ಎಲ್ಲರ ಪರಿಶ್ರಮದಿಂದ ಲಾಯಿಲದಲ್ಲಿ ಈ ಚಾರಿತ್ರಿಕ ಫಲಿತಾಂಶ ದಾಖಲಾಗಿದೆ : ಬಿಷಪ್ ಲಾರೆನ್ಸ್ ಮುಕ್ಕುಯಿ

Laila abhinandane 1 copy ರಾಜ್ಯದಲ್ಲಿ  ದ್ವಿತೀಯ ರ‍್ಯಾಂಕ್ ಪಡೆದ ಲಾಯಿಲ ಸೈಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿ ಸುಶ್ರುತ್‌ಗೆ ಅಭಿನಂದನೆ

ಈ ವರ್ಷ ಈ ಶಾಲೆಯ ಮೂಲಕ ಪರೀಕ್ಷೆ ಬರೆದಿರುವ 57 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಆ ಪೈಕಿ ೨೪ ಮಕ್ಕಳು ಶೇ.90 ಕ್ಕಿಂತ ಅಧಿಕ ಅಂಕಗಳೊಂದಿಗೆ, 19 ವಿದ್ಯಾರ್ಥಿಗಳು ಶೇ. 80 ಅಂಕಗಳೊಂದಿಗೆ, 12 ವಿದ್ಯಾರ್ಥಿಗಳು ಶೇ. 70 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಮತ್ತು ಇಬ್ಬರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಒಳ್ಳೆಯ ಸಾಧನೆ ಮೆರೆದಿರುವುದು ಗಮನಾರ್ಹ ಅಂಶ ಎಂದು ಬಿಷಪ್ ಅಭಿನಂದಿಸಿದರು.

ಲಾಲ : ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಲಾಲ ಸೈಂಟ್ ಮೇರೀಸ್ ಶಾಲೆಯು ರಾಜ್ಯಕ್ಕೇ ಎರಡನೇ ರ‍್ಯಾಂಕ್ ಪಡೆಯುವ ಮೂಲಕ ತಾಲೂಕಿನಲ್ಲಿ ಮೊತ್ತಮೊದಲ ಚಾರಿತ್ರಿಕ ದಾಖಲೆ ಮಾಡಿದೆ. ಈ ಸಾಧನೆಯಲ್ಲಿ ವಿದ್ಯಾರ್ಥಿಯ ಕಠಿಣ ಪರಿಶ್ರಮ, ಹೆತ್ತವರ ಮತ್ತು ಆಡಳಿತ ಮಂಡಳಿಯವರ ಪ್ರೋತ್ಸಾಹ, ಎಲ್ಲದಕ್ಕೂ ಮಿಗಿಲಾಗಿ ಶಾಲಾ ಶಿಕ್ಷಕವೃಂದವರು ಮಾಡಿದ ತ್ಯಾಗದ ಫಲವಾಗಿ ಈ ದಾಖಲೆ ನಿರ್ಮಾಣವಾಗಿದೆ ಎಂದು ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸೈಂಟ್ ಮೇರೀಸ್ ಶಾಲೆ ಲಾಯಿಲ ಇಲ್ಲಿನ ವಿದ್ಯಾರ್ಥಿಯಾಗಿದ್ದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ದಾಖಲಿಸಿದ ವಿದ್ಯಾರ್ಥಿ ಸುಶ್ರುತ್ ಅವರಿಗೆ ಅಭಿನಂದನೆ ಮತ್ತು ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮೇ28 ರಂದು ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಶಾಲೆಯ ಶಿಕ್ಷಕರು ಧರ್ಮಭಗಿನಿಯ ರಾಗಿದ್ದು ದೇವರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಅವರ ಜೀವನವನ್ನೇ ಮುಡಿಪಾಗಿಟ್ಟು ಶ್ರಮವಹಿಸುತ್ತಿದ್ದಾರೆ. ಎಲ್ಲಾ ಶಿಕ್ಷಕವೃಂದದವರೂ ಸೇರಿ ವಿದ್ಯಾಭ್ಯಾಸವನ್ನು ಯಜ್ಞದ ರೂಪದಲ್ಲಿ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳೂ ಕೂಡ ಗ್ರಾಮೀಣ ಪ್ರದೇಶದವರಾದರೂ ನಮ್ಮಲ್ಲೂ ಸಾಧಿಸುವ ಕೆಚ್ಚು ಇದೆ ಎಂದು ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ. ಸಮುದ್ರದ ಆಳದಲ್ಲಿ ವಜ್ರ ಇದೆ. ಕಾರ್ಗತ್ತಲ ಕಾನನದಲ್ಲಿ ಸುಂದರ ಪುಷ್ಪಗಳು ಬೆಳೆಯುತ್ತವೆ. ಅವುಗಳನ್ನು ಗುರುತಿಸುವವರು ಕಡಿಮೆ. ಇಲ್ಲಿ ಆ ಕೆಲಸ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ಗ್ರಾಮೀಣ ಪ್ರದೇಶವಾಗಿರುವ ಲಾಯಿಲದ ಹೆಸರನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದ ಸುಶ್ರುತ್ ಕೇವಲ ಓದು ಮಾತ್ರವಲ್ಲದೆ ಸೃಜನಾತ್ಮಕ ಕಲೆ ಇತ್ಯಾಧಿಯಾಗಿ ಎಲ್ಲ ರಂಗಗಳಲ್ಲೂ ಸಾಧಕನಾಗಿದ್ದು ಮಾದರಿ ವಿದ್ಯಾರ್ಥಿಯಾಗಿದ್ದಾರೆ. ಎಲ್ಲ ವಿದ್ಯಾರ್ಥಿಗಳಲ್ಲೂ ಸಾಧಿಸಬೇಕು ಎಂಬ ಭಾವನೆ ಇರಬೇಕು. ಆಗ ಹಠ ಬರುತ್ತದೆ. ಅದರಿಂದ ಗುರಿ ತಲುಪಲು ಸಾಧ್ಯ. ಸುಶ್ರುತ್ ಮಾಡಿದ ಸಾಧನೆಯಿಂದ ಶಾಲೆಗೆ, ಆತನ ಹೆತ್ತವರಿಗೆ, ಶಿಕ್ಷಕವೃಂದಕ್ಕೆ, ಆಡಳಿತ ಮಂಡಳಿಗೆ ಅದೆಲ್ಲದರ ಜೊತೆಗೆ ಈ ತಾಲೂಕಿನ ಶಾಸಕ ಎಂಬ ನೆಲೆಯಲ್ಲಿ ನನಗೂ ಕೀರ್ತಿ ಬಂದಿದೆ ಎಂದು ತಿಳಿಸುತ್ತಾ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಶಾಲಾ ಸಂಸ್ಥಾಪನಾ ಮಂಡಳಿಯ ಮುಖ್ಯಸ್ಥರಾದ ಸಿಸ್ಟರ್ ಡಿನ್ಸಿ ಪಿಲಿಪ್, ಸಿ. ಜಾನ್ಸಿ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜಿನ್ಸಿ, ಶಾಲಾ ಸಂಚಾಲಕರಾದ ಸಿಸ್ಟರ್ ಬೆನೆಟ್, ಶಿಕ್ಷಕ ರಕ್ಷಕರ ಸಂಘದ ಅಧ್ಯಕ್ಷ ಯೋಗೀಶ ಭಿಡೆ ಬಜಕ್ರೆಸಾಲ್, ಉಪಾಧ್ಯಕ್ಷೆ ಡಾ| ದೀಪಾಲಿ ಡೋಂಗ್ರೆ, ಉಪಸ್ಥಿತರಿದ್ದರು.
ಸುಶ್ರುತ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ವತಿಯಿಂದ  ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು. ಬಿಷಪ್ ಅವರ ಪರವಾಗಿ ಸುಶ್ರುತ್ ಅವರನ್ನು ವೈಯುಕ್ತಿಕವಾಗಿ ಶಾಲು ಹೊದಿಸಿ ಸನ್ಮಾನಿಸಿದರು. ಶಾಲೆ ಮತ್ತು ಬಿಷಪ್ ಅವರಿಂದ ಅಭಿನಂದನೆ
ಸ್ವೀಕರಿಸಿದ ಸುಶ್ರುತ್ ಅನಿಸಿಕೆ ವ್ಯಕ್ತಪಡಿಸಿ, ಈ ಶಾಲೆಯಲ್ಲಿ ಎಲ್ಲ ವಿಧಗಳಿಂದಲೂ ಪ್ರೋತ್ಸಾಹ ದೊರೆತಿದ್ದೇ ನನ್ನ ಈ ಸಾಧನೆಗೆ ಕಾರಣ ಎಂದು ಎಲ್ಲರನ್ನೂ ನೆನೆದುಕೊಂಡರು. ಈ ಸಂದರ್ಭ ಸುಶ್ರುತ್‌ರ ಹೆತ್ತವರಾದ ಕಿಶೋರ್ ಕುಮಾರ್, ಸುರೇಖಾ, ತಂಗಿ ಸುಶೀರಾ ಉಪಸ್ಥಿತರಿದ್ದರು.
ಶಿಕ್ಷಕಿ ರೂಪಲತಾ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶಿಕ್ಷಕಿಯರಾದ ಸವಿತಾ ಮತ್ತು ಶೃತಿ ವಿದ್ಯಾರ್ಥಿಗಳ ಹೆಸರಿನ ಪಟ್ಟಿ ವಾಚಿಸಿದರು. ಅಶ್ವಿನಿ ಮತ್ತು ಸುನೀತಾ ಕಾರ್ಯಕ್ರಮ ನಿರೂಪಿಸಿ ಶೋಭಾ ವಂದಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ಪ್ರಸ್ತುತಿಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.