ಪೂರಕ ಪರೀಕ್ಷೆ ಬರೆದದ್ದು ಓರ್ವ ವಿದ್ಯಾರ್ಥಿ ಕರ್ತವ್ಯಕ್ಕೆ 20 ಮಂದಿ ಅಧಿಕಾರಿಗಳು…!

  ಬೆಳ್ತಂಗಡಿ : ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಇತ್ಯಾಧಿ ಪ್ರಕರಣಗಳ ನಂತರ ಸರಕಾರ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿ ಪರೀಕ್ಷೆಗಾಗಿರುವ ಎಲ್ಲಾ ವ್ಯವಸ್ಥೆ ಮತ್ತು ಭದ್ರತೆಯನ್ನು ಹೆಚ್ಚಿಸಿರುವ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದೇ..
ಅಂತೆಯೇ ಜು.  13ರಂದು ನಡೆದ ಐಚ್ಚಿಕ ಕನ್ನಡ ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿಗಾಗಿ ಜಿಲ್ಲಾ ಉಪನಿರ್ದೇಶಕರು, ಬಿಇಒ ಸೇರಿದಂತೆ 20 ರಷ್ಟು ಅಧಿಕಾರಿಗಳು ಕಾರ್ಯ ನಿರ್ವಹಿಸಿದ ವಿದ್ಯಮಾನದ ವರದಿಯಿದು.
ವಿಷಯವಿಷ್ಟೇ… ಎಸ್‌ಡಿಎಂ ಕಾಲೇಜಿನಲ್ಲಿ ಇದುವರೆಗೆ ನಡೆಯುತ್ತಿದ್ದ ಪರೀಕ್ಷಾ ಕೇಂದ್ರ ಈ ಬಾರಿ ಸರಕಾರಿ ಪ.ಪೂ. ಕಾಲೇಜು ಬೆಳ್ತಂಗಡಿಗೆ ಬದಲಾಗಿದ್ದು ಅಲ್ಲಿ ಪಿಯುಸಿ ಐಚ್ಚಿಕ ಕನ್ನಡ ಪೂರಕ ಪರೀಕ್ಷೆ ಬರೆಯಲು ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿತ್ತು. ಪ್ರಶ್ನೆ ಪತ್ರಿಕೆಯು ಮಂಗಳೂರು ಸರಕಾರಿ ವಿದ್ಯಾಂಗ ಉಪನಿರ್ದೇಶಕರು ಮತ್ತು ನಿಯೋಜಿಸಲ್ಪಟ್ಟ 4 ಮಂದಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜವಾಬ್ಧಾರಿಯುತರಾಗಿರುವ ಬೆಳ್ತಂಗಡಿ ಬಿ.ಇ.ಒ ಮತ್ತು ಅವರ ಜೊತೆ ನಿಯೋಜಿತರಾಗಿದ್ದ ನಾಲ್ವರು ಅಧಿಕಾರಿಗಳ ತಂಡಕ್ಕೆ ಮಂಗಳೂರಿನಲ್ಲಿ ಹಸ್ತಾಂತರಿಸಿದರು.
ಅಲ್ಲಿಂದ ಪರೀಕ್ಷಾ ಕೇಂದ್ರಕ್ಕೆ ಬಂದ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಯ ಭದ್ರತೆಗಾಗಿ ನಿಗಧಿಯಾಗಿದ್ದ ಓರ್ವ ಪೊಲೀಸ್ ಸಿಬ್ಬಂದಿ, 4 ಮಂದಿ ಜಾಗೃತ ದಳದ ಸದಸ್ಯರು, ಓರ್ವ ಕೊಠಡಿ ಮೇಲ್ವಿಚಾರಕ, ಓರ್ವ ಮುಖ್ಯ ಅಧೀಕ್ಷಕರು, ಓರ್ವ ಉತ್ತರ ಪತ್ರಿಕೆ ಪಾಲಕರು ಸೇರಿ ಸುಗಮವಾಗಿ ಪರೀಕ್ಷೆ ನಡೆಯುವಂತೆ ಮಾಡಿದರು. ಬೆಳಿಗ್ಗೆ ಪ್ರಶ್ನೆ ಪತ್ರಿಕೆ ತಂದ ಅದೇ ರೀತಿಯ ಭದ್ರತೆಯಲ್ಲಿ ಮಧ್ಯಾಹ್ನ ಉತ್ತರ ಪತ್ರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಂಗಳೂರಿನ ಕೇಂದ್ರಕ್ಕೆ ಇಲಾಖಾ ವಾಹನದಲ್ಲಿ ತೆರಳಿ ತಲುಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.