ಬೆಳ್ತಂಗಡಿ : ಪತ್ರಿಕಾ ಮಾಧ್ಯಮಗಳು ಜನರನ್ನು ವಿಚಾರವಂತರನ್ನಾಗಿಸುವ ಮಹತ್ವವಾದ ಉದ್ದೇಶವನ್ನು ಇಟ್ಟುಕೊಂಡು ಲೇಖನಗಳ ಮೂಲಕ ಜನಜಾಗೃತಿಯ ಕಾರ್ಯವನ್ನು ಮಾಡಬೇಕು ಎಂದು ನಾಡಿನ ಹಿರಿಯ ಸಾಹಿತಿ ಕೆ.ಟಿ. ಗಟ್ಟಿ ಹೇಳಿದರು.
ಅವರು ಜು.2ರಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಇಲ್ಲಿಯ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾಸಾಲಿಯಾನ್ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಟಿ.ವಿ ಮಾಧ್ಯಮದಲ್ಲಿ ಕೇಳುವ ಸುದ್ದಿ, ದೃಶ್ಯಗಳು ಹೆಚ್ಚು ಸಮಯ ಮನಸ್ಸಿನಲ್ಲಿ ಉಳಿಯುವುದಿಲ್ಲ. ಈ ಮಾಧ್ಯಮದಲ್ಲಿ ಕಲಿತುಕೊಳ್ಳುವ ವಿಷಯ ಯಾವುದೂ ಇಲ್ಲ. ಕೊಲೆ, ಕೌರ್ಯ, ಪಾತಕಗಳನ್ನು, ಕೆಟ್ಟ ದೃಶ್ಯಗಳನ್ನು ಗಂಟೆ ಗಟ್ಟಲೆ ತೋರಿಸಿ ನಮ್ಮ ಮನಸ್ಸನ್ನು ಕೆಡಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಟಿ.ವಿ ಮೋಹಕ್ಕೆ ಬಲಿಯಾಗ ಬೇಡಿ ಎಂದು ಸಲಹೆಯಿತ್ತರು.
ಹಿಂದೆ ನಾವು ಇವರುವಲ್ಲಿಗೆ ಪತ್ರಿಕೆ ಬರುತ್ತಿತ್ತು. ಈಗ ಕಾಲ ಬದಲಾಗಿದೆ. ಪತ್ರಿಕೆ ಇರುವಲ್ಲಿ ನಾವು ಹೋಗಬೇಕಾಗಿದೆ. ಪತ್ರಿಕೆಗಳು ಜನರಲ್ಲಿ ವೈಚಾರಿಕ ಶಕ್ತಿಯನ್ನು ಅರಳಿಸುವ ಕೆಲಸ ಮಾಡಬೇಕು. ನಮ್ಮ ಬದುಕು ಇತರಿಗೆ ಹೇಗೆ ಆದರ್ಶವಾಗುತ್ತದೆ ಎಂಬ ಬಗ್ಗೆ ಜ್ಞಾನವನ್ನು ನೀಡುವಂತಿರಬೇಕು. ಇಂದು ಪತ್ರಿಕೆಗಳು ಕೆಟ್ಟ ಸುದ್ದಿಗಳ ಹಿಂದೆ ಬಿದ್ದಿರುವುದು ವಿಷಾದನೀಯ. ಇಂತಹ ಸುದ್ದಿಗಳು ಸುದ್ದಿಯೇ ಅಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ವಸಂತ ಬಂಗೇರ ಅವರು ಮಾತನಾಡಿ ಇಂದು ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ, ನ್ಯಾಯ ಇಲ್ಲ, ಅಪ್ರಾಮಾಣಿಕರು ಒಳ್ಳೆಯವರು ಎಂಬಂತಾಗಿದೆ. ದುಡ್ಡಿದ್ದವನೇ ದೊಡ್ಡಪ್ಪ ಎಂಬ ಸ್ಥಿತಿಯಾಗಿದೆ. ಸಮಾಜವನ್ನು ಸರಿಪಡಿಸುವ ಶಕ್ತಿಯೊಂದಿದ್ದರೆ ಅದು ಪತ್ರಕರ್ತರಿಗೆ ಮಾತ್ರ. ನಮ್ಮಂತಹ ರಾಜಕಾರಣಿಗಳನ್ನು ಕೇಳುವವರಿಲ್ಲ ರಾಜಕಾರಣಿಗಳನ್ನು ಹದ್ದುಬಸ್ತಿನಲ್ಲಿಡಲು ಅವರನ್ನು ಸರಿದಾರಿಗೆ ತರಲು ಪತ್ರಕರ್ತರಿಗೆ ಮಾತ್ರ ಸಾಧ್ಯ ಎಂದು ಹೇಳಿದರು. ಬೆಳ್ತಂಗಡಿಯಲ್ಲಿ ಪತ್ರಕರ್ತರ ಸಂಘಟನೆ ಗಟ್ಟಿಯಾಗಬೇಕು, ಟಿ.ವಿ ಮಾಧ್ಯಮದವರನ್ನು ಸಂಘಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆಯಿತ್ತ ಶಾಸಕರು ಸಂಘದ ಕಟ್ಟಡ ನಿರ್ಮಾಣಕ್ಕೆ ತನ್ನ ನಿಧಿಯಿಂದ ರೂ.೫ಲಕ್ಷ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ದೇವಿಪ್ರಸಾದ್, ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಪತ್ರಿಕೆಗಳನ್ನು ಉಳಿಸಿ-ಬೆಳೆಸುವಲ್ಲಿ ಎಲ್ಲರ ಪ್ರೋತ್ಸಾಹ ಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ ಇಂದು ಪತ್ರಕರ್ತರು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯ ಮಂಗಳೂರಿನ ಹಿರಿಯ ಉಪಸಂಪಾದಕ ಭುವನ್ ಪುದುವೆಟ್ಟು ಇವರನ್ನು ಸನ್ಮಾನಿಸಲಾಯಿತು. 2015-16ನೇ ಸಾಲಿನ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ಪಡೆದು ಸಾಧನೆ ಮಾಡಿದ ಸರಕಾರಿ ಪ್ರೌಢ ಶಾಲೆಗಳಾದ ಗುರುವಾಯನಕೆರೆ, ಸವಣಾಲು, ಬುಳೇರಿಮೊಗ್ರು, ಪೆರ್ಲಬೈಪಾಡಿ, ನೇಲ್ಯಡ್ಕ ಶಾಲೆಗಳನ್ನು ಗುರುತಿಸಿ, ಶಾಲೆಯ ಮುಖ್ಯ ಶಿಕ್ಷಕರನ್ನು ಅಭಿನಂದಿಸಲಾಯಿತು. ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೇಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಲಾಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯು.ಕೆ ಸುಶ್ರುತ್, ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮುಂಡಾಜೆ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಧುಶ್ರೀ ಹಾಗೂ ವೇಣೂರು ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿಶಾರನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಹೃಷಿಕೇಶ್ ಸ್ವಾಗತಿಸಿದರು. ಪತ್ರಕರ್ತರಾದ ಶಿಬಿ ಧರ್ಮಸ್ಥಳ ಮತ್ತು ಮನೋಹರ ಬಳೆಂಜ ಉಪನ್ಯಾಸಕರನ್ನು ಮತ್ತು ಸನ್ಮಾನಿತರನ್ನು ಪರಿಚಯಿಸಿದರು. ಬಿ.ಎಸ್ ಕುಲಾಲ್ ಸಂದೇಶ ವಾಚಿಸಿದರು. ಭುವನೇಶ್ ಗೇರುಕಟ್ಟೆ ಮತ್ತು ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಅಚುಶ್ರೀ ವಂದಿಸಿದರು.
ಯಕ್ಷಗಾನ ಹಾಸ್ಯ ವೈಭವ: ಕಾರ್ಯಕ್ರಮದ ಬಳಿಕ ಸುವರ್ಣ ಸಾಂಸ್ಕ್ರತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಇವರ ಪ್ರಾಯೋಜಕತ್ವದಲ್ಲಿ ಸರಪಾಡಿ ಅಶೋಕ್ ಶೆಟ್ಟಿಯವರ ನಿರ್ದೇಶನದಲ್ಲಿ ಯಕ್ಷಗಾನ ಹಾಸ್ಯ ವೈಭವ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಕಲಾವಿದರನ್ನು ಪತ್ರಕರ್ತ ಲಕ್ಷ್ಮೀ ಮಚ್ಚಿನ ಸ್ವಾಗತಿಸಿದರು. ಸಂಘ ಸದಸ್ಯರಾದ ಮಂಜುನಾಥ ರೈ, ಅಶ್ರಫ್ ಆಲಿಕುಂಞ, ಪದ್ಮನಾಭ ವೇಣೂರು, ದೀಪಕ್, ಪುಷ್ಪರಾಜ ಶೆಟ್ಟಿ, ಆರ್.ಎನ್ ಪೂವಣಿ, ಶ್ರೀನಿವಾಸ ತಂತ್ರಿ, ಧನಕೀರ್ತಿ ಆರಿಗ, ಆಶೀಫ್, ಸಂಜೀವ ಸಹಕರಿಸಿದರು.