ಬೆಳ್ತಂಗಡಿ ತಾಲೂಕು ಶಿಬಾಜೆ ಕುರುಂಜ ಅಣ್ಣು ಗೌಡರ ಮಗ ಆನಂದ ಗೌಡ ಕುರುಂಜ ( ೪೩) ಅಲ್ಪಕಾಲದ ಅಸೌಖ್ಯದಿಂದ ಗುರುವಾರದಂದು ಸಂಜೆ ವೇಳೆ ಬೆಂಗಳೂರಿನ ಅತ್ತಿಬೆಲೆಯಲ್ಲಿರುವ ನಾರಾಯಣ ಹೃದಯಾಲಯದಲ್ಲಿ ನಿಧನ ಹೊಂದಿದ್ದಾರೆ. ಇವರು ಶಿಬಾಜೆ ಗ್ರಾ.ಪಂ. ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಯಾನ್ಸರ್ ಕಾಯಿಲೆಗೆ ಕಳೆದ ೬ ತಿಂಗಳ ಹಿಂದೆ ತುತ್ತಾಗಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ದೀರ್ಘಕಾಲದ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಇದೀಗ ಕೆಲ ದಿನಗಳ ಹಿಂದೆ ಅವರಿಗೆ ಮತ್ತೆ ಈ ಸಮಸ್ಯೆ ತಲೆದೋರಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಮತ್ತು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಶ್ರೀ ರಾಮ ವಿದ್ಯಾ ಸಂಸ್ಥೆಯ ಪದಾಧಿಕಾರಿ, ಮತ್ತು ಬಿಜೆಪಿ ಪಕ್ಷಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು. ಮೃತರ ಮನೆಗೆ ಶುಕ್ರವಾರದಂದು ಬೆಳಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ್ ಕಲ್ಲಡ್ಕ ಡಾ. ಪ್ರಭಾಕರ ಭಟ್, ಬೆಳ್ತಂಗಡಿ ಮಾಜಿ ಶಾಸಕರಾದ ಪ್ರಭಾಕರ ಬಂಗೇರ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ ಸಿಂಹ ನಾಯಕ್, ಪಕ್ಷದ ಪದಾಧಿಕಾರಿಗಳಾದ ರಂಜನ್ ಗೌಡ, ಪೂವಾಜೆ ಕುಶಾಲಪ್ಪ ಗೌಡ, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ,ಪ್ರಭಾಕರ ಶೆಟ್ಟಿ ಉಪ್ಪಡ್ಕ,ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ , ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಪುತ್ತೂರು ಭೂ ಅಭಿವೃದ್ದಿ ಬ್ಯಾಂಕಿನ ಉಪಾಧ್ಯಕ್ಷ ಭಾಸ್ಕರ ಎಸ್ ಗೌಡ, ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಶಿರಾಡಿ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ಗೌಡ ಮತ್ತಿತರರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.ಮೃತರ ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆ ವೇಳೆ ಪಾಲ್ಗೊಂಡರು. ಮೃತರಿಗೆ ಪತ್ನಿ, ಓರ್ವ ಪುತ್ರ ಒಬ್ಬಾಕೆ ಪುತ್ರಿ ಇದ್ದಾರೆ.