ಎಸ್ಕ್ರೋ ಖಾತೆಯಲ್ಲಿ ಕೊಳೆಯುತ್ತಿದೆ ಪಂಚಾಯತ್‌ನ ಲಕ್ಷ ಲಕ್ಷ ರೂ. ಅಭಿವೃದ್ಧಿ ಹಣ

48 ಪಂಚಾಯತ್‌ಗಳಲ್ಲಿ 4.77 ಕೋಟಿ ರೂ ಜಮೆ

2.56 ಕೋಟಿ ರೂ. ಮೆಸ್ಕಾಂಗೆ ನೇರ ಪಾವತಿ

ಬೆಳ್ತಂಗಡಿ : ಗ್ರಾಮ ಪಂಚಾಯತುಗಳು ಮೆಸ್ಕಾಂಗೆ ಸರಿಯಾಗಿ ವಿದ್ಯುತ್ ಬಿಲ್ಲು ಪಾವತಿಸುತ್ತಿಲ್ಲ. ಅನೇಕ ಗ್ರಾಮ ಪಂಚಾಯತುಗಳಲ್ಲಿ ಲಕ್ಷಾಂತರ ರೂ ಬಿಲ್ಲು ಕಟ್ಟಲು ಬಾಕಿ ಇದೆ ಈ ಹಿನ್ನೆಲೆಯಲ್ಲಿ ಸರಕಾರ ಎಲ್ಲಾ ಪಂಚಾಯತುಗಳಿಗೆ ಅನ್ವಯವಾಗುವಂತೆ ಎಸ್ಕ್ರೋ ಎಂಬ ಹೊಸ ಖಾತೆಯನ್ನು ತೆರೆದಿದ್ದು, ಈ ಖಾತೆಯಲ್ಲಿ ಈಗ ಪಂಚಾಯತದ ಲಕ್ಷ ಲಕ್ಷ ಅಭಿವೃದ್ಧಿ ಅನುದಾನ ಬಾಕಿಯಾಗಿ ಉಳಿದಿದೆ. ರಮೇಶ್ ಕುಮಾರ್ ವರದಿ ಜಾರಿ ಮೂಲಕ ಪಂಚಾಯತ್ ರಾಜ್ ಕಾಯಿದೆಗೆ ಪರಿಗಣನೀಯ ಬದಲಾವಣೆಗಳು ಆಗಿದೆಯಾದರೂ ಸರಕಾರ ಒಂದು ಕೈಯ್ಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕಾರ್ಯಕ್ಕೆ ಮುಂದಾಗಿದೆಯೇ ಎಂಬ ಸಂದೇಹ ಮೂಡುತ್ತಿದೆ.
ರಾಜ್ಯ ಸರಕಾರ ಎಲ್ಲಾ ಪಂಚಾಯತ್‌ಗಳಿಗೆ ಅನ್ವಯವಾಗುವಂತೆ ಎಸ್ಕ್ರೋ ಎಂಬ ಹೊಸ ಖಾತೆಯೊಂದನ್ನು ತೆರೆದಿದ್ದು ಅದರಲ್ಲಿ ಪಂಚಾಯತ್‌ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ನೀಡುವ ಶಾಸನಬದ್ಧ ಅನುದಾನ ಮತ್ತು ವಿವಿಧ ಮೂಲಗಳ ಅನುದಾನಗಳಿಂದ ನಿಗಧಿತ ಪ್ರಮಾಣದಲ್ಲಿ ಕಡಿತಗೊಳಿಸಿ ಈ ಖಾತೆಗೆ ತುಂಬುತ್ತಿದೆ. ಆ ಹಣ ತಾಲೂಕಿನ 48 ಗ್ರಾ.ಪಂ. ನಲ್ಲಿ 4,76,70,463 ರೂ. ಆಗಿದ್ದು ಈ ಪೈಕಿ 2,55,39,184 ರೂ ಮೆಸ್ಕಾಂ ಪಾವತಿಯಾಗುವಂತೆ ಮಾಡಿದೆ. ಅದರಲ್ಲಿ 2,21,31,279 ರೂ. ಇನ್ನೂ ಖಾತೆಯಲ್ಲಿ ಜಮೆಯಿದ್ದು ಉಪಯೋಗಿಸಲಾಗದೆ ಕೊಳೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಈ ವಿಕೇಂದ್ರೀಕರಣ ವ್ಯವಸ್ಥೆಯ ತ್ರಿಸ್ತರಗಳಾದ ಜಿ.ಪಂ, ತಾ. ಪಂ ಮತ್ತು ಗ್ರಾ.ಪಂ ವ್ಯವಸ್ಥೆಯಲ್ಲಿ ಒಂದೊಂದು ಹಂತಗಳು ಅಧಿಕಾರ ಮತ್ತು ಆರ್ಥಿಕ ಲಭ್ಯತೆಯ ದೃಷ್ಟಿಯಲ್ಲಿ ದುರ್ಬಲಗೊಳ್ಳುತ್ತಾ ಹೋಯಿತು. ಈ ವೇಳೆ ಮತ್ತೆ ಅದಕ್ಕೆ ಸ್ವಲ್ಪ ಶಕ್ತಿ ದೊರೆತದ್ದು 2015 ರಲ್ಲಿ ಮಂಡನೆಯಾದ ರಮೇಶ್ ಕುಮಾರ್ ವರದಿ ಜಾರಿಯಲ್ಲಿ. ಈ ವೇಳೆಗಾಗುವಲ್ಲಿ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರವಧಿ 5 ವರ್ಷಕ್ಕೆ ಏರಿಕೆಯಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆ ಕ್ಯಾಬಿನೆಟ್ ದರ್ಜೆಯ ಮಂತ್ರಿಯ ಸರಿಸಮಾನವಾಯಿತು. ಶಾಸನಬಧ್ದ ಅನುದಾನವೂ ಮುಂದಕ್ಕೆ ಜಾಸ್ತಿಯಾಗುವ ಸಾಧ್ಯತೆಯ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳು ಮುಂದಕ್ಕೆ ದೊರೆಯುವ ಭರವಸೆಯೂ ಜನರಲ್ಲಿ ಮೂಡಿತು. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಕೂಡ 13 ನೇ ಹಣಕಾಸು ಯೋಜನೆಗಿಂತ ಒಂದು ಹಂತ ಮೇಲೇರಿ 14 ನೇ ಹಣಕಾಸು ಯೋಜನೆ ಜಾರಿಗೆ ತಂದು ಅಭಿವೃದ್ದಿ ಅನುದಾನವನ್ನು ನೇರ ಗ್ರಾಮ ಪಂಚಾಯತ್‌ಗೆ ಪ್ರತ್ಯೇಕ ಖಾತೆಯ ಮೂಲಕ ಜಮೆ ಮಾಡಲು ಕ್ರಮ ಕೈಗೊಂಡಿತು.
ಆದರೆ ಇಲ್ಲಿ ಆಗಿರುವ ಹೊಸ ಸಮಸ್ಯೆಯೇನೆಂದರೆ ಎಲ್ಲ ಪಂಚಾಯತ್‌ಗಳಲ್ಲೂ ಇದೀಗ ಮಾಡಲಾಗಿರುವ “ಎಸ್ಕ್ರೋ” ಎಂಬ ಹೊಸ ಖಾತೆ. ಇದು ತಾಲೂಕಿಗೆ ಹೊಸದಾಗಿ ಮಂಜೂರಾಗಿರುವ ೫ ಗ್ರಾ. ಪಂಚಾಯತ್‌ಗಳಿಗೂ ಸೇರಿದಂತೆ ೪೮ ಪಂಚಾಯತ್, ಅಂತೆಯೇ ರಾಜ್ಯದಲ್ಲಿ 6020ಗ್ರಾ.ಪಂ ಗಳಲ್ಲಿ ತೆರೆಯಲಾಗಿದೆ. ಈ ಖಾತೆಯಂತೆ ತಾಲೂಕಿನಲ್ಲಿ 48 ಗ್ರಾ.ಪಂಚಾಯತ್‌ಗಳ ಅಭಿವೃಧ್ದಿ ಹಣ ನಿಗಧಿತ ಪ್ರಮಾಣದಲ್ಲಿ ಈಗ ಆ ಖಾತೆಯಲ್ಲಿ ಜಮೆಯಾಗಿ ಉಪಯೋಗಕ್ಕಿಲ್ಲದೆ ಕೊಳೆಯುತ್ತಿದೆ. ಈ ಮೊತ್ತವನ್ನು ರಾಜ್ಯಕ್ಕೆ ಹೋಲಿಸಿದರೆ ಸರಿಸುಮಾರು 700 ಕೋಟಿ ರೂ. ಗಳಾಗುತ್ತವೆ.
ಸರಕಾರ ಗ್ರಾಮ ಪಂಚಾಯತ್‌ಗಳಿಗೆ ನೀಡುವ ಶಾಸನಬದ್ಧ ಅಭಿವೃದ್ಧಿ ಅನುದಾನದಲ್ಲಿ ಶೇ.60, ಕೇಂದ್ರ ಸರಕಾರದ 13 ಮತ್ತು 14ನೇ ಹಣಕಾಸು ಯೋಜನೆಯಲ್ಲಿ ದೊರೆಯುವ ಹಾಗೂ ಸಾಮಾನ್ಯ ನಿರ್ವಹಣಾ ಅನುದಾನದಲ್ಲಿ ಶೇ. 25ನ್ನು ಸರಕಾರವೇ ನೇರ ಈ ಖಾತೆಗೆ ವರ್ಗಾಯಿಸಿ ಬಿಡುತ್ತದೆ.
ಯಾಕಿರಬಹುದು ಈ “ಎಸ್ಕ್ರೋ” ಖಾತೆಯ ಚಿಂತನೆ ಎಂದು ತಿಳಿಯುತ್ತಾ ಹೋದರೆ, ಈಗ ರಾಜ್ಯದಲ್ಲಿ ಬಹುತೇಕ ಎಲ್ಲ ಗ್ರಾ. ಪಂಚಾಯತ್‌ಗಳೂ ಲಕ್ಷಗಟ್ಟಲೆ ವಿದ್ಯುತ್ ಬಿಲ್ಲು ಪಾವತಿಗೆ ಬಾಕಿಇದೆ.(ಅಂದಾಜು 3500 ಕೋಟಿ. ರೂ) ದಾರಿದೀಪ, ನೀರಿನ ಪಂಪುಗಳ ವಿದ್ಯುತ್ ಬಿಲ್ಲುಗಳು ಪಾವತಿಗೆ ಸರಕಾರವೇ ಈ ಹಿಂದೆ ಕ್ರಮವೊಂದನ್ನು ಅನುಸರಿಸಿಕೊಂಡು ಬಂದಿದ್ದು ಪಂಚಾಯತ್‌ಗೆ ನೀಡುವ ಶಾಸನಬಧ್ದ ಅನುದಾನದಲ್ಲಿ ಒಂದು ಭಾಗವನ್ನು ನೇರ ವಿದ್ಯುತ್ ಇಲಾಖೆಗೆ ಪಾವತಿಸುವಂತೆ ಕ್ರಮ ಕೈಗೊಂಡಿತ್ತು. 14 ನೇ ಹಣಕಾಸು ಯೋಜನೆ ಜಾರಿಗೆ ಬಂದಾಗ ಆ ಹಣದಿಂದ ವಿದ್ಯುತ್ ಬಿಲ್ಲು ಕಡಿತಗೊಳಿಸಿ ಅಭಿವೃದ್ದಿಗೆ ತೊಂದರೆ ನೀಡಬಾರದಾಗಿ ರಾಜ್ಯದ ಪ್ರತಿಪಕ್ಷವಾಗಿ ಬಿ.ಜೆ.ಪಿ ವಿರೋಧವನ್ನೂ ವ್ಯಕ್ತಪಡಿಸಿತ್ತು. ಆದರೆ ಈ ಎಸ್ಕ್ರೋ ಖಾತೆ ಸದ್ದಿಲ್ಲದೆ ಆ ಕಾರ್ಯ ಮಾಡುತ್ತಿದೆ ಎಂಬುದು ಈಗ ಗೊತ್ತಾದ ವಿಷಯ.
ತಾಲೂಕಿನ 48 ಗ್ರಾಮ ಪಂಚಾಯತ್‌ಗಳ ಎಸ್ಕ್ರೋ ಖಾತೆಯಲ್ಲಿರುವ ಹಣ ಮತ್ತು ಮೆಸ್ಕಾಂ ಇಲಾಖೆ ಪಾವತಿಸಿದ ಹಣ:
(ಈ ಪೈಕಿ ಮೆಸ್ಕಾಂಗೆ ಪಾವತಿಸಿದ ಹಣವನ್ನು ಬ್ರಾಕೆಟ್‌ನಲ್ಲಿ ನೀಡಲಾಗಿದೆ)
ಗ್ರಾ.ಪಂ ಅಳದಂಗಡಿ 8,19,504 ರೂ. (ಗ್ರಾ.ಪಂ. ನಿಂದ ಮೆಸ್ಕಾಂಗೆ ಪಾವತಿಸಿದ ಹಣ 1,12,217), ಗ್ರಾ.ಪಂ. ಅಂಡಿಂಜೆ 11,56,630 ರೂ. (7,54,512), ಗ್ರಾ.ಪಂ. ಆರಂಬೋಡಿ11,11,983 ರೂ. (5,88,673), ಗ್ರಾ.ಪಂ. ಅರಸಿನಮಕ್ಕಿ ೯೦೧೩೨೧ರೂ. (3,00,504), ಗ್ರಾ.ಪಂ. ಬಳೆಂಜ9,07,850ರೂ. (4,45,762), ಗ್ರಾ.ಪಂ. ಬಂದಾರು 12,67,501ರೂ. (00), ಗ್ರಾ.ಪಂ. ಬಾರ್ಯ 14,61,368ರೂ. (11,81,000), ಗ್ರಾ.ಪಂ ಬೆಳಾಲು8,81,186ರೂ. (೧1,81,045), ಗ್ರಾ.ಪಂ ಚಾರ್ಮಾಡಿ: 21,52,995ರೂ. (8,90,465), ಗ್ರಾ.ಪಂ ಧರ್ಮಸ್ಥಳ: 17,92,831ರೂ. (12,28,304), ಗ್ರಾ.ಪಂ ಹೊಸಂಗಡಿ: 11,15,307ರೂ. (4,23,102), ಗ್ರಾ.ಪಂ ಇಳಂತಿಲ: 11,85,211ರೂ. (8,24,503), ಗ್ರಾ.ಪಂ ಇಂದಬೆಟ್ಟು: 2,22,648ರೂ. (00), ಗ್ರಾ.ಪಂ ಕಳಿಯ: 9,43,806 ರೂ. (9,43,000), ಗ್ರಾ.ಪಂ. ಕಲ್ಮಂಜ: 8,19,251ರೂ. (5,07,511), ಗ್ರಾ.ಪಂ ಕಣಿಯೂರು 10,76,767 ರೂ. (10,75,445), ಗ್ರಾ.ಪಂ ಕಾಶಿಪಟ್ಣ: 7,58,868 ರೂ. (7,50,802), ಗ್ರಾ.ಪಂ ಕೊಕ್ಕಡ: 87,58,265೫ ರೂ. (1,90,317), ಗ್ರಾ.ಪಂ ಕೊಯ್ಯೂರು: 11,69,521 ರೂ. (6,96,707), ಗ್ರಾ.ಪಂ ಕುಕ್ಕೇಡಿ 10,61,747 ರೂ. (1,15,903), ಗ್ರಾ.ಪಂ ಕುವೆಟ್ಟು 10,76,079 ರೂ. (10,73,700), ಗ್ರಾ.ಪಂ ಲಾಲ: 10,56,523 ರೂ. ( 4,77,154), ಗ್ರಾ.ಪಂ ಮಚ್ಚಿನ:9,12,553 ರೂ. (5,59,371), ಗ್ರಾ.ಪಂ ಮಡಂತ್ಯಾರು 9,66,707 ರೂ. (9,66,707), ಗ್ರಾ.ಪಂ ಮಾಲಾಡಿ 13,00,000 ರೂ. (10,03,000), ಗ್ರಾ.ಪಂ ಮಲವಂತಿಗೆ 10,50,000ರೂ. (00), ಗ್ರಾ.ಪಂ ಮರೋಡಿ 10,66,118 ರೂ. (4,76,900), ಗ್ರಾ.ಪಂ ಮೇಲಂತಬೆಟ್ಟು: 13,35,951 ರೂ. (8,88,509), ಗ್ರಾ.ಪಂ ಮಿತ್ತಬಾಗಿಲು:2,12,315 ರೂ. (00), ಗ್ರಾ.ಪಂ ಮುಂಡಾಜೆ10,75,073 ರೂ. (9,15,912), ಗ್ರಾ.ಪಂ ನಡ: 9,25,897 ರೂ. (4,18,033), ಗ್ರಾ.ಪಂ ನಾರಾವಿ: 9,76,000 ರೂ. (5,34,000), ಗ್ರಾ.ಪಂ ನೆರಿಯ: 10,61,524 ರೂ. (4,61,660), ಗ್ರಾ.ಪಂ ನಿಡ್ಲೆ:11,88,110ರೂ. (5,56,934), ಗ್ರಾ.ಪಂ ಪಡಂಗಡಿ 9,99,107 ರೂ. (9,99,107), ಗ್ರಾ.ಪಂ ಪಟ್ರಮೆ 9,14,229 ರೂ. (5,44,995), ಗ್ರಾ.ಪಂ ಪುದುವೆಟ್ಟು: 8,13,890 ರೂ. (76,651), ಗ್ರಾ.ಪಂ ಶಿಬಾಜೆ: 7,56,502 ರೂ. (1,98,677), ಗ್ರಾ.ಪಂ ಶಿರ್ಲಾಲು: 8,64,371 ರೂ. (1,22,248), ಗ್ರಾ.ಪಂ ಶಿಶಿಲ: 9,37,187 ರೂ. (1,40,905), ಗ್ರಾ.ಪಂ ತಣ್ಣೀರುಪಂತ: 16,27,180 ರೂ. (8,93,013), ಗ್ರಾ.ಪಂ. ಉಜಿರೆ 22,11,724 ರೂ. (18,17,936), ಗ್ರಾ.ಪಂ ವೇಣೂರು 13,31,000 ರೂ. (11,94,000), ನೂತನ ಗ್ರಾಮ ಪಂಚಾಯತ್‌ಗಳಾದ ಕಳೆಂಜ, ಕಡಿರುದ್ಯಾವರ, ನಾವೂರು, ಸುಲ್ಕೇರಿ ಮತ್ತು ತೆಕ್ಕಾರು ಗ್ರಾಮಗಳಿಂದ 3,00,000 ರೂ. ಕಡಿತಗೊಳಿಸಿ ಖಾತೆಯಲ್ಲಿ ಜಮೆ ಇಟ್ಟಿದೆ.
ಹೊಸ ಪಂಚಾಯತ್‌ಗಳೆಗೆ ಇನ್ನೂ ಕೂಡ ನವೇಶನ, ಹೊಸ ಕಟ್ಟಡ, ಪೀಠೋಪಕರಣಗಳನ್ನು ಸರಕಾರ ಇನ್ನೂ ಒದಸಿಲ್ಲ. ಹಾಗಿರುವಾಗ ಅವರಿಗೆ ನೀಡಿದ ಅನುದಾನದಲ್ಲಿ ತಲಾ 3 ಲಕ್ಷದಂತೆ “ಎಸ್ಕ್ರೋ” ಖಾತೆಗೆ ಸೇರಿಯಾಗಿದೆ. ಇವರ ಅದೃಷ್ಟವೆಂದರೆ ಇವರ ಬಾಬ್ತು ಸರಕಾರಕ್ಕೆ ವಿದ್ಯುತ್ ಬಿಲ್ಲು ಬಾಕಿ ಈಗ ಇಲ್ಲ. ಆದ್ದರಿಂದ ಇವರಿಂದ ಮೆಸ್ಕಾಂ ಗೆ ಹಣ ಪಾವತಿಯಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.