ಎತ್ತಿನಹೊಳೆ ಯೋಜನೆ – ದ.ಕ. ಜಿಲ್ಲೆಯ ಭಾವನೆಗಳಿಗೆ ಬೆಲೆಯೇ ಇಲ್ಲವೇ?

UP Shivananda copyಜನರಿಗೆ ಬಂದ್‌ನಂತಹ ಹಾನಿಕಾರಕ ಪ್ರತಿಭಟನೆಯೇ ದಾರಿಯೆಂದು  ಪಕ್ಷಗಳು, ಜನಪ್ರತಿನಿಧಿಗಳು, ಸರಕಾರ ತೋರಿಸುತ್ತಿರುವುದೇಕೆ

ಪಕ್ಷಗಳನ್ನು ಜನಪ್ರತಿನಿಧಿಗಳನ್ನು ನಾಯಕತ್ವ ವಹಿಸುವಂತೆ ಅಥವಾ ರಾಜೀನಾಮೆ ನೀಡುವಂತೆ ಮಾಡುವ ಪ್ರತಿಭಟನೆ ನಡೆಯಲಿ

ನೇತ್ರಾವತಿ ತಿರುವಿನ ವಿರುದ್ಧ ಹೋರಾಟ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಜಾತಿ, ಧರ್ಮ, ಪಕ್ಷ ಬೇಧ ಬಿಟ್ಟು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ಸಭೆಗಳು ಪ್ರತಿಭಟನೆಗಳು ನಡೆದಿವೆ. ತಜ್ಞರು ಸಾಮಾನ್ಯ ಜನರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಆದರೆ ದ.ಕ ಜಿಲ್ಲೆಯ ಜನರ ಭಾವನೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ದ.ಕ ಜಿಲ್ಲೆ ಒಂದು – ಬಯಲುಸೀಮೆಯ ಏಳು ಜಿಲ್ಲೆಗಳು ಎಂಬ ಓಟಿನ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಬಿಜೆಪಿ ಮತ್ತಿತರ ರಾಜಕೀಯ ಪಕ್ಷಗಳು ಬಿದ್ದಿವೆ. ಜನಪ್ರತಿನಿಧಿಗಳು ಸರಕಾರಗಳು ಅದನ್ನೇ ಯೋಚಿಸುತ್ತಿವೆ. ಆ ನೇತ್ರಾವತಿ ಯೋಜನೆ ಒಳ್ಳೆಯ ಯೋಜನೆ ಎಂದು ಹೇಳುವುದಾದರೆ ಇಲ್ಲಿಯ ಜನರ ಭಾವನೆಗಳಿಗೆ ಹೆದರಿಕೆಗೆ ತೊಂದರೆಗಳಿಗೆ ಕಾರಣವನ್ನು ಚರ್ಚಿಸಿ ಅದರ ಸಾಧಕ ಬಾಧಕಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಸರಕಾರದಿಂದ, ಇಲ್ಲಿಯ ಜನಪ್ರತಿನಿಧಿಗಳಿಂದ ಮತ್ತು ಮುಖ್ಯವಾಗಿ ರಾಜಕೀಯ ಪಕ್ಷಗಳವರಿಂದ ಆಗಬೇಕು. ಅದು ನಡೆಯಲೇ ಇಲ್ಲ. ಜನರ ಭಾವನೆಗಳಿಗೆ ಬೆಲೆಯೇ ಸಿಗಲಿಲ್ಲ.
ದ.ಕ ಜಿಲ್ಲೆಗೆ ತೊಂದರೆಯಿದೆ ಎಂದಿರುವಾಗ ಇಲ್ಲಿಯ ನಾಯಕರು, ಜನಪ್ರತಿನಿಧಿಗಳು ಮತ್ತು ಪಕ್ಷದವರು ಕಾಂಗ್ರೆಸ್ ಸರಕಾರವೇ ಇರಲಿ ಬಿಜೆಪಿಯೇ ಆಗಿರಲಿ ತಮ್ಮ ತಮ್ಮ ನಾಯಕರಿಗೆ ಯೋಜನೆ ಮತ್ತು ಅದರ ತೊಂದರೆಯ ಬಗ್ಗೆ ವಿವರವಾಗಿ ತಿಳಿಸಬೇಕು. ಅವರು ಒಪ್ಪದೇ ಇದ್ದರೆ ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಮನವರಿಕೆ ಮಾಡುವ ಪ್ರತಿಭಟನೆಯ ನೇತೃತ್ವವನ್ನು ಇಲ್ಲಿಯ ಜನಪ್ರತಿನಿಧಿಗಳು, ಪಕ್ಷಗಳೇ ವಹಿಸಿಕೊಳ್ಳಬೇಕು. ಬೆಂಗಳೂರಿಗೆ ಮತ್ತು ದೆಹಲಿಗೆ ಹೋಗಿ ಯೋಜನೆ ಬದಲಿಸುವಲ್ಲಿಯವರೆಗೆ ಪ್ರಯತ್ನ ನಡೆಸಬೇಕು. ತಮ್ಮ ಜಿಲ್ಲೆಯ ರಕ್ಷಣೆಗಾಗಿ ಹೋರಾಟಕ್ಕೆ ಇಳಿಯಲೇ ಬೇಕು. ಅದಕ್ಕೆ ಬೇಕಾದ ಜನಬೆಂಬಲವನ್ನು ಜಿಲ್ಲೆಯಲ್ಲಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಜನರು ಸಂಘಟನೆಗಳು ನಡೆಸುವ ಯಾವುದೇ ಹೋರಾಟ ಪ್ರತಿಫಲವನ್ನು ಕೊಡಲಾರದು ಎಂಬುದರ ಅರಿವು ಜನತೆಗಿರಲೇ ಬೇಕು.  ಇಲ್ಲಿಯ ಜನಪ್ರತಿನಿಧಿಗಳನ್ನು, ರಾಜಕೀಯ ಪಕ್ಷದ ಸದಸ್ಯರನ್ನು ಎಚ್ಚರಿಸಿ, ಜನತೆಗಾಗಿ ಕೆಲಸ ಮಾಡುವಂತೆ ಮಾಡುವ ನಿಟ್ಟಿನಲ್ಲಿ ನೇತ್ರಾವತಿ ಹೋರಾಟ ಸಮಿತಿಗೆ ’ಸುದ್ದಿ ಬಿಡುಗಡೆ’ ಪತ್ರಿಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಲಿದೆ. ದ.ಕ ಜಿಲ್ಲೆಯಲ್ಲಿ ನಡೆಯುವ ಪ್ರತಿಭಟನೆ ಜನರಿಗೆ ತಾವು ಆಯ್ಕೆಮಾಡಿದ ಜನಪ್ರತಿನಿಧಿಗಳು, ಪಕ್ಷಗಳು ನೇತ್ರಾವತಿ ತಿರುವು ಹೋರಾಟವನ್ನು ಯಶಸ್ವಿ ಮಾಡುವ ಶಕ್ತಿ ನೀಡಲಿ ಅಥವಾ ರಾಜೀನಾಮೆ ನೀಡಿ ಹೊರಬರುವ ಸಾಮರ್ಥ್ಯ ನೀಡಲಿ ಎಂದು ಹಾರೈಸುತ್ತೇನೆ. ತಮ್ಮ ನೋವನ್ನು ತೋರಿಸಲು ತಮಗೇ ನಷ್ಟ ಕಷ್ಟ ಉಂಟುಮಾಡುವ ಜನರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗುವ ಸ್ವಯಂಪ್ರೇರಿತ ಬಂದ್‌ನಂತಹ ಪ್ರತಿಭಟನೆಗೆ ಇಳಿಯಬೇಕಾದ ಸಂದರ್ಭ ಇಲ್ಲಿಯ ಜನತೆಗೆ ಬಂದಿರುವುದು ಅತ್ಯಂತ ಬೇಸರದ ಸಂಗತಿ.
ಆದರೂ ಪ್ರತಿಭಟನೆಯ ಈ ಬಂದ್ ಸ್ವಯಂಪ್ರೇರಿತವಾಗಿರಲಿ. ಇತರರಿಗೆ ಮತ್ತು ಸಾಮಾನ್ಯ ಜನರಿಗೆ ತೊಂದರೆಯಾಗದಂತಿರಲಿ, ಸಾಂಕೇತಿಕವಾಗಿಯಾದರೂ ಬಂದ್ ಮಾಡಿ ಹೋರಾಟಗಾರರಿಗೆ ಆರ್ಥಿಕ, ಸಾಮಾಜಿಕ ಬೆಂಬಲ ಮತ್ತು ಶಕ್ತಿ ನೀಡುವಂತಾಗಲಿ ಎಂದು ಹಾರೈಸುತ್ತಿದ್ದೇನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.