ಉಜಿರೆಯ ಅತ್ತಾಜೆ ಎಂಬಲ್ಲಿರುವ ಆದಂ ಎಂಬವರ ಕುಟುಂಬವು ಚಿಕ್ಕಮಗಳೂರಿನ ಜಾವಗಲ್ಗೆ ದರ್ಗಾ ಸಂದರ್ಶನಕ್ಕೆ ಹೊರಟಿದ್ದು, ದಾರಿಮಧ್ಯೆ ಮುಂಡಾಜೆ ಗ್ರಾಮದ ಅಣೆಕಟ್ಟು ಬಳಿ ನಿಲ್ಲಿಸಿದಾಗ ಮೂತ್ರಶಂಕೆಗೆಂದು ಇಳಿದ ಆದಂ ಅವರ ಪುತ್ರ ರವೂಫ್(9ವ.) ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನು, ಅದೃಷ್ಟವಶಾತ್ ಒಂದು ಬಂಡೆಕಲ್ಲಿನಲ್ಲಿ ಸಿಕ್ಕಿ ಹಾಕಿಕೊಂಡು ನೀರಿನಿಂದ ಹೊರಬರಲಾರದೆ ಒದ್ದಾಡುತ್ತಿದ್ದ ಮಗುವಿನ ರಕ್ಷಣೆಗೆ ಗ್ರಾಮಸ್ಥರು ಪ್ರಯತ್ನಿಸಿದರೂ ನದಿ ತುಂಬಿ ಹರಿಯುತ್ತಿದ್ದರಿಂದ ಮೂಕಪ್ರೇಕ್ಷಕರಾಗಲಷ್ಟೇ ಸಾಧ್ಯವಾಯಿತು.
ನಿಸ್ಸಹಾಯಕರಾಗಿ ನಿಂತಿದ್ದ ಗ್ರಾಮಸ್ಥರು ಮತ್ತು ಕುಟುಂಬಸ್ಥರಿಗೆ ದೇವಚರರಂತೆಬಂದು ಮುಟ್ಟಿದ ಕಕ್ಕಿಂಜೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರವೀಣ, ಆನಂದ್ ಮತ್ತು ವಿಕ್ರಂಎಂಬ ಹಿಂದೂ ಯುವಕರು ತಮ್ಮ ಜೀವವನ್ನು ಲೆಕ್ಕಿಸದೆ ನೀರಿನಲ್ಲಿ ಧುಮುಕಿ ಆ ಮಗುವಿನ ಪ್ರಾಣ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತ್ ಸದಸ್ಯ ಅಬ್ದುಲ್ ಅಝೀಝ್ ಸಕ್ರೀಯವಾಗಿ ಭಾಗಿಯಾಗಿ ಈ ಯುವಕರಿಗೆ ಸಾಥ್ ನೀಡಿದರು.
ಪ್ರತಿಯೊಂದು ವಿಷಯಕ್ಕೂ ಜಾತಿ ವಿಷ ಬೀಜ ಬಿತ್ತುವ ಈ ಕಾಲದಲ್ಲಿ “ರವೂಫ್” ಎಂಬ ಮುಸ್ಲಿಂ ಬಾಲಕನ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ರಕ್ಷಣೆ ಮಾಡಿದ ಈ ಹಿಂದೂ ಸಹೋದರರು ನಮ್ಮಲ್ಲಿ ಮಾನವತೆ ಇನ್ನೂ ಸತ್ತಿಲ್ಲ ಎಂಬುದನ್ನು ತೋರಿಸಿಕೊಟ್ಟರು.