತೆ ಸಭೆ

ಬೆಳ್ತಂಗಡಿಯಲ್ಲಿ ದಲಿತರಿಗೆ ಕೌಶಲ್ಯ ತರಬೇತಿ ಕೇಂದ್ರ : ಎಸ್‌ಪಿ ಬೊರಸೆ
ವ್ಯಕ್ತಿಗೆ ಒಂದು ದಿನ ಮೀನು ಕೊಟ್ಟು ಸಮಾಧಾನಿಸುವ ಬದಲು ಮೀನು ಹಿಡಿಯುವ ವಿದ್ಯೆ ಕಲಿಸಿದರೆ ಅದು ಜೀವನಪೂರ್ತಿ ಆದಾಯ ಗಳಿಕೆಗೆ ಕಾರಣವಾಗಬಹುದು. ಆ ನಿಟ್ಟಿನಲ್ಲಿ ಸಭೆಯಲ್ಲಿ ಬಂದ ಬೇಡಿಕೆಯಂತೆ ದಲಿತ ಜನಾಂಗದವರಿಗೆ ವಿವಿಧ ಇಲಾಖೆಗಳ ಮೂಲಕ ನೀಡಬಹುದಾದ ಕೌಶಲ್ಯಾಭಿವೃದ್ದಿ ತರಭೇತಿಗಳನ್ನು ನೀಡುವ ಕೇಂದ್ರವನ್ನು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಎಸ್.ಪಿ. ಭೂಷಣ್ ಗುಲಾಬ್‌ರಾವ್ ಬೊರಸೆ ಭರವಸೆ ವ್ಯಕ್ತಪಡಿಸಿದರು.
ಸಭೆಯ ಕೊನೆಗೆ ಮಾತನಾಡಿದ ಅವರು, ವೈಯುಕ್ತಿಕ ದೂರುಗಳನ್ನು ಆಯಾಯಾ ಠಾಣಾಧಿಕಾರಿಗಳ ಮೂಲಕ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಭೆಯನ್ನು ಪುತ್ತೂರು ಅಥವಾ ಬಂಟ್ವಾಳದಲ್ಲಿ ಕೈಗೊಳ್ಳಲಾಗುವುದು. ಪ.ಜಾ. ಮತ್ತು ಪ. ಪಂಗಡದ ಕುಟುಂಬಗಳ ಏಳಿಗೆಗೆ ಇಲಾಖೆ ಸದಾ ಸಿದ್ಧವಿದ್ದು ತಮ್ಮ ಸಹಕಾರ ಕೂಡ ಇಲಾಖೆಗೆ ಬೇಕಾಗಿದೆ ಎಂದರು. ಅಂಟ್ರಿಂಜೆ ಕೊರಗರ ಕಾಲನಿ ಸಮಸ್ಯೆ ಬಗ್ಗೆ ಇಂದೇ ಸ್ಥಳ ಪರಿಶೀಲನೆ ನಡೆಸುವುದಾಗಿ ಹೇಳಿದ ಅವರು ಸಭೆಯ ಮುಕ್ತಾಯದ ಬಳಿಕ ಅತ್ತ ಪ್ರಯಾಣ ಬೆಳೆಸಿದರು.

ಇತರ ಪ್ರಮುಖ ಚರ್ಚೆಗಳು

ಬೆಳ್ತಂಗಡಿಯಿಂದ ಅಳದಂಗಡಿಗೆ 2 ಸರಕಾರಿ ಬಸ್ಸುಬೇಕು ಎಂದು ಸೇಸಪ್ಪ ನಲಿಕೆ ಆಗ್ರಹಿಸಿದರೆ, ಡಿಸಿ ಮನ್ನಾ ಭೂಮಿಯನ್ನು ವಶಪಡಿಸಿಕೊಂಡು ಬೇಲಿ ಹಾಕಿ ರಕ್ಷಿಸಿ ದಲಿತರಿಗೆ ಹಂಚಿಕೆ ಮಾಡಬೇಕೆಂಬುದು ನಮ್ಮ 25 ವರ್ಷಗಳ ಹಿಂದಿನ ಬೇಡಿಕೆಯಾಗಿದೆ ಎಂದು ಡಿಎಸ್‌ಎಸ್ ತಾ| ಸಂಚಾಲಕ ವೆಂಕಣ್ಣ ಕೊಯ್ಯೂರು ಒತ್ತಾಯಿಸಿದರು. ಅಳದಂಗಡಿಯಲ್ಲಿ ನಕ್ಸ್‌ಲ್ ಬಾಧಿತ ಪ್ರದೇಶವಾಗಿದ್ದು ಪೊಲೀಸ್ ಠಾಣೆ ಮಂಜೂರಾಗಿದೆ ಎಂದು ಹಿಂದಿನ ಎಸ್‌ಪಿ ಹೇಳಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೇಶವ ಪಿಲ್ಯ ಒತ್ತಾಯಿಸಿದರು. ಸಿವಿಸಿ ಹಾಲ್ ಎದುರಿನ ಹೆಣ್ಣು ಮಕ್ಕಳ ಹಾಸ್ಟೆಲ್‌ನಲ್ಲಿ ೧೦೦ ಮಕ್ಕಳ ಬದಲಿಗೆ ೨೦೦ ರಷ್ಟು ಮಕ್ಕಳನ್ನು ತುಂಬಲಾಗಿದ್ದು ಕೊಳಚೆ ನೀರು ಹೋಗಲು ವ್ಯವಸ್ಥೆ ಇಲ್ಲ. ಶೌಚಾಲಯ ಬ್ಲಾಕ್ ಆಗಿದ್ದು ಸರಿಪಡಿಸುವವರಿಲ್ಲ, ಸಮಾಜ ಕಲ್ಯಾಣಾಧಿಕಾರಿಗಳು ಗಮನಿಸುತ್ತಿಲ್ಲ ಎಂದು ಶೇಖರ್ ಎಲ್ ದೂರಿದರು. ಕಡಿರುದ್ಯಾವರದಲ್ಲಿ ಡಿಸಿ ಮನ್ನಾ ಭೂಮಿ ತೆರವಿನ ನೆಪದಲ್ಲಿ ದಲಿತ ಮಹಿಳೆ ಗುರ್ಬಿ ಎಂಬವರ ರಬ್ಬರ್ ಮರಗಳನ್ನು ಕಡಿದುಹಾಕಲಾಗಿದ್ದು ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಆಗ್ರಹ ಕೇಳಿಬಂದರೆ, ತಾಲೂಕಿನ ಹೊಸ ಗ್ರಾಮ ಪಂಚಾಯತ್‌ಗಳಲ್ಲಿ ಸಿಬ್ಬಂದಿ ನೇಮಕಾತಿ ವೇಳೆ ದಲಿತರಿಗೆ ವಿದ್ಯಾರ್ಹತೆ ಹೆಚ್ಚಿದ್ದರೂ ಅವರನ್ನು ಮೇಲಿನ ಹುದ್ದೆಗಳಿಗೆ ತೆಗೆದುಕೊಳ್ಳದೆ ಕೀಳುಮಟ್ಟದ ಕೆಲಸಗಳಿಗೆ ತೆಗೆದುಕೊಳ್ಳಲಾಗಿದೆ ಎಂದು ಶ್ರೀಧರ ಕಳೆಂಜ ದೂರಿದರು. ಮುಂಡತ್ತೋಡಿ ಶಾಲಾ ಮೇಲ್ಚಾವಣಿ ಮತ್ತು ಗೋಡೆ ಅಪಾಯದಲ್ಲಿದ್ದು ಸರಿಪಡಿಸಬೇಕು ಎಂದು ಜಿ.ಪಂ. ಮಾಜಿ ಸದಸ್ಯೆ ಸಿ.ಕೆ. ಚಂದ್ರಕಲಾ ಒತ್ತಾಯಿಸಿದರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ್ದು ಇಲ್ಲಿ ವೈದ್ಯರು ಹಾಗೂ ದಾದಿಗಳ ಕೊರತೆ ಇದೆ ಎಂದು ಡಿಎಸ್‌ಎಸ್ (ಕೃಷ್ಣಪ್ಪ ಸ್ಥಾಪಿತ) ರಮೇಶ್ ಆಪಾದಿಸಿದರು. ನಿಡ್ಲೆ ದಲಿತ ಕಾಲನಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ದಲಿತರ ಆಶ್ರಮ ಶಾಲೆಗಳ ಆಹಾರ ವ್ಯವಸ್ಥೆಯಲ್ಲಿ ಬಿಸಿಎಂ ಇಲಾಖೆಗೂ ಇದಕ್ಕೂ ವ್ಯತ್ಯಾಸವಿದೆ. ಅಲ್ಲಿ ಕುಚ್ಚಲಕ್ಕಿ ಅನ್ನ ಸಿಕ್ಕಿದರೆ ಆಶ್ರಮ ಶಾಲೆಯಲ್ಲಿ ಬಿಳಿ ಅಕ್ಕಿ ಊಟ ನೀಡಲಾಗುತ್ತದೆ ಎಂದು ಚಂದು ಎಲ್ ಹೇಳಿದರಲ್ಲದೆ, ದಲಿತರ ಮಕ್ಕಳಿಗೆ ಸಿಗುವ ೫೦೦ ರೂ ಸ್ಕಾಲರ್‌ಶಿಪ್‌ಗಾಗಿ ಪ್ರಮಾಣಪತ್ರ ಸಿದ್ದಪಡಿಸಲು ಹತ್ತಾರು ರೂ. ಖರ್ಚಾಗುತ್ತಿದೆ. ಅಲ್ಪಸಂಖ್ಯಾತರ ಇಲಾಖೆಯಲ್ಲಿ ತರಗತಿ ಅನುಪಾತದಂತೆ ಅಷ್ಟೂ ಮೊತ್ತದ ಸ್ಕಾಲರ್‌ಶಿಪ್ ಸಿಗುತ್ತದೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಕಣಿಯೂರಿನಲ್ಲಿ 94ಸಿ ಯಲ್ಲಿ ದಲಿತರಿಗೆ ಅನ್ಯಾಯವಾಗಿದೆ ಎಂದು ಅಣ್ಣು ಸಾಧನ ದೂರಿದರು. ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರವಾದವರು ಅಕ್ರಮವಾಗಿ ದಲಿತರಿಗೆ ಸಿಗುವ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಅಲ್ಲದೆ ದಲಿತ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗಪಡಿಸುತ್ತಿದ್ದಾರೆ ಎಂದು ದೂರು ಕೇಳಿಬಂತು. ಅಂತವರ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಲಾಯಿತು. ಬೆಳ್ತಂಗಡಿ ರೆಂಕೆದಗುತ್ತು ಪರಿಸರದಲ್ಲಿ ಅನ್ಯಭಾಷಿಗರು ಬಾಡಿಗೆ ರೂಮುಗಳಲ್ಲಿ ವಾಸಿಸುತ್ತಿದ್ದು ಅವರ ಮಾಹಿತಿಯನ್ನು ಪೊಲೀಸ್ ಇಲಾಖೆ ಸಂಗ್ರಹಿಸಿಡಬೇಕು ಎಂದು ಒತ್ತಾಯ ಕೇಳಿಬಂತು. ರುಮಾಣಿ ಎಂಬವರು ತನಗೆ ಬೆಳ್ತಂಗಡಿ ಠಾಣೆಯ ಎಎಸ್‌ಐ ಕಲೈಮಾರ್ ಅವರಿಂದ ತೊಂದರೆಯಾಗಿದೆ. ಅವರು ದರ್ಪದಿಂದ ಮಾತನಾಡಿದ್ದಾರೆ ಎಂದು ಆಪಾದಿಸಿದರು. ಅದಕ್ಕೆ ರಾಜು ಪಡಂಗಡಿ ಅವರು ವಿವರಣೆ ನಿಡುತ್ತಿದ್ದಂತೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅವರು ಕ್ರೈಸ್ತ ಧರ್ಮಕ್ಕೆ ಪರಿವರ್ತಿತರಾಗಿದ್ದಾರೆ. ಅವರ ಹೆಸರು ರುಮಾಣಿ ಎಂದಲ್ಲ ಎಂದು ಒಂದು ಗುಂಪಿನವರು ವಾದಿಸಿದರು.
ರುಮಾಣಿಯವರು ಮಾತನಾಡುವಾಗ ಹರಿಜನ ಕಾಲನಿ ಎಂದು ಪದ ಬಳಿಸಿದಾಗ ಮತ್ತೊಂದು ಗುಂಪಿನವರು ವಿರೋಧಿಸಿ ಆ ಪದ ಬಳಕೆ ನಿಷೇಧಿಸಲಾಗಿದೆ. ಅದನ್ನು ಬಳಸಬಾರದು ಎಂದು ಪ್ರತಿರೋಧ ವ್ಯಕ್ತವಾಯಿತು. ಕಲೈಮಾರ್ ಅವರನ್ನು ಇಲ್ಲಿಂದ ವರ್ಗಾಯಿಸಿ ಎಂದು ಹೇಳಿದ್ದಕ್ಕೆ, ನಮ್ಮ ವ್ಯಾಪ್ತಿಯಲ್ಲಿ ಕಲೈಮಾರ್ ಅವರಿಗೆ ಅನ್ಯಾಯವಾಗಿಲ್ಲ ಎಂದು ಚಂದು ಎಲ್ ತಿಳಿಸಿದರು.

ಬೆಳ್ತಂಗಡಿ : ನೆರಿಯ ಗ್ರಾಮದ ನೆರಿಯ-ಕಾಟಾಜೆ-ಪರ್ಪಳ ಪ್ರದೇಶದಲ್ಲಿ ನೆಲೆಸಿರುವ ಮಲೆಕುಡಿಯರಿಗೆ 1960 ರಿಂದಲೂ ಮನವಿ ಸಲ್ಲಿಸುತ್ತಾ ಬರಲಾಗುತ್ತಿದ್ದರೂ ಇನ್ನೂ ಕೂಡ ಭೂಮಿಯ ಹಕ್ಕುಪತ್ರ ಲಬಿಸಿಲ್ಲ. ಒಂದೂವರೆ ವರ್ಷಗಳ ಹಿಂದೆ ಇಲ್ಲಿನ ನಿವಾಸಿ ಸುಂದರ ಮಲೆಕುಡಿಯರಿಗೆ ದೌರ್ಜನ್ಯ ಎಸಗಲಾಗಿದ್ದು ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ದಲಿತ ದೌರ್ಜನ್ಯ ಅಲ್ಲ ಎಂದು ವಾದ ಮಾಡಿದಾಗ ಅದಕ್ಕೆ ಸೂಕ್ತ ಪ್ರತಿವಾದ ಮಂಡಿಸಲು ಸರಕಾರ, ಪೊಲೀಸ್ ಇಲಾಖೆ ವಿಫಲವಾಗಿರುವುದರಲ್ಲಿ ಖೇದವಿದೆ. ದಲಿತರ ಅಭಿವೃದ್ಧಿ ಮತ್ತು ರಕ್ಷಣೆಗಾಗಿಯೇ ಇರುವ ಸಮಾಜ ಕಲ್ಯಾಣಾಧಿಕಾರಿಗಳು ದಲಿತ ಕಾಲನಿಗಳಿಗೆ ಭೇಟಿ ನೀಡುತ್ತಿಲ್ಲ ಎಂದು ನಿಗಧಿತ ಸಮಯಕ್ಕೆ ಸಭೆಗಳನ್ನೂ ನಡೆಸುತ್ತಿಲ್ಲ. ಇದರಿಂದಾಗಿ ನಮ್ಮ ಉದ್ದಾರಕ್ಕಾಗಿ ಇರುವ ಇಲಾಖೆಯಿಂದಲೇ ನಮಗೆ ದೌರ್ಜನ್ಯ ನಡೆಯುತ್ತಿದೆ ಇತ್ಯಾದಿ ಪ್ರಮುಖ ದೂರುಗಳು ಆ. 17 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪ.ಜಾ. ಮತ್ತು ಪ. ಪಂಗಡದ ಜಿಲ್ಲಾಮಟ್ಟದ ಕುಂದುಕೊರತೆ ಸಭೆಯಲ್ಲಿ. ವ್ಯಕ್ತವಾಯಿತು.
ಎಸ್.ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜನೆಗೊಂಡಿತ್ತು. ಪುತ್ತೂರು ಎ.ಎಸ್.ಪಿ. ರಿಷ್ಯಂತ್ ಮತ್ತು ಬಂಟ್ವಾಳ ಡಿವೈಎಸ್‌ಪಿ ರವೀಶ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ| ಸಂತೋಷ್ ಕುಮಾರ್, ತಾಲೂಕು ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಿ.ಅರ್. ನರೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಸರ್ಕಲ್ ಇನ್ಸ್‌ಪೆಕ್ಟರ್ ನೇಮಿರಾಜು, ಎಸ್.ಪಿ. ಕಚೇರಿ ಪೊಲೀಸ್ ಸಿಬ್ಬಂದಿ ಧನೇಶ್, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯ ಪೊಲೀಸ್ ಸಿಬ್ಬಂದಿ ಗೀತಾ, ವಸತಿ ನಿಲಯಗಳ ಅಧಿಕಾರಿಗಳಾದ ಸುರೇಂದ್ರ, ಇವರುಗಳು ಉಪಸ್ಥಿತರಿದ್ದರು.
ನೆರಿಯ ಸಮಸ್ಯೆ ಬಗ್ಗೆ ಕೇಶವ ಮಲೆಕುಡಿಯ ಮಾತನಾಡಿ, ಅಕ್ರಮ ಸಕ್ರಮದಲ್ಲಿ ಕಡತ ತಯಾರಿಸಿದಾಗ ಅರಣ್ಯ ಇಲಾಖೆ ಆಕ್ಷೇಪಣೆ ಇತ್ತು. ಈಗ ಅರಣ್ಯ ಹಕ್ಕು ಕಾಯ್ದೆಯಡಿ ಕಳಿಸಿದಾಗ ಆಕ್ಷೇಪಣೆಗಳಿಲ್ಲ. ಆದರೆ ಇನ್ನೂ ಕೂಡ ನಮಗೆ ಹಕ್ಕುಪತ್ರ ಭಾಗ್ಯ ಒದಗಿಬರಲಿಲ್ಲ. ಆದ್ದರಿಂದ ನಮ್ಮ ಬದುಕು ದುರ್ಬರವಾಗಿದೆ ಎಂದರು. ಈ ವೇಳೆ ಮಾತನಾಡಿದ ಶೇಖರ್ ಲಾಲ, ಕಳೆದ ವರ್ಷ ಸುಂದರ ಮಲೆಕುಡಿಯ ಅವರಿಗೆ ಸ್ಥಳೀಯ ಭೂಮಾಲಿಕರಿಂದ ದೌರ್ಜನ್ಯವಾಗಿದ್ದು ಬಳಿಕ ಆರೋಪಿಗಳು ಹೈಕೋರ್ಟ್‌ನಲ್ಲಿ ವಾದಿಸಿ ಇದು ಎಟ್ರಾಸಿಟಿ ಅಲ್ಲ ಎಂದು ಸ್ಟೇ ಆಗಿದೆ. ದೌರ್ಜನ್ಯಕ್ಕೊಳಗಾಗಿರುವ ಸುಂದರ ಮಲೆಕುಡಿಯ ನಿಮ್ಮ ಮುಂದೆಯೇ ಇದ್ದು ಎರಡೂ ಕೈಗಳ ಸ್ವಾಧೀನ ಇಲ್ಲದ ಅವರಿಗೆ ಇನ್ನೂ ನ್ಯಾಯ ದೊರಕಿಲ್ಲ.  ಇದು ದಲಿತ ದೌರ್ಜನ್ಯವಲ್ಲದೆ ಇನ್ನೇನು? ಎಂದು ಪ್ರಶ್ನಿಸಿದರಲ್ಲದೆ ನ್ಯಾಯಕ್ಕಾಗಿ ಆಗ್ರಹಿಸಿದರು.
ದಲಿತ ಕುಟುಂಬಗಳಿಗೆ ನೀಡಿದ ಅನುದಾನ ಖರ್ಚು ಮಾಡದಿದ್ದರೆ ಅಧಿಕಾರಿ ಮೇಲೆ ಎಟ್ರಾಸಿಟಿ ಕೇಸಿನ ಕ್ರಮ ಕೈಗೊಳ್ಳಿ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿಗಿನ ಹೇಳಿಕೆಯೊಂದರ ಪ್ರಕಾರ ದಲಿತರ ಏಳಿಗೆಗಾಗಿ ಇಟ್ಟ ಅನುದಾನದಲ್ಲಿ ೬೫೦ ಕೋಟಿ ರೂ ಉಳಿಕೆಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾಲನಿಗಳಿಗೆ ಭೇಟಿ ನೀಡುತ್ತಿಲ್ಲ. ಚಾರ್ಮಾಡಿಯಲ್ಲಿ ೧೫ ವರ್ಷಗಳಿಂದ ಕುಟುಂಬವೊಂದು ಟರ್ಪಾಲ್ ಮನೆಯಲ್ಲಿ ವಾಸಿಸುತ್ತಿದೆ. ಈ ವಿಚಾರ ತಾಲೂಕು ಸಮಾಜ ಕಲ್ಯಾಣಾಧಿಕಾರಿಗೆ ಗೊತ್ತೇಇಲ್ಲ ಎನ್ನುತ್ತಾರೆ. ಅವರಿಗೆ ಇಲಾಖೆ ಒಳ್ಳೆಯ ಸಂಬಳ ನೀಡುತ್ತಿದೆ. ಕಾರು ಇದೆ. ಚಾಲಕರ ವ್ಯವಸ್ಥೆ ಮಾಡಿದೆ. ತಿಂಗಳ 30 ರಲ್ಲಿ 15 ದಿನಗಳನ್ನು ಬಿಟ್ಟು ಇನ್ನುಳಿದ 15 ದಿನಗಳಲ್ಲಾದರೂ ಕೊರಗರ-ದಲಿತರ ಕಾಲನಿಗೆ ಭೇಟಿ ನೀಡುತ್ತಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಕಿಂಚಿತ್ತೂ ಕಾಳಜಿ ಇಲ್ಲದೆ ಕೆಲಸ ಮಾಡುತ್ತಿದ್ದು ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿ ಎಂದು ಶೇಖರ್ ಮತ್ತು ಚಂದು ಎಲ್. ಆಗ್ರಹಿಸಿದರು.
ಅಧಿಕಾರಿಯ ನಿರ್ಲಕ್ಷ್ಯತನದಿಂದ ಪ್ರೆಸ್ಟೀಜ್ ಸ್ಕೂಲ್ ಸೌಲಭ್ಯ ವಂಚಿತ :
ತಾಲೂಕಿನ 5 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 6 ರಿಂದ ಹೈಸ್ಕೂಲ್‌ವರೆಗೆ ಆಂಗ್ಲ ಮಾಧ್ಯಮ ಮತ್ತು ಹೆಚ್ಚಿನ ಶಿಕ್ಷಣ ಪಡೆಯುವ ಸರಕಾರದ ಪ್ರೆಸ್ಟೀಜ್ ಶಿಕ್ಷಣ ವ್ಯವಸ್ಥೆಯಡಿ ವಿದ್ಯಾರ್ಥಿಗೆ ತಲಾ 50 ಸಾವಿರ ಅನುದಾನ ಪಡೆಯಲು ಅವಕಾಶವಿದ್ದು ಜಿಲ್ಲಾ ಮತ್ತು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ವಿಳಂಬ ನೀತಿಯಿಂದಾಗಿ ದಲಿತ ಸಮುದಾಯ ಅವಕಾಶ ವಂಚಿತವಾಗಿದೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಬೇಬಿ ಸುವರ್ಣ ಮತ್ತು ಚಂದು ಎಲ್. ಆರೋಪಿಸಿದರು.
ಪೋರ್ಜರಿ ಸಹಿಯಲ್ಲಿ ತಳ್ಳಿ ಅರ್ಜಿ, ಕೇಳಲು ಹೋದದ್ದಕ್ಕೆ ಜೀವ ಬೆದರಿಕೆ :
ಕನ್ಯಾಡಿ 1 ಗ್ರಾಮದ ಪ್ರಭಾಕರ ನಾಯ್ಕ ಅವರು ಮಾತನಾಡಿ ಗ್ರಾಮದ ಸಂತೋಷ್ ಗೌಡ ಅವರು ಪೂರ್ವ ದ್ವೇಶದ ಹಿನ್ನೆಲೆಯಲ್ಲಿ ನನ್ನ ಸಹಿ ಪೋರ್ಜರಿ ಮಾಡಿ ಅರಣ್ಯ ಇಲಾಖೆಗೆ ತಳ್ಳಿ ಅರ್ಜಿ ಹಾಕಿದ್ದು, ಗ್ರಾಮದ ರಸ್ತೆಯೊಂದರ ಮೂಲಕ ಮರಗಳ ಕಳ್ಳ ಸಾಗಾಣಿಕೆ ದಂಧೆ ನಡೆಯುತ್ತಿದೆ ಎಂದು ದೂರಿತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ನನಗೆ ಬೆದರಿಕೆಯೊಡ್ಡಿದ್ದಾರೆ ಎಂದು ಎಸ್.ಪಿ. ಅವರಿಗೆ ಲಿಖಿತ ದೂರು ನೀಡಿದರು. ರಸ್ತೆ ತೆರವು ಪ್ರಕರಣದಲ್ಲಿ ಮಾಧ್ಯಮಗಳಲ್ಲಿ ನನ್ನನ್ನು ಗೂಂಡಾ ಎಂದು ಬಿಂಭಿಸಲಾಗಿದೆ ಎಂದೂ ದೂರಿದರು.
ಸಂಘ ಪರಿವಾರದ ಸಂಘಟನೆ ನಿಷೇಧಕ್ಕೆ ಒತ್ತಾಯ :
ಗೋವಿನ ರಕ್ಷಣೆಯ ಹೆಸರಿನಲ್ಲಿ ದಲಿತರ ಮೇಲೆ ಹಲ್ಲೆ, ಕೊಲೆಗಳು ಕೆಲವು ರಾಜ್ಯಗಳಲ್ಲಿ ನಡೆಯುತ್ತಿದ್ದು ಅದರ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಇತ್ತೀಚೆಗೆ ಸಭೆ ನಡೆಸಿದ ಸಂಘ ಪರಿವಾರದ ಸಂಘಟನೆಗಳು ಗೋವಿನ ರಕ್ಷಣೆಗಾಗಿ ತಲವಾರು ಹೋರಾಟ ಮಾಡುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದು, ಶಸಸ್ತ್ರ ಹೋರಾಟ ಮಾಡುತ್ತಿರುವ ಸೆಮಿ, ನಕ್ಸಲ್ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಿದಂತೆ  ಈ ಸಂಘಟನೆಗಳನ್ನೂ ನಿಷೇಧಿಸಬೇಕು ಎಂದು ಬಿ.ಕೆ. ವಸಂತ ಆಗ್ರಹಿಸಿದರು. ಮಚ್ಚಿನ ಗ್ರಾಮದ ಪ್ರೇಮಾ ಅವರು ಮಾತನಾಡಿ, ತಾನು ಜನಪ್ರತಿನಿಧಿಯಾಗಿದ್ದು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಈ ವೇಳೆ ನನಗೆ ದೌರ್ಜನ್ಯಗಳು ಎದುರಾಗುತ್ತಿದೆ ಎಂದು ದೂರಿದರು.
ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ಎಪಿಎಂಸಿ ಉಪಾಧ್ಯಕ್ಷ ಲಕ್ಷ್ಮಣ ಸಹಿತ ಪ್ರಮುಖ ದಲಿತ ನಾಯಕರುಗಳು, ಗ್ರಾ.ಪಂ. ಪಿಡಿಒ ಗಳು, ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವಾಣಿ ಶಾಲಾ ಶಿಕ್ಷಕಿ ಮೋಹನಾಂಗಿ ಕಾರ್ಯಕ್ರಮ ನಿರೂಪಿಸಿದರು. ಡಿವೈಎಸ್‌ಪಿ ರವೀಶ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.