ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಪುತ್ತೂರು ಸಹಾಯಕ ಆಯುಕ್ತ ಡಾ| ರಾಜೇಂದ್ರ ದಿಢೀರ್ ಭೇಟಿ

  ಬೆಳ್ತಂಗಡಿ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಪುತ್ತೂರು ಸಹಾಯಕ ಆಯುಕ್ತ ಡಾ. ರಾಜೇಂದ್ರ ಅವರು ಮೇ. 10 ರಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಬಗ್ಗೆ ಅವರು ವೈದ್ಯರು ಹಾಗೂ ಅಧಿಕಾರಿಗಳನ್ನು ವಿಚಾರಿಸಿದರು. ಆಸ್ಪತ್ರೆಯಲ್ಲಿ ಇರಬೇಕಾದ ವೈದ್ಯರು ಇಲ್ಲದಿರುವುದನ್ನು ಗಮನಿಸಿದ ಅವರು ಎಲುಬು ಮತ್ತು ಕೀಲು ತಜ್ಞರಿಗೆ ಕೂಡಲೇ ಕಾರಣ ಕೇಳಿ ನೋಟೀಸ್ ನೀಡುವಂತೆ ಸೂಚಿಸಿದರು. ಆಸ್ಪತ್ರೆಯಲ್ಲಿನ ಶುಚಿತ್ವದ ಕೊರತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುವಂತೆ ಸೂಚಿಸಿದರು. ಈ ವೇಳೆ ಶುಚಿತ್ಚದ ಕಾರ್ಯಗಳಿಗೆ ಸಿಬ್ಬಂದಿಗಳ ಕೊರತೆ ಇರುವುದನ್ನು ಗಮನಕ್ಕೆ ತಂದರು. ಎಂಟು ಮಂದಿ ಇರುವಲ್ಲಿ ಮೂರು ಮಂದಿ ಮಾತ್ರ ಇರುವುದಲ್ಲದೆ ಈಗ ಒಬ್ಬರೇ ಎಲ್ಲಾ ಕೆಲಸವನ್ನೂ ಮಾಡಬೇಕಾಗಿ ಬರುತ್ತಿದೆ ಎಂದು ವಿವರಿಸಿದರು. ಈ ಬಗ್ಗೆ ಸಂಬಂಧಿಸಿದ ಕಂಪೆನಿಗೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು. ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದಿದ್ದರೆ ಕತ್ತಲೆಯಲ್ಲಿ ಇರಬೇಕಾದ ಸ್ಥಿತಿ ಇದೆ. ನೂರು ಹಾಸಿಗೆ ಹೊಸ ಕಟ್ಟಡವನ್ನು ಹೊಂದಿರುವ ಆಸ್ಪತ್ರೆಯಲ್ಲಿ ಜನರೇಟರ್ ಕಾರ‍್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಾಗ ಅದಕ್ಕೆ ಡೀಸೆಲ್ ಖರೀದಿಸುವ ಅನುದಾನವಿಲ್ಲ ಎಂಬ ಉತ್ತರ ಆಡಳಿತದ ಕಡೆಯಿಂದ ಬಂತು.
ಆಸ್ಪತ್ರೆಯಲ್ಲಿರುವ ಅಂಬುಲೆನ್ಸ್‌ನ ಚಾಲಕರುಗಳು ಎಸಿಯವರ ಭೇಟಿಯ ಸಂದರ್ಭ ಇರಲಿಲ್ಲ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಅವರು, ಚಾಲಕರ ವಿರುಧ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಹಾಗೂ ಅದಕ್ಕೆ ಪರಿಹಾರ ಕಾಣಲು ಮೇ. 17 ರಂದು ಬೆಳ್ತಂಗಡಿ ತಾ.ಪಂ ನಲ್ಲಿ ತಾಲೂಕು ಆಸ್ಪತ್ರೆಯ ಆರೋಗ್ಯ ಸಮಿತಿಯ ಸಭೆಯನ್ನು ಕರೆಯಲು ಹಾಗೂ ಅಲ್ಲಿ ಕಳೆದ ಐದು ವರ್ಷಗಳ ಖರ್ಚು ವೆಚ್ಚಗಳ ವರದಿಯನ್ನು ಇಡುವಂತೆ ಸೂಚಿಸಿದರು. ಈ ಸಂದರ್ಭ ತಹಶೀಲ್ದಾರ್ ಪ್ರಸನ್ನಮೂರ್ತಿ, ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಸಮುದಾಯ ವೈದ್ಯಾಧಿಕಾರಿ ಡಾ. ಆದಂ ಹಾಗೂ ಇತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.