ಕಚೇರಿಯಲ್ಲಿ ಕಡತ ತಪ್ಪಿಸಿಟ್ಟರೆ ಕ್ರಿಮಿನಲ್ ಕೇಸು ದಾಖಲು : ಎ.ಡಿ.ಸಿ. ಕುಮಾರ್

Apara jilladikari copyಬೆಳ್ತಂಗಡಿ ಕಂದಾಯ ಇಲಾಖೆ : ಪ್ರಗತಿ ಪರಿಶೀಲನಾ ಸಭೆ

ಯಾವುದೇ ಕೆಲಸಕ್ಕೆ ಲಂಚ ನೀಡಬೇಡಿ
ತಾಲೂಕು ಕಚೇರಿಯಲ್ಲಿ 94ಸಿ ಸೇರಿದಂತೆ ಯಾವುದೇ ಕೆಲಸಕ್ಕೆ ಲಂಚ ನೀಡಬೇಡಿ. ಲಂಚ ಪಡೆಯುವುದು ಮತ್ತು ಲಂಚ ನೀಡುವುದು ಅಪರಾಧವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು. ಕಂದಾಯ ಇಲಾಖೆಯಲ್ಲಿ ಕೆಲಸ ಆಗದಿದ್ದರೆ ತಹಶೀಲ್ದಾರರ ಅಥವಾ ಶಾಸಕರ ಗಮನಕ್ಕೆ ತನ್ನಿ, ಯಾವುದೇ ಏಜಂಟರಲ್ಲಿ ಮೂಲಕ ಕೆಲಸ ಮಾಡಿಸಬೇಡಿ ಎಂದು ತಿಳಿಸಿದರು.

ಬೆಳ್ತಂಗಡಿ : ತಾಲೂಕು ಕಚೇರಿಯಲ್ಲಿ ಕಡತಗಳನ್ನು ತಪ್ಪಿಸಿಟ್ಟರೆ ಹಾಗೂ ಗ್ರಾಮಗಳಲ್ಲಿ ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಕಡತಗಳನ್ನು ತಮ್ಮ ಜೊತೆಗೆ ಕೊಂಡೊದರೆ ಅಂತಹ ಪ್ರಕರಣ ಪತ್ತೆಯಾದಲ್ಲಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.
ಕಂದಾಯ ಇಲಾಖೆ ಬೆಳ್ತಂಗಡಿ ಇದರ ಪ್ರಗತಿ ಪರಿಶೀಲನಾ ಸಭೆ ಜು.2ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ತಾ.ಪಂ. ಸಭಾಂಗಣದಲ್ಲಿ ಜರುಗಿತು. ಅಪರ ಜಿಲ್ಲಾಧಿಕಾರಿ ಕುಮಾರ್, ತಾ.ಪಂ ಅಧ್ಯಕ್ಷೆ ದಿವ್ಯಾಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ತಹಶೀಲ್ದಾರ್ ಪ್ರಸನ್ನಮೂರ್ತಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಸರ್ವೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀನಿವಾಸ್, ಜಿ.ಪಂ, ತಾ.ಪಂ. ಸದಸ್ಯರು, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಕರಣಿಕರು, ಗ್ರಾ.ಪಂ. ಪಿಡಿಒ ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ 94ಸಿಯ ಬಗ್ಗೆ ದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ 94ಸಿಯಲ್ಲಿ ಲಂಚ ಪಡೆಯುತ್ತಿರುವುದು, ಕಡತಗಳ ನಾಪತ್ತೆ, ಹಣ ಕೊಟ್ಟವರಿಗೆ ಹಕ್ಕುಪತ್ರ, ಬಡವರ ನಿರ್ಲಕ್ಷ್ಯ ಮೊದಲಾದ ಆರೋಪಗಳು ಜನಪ್ರತಿನಿಧಿಗಳಿಂದ ವ್ಯಕ್ತವಾಯಿತು. ಜಿ.ಪಂ. ಸದಸ್ಯ ಶಾಹುಲ್ ಹಮೀದ್ ಮಾತನಾಡಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಹಣ ಕೊಟ್ಟವರಿಗೆ ಹಕ್ಕು ಪತ್ರ ದೊರೆಯುತ್ತದೆ. ಹಣ ನೀಡದ ಬಡವನಿಗೆ ಇನ್ನೂ ಹಕ್ಕು ಪತ್ರ ದೊರಕಿಲ್ಲ ಎಂದು ಆರೋಪಿಸಿದರು. ತಾ.ಪಂ. ಸದಸ್ಯರಾದ ವಿಜಯ ಗೌಡ, ಶಶಿಧರ್ ಇದಕ್ಕೆ ಧ್ವನಿಗೂಡಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಬಂಗೇರ ಅವರು ಬೆಳ್ತಂಗಡಿ ತಾಲೂಕಿನಂತಹ ಗತಿಕೆಟ್ಟ ತಾಲೂಕು ಕಚೇರಿ ರಾಜ್ಯದಲ್ಲಿ ಇಲ್ಲ. ವ್ಯವಸ್ಥೆ ಅಷ್ಟು ಕೆಟ್ಟು ಹೋಗಿದೆ. ಇಲ್ಲಿ ಎಲ್ಲಾ ಕೆಲಸ ಏಜಂಟರ ಮೂಲಕ ನಡೆಯುತ್ತಿದೆ. 50ಕ್ಕೂ ಮಿಕ್ಕಿ ಏಜಂಟರರಿದ್ದಾರೆ ಎಂದು ತಿಳಿಸಿದರು.
ವೇಣೂರು ಗ್ರಾಮದಲ್ಲಿ 94ಸಿಯಲ್ಲಿ 89 ಅರ್ಜಿಗಳು ಬಂದಿದ್ದು, ಎಷ್ಟು ಮಂದಿಗೆ ಹಕ್ಕು ಪತ್ರ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಈ ಹಿಂದಿನ ಗ್ರಾಮ ಕರಣಿಕರು ಅಧಿಕಾರ ಹಸ್ತಾಂತರಿಸುವಾಗ 40ಕ್ಕೂ ಹೆಚ್ಚು ಕಡತಗಳನ್ನು ನೀಡಲಿಲ್ಲ. ಅವರೇ ಇಟ್ಟುಕೊಂಡಿದ್ದಾರೆ ಎಂಬ ದೂರು ವ್ಯಕ್ತವಾಯಿತು. ಯಾವುದೇ ಸಿಬ್ಬಂದಿ ಅನಧಿಕೃತವಾಗಿ ಕಡತ ಇಟ್ಟುಕೊಂಡರೆ ಅವರ ಮೇಲೆ ಕ್ರಿಮಿನಲ್ ಕೇಸು ಹಾಕಿ ಎಂದು ಅಪರ ಜಿಲ್ಲಾಧಿಕಾರಿ  ತಹಶೀಲ್ದಾರರಿಗೆ ಸೂಚನೆ ನೀಡಿದರು. ಮನೆ ನಂಬ್ರ ಕಡ್ಡಾಯವಿಲ್ಲ: 94ಸಿಯಲ್ಲಿ ತಾಲೂಕಿನಲ್ಲಿ 11 ಸಾವಿರ ಅರ್ಜಿಗಳು ಬಂದಿದ್ದು, ಇದರಲ್ಲಿ 2ಸಾವಿರ ಅರ್ಜಿ ವಿಲೇ ಮಾಡಲಾಗಿದೆ. ಇನ್ನೂ 9 ಸಾವಿರ ಅರ್ಜಿ ಬಾಕಿ ಇದೆ. ಅರ್ಜಿ ಸಲ್ಲಿಸಿದವರ ಹೆಸರು ಮತ್ತು ಗ್ರಾಮವನ್ನು ಕಂಪ್ಯೂಟರ್‌ನಲ್ಲಿ ದಾಖಲು ಮಾಡಲಾಗಿದೆ. ಸೀನಿಯಾರಿಟಿ ಪ್ರಕಾರ ಇದು ವಿಲೇಯಾಗಬೇಕು. ಒಂದು ಗ್ರಾಮದ ಎಲ್ಲಾ ಅರ್ಜಿಯನ್ನು ಪರಿಶೀಲಿಸಿ ತನಿಖೆ ನಡೆಸಿ ಗ್ರಾಮದಲ್ಲೇ ವಿಲೇ ಮಾಡಬೇಕು. ಅರ್ಜಿಯ ಜೊತೆ ಮನೆ ನಂಬರ್ ಕೊಡಬೇಕು ಎಂಬುದು ಕಡ್ಡಾಯವಲ್ಲ, ಅರ್ಜಿದಾರರು, ಆಧಾರ್ ನಂಬ್ರ, ಮನೆ ತೆರಿಗೆ ರಶೀಧಿ, ಗುರುತಿನ ಚೀಟಿ ಸೇರಿದಂತೆ ಯಾವುದಾದರೊಂದು ದಾಖಲೆ ನೀಡಬಹುದು. ಯಾವುದೂ ಇಲ್ಲವಾದಲ್ಲಿ ಪಂಚಾಯತು ಕಾರ್ಯದರ್ಶಿಯವರು ಸ್ಥಳ ಪರಿಶೀಲನೆ ನಡೆಸಿ ವಾಸ್ತವ್ಯ ಧೃಡ ಪತ್ರ ನೀಡಬೇಕು. ಅದನ್ನು ನೀಡಬಹುದು ಎಂದು ತಿಳಿಸಿದರು. ತನ್ನ ಟೇಬಲ್‌ಗೆ ಬಂದ ಕಡತ ವಿಲೇ ಮಾಡಿದ್ದೇನೆ ಎಂದು ಬೆಳ್ತಂಗಡಿ ತಹಶೀಲ್ದಾರ್ ಅವರ ಉತ್ತರಕ್ಕೆ
ಆಕ್ರೋಶ ವ್ಯಕ್ತಪಡಿಸಿದ ಅಪರ ಜಿಲ್ಲಾಧಿಕಾರಿಗಳು ಇಷ್ಟೇ ನಿಮ್ಮ ಕೆಲಸವಲ್ಲ, ಆಡಳಿತದಲ್ಲಿ ಬಿಗಿ ತಂದು ಎಲ್ಲಾ ಕೆಲಸಗಳನ್ನು ಮಾಡಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.
ವೇಣೂರಿನಲ್ಲಿ ಸ.ನಂ 106/2ಬಿ ಪಿ1ರಲ್ಲಿ ಗ್ರಾಮ ಕರಣಿಕರ ವಸತಿ ಗೃಹಕ್ಕೆ ಮೀಸಲಿಟ್ಟ ಜಾಗವನ್ನು ಖಾಸಗಿ ವ್ಯಕ್ತಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮ ಕರಣಿಕರು ವಸತಿಗೃಹಕ್ಕೆ ಈ ಜಾಗ ಅಗತ್ಯವಿಲ್ಲ ಎಂದು ಧೃಡೀಕರಣ ಕೊಟ್ಟಿದ್ದಾರೆ. ಇದನ್ನು ಮಂಜೂರು ಮಾಡದೇ ವಸತಿ ಗೃಹಕ್ಕೆ ಉಳಿಸಿಕೊಳ್ಳಬೇಕು ಎಂದು ವಿಜಯ ಗೌಡ ಒತ್ತಾಯಿಸಿದರು. ಒಮ್ಮೆ ಮೀಸಲಾದ ಜಾಗವನ್ನು ಅಕ್ರಮ-ಸಕ್ರಮದಲ್ಲಿ ಮಂಜೂರಾತಿಗೆ ಕಾನೂನಿನಲ್ಲಿ ಅವಕಾಶ ಇಲ್ಲ ತನಿಖೆ ನಡೆಸುತ್ತೇನೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಕೊಯ್ಯೂರು ಗ್ರಾಮದಲ್ಲಿ 40 ಮಂದಿಗೆ ಗ್ರಾ.ಪಂ. ಮನೆ ನಿವೇಶನದ ಹಕ್ಕುಪತ್ರ ನೀಡಿದ್ದು, ಜಾಗದ ಸುತ್ತಾ ಅಗಲು ಹಾಕಿದೆ. ಆದರೆ ಈ ಜಾಗ ಕೆ.ಸಿ.ಡಿ.ಸಿ.ಯವರು ತಮ್ಮ ಜಾಗ ಎಂದು ಈಗ ಅಗಲು ಹಾಕುತ್ತಿದ್ದಾರೆ ಎಂದು ಜಿ.ಪಂ.ಸ. ಮಮತಾ ಶೆಟ್ಟಿ ತಿಳಿಸಿದಾಗ ಇದನ್ನು ತಕ್ಷಣ ನಿಲ್ಲಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಕೊಕ್ಕಡದ187ನೇ ಸರ್ವೆ ನಂಬ್ರದ ಜಾಗ ಭಾಗಶಃ ಅರಣ್ಯ ಅಥವಾ ಕೆಸಿಡಿಸಿಯವರ ಜಾಗ ಎಂಬ ಗೊಂದಲದಲ್ಲಿದೆ. ಇದರ ಜಂಟೀ ಸರ್ವೆಗೆ ಐದು ವರ್ಷಗಳಿಂದ ಒತ್ತಾಯಿಸುತ್ತಾ ಬಂದರೂ ಕ್ರಮ ಜರುಗಿಸಿಲ್ಲ ಎಂದು ಲಕ್ಷ್ಮೀನಾರಾಯಣ ತಿಳಿಸಿದಾಗ ಸರ್ವೆಗೆ ಸೂಚನೆ ನೀಡಲಾಯಿತು. ಅರಣ್ಯ ಇಲಾಖೆ ನೆಡುತೋಪು ಮಾಡಿ ಆರ್.ಟಿ.ಸಿ.ಯಲ್ಲಿ ಅರಣ್ಯ ಎಂದು ದಾಖಲು ಮಾಡಿರುವುದಕ್ಕೆ ತಾ.ಪಂ.ಸ. ಶಶಿಧರ ಕಲ್ಮಂಜ ಆಕ್ಷೇಪ ಸಲ್ಲಿಸಿದರು. ನೆಡುತೋಪು ಅರಣ್ಯವಾಗುವುದಿಲ್ಲ, ತಾಲೂಕಿನಲ್ಲಿ ಅನೇಕ ಕಡೆ ಈ ರೀತಿಯಾಗಿದೆ ಎಂದು ಶಾಸಕ ಬಂಗೇರ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಗೋಮಾಳ ಜಾಗದಲ್ಲಿ ಅನೇಕ ಬಡವರು ಮನೆ ಕಟ್ಟಿ ಕುಳಿತಿರುವ ವಿಷಯವನ್ನು ಜಿ.ಪಂ.ಸ. ಧರಣೇಂದ್ರ ಕುಮಾರ್ ಪ್ರಸ್ತಾಪಿಸಿದರು. ಇದರ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಶಾಸಕರು ಭರವಸೆಯಿತ್ತರು.
ಕುವೆಟ್ಟು ಗ್ರಾಮದಲ್ಲಿ 9.44 ಎಕ್ರೆ ಪರಂಬೋಕು ಸ್ಥಳವಿದ್ದು, ಇದರಲ್ಲಿ 50 ಮಂದಿ ಮನೆ ಕಟ್ಟಿ ಕುಳಿತಿದ್ದಾರೆ. ಇವರಿಗೆ ಹಕ್ಕು ಪತ್ರ ಸಿಕ್ಕಿಲ್ಲ ಎಂದು ಜಿ.ಪಂ.ಸ. ಶೇಖರ್ ಕುಕ್ಕೇಡಿ ಸಭೆಯ ಗಮನಕ್ಕೆ ತಂದರು. ಬಡವರಿಗೆ ಇಲಾಖೆಗೆ ಬಂದು 94ಸಿಯ ಬಗ್ಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ಅಧಿಕಾರಿಗಳೇ ಸ್ವಯಂ ಪ್ರೇರಿತವಾಗಿ ಅವರಿಗೆ ಕೆಲಸ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕಲ್ಮಂಜ ಗ್ರಾಮದಲ್ಲಿ ಬಡವರೋರ್ವರಿಗೆ ಅರ್ಜಿ ಕೊಟ್ಟು ಆರು ತಿಂಗಳಾದರೂ ಅಂತ್ಯಸಂಸ್ಕಾರದ ಹಣ ಕೊಟ್ಟಿಲ್ಲ ಎಂದು ಶಶಿಧರ್ ಕಲ್ಮಂಜ ತಿಳಿಸಿದರು. 94ಸಿಯಲ್ಲಿ ಪ.ಜಾತಿ, ಪಂಗಡವರ ಫೈಲ್‌ಗಳು ವಿಲೇಗೆ ಬಾಕಿಯಾಗಿದ್ದು, ಇದಕ್ಕೆ ಆದ್ಯತೆ ನೀಡಬೇಕು ಎಂದು ತಾ.ಪಂ.ಸ. ಜಯರಾಮ ಎಂ.ಕೆ. ಒತ್ತಾಯಿಸಿದರು. ಸಭೆಯಲ್ಲಿ ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಅನೇಕ ದೂರುಗಳನ್ನು ನೀಡಿದ್ದು, ಇದನ್ನು ಪರಿಶೀಲಿಸಿದ ಅಪರ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ವಿಚಾರಣೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.